ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುದೂರ ನಿಯಂತ್ರಣ ಸಾಧನಗಳು

ಸುದೂರ ನಿಯಂತ್ರಣ ಸಾಧನಗಳು

ದೂರದಲ್ಲಿರುವ ಉಪಕರಣಗಳನ್ನು ನಿಯಂತ್ರಿಸಲು ಬಳಸುವ ಸಾಧನಗಳು (ರಿಮೋಟ್ ಕಂಟ್ರೋಲ್ ಡಿವೈಸಸ್). ಪರ್ಯಾಯ ಪದ: ದೂರನಿಯಂತ್ರಕಗಳು. ಉದಾ: ದೂರದರ್ಶನದ ಚಾನಲ್, ಬೆಳಕು, ಬಣ್ಣ, ಧ್ವನಿ ಮುಂತಾದ ವನ್ನು ದೂರದಲ್ಲಿ ಕುಳಿತಲ್ಲಿಂದಲೇ ನಿಯಂತ್ರಿಸಲು ಬಳಸುವ ಸಾಧನ. ಯಾವುದಾದರೊಂದು ಸಂವಹನಮಾಧ್ಯಮ ಮುಖೇನ ನಿಯಂತ್ರಕ ಕಳಿಸುವ ಸಂಜ್ಞಾಸರಣಿರೂಪದ ಸೂಚನೆಯನ್ನು ಗ್ರಹಿಸಿ ಅದರಂತೆ ಕಾರ್ಯ ನಿರ್ವಹಿಸುವ ವ್ಯವಸ್ಥೆ ನಿಯಂತ್ರಿತದಲ್ಲಿ ಇರುತ್ತದೆ. ನಿಯಂತ್ರಕದ ದಕ್ಷತೆ ಅದರ ಮತ್ತು ನಿಯಂತ್ರಿತದ ನಡುವಿನ ಸಂವಹನ ಮಾಧ್ಯಮದ ದಕ್ಷತೆಯನ್ನು ಅವಲಂಬಿಸಿದೆ. ಸಂವಹನ ಮಾಧ್ಯಮವಾಗಿ ಬಳಸಬಹು ದಾದವು ಅನೇಕವಿದ್ದರೂ ನಿಸ್ತಂತು ದೂರವಾಣಿಗಳು ಪ್ರಸರಿಸುವ ನಾದ ಸಂಜ್ಞೆಗಳು (ಟೋನ್‍ಸಿಗ್ನಲ್ಸ್), ಗಣಕಜಾಲ (ಕಂಪ್ಯೂಟರ್ ನೆಟ್‍ವರ್ಕ್), ಅವಕೆಂಪು (ಇನ್ಫ್ರಾರೆಡ್) ಕಿರಣಗಳು ಮತ್ತು ರೇಡಿಯೊ ತರಂಗಗಳು ಇವುಗಳ ಬಳಕೆ ಹೆಚ್ಚು.

ನಿಯಂತ್ರಿಸಬೇಕಾದ್ದರ ಸ್ವರೂಪವನ್ನು ಆಧರಿಸಿ ಮಾಧ್ಯಮವನ್ನು ಆಯ್ಕೆ ಮಾಡಲಾಗುತ್ತದೆ. ಉದಾ: ದೃಷ್ಟಿರೇಖೆಯಲ್ಲಿ ಸಾಪೇಕ್ಷವಾಗಿ ಸಮೀಪದಲ್ಲಿರುವ ಸಾಧನಗಳ ನಿಯಂತ್ರಣಕ್ಕೆ ಅವಕೆಂಪು ಕಿರಣ (ಉದಾ: ಟಿವಿ, ಹವಾನಿಯಂತ್ರಕ), ಸಾಪೇಕ್ಷವಾಗಿ ಸ್ವಲ್ಪ ದೂರದಿಂದ ನಿಯಂತ್ರಿಸಬೇಕಾದಾಗ ದೂರವಾಣಿ ನಾದಸಂಜ್ಞೆಗಳು (ಉದಾ: ಕಾರ್‍ನಲ್ಲಿ ಬರುತ್ತಿರುವಾಗ ಗರಾಜ್ ಕದ ತೆರೆಯಲು), ವಾಯುಮಂಡಲ-ವ್ಯತಿಕರಣದ (ಅಟ್ಮಾಸ್ಫೆರಿಕ್ ಇಂಟರ್¥sóÀರೆನ್ಸ್) ಬಾಧೆ ಇರದಾಗ ದೂರದಲ್ಲಿರುವ ಸಾಧನಗಳ ನಿಯಂತ್ರಣಕ್ಕೆ ರೇಡಿಯೊ ತರಂಗಗಳು, ಬೈಜಿಕ ಕ್ರಿಯಾಕಾರಿಗಳಂಥ ಅಪಾಯಕಾರಿ ಸನ್ನಿವೇಶಗಳಲ್ಲಿ ಗಣಕಜಾಲ, ಗೃಹಬಳಕೆಯ ವಿದ್ಯುದುಪಕರಣಗಳು, ನಿರ್ದಿಷ್ಟ ದೌರ್ಬಲ್ಯಗಳಿರು ವವರ ಸಂವಹನ ಸಾಧನಗಳು, ಚಾಲಕರಹಿತ ಆಕಾಶನೌಕೆಗಳು, ಮಾನವನಿರ್ಮಿತ ಉಪಗ್ರಹಗಳು, ಬೈಜಿಕಕ್ರಿಯಾಕಾರಿಗಳು, ಅಪಾಯಕಾರಿ ಪರಿಸರದಲ್ಲಿ ಜರಗುವ ಪ್ರಕ್ರಿಯೆಗಳು ಮುಂತಾದವುಗಳ ನಿಯಂತ್ರಣಕ್ಕೆ ದೂರನಿಯಂತ್ರಕಗಳ ಬಳಕೆ ಅನಿವಾರ್ಯ. (ಎನ್.ಕೆ.ಎಸ್.)