ಸುಧನ್ವ ಚಂಪಕಾವತಿಯ ರಾಜ ಹಂಸಧ್ವಜನ ಮಗ. ಭಕ್ತಶ್ರೇಷ್ಠ. ಹಂಸಧ್ವಜ, ಯುಧಿಷ್ಠಿರನ ಅಶ್ವಮೇಧದ ಕುದುರೆಯನ್ನು ಕಟ್ಟಿ ಸುಧನ್ವ ನನ್ನು ಅರ್ಜುನನ ಮೇಲೆ ಯುದ್ಧಕ್ಕೆ ಕಳಿಸುತ್ತಾನೆ. ಸುಧನ್ವ ತಾಯಿಯಿಂದ ತತ್ತ್ವೋಪದೇಶ ಪಡೆದು ರಾಣೀವಾಸಕ್ಕೆ ಹೋಗಿ ಹೆಂಡತಿಗೆ ಹೇಳಿ ಅಲ್ಲಿ ಸ್ವಲ್ಪಕಾಲವಿದ್ದು ರಣರಂಗಕ್ಕೆ ಬರುವಷ್ಟರಲ್ಲಿ ಹಂಸಧ್ವಜ ಕುಪಿತನಾಗುತ್ತಾನೆ. ರಾಜಾಜ್ಞೆಯನ್ನು ಲಘುವಾಗಿ ಕಂಡದ್ದಕ್ಕಾಗಿ ಸುಧನ್ವನಿಗೆ ತಪ್ತತೈಲ ಕೊಪ್ಪರಿಗೆಗೆ ದುಮುಕುವ ಶಿಕ್ಷೆ ವಿಧಿಸಲಾಗುತ್ತದೆ. ಸುಧನ್ವ ಕೊಂಚವೂ ವಿಚಲಿತನಾಗದೆ ಹರಿಸ್ಮರಣೆಮಾಡುತ್ತ ಕೊಪ್ಪರಿಗೆಗೆ ಇಳಿಯುತ್ತಾನೆ. ಇವನ ಹರಿಭಕ್ತಿಗೆ ಕುದಿಯುವ ತೈಲ ತಣ್ಣಗಾಗಲು ಹಂಸಧ್ವಜ ಇವನ ಭಕ್ತಿಪರವಶತೆಗೆ ಮೆಚ್ಚಿ ಇವನನ್ನು ಸೇನಾಪತಿಯ ಸ್ಥಾನದಲ್ಲಿ ನಿಯಮಿಸುತ್ತಾನೆ. ಸುಧನ್ವ ಅರ್ಜುನನೊಂದಿಗೆ ಯುದ್ಧಮಾಡಿ ವೀರಸ್ವರ್ಗ ಪಡೆಯುತ್ತಾನೆ. ಈ ವೃತ್ತಾಂತ ಜೈಮಿನಿ ಭಾರತದಲ್ಲಿ ಬಂದಿದೆ. (ಆರ್.ಎಸ್.ಜೆ.)

1. ಅಂಗೀರಸನೆಂಬ ಮುನಿಯ ಮಗ. ಪ್ರಹ್ಲಾದನ ಮಗ ವಿರೋಚನ ಹಾಗೂ ಈತ ಇಬ್ಬರೂ ಕೇಳನಿ ಎಂಬ ಕನ್ಯೆಯ ಸಲುವಾಗಿ ವಿವಾದಕ್ಕೆ ನಿಂತು, ಬ್ರಾಹ್ಮಣ ಕ್ಷತ್ರಿಯರಲ್ಲಿ ಯಾರು ಶ್ರೇಷ್ಠರು ಎಂದು ನಿರ್ಣಯಕ್ಕೆ ಬಾರದೆ ನ್ಯಾಯಕ್ಕಾಗಿ ಪ್ರಹ್ಲಾದನಲ್ಲಿಗೆ ಹೋದರು. ಪ್ರಹ್ಲಾದ ನಿಷ್ಪಕ್ಷಪಾತ ಬುದ್ಧಿಯಿಂದ ಅವರ ವಿವಾದಕ್ಕೆ ಸೂಕ್ತ ತೀರ್ಮಾನ ಹೇಳಿದ.

2. ಪಾಂಚಾಲ ರಾಜ. ಪಾಂಡವರ ಪರವಾಗಿ ಮಹಾಭಾರತ ಯುದ್ಧದಲ್ಲಿ ಹೋರಾಡಿದ. ಯುದ್ಧದ ಹದಿನಾಲ್ಕನೆಯ ದಿನದ ಹಗಲು ಯುದ್ಧದಲ್ಲಿ ದ್ರೋಣನಿಂದ ಹತನಾದ. *