ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುನೀತಾ ಶೆಟ್ಟಿ, ಎಂ

ಸುನೀತಾ ಶೆಟ್ಟಿ, ಎಂ (1932- ). ಪ್ರಧಾನವಾಗಿ ಸಾಹಿತ್ಯ ಸೇವೆಯನ್ನು ಕೈಗೊಂಡಿದ್ದರೂ ಕನ್ನಡ ಭಾಷೆಯ ಏಳಿಗೆಗಾಗಿ, ದೂರದ ಮುಂಬಯಿಯಲ್ಲಿ ದುಡಿಯುತ್ತಿರುವವರು. ಅಧ್ಯಾಪಕಿಯಾಗಿ, ಕನ್ನಡ ಪತ್ರಿಕೆಯೊಂದರ ಸಂಪಾದಕ ಮಂಡಳಿಯ ಸದಸ್ಯೆಯಾಗಿ, ಜೊತೆಯಲ್ಲಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಕನ್ನಡದ ಕಂಪನ್ನು ಮಹಾರಾಷ್ಟ್ರದಲ್ಲಿ ಪಸರಿಸುವಂತೆ ಮಾಡುತ್ತಿದ್ದಾರೆ ಡಾ.ಸುನೀತಾ ಶೆಟ್ಟಿ.

ಮಂಗಳೂರು ಬಳಿಯ ಕಳವಾರು ಗ್ರಾಮದಲ್ಲಿ 1932ರ ಜೂನ್ 27ರಂದು ಜನಿಸಿದ ಶ್ರೀಮತಿ ಸುನೀತಾ ಶೆಟ್ಟಿಯವರು ಮುಂದೆ ಮುಂಬಯಿಯನ್ನು ತಮ್ಮ ಕಾರ್ಯ ಕ್ಷೇತ್ರವಾಗಿಸಿಕೊಂಡರು. ಸ್ನಾತಕೋತ್ತರ ಹಾಗೂ ಶಿಕ್ಷಣದಲ್ಲಿ ಪದವಿ ಪಡೆದರಲ್ಲದೆ ಪಿ.ಎಚ್.ಡಿ.ಪದವಿ ಸಹ ಪಡೆದರು. ಶಾಲಾಶಿಕ್ಷಕಿಯ ಹುದ್ದೆಯಿಂದ ಮುಂಬಯಿಯ ಗುರುನಾನಕ ಖಾಲ್ಸಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಆಮಂತ್ರಿತ ಪ್ರಾಧ್ಯಾಪಕಿಯಾಗಿ ಅಖಂಡವಾಗಿ ಮೂವತ್ತಾರು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕನ್ನಡವಲ್ಲದೆ ಕರ್ನಾಟಕದ ಉಪ-ಭಾಷೆಗಳಾದ ಕೊಂಕಣಿ, ತುಳುಗಳಲ್ಲೂ, ನೆಲೆನಿಂತ ರಾಜ್ಯದ ಮರಾಠಿಯಲ್ಲಿಯೂ ಡಾ||ಎಂ.ಸುನೀತಾ ಅವರ ಸಾಹಿತ್ಯ ಕೊಡುಗೆ ಅಪಾರವಾದುದು. ರಾಜ್ಯ ಸರ್ಕಾರದಿಂದ `ರಾಣಿ ಅಬ್ಬಕ್ಕ ಪ್ರಶಸ್ತಿ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ `ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, `ಪ್ರವಾಸಿಯ ಹೆಜ್ಜೆಗಳು ಕೃತಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕೊಡಮಾಡುವ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, `ಹೃದಯವಂತರು ಕೃತಿಗೆ ಮಂಗಳೂರಿನ ಪತ್ರಿಕಾ ಪ್ರಶಸ್ತಿ, ಪುತ್ತೂರಿನ ಕಿಲ್ಲೆ ಪ್ರತಿಷ್ಠಾನದವರ ಕಿಲ್ಲೆ ಪ್ರಶಸ್ತಿ, ಮುಂಬಯಿಯ ಗುರುನಾರಾಯಣ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರಲ್ಲದೆ, ರಾಷ್ಟ್ರ, ರಾಜ್ಯಮಟ್ಟದ ಅನೇಕ ಬಹು ಭಾಷಾ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಮಂಗಳೂರಿನಲ್ಲಿ ನಡೆದ `ವಿಶ್ವ ತುಳು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಒಡೆಯೂರಿನಲ್ಲಿ ನಡೆದ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಮೆರಿಕೆಯಲ್ಲಿ ನಡೆದ ವಿಶ್ವ ಬಂಟ್ ಸಮ್ಮೇಳನಕ್ಕೆ ಆಮಂತ್ರಿತ ಅತಿಥಿ. 2004ರಲ್ಲಿ ಮುಂಬಯಿಯಲ್ಲಿ ಮೂರು ದಿನಗಳ ಕಾಲ ನಡೆದ ಮಹಾರಾಷ್ಟ್ರ ರಾಜ್ಯ ಕನ್ನಡಿಗರ `ಆರನೆಯ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮಾವೇಶದ ಅಧ್ಯಕ್ಷತೆ ಇತ್ಯಾದಿಗಳನ್ನು ಉದಾಹರಿಸಬಹುದು. ಡಾ||ಎಂ.ಸುನೀತಾ ಶೆಟ್ಟಿಯವರ ಇನ್ನೊಂದು ಮುಖ್ಯ ಕಾರ್ಯ ಕ್ಷೇತ್ರವೆಂದರೆ ಸಮಾಜಸೇವೆ. ಈ ದಿಸೆಯಲ್ಲಿ ಪುಣೆಯಿಂದ `ಗುಂಡುರಾಜ ಶೆಟ್ಟಿ ಬಂಗಾರದ ಪದಕ ಮತ್ತು `ಸಮಾಜ ಭೂಷಣಿ ಬಿರುದು ಪಡೆದಿದ್ದಾರೆ.

ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ವೈವಿಧ್ಯಮಯ. `ನಿನಾದ, `ಅಂತರ ಗಂಗೆ, `ಪಯಣ' ಕವಿತಾ ಸಂಕಲನ `ಸಮೀಕ್ಷಾ ಲೇಖನ ಸಂಗ್ರಹ, `ಪ್ರವಾಸಿಯ ಹೆಜ್ಜೆಗಳು, `ಅಕ್ಷಯ ಸಂಪದ, ಪ್ರವಾಸ ಕಥನ. ಸಂಪಾದಿತ ಕೃತಿಗಳಾಗಿ `ಬಂಟರು ಕೆಲವು ಅಧ್ಯಯನ, ಮತ್ತು `ಅರವತ್ತು ಕವಿತೆಗಳು, `ಡಾಕ್ಟರೇಟ್ ಪದವಿ ಗಳಿಸಿಕೊಟ್ಟ `ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ಮಹಾಪ್ರಬಂಧ ಇವೆಲ್ಲ ಪ್ರಕಟವಾಗಿವೆ. ತುಳು ಭಾಷೆಯಲ್ಲಿ ರಚಿಸಿದ `ಪಿಂಗಾರ `ಸಂಕ್ರಾಂತಿ', `ನಾಗ ಸಂಪಿಗೆಗಳು ಗದ್ಯಕೃತಿಗಳು, `ಕಲಾ ತಪಸ್ವಿ-ಕೆ.ಕೆ.ಹೆಬ್ಬಾರ್ ವ್ಯಕ್ತಿ ಚಿತ್ರ ಇವು ಪ್ರಕಟವಾಗಿರುವ ಇನ್ನಿತರ ಗ್ರಂಥಗಳು. ಕರ್ನಾಟಕದಲ್ಲಿ ಜನಿಸಿ, ಮುಂಬಯಿಯಲ್ಲಿ ಕನ್ನಡ ಸಾಹಿತ್ಯ ಕೃಷಿ ನಡೆಸುತ್ತಾ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾರ್ಥಕ ಜೀವಿಯಾದ ಡಾ||ಎಂ ಸುನೀತಾ ಶೆಟ್ಟಿಯವರಿಗೆ 2004ರ ದಾನ ಚಿಂತಾಮಣಿ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿ ಗೌರವಿಸಿದೆ.