ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬಕೃಷ್ಣ, ಎನ್ ಎಸ್

ಸುಬ್ಬಕೃಷ್ಣ, ಎನ್ ಎಸ್ (1914-93). ನಂಜನಗೂಡು ಶ್ರೀನಿವಾಸರಾವ್ ಸುಬ್ಬಕೃಷ್ಣ ಅವರು 1914ರ ಮೇ ತಿಂಗಳಿನಲ್ಲಿ ನಂಜನಗೂಡಿನಲ್ಲಿ ಜನಿಸಿದರು. ಅಜ್ಜಿಯವರು ಕಲಾತ್ಮಕವಾಗಿ ಗೊಂಬೆಗಳನ್ನು ಮಾಡುತ್ತಿದ್ದುದು ಸುಬ್ಬಕೃಷ್ಣರವರ ಮನಸ್ಸಿನ ಮೇಲೆ ಪರಿಣಾಮ ಬೀರಿತು. ವಿದ್ಯಾರ್ಥಿದೆಸೆಯಲ್ಲಿ ಎಲ್.ಎಸ್. ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದು, ಚಿತ್ರಕಲೆ ಕಲಿಯುವ ಮನಸ್ಸಾಯಿತು. ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಕಲಾಶಾಲೆಗೆ ಸೇರಿ ಕೇಶವಯ್ಯ ಪಾವಂಜೆಯವರಲ್ಲಿ ಅಭ್ಯಸಿಸಿ ಪ್ರಕೃತಿದೃಶ್ಯ ಹಾಗೂ ಭಾವಚಿತ್ರ ರಚನೆಯಲ್ಲಿ ನಿಷ್ಣಾತರಾದರು. 1940ರಲ್ಲಿ ಬೆಂಗಳೂರಿನ ಮೈಸೂರು ಪಿಂಗಾಣಿ ಕಾರ್ಖಾನೆಯಲ್ಲಿ ಕಲಾವಿದರಾಗಿ ನೇಮಕಗೊಂಡರು. ಏಳೆಂಟು ವರ್ಷಗಳ ಸೇವೆಯ ನಂತರ ಗ್ವಾಲಿಯರ್‍ನ ಪಾಟರೀಸ್ ಕಾರ್ಖಾನೆಗೆ ನೇಮಕಗೊಂಡು 1971ರವರೆಗೆ ಸೇವೆಸಲ್ಲಿಸಿ ನಿವೃತ್ತಿಯ ನಂತರ ಮರಳಿ ಮೈಸೂರಿಗೆ ಬಂದು ಕ್ರಿಯಾತ್ಮಕವಾಗಿ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಂಡರು.

ಕಲಾಕಲಿಕೆಯ ನಂತರ ಕೊಡೈಕೆನಾಲ್, ಚೆನ್ನೈ, ಕೊಲ್ಲೂರು, ಮಳವಳ್ಳಿ ಇತ್ಯಾದಿ ಕಡೆಗಳಲ್ಲಿಯ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ಪಾರಿತೋಷಕಗಳನ್ನು ಪಡೆದರು. ಅಲ್ಲಿ ಕಲಾಕೃತಿಗಳ ಮಾರಾಟವೂ ಆಗುತ್ತಿತ್ತು. ಪ್ರಾಯಶಃ ಮಳವಳ್ಳಿಯ ಮುನ್ಸಿಪಲ್ ಅಧ್ಯಕ್ಷರ ಪತ್ನಿಯ ಭಾವಚಿತ್ರ ಸುಬ್ಬಕೃಷ್ಣರ ಮೊಟ್ಟಮೊದಲ ಬೇಡಿಕೆಯ ಭಾವಚಿತ್ರವಾಗಿದ್ದಿರಬಹುದು. ನಂತರ ಗ್ವಾಲಿಯರ್‍ಗೆ ಹೋದ ತರುಣದಲ್ಲಿ ಮಹಾತ್ಮಗಾಂಧಿಯವರ ಚಿತ್ರ ರಚಿಸಿ ಸರದಾರ್ ವಲ್ಲಭಾಯ್ ಪಟೇಲರು ಅದನ್ನು ಉದ್ಘಾಟಿಸಿದ್ದು ಸುಬ್ಬಕೃಷ್ಣರ ಪ್ರತಿಭೆ ಹಿರಿಯ ಮಟ್ಟದ ರಾಜಕೀಯ ವ್ಯಕ್ತಿಗಳಿಗೆ ಅರಿವಾಗುವಂತಾಯಿತು. ಅದರಿಂದಾಗಿ ಬಾಬು ರಾಜೇಂದ್ರ ಪ್ರಸಾದ್, ಜವಹರಲಾಲ್ ನೆಹರು, ಆರ್.ಆರ್.ದಿವಾಕರ್, ಮುಳಗಾಂವಕರ್, ಇಂದಿರಾಗಾಂಧಿ, ಸರ್ದಾರ್ ಪಟೇಲ್, ಜಿ.ಡಿ.ಬಿರ್ಲಾ, ಲಾಲ್‍ಬಹಾದ್ದೂರ್‍ಶಾಸ್ತ್ರಿ ಮುಂತಾದ ಅನೇಕ ರಾಷ್ಟ್ರೀಯ ಮಟ್ಟದ ಗಣ್ಯರ ಭಾವಚಿತ್ರ ರಚಿಸಲು ನಿಯೋಜಿತರಾದರು. ಅನೇಕರ ಚಿತ್ರಗಳನ್ನು ಚಿತ್ರಿತ ವ್ಯಕ್ತಿಗಳನ್ನು ರೂಪದರ್ಶಿಗಳಾಗಿ ಬಳಸಿ (ಸಿಟ್ಟಿಂಗ್) ರಚಿಸಿರುವಂತಹುದು. ಅದರಲ್ಲೂ ಜವಹರಲಾಲ್ ನೆಹರು ಅವರು ರೂಪದರ್ಶಿಯಾಗಿ ನಿರಂತರವಾಗಿ ಕೆಲದಿನಗಳು `ಸಿಟ್ಟಿಂಗ್ ನೀಡಿದ್ದು ಪ್ರಥಮ ವೆನ್ನಲಾಗಿದೆ. ಗಾಂಧೀಜಿ ಅವರ ಹಲವಾರು ಚಿತ್ರ ರಚಿಸಿದ್ದು, ಸ್ಪರ್ಧೆಯ ಮೂಲಕ ಆಯ್ಕೆಯಾದ ಸುಬ್ಬಕೃಷ್ಣರ ಗಾಂಧಿಯ ಭಾವಚಿತ್ರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೋಟುಗಳ ಮೇಲೆ ಮುದ್ರಿಸಿದ್ದು ಕನ್ನಡ ಕಲಾವಿದನೊಬ್ಬನಿಗೆ ದೊರೆತ ಅಪೂರ್ವಗೌರವ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿ.ವಿ.ಗಿರಿ, ಜೈಲ್‍ಸಿಂಗ್, ಸೇರಿದಂತೆ ಇಪ್ಪತ್ತು ಭಾವಚಿತ್ರಗಳು, ಪಾರ್ಲಿಮೆಂಟ್ ಭವನದಲ್ಲಿ ವಲ್ಲಭಾಯ್‍ಪಟೇಲ್, ರಾಜಾಜಿ ಇತ್ಯಾದಿ. ಮಿಲಿಟರಿ ಅಕಾಡೆಮಿಯಲ್ಲಿ ಜನರಲ್ ಕಾರ್ಯಪ್ಪ, ಮಾಣಿಕ್‍ಷಾ ಮುಂತಾದವರದು. ಮೈಸೂರು ವಿಶ್ವವಿದ್ಯಾಲಯದ ಹಲವಾರು ಮಾಜಿ ಕುಲಪತಿಗಳು ಲಂಡನ್‍ನ ಬ್ರಿಟಿಷ್ ಮ್ಯೂಸಿಯಂನಲ್ಲಿ ಗಾಂಧೀಜಿ ಯವರ ಭಾವಚಿತ್ರ, ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ತಿಲಕ್ ಮತ್ತು ಗಾಂಧೀಜಿಯವರ ಚಿತ್ರಗಳು. ರಷ್ಯಾದ ತಾಷ್ಕೆಂಟ್‍ನಲ್ಲಿ ಲಾಲ್‍ಬಹಾದ್ದೂರ್ ಶಾಸ್ತ್ರಿ ಅವರ ಚಿತ್ರ ಇತ್ಯಾದಿಗಳಲ್ಲದೆ ಗ್ವಾಲಿಯರ್, ಲಕ್ನೋ, ನೈನಿತಾಲ್, ರಾಂಚಿ, ಭೂಪಾಲ್, ಕೋಲ್ಕತ್ತಾ ಮುಂತಾದ ಅನೇಕ ಸ್ಥಳಗಳ ಅರಮನೆ, ಸರ್ಕಾರಿ ಕಟ್ಟಡ ಇತ್ಯಾದಿಗಳಲ್ಲೂ ಸುಬ್ಬಕೃಷ್ಣರ ರಚಿಸಿದ ಭಾವಚಿತ್ರಗಳನ್ನು ಕಾಣಬಹುದು. ಶೃಂಗೇರಿ, ಉಡುಪಿ, ತಿರುಪತಿಯ ಮಠಮಾನ್ಯಗಳಿಗೂ ಚಿತ್ರ ರಚಿಸಿ ನೀಡಿದ್ದಾರೆ. ಅವರ ಎಲ್ಲ ಭಾವಚಿತ್ರಗಳಲ್ಲಿ ಕಂಡುಬರುವ ಪ್ರಮಾಣ ಬದ್ಧತೆ, ಬಣ್ಣಗಾರಿಕೆ, ನೆರಳು ಬೆಳಕುಗಳು ಹಾಗೂ ಅದಕ್ಕಿಂತ ನೈಜತೆ, ತದ್ರೂಪಿಕತೆ, ಛಾಯಾಚಿತ್ರದಂತೆ ಮನ ಸೆಳೆಯುವ ಆಕರ್ಷಣೆ. ನೈಜ ಅಳತೆಯ ಅಕಾರಗಳಲ್ಲಿ ದೊಡ್ಡ ಹರಹಿನ ಕ್ಯಾನ್‍ವಾಸ್ ಮೇಲೆ ರಚಿಸಿರುವುದರಿಂದಾಗಿ ಸರ್ವಜನಪ್ರಿಯವಾಗಿವೆ.

ಸುಬ್ಬಕೃಷ್ಣರು ಪ್ರಕೃತಿ ದೃಶ್ಯ ರಚನೆಯಲ್ಲಿಯೂ ಹೆಸರು ಮಾಡಿದ್ದರು. ವಾರಾಣಸಿಯ ದೃಶ್ಯ, ಹಿಮಾಚಲ ಪ್ರದೇಶದ ದೃಶ್ಯಗಳು. ಹಳೇಬೀಡಿನ ದೇವಾಲಯ ಇತ್ಯಾದಿ ಉದಾಹರಿಸಬಹುದು. ಯುದ್ಧವೊಂದರ ಭಯಾನಕ ಚಿತ್ರದಲ್ಲಿ ಆಧುನಿಕ ವಿಮಾನಗಳಿಂದ ಬಾಂಬ್ ಚೆಲ್ಲುತ್ತಿರುವ, ತಲ್ಲಣಗೊಂಡ ಯೋಧರ ಪಡೆ ಇತ್ಯಾದಿಗಳು ಯುದ್ಧದ ಭೀಕರತೆಯನ್ನು ಯಶಸ್ವಿಯಾಗಿ ಮೂಡಿಸಿದೆ.

ಸುಬ್ಬುಕೃಷ್ಣರಿಗೆ ದಸರಾ ಪ್ರದರ್ಶನದಲ್ಲಿ ಯುವರಾಜರು ಕೊಡಮಾಡುವ ರಜತ ಪಾತ್ರೆಯ ಬಹುಮಾನ ಎರಡು ಬಾರಿ ದೊರೆತಿದ್ದು, ದೇಶೀಯ ಕಲಾವಿದನಿಗೆ ದೊರೆತ ಪ್ರಥಮ ಪುರಸ್ಕಾರ ಅದೆಂದು ತಿಳಿಯಲಾಗಿದೆ. ಅಲ್ಲದೆ ಇನ್ನೂ ಹಲವಾರು ಬಹುಮಾನಗಳು ದೊರೆತಿದ್ದವು. 1964ರಲ್ಲಿ ರಾಜ್ಯಪ್ರಶಸ್ತಿ, 1980ರಲ್ಲಿ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ದೊರೆತಿತ್ತು. ಸುಬ್ಬಕೃಷ್ಣರವರು 18.9.1993 ರಲ್ಲಿ ನಿಧನರಾದರು. 2005ರ ಮೇ ತಿಂಗಳಲ್ಲಿ ಅವರ ಕುಟುಂಬದವರು ತಮ್ಮ ಸಂಗ್ರಹದಲ್ಲಿದ್ದ ಸುಮಾರು 800 ಕೃತಿಗಳನ್ನು ಭಾರತೀಯ ವಿದ್ಯಾಭವನಕ್ಕೆ ಅರ್ಪಿಸಿದರು. ಅವುಗಳನ್ನು ಮೈಸೂರಿನಲ್ಲಿರುವ ಭಾರತೀಯ ವಿದ್ಯಾಭವನದ ಶಾಖೆಯಲ್ಲಿರುವ ಪ್ರದರ್ಶನಾಂಗಣದಲ್ಲಿ ಪ್ರದರ್ಶಿಸಲಾಗಿದೆ. (ಎ.ಎಲ್.ನರಸಿಂಹನ್)