ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬಣ್ಣ, ಕೆ ವಿ

"'ಕೆ.ವಿ.ಸುಬ್ಬಣ್ಣ"' :- (1932-2005). ಸುಬ್ಬಣ್ಣ ಕೆ ವಿ - ಕುಂಟಗೋಡು ವಿಭೂತಿ ಸುಬ್ಬಣ್ಣ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಂಡಿಗೇಸರದಲ್ಲಿ 1932ರ ಫೆಬ್ರುವರಿ 20ರಂದು ಜನಿಸಿದರು. ಇವರ ತಂದೆ ಕೆ.ವಿ ರಾಮಪ್ಪ, ತಾಯಿ ಸಾವಿತ್ರಮ್ಮ. ಇವರ ಮೂಲ ಮನೆ ಕುಂಟಗೋಡು ಕೆಲವೇ ಮನೆಗಳಿರುವ ಪುಟ್ಟ ಹಳ್ಳಿ. ಇದು ಇತಿಹಾಸ ಪ್ರಸಿದ್ಧ ಇಕ್ಕೇರಿಯಿಂದ ಎರಡು ಕಿಲೋಮೀಟರ್ ದೂರದಲ್ಲಿ ದಟ್ಟ ಕಾಡಿನ ನಡುವೆ ಇದೆ. ವಿಭೂತಿ ಎನ್ನುವುದು ಇವರ ಮನೆತನದ ಹೆಸರು. ಸುಬ್ಬಣ್ಣನವರು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮನೆಯಲ್ಲೇ ನಡೆಯಿತು. ಸಮೀಪದ ಭೀಮನಕೋಣೆ ಗ್ರಾಮದಲ್ಲಿ ಮಾಧ್ಯಮಿಕ ಶಾಲೆಗೆ ಹೋದರು. ಸಾಗರ ಪಟ್ಟಣದ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ನಂತರ ಶಿವಮೊಗ್ಗದಲ್ಲಿ ಇಂಟರ್‍ಮೀಡಿಯೇಟ್ ಓದಿದರು. ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಪ್ರಥಮ ರ್ಯಾಂಕ್‍ನಲ್ಲಿ ಪಡೆದರು.

ದೊಡ್ಡ ನಗರಗಳಲ್ಲಿ ಉದ್ಯೋಗದ ಅನೇಕ ಆಮಿಷಗಳಿದ್ದರೂ ಸುಬ್ಬಣ್ಣ ತಮ್ಮ ಹಳ್ಳಿಗೇ ಮರಳಿದರು. ಇವರ ವೃತ್ತಿ ಬೇಸಾಯ. ಅದರಲ್ಲೂ ಮುಖ್ಯವಾಗಿ ಇವರು ಅಡಿಕೆ ಬೆಳೆಗಾರರು. ಸುಬ್ಬಣ್ಣ 1949ರಲ್ಲಿ ನೀನಾಸಂ (ನೀಲಕಂಠೇಶ್ವರ ನಾಟ್ಯ ಸೇವಾ ಸಂಘ) ಸಂಸ್ಥೆಯ ಸ್ಥಾಪಕ ಸದಸ್ಯರಾದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತದು. ದೇಶದ ಅಭಿವೃದ್ಧಿ ಎಂದರೆ ಹಳ್ಳಿಗಳ ಅಭಿವೃದ್ಧಿ ಎಂಬ ಗಾಂಧೀ ತತ್ತ್ವದಲ್ಲಿ ನಂಬಿಕೆಯಿದ್ದ ಸುಬ್ಬಣ್ಣ ಹೆಗ್ಗೋಡನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು. ಆಧುನಿಕ ಶಿಕ್ಷಣದಿಂದ ದೊರೆತ ತಿಳುವಳಿಕೆ, ಜಗತ್ತನ್ನು ನೋಡುವ ಹೊಸ ವಿಧಾನ ಇತ್ಯಾದಿಗಳಿಂದ ತಮ್ಮದೇ ಆದ ಹೊಸ ಆದರ್ಶ ಮತ್ತು ಕನಸುಗಳನ್ನು ಕಟ್ಟಿಕೊಂಡರು. ಅವರ ಬದುಕು ಮತ್ತು ಬರಹಗಳು ತಮ್ಮ ಸಮುದಾಯದೊಂದಗಿನ ಅನುಸಂಧಾನದ ಪ್ರಯತ್ನಗಳಾದವು.

ಸುಬ್ಬಣ್ಣ 1957ರಲ್ಲಿ "ಅಕ್ಷರ ಪ್ರಕಾಶ"ನವನ್ನು ಸ್ಥಾಪಿಸಿದರು. ಇದರ ಮೂಲಕ ಕನ್ನಡದ ಅನೇಕ ಮಹತ್ವದ ಕೃತಿಗಳನ್ನು ಬೆಳಕಿಗೆ ತಂದರು. ತಾವೂ ಬರೆಯಲು ಆರಂಭಿಸಿದರು. ಸಾಕ್ಷಿ ಪತ್ರಿಕೆಯನ್ನು ಸಹಾ ನಡೆಸಿದರು. ನೀನಾಸಂ ಮೂಲಕ ನಾಟಕ ಮಾಡುವುದರ ಜೊತೆಯಲ್ಲಿ ಬೇರೆ ಊರಿನ ನಾಟಕ ತಂಡಗಳನ್ನು ಕರೆಯಿಸಿ ಪ್ರದರ್ಶನಕ್ಕೆ ಅನುವು ಮಾಡಿದರು. ಆಗತ್ತಿನ ಅತ್ಯುತ್ತಮ ಚಲನಚಿತ್ರಗಳನ್ನು ತರಿಸಿ, ಚಲನಚಿತ್ರ ಚಲನಚಿತ್ರ ರಸಗ್ರಹಣ ಶಿಬಿರಗಳ ಮೂಲಕ ಅವುಗಳನ್ನು ಜನರಿಗೆ ತಲುಪಿಸಿದರು. ನೀನಾಸಮ್ ಮತ್ತು ಅಕ್ಷರ ಪ್ರಕಾಶನಗಳು ಹೆಗ್ಗೋಡಿನ ಸಮುದಾಯಕ್ಕೆ ಕಲೆ ಮತ್ತು ಸಾಹಿತ್ಯ ಜಗತ್ತಿನ ಕಿಟಕಿಗಳಾದವು. ನೀನಾಸಂನಲ್ಲಿ ಚಲನಚಿತ್ರ ಸಹೃದಯ ಶಿಬಿರಗಳನ್ನು ನಡೆಸಲು ಆರಂಭಿಸಿದ್ದರಿಂದ ಹೆಗ್ಗೋಡು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸಿ, ಅವುಗಳನ್ನು ಅರಿತುಕೊಂಡರು. ಅಕ್ಷರ ಬಾರದ ರೈತರು ಸಹ ಸತ್ಯಜಿತ್ ರೇ, ಕುರೋಸಾವ, ಐಸೆನ್ ಸ್ಟೈನ್, ಮೃಣಾಲ್‍ಸೇನ್ ಅಂಥ ಚಿತ್ರ ನಿರ್ದೇಶಕರ ಬಗ್ಗೆ ಚರ್ಚಿಸುವಂತಾದರು. ಹೊರಗಿನ ಕಲೆ ಮತ್ತು ಸಂಸ್ಕøತಿಯನ್ನು ಅರಿಯುತ್ತಲೇ ತನ್ನದೇ ಪ್ರಾಂತೀಯ ಕಲಾವಿಧಾನವನ್ನು ಹೆಗ್ಗೋಡು ಪ್ರಾಂತ್ಯ ಹುಟ್ಟು ಹಾಕಿಕೊಂಡಿತು. ಇದರ ಸ್ಪಷ್ಟವಾದ ರೂಪ ದೊರಕಿದ್ದು 1980ರ ದಶಕದಲ್ಲಿ.

ಆಗ ನೀನಾಸಂ ತನ್ನ ಕಾರ್ಯಚಟುವಟಿಕೆಗಳನ್ನು ದೊಡ್ಡದಾಗಿ ವಿಸ್ತರಿಸಿಕೊಂಡಿತು. ನೀನಾಸಂ ರಂಗಶಿಕ್ಷಣ ಕೇಂದ್ರ ಕಾರ್ಯರಂಭ ಮಾಡಿತು. ಕರ್ನಾಟಕದ ವಿವಿಧ ಊರುಗಳಿಂದ ಬಂದ ರಂಗಭೂಮಿ ವಿದ್ಯಾರ್ಥಿಗಳು ಒಂದು ವರ್ಷ ಕಾಲ ಇಲ್ಲಯೇ ಇದ್ದು ರಂಗಶಿಕ್ಷಣವನ್ನು ಪಡೆಯುವ ಏರ್ಪಾಡು ಆಯಿತು. ಆಧುನಿಕ ಭಾರತೀಯ ರಂಗ ಇತಿಹಾಸದಲ್ಲಿ ಅದ್ಭುತ ಯಶಸ್ಸನ್ನು ಕಂಡ ಗ್ರಾಮೀಣ ರಂಗ ಶಾಲೆಯಿದು. ಮುಂದಿನ 25ವರ್ಷಗಳಲ್ಲಿ ಇದು ಸುಮಾರು 350ಕ್ಕೂ ವಿದ್ಯಾರ್ಥಿಗಳನ್ನು ರಂಗಭೂಮಿಯಲ್ಲಿ ತರಬೇತುಗೊಳಿಸಿತು. ಕರ್ನಾಟಕದಲ್ಲಿ ರೆಪರ್ಟರಿ ಎಂಬ ಕಲ್ಪನೆಯು ಗಟ್ಟಿಯಾಗಲು ಮತ್ತು ಸುಶಿಕ್ಷಿತರು ರಂಗಭೂಮಿಯನ್ನು ವೃತ್ತಿಯಾಗಿಸಿಕೊಳ್ಳಲು ಪ್ರೇರಣೆಯಾಗಿದ್ದು ನೀನಾಸಂ ಆರಂಭಿಸಿದ ತಿರುಗಾಟ ತಂಡದಿಂದ. ರಂಗಶಿಕ್ಷಣ ಕೇಂದ್ರದಲ್ಲಿ ಕಲಿತ ಮತ್ತು ತಿರುಗಾಟ ರಂಗಪ್ರದರ್ಶನ ಯೋಜನೆಯಲ್ಲಿ ಭಾಗವಹಿಸಿದ ನೂರಾರು ಕಲಾವಿದರು ಕರ್ನಾಟಕದಾದ್ಯಂತ ಹೊಸ ಶಿಸ್ತಿನಿಂದ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಚಟುವಟಿಕೆಗಳು ಈಗ ಹೊಸದಾಗಿ ಬೆಳೆಯುತ್ತಿರುವ ಕರ್ನಾಟಕದ ನವ ವೃತ್ತಿರಂಗಭೂಮಿಗೆ ಬುನಾದಿಯಾಗಿವೆ.

ಸುಬ್ಬಣ್ಣನವರು 1950ರಿಂದಲೇ ಬರವಣಿಗೆಯನ್ನು ಆರಂಭಿಸಿದರು. ಅವರ ಕೃತಿಗಳು ಹೀಗಿವೆ.

  • 1950 - ಕೈಲಾಸಂ ದರ್ಶನ (ಸಂ,) : ವಿಮರ್ಶಾತ್ಮಕ ಲೇಖನಗಳ ಸಂಕಲನ. ಪ್ರ : ನೀಲಕಂಠೇಶ್ವರ ನಾಟ್ಯಸೇವಾ ಸಂಘ, ಹೆಗ್ಗೋಡು.
  • 1952 - ನಾವು ತಿನ್ನುವ ಅಡಕೆ (ಪರಿಚಯ)
  • 1952 - ಜೇನು ಸಾಕುವ ಬಗೆ (ಪರಿಚಯ) (ಎರಡೂ ಪುಸ್ತಕಗಳ ಪ್ರಕಾಶಕರು : ವಯಸ್ಕರ ಶಿಕ್ಷಣ ಸಮಿತಿ, ಮೈಸೂರು.)
  • 1953 - ಗೋರ್ಕಿಯ ಕಥೆಗಳು (ಅನುವಾದ) ಮೊದಲ ಪ್ರಕಾಶಕರು : ಜನಶಕ್ತಿ ಪ್ರಕಾಶನ, ಬೆಂಗಳೂರು. ಮುಂದೆ ಅಕ್ಷರ ಪ್ರಕಾಶನದಿಂದ ಮರು ಮುದ್ರಣಗಳು.
  • 1954 - ಬಾಗಿನ (ಸಂ. ಹಾ. ಮಾ. ನಾಯಕರೊಂದಿಗೆ) : ಎಸ್. ವಿ. ರಂಗಣ್ಣ ಸಂಭಾವನ ಗ್ರಂಥ ಪ್ರ : ಮಹಾರಾಜಾ ಕಾಲೇಜು, ಮೈಸೂರು.
  • 1957 - ಅಭಿಸಾರ (ರೇಡಿಯೋ ನಾಟಕಗಳ ಸಂಕಲನ) ಪ್ರ : ನೀಲಕಂಠೇಶ್ವರ ನಾಟ್ಯ ಸೇವಾ ಸಂಘ.
  • 1957 - ಹೂವು ಚೆಲ್ಲಿದ ಹಾದಿಯಲ್ಲಿ (ಕವಿತೆಗಳು)
  • 1958 - ದಶರೂಪಕ (ಧನಂಜಯನ ದಶರೂಪಕದ ಅನುವಾದ, ಸಂಸ್ಕøತದಿಂದ, ಪ್ರಸ್ತಾವನೆ ವ್ಯಾಖ್ಯಾನ ಸಹಿತ. 1992ರಲ್ಲಿ ಎರಡನೇ ಮುದ್ರಣ ಕಂಡಿದೆ.)
  • 1958 - ಅವರು ನೀಡಿದ ದೀಪ (ಜನಪದ ಸಾಹಿತ್ಯ - ಪರಿಚಯ)
  • 1970 - ಕಾಡಿನಲ್ಲಿ ಕಥೆ (ಮಕ್ಕಳ ನಾಟಕ)
  • 1974 - ಚಲನಚಿತ್ರದ ಮಹಾನೌಕೆ (ಐಸೆನ್ ಸ್ಪೈನ್ ಜೀವನ ಮತ್ತು ಕೃತಿ; ಬ್ಯಾಟಲ್‍ಶಿಪ್ ಪೊಟೆಮ್‍ಕಿನ್ ಚಿತ್ರ ವಿಮರ್ಶೆ; ಚಿತ್ರಲೇಖನದ ಅನುವಾದ)
  • 1974 - ಅಂಚೆಮನೆ (ಮಕ್ಕಳ ನಾಟಕ - ರಬೀಂದ್ರನಾಥ ಟಾಗೋರ್ ನಾಟಕದ ರೂಪಾಂತರ)
  • 1977 - ಭಗವದಜ್ಜುಕೀಯ ಮತ್ತು ಸೂಳೆ ಸನ್ಯಾಸಿ (ಸಂಸ್ಕøತ ನಾಟಕದ ಅನುವಾದ ಮತ್ತು ರೂಪಾಂತರ)
  • 1979 - ಬೈಸಿಕಲ್ ಥೀವ್ಸ್ (ಚಿತ್ರಲೇಖನದ ಅನುವಾದ)
  • 1979 - ನಾಟಕ ಮತ್ತು ಸಿನೆಮಾ (ವಿಮರ್ಶೆ)
  • 1979 - ಅಭಿವೃದ್ಧಿಗಾಗಿ ಸಿನೆಮಾ (ವಿಮರ್ಶೆ)
  • 1980 - ರಶೊಮೊನ್ (ಜಪಾನಿ ಚಲನಚಿತ್ರದ ಪರಿಚಯ; ಕುರೊಸವನ ಮುಖ್ಯ ಚಿತ್ರಗಳ ಪರಿಚಯ; ರಶೊಮೊನ್ ಚಿತ್ರದ ಅವಲೋಕನ - ವಿಮರ್ಶೆ; ರಶೊಮೊನ್ ಚಿತ್ರಲೇಖನದ ಅನುವಾದ; ಈ ಚಿತ್ರನಿರ್ಮಾಣಕ್ಕಾಗಿ ಕುರೊಸವ ಆಶ್ರಯಿಸಿದ ಅಕತಗುವನ ಎರಡು ಕತೆಗಳ ಅನುವಾದ)
  • 1980 - ಸಿನೆಮಾದ ದೂರಚಿತ್ರ ಸಮೀಪ ಚಿತ್ರಗಳು (ಜಾಗತಿಕ ಚಲನಚಿತ್ರ ಇತಿಹಾಸ; ಬೇರೆ ಬೇರೆ ದೇಶಗಳ ಹೆಸರಾಂತ ಚಲನಚಿತ್ರ ಕೃತಿಗಳ ಬಗ್ಗೆ ಮಾಹಿತಿ, ಪರಿಚಯ ವಿಮರ್ಶೆ) - ಸಹ ಲೇಖಕರು : ಅಕ್ಷರ ಕೆ. ವಿ.
  • 1980 - ಪಥೇರ್ ಪಾಂಚಾಲಿ (ಚಿತ್ರ ಲೇಖನದ ಅನುವಾದ)
  • 1980 - ಮಾಕ್ರ್ಸ್ ಮತ್ತು ಗಾಂಧೀ (ಮಧುದಂಡವತೆ ಅವರ ಪುಸ್ತಕದ ಅನುವಾದ) ಸಹ ಅನುವಾದಕರು : ಅಕ್ಷರ ಕೆ. ವಿ.
  • 1981 - ಸಿನೆಮಾದ ಯಂತ್ರಭಾಷೆ (ಸಿನೆಮಾದ ಹಿನ್ನಲೆ, ಹುಟ್ಟು, ಯಂತ್ರ, ತಂತ್ರ, ಭಾಷೆ - ವಿವರವಾದ ಮಾಹಿತಿ ) ಸಹ ಲೇಖಕರು : ಅಕ್ಷರ ಕೆ. ವಿ.
  • 1981 - ಬೆಟ್ಟಕ್ಕೆ ಚಳಿಯಾದರೆ (ಮಕ್ಕಳ ನಾಟಕ, ಸಹ ಲೇಖಕರು : ಅಕ್ಷರ ಕೆ. ವಿ.)
  • 1982 - ರಂಗದಲ್ಲಿ ಅಂತರಂಗ (ಸ್ತಾನಿಸ್ಲಾವೆಸ್ಕಿ ಪುಸ್ತಕದ ಅನುವಾದ)
  • 1983 - ರಂಗಮಾಧ್ಯಮ - ಚಿತ್ರಮಾಧ್ಯಮ (ವಿಮರ್ಶೆ)
  • 1984 - ಜಯಂಟ್ ಮಾಮಾ (ಮಕ್ಕಳ ನಾಟಕ)
  • 1985 - ಝೆನ್ (ಝೆನ್ ಬೌದ್ಧ ಪಂತದ ಪರಿಚಯ; ಒಗಟು, ಕವಿತೆ, ಪ್ರಸಂಗಗಳ ಅನುನಾದ)
  • 1985 - ನನ್ನ ಪ್ರೀತಿಯ ಹಿರೊಶಿಮಾ (ನೈಟ್ ಅಂಡ್ ಫಾಗ್, ಹಿರೊಶಿಮಾ ಮಾನ್ ಅಮೂ ಚಿತ್ರಲೇಖನಗಳ ಅನುವಾದ; ವಿಮರ್ಶೆ
  • 1987 - ತಾಯಿ (ಬ್ರೆಕ್ಟ್ ನಾಟಕ ಅನುವಾದ)
  • 1987 - ಮೂರು ಕಾಸಿನ ಸಂಗೀತ ನಾಟಕ (ಬ್ರೆಕ್ಟ್ ಅನುವಾದ)
  • 1987 - ಸೆಜುವಾನ್ ನಗರದ ಸಾಧ್ವಿ (ಬ್ರೆಕ್ಟ್ ನಾಟಕ ಅನುವಾದ)
  • 1988 - ಲೋಕ ಶಾಕುಂತಲ (ಕಾಳಿದಾಸನ ಅಭಿಜ್ಞಾನ ಶಾಕುಂತಲಮ್ ಆಧರಿಸಿ)
  • 1992 - ವೊಯ್‍ಜೆಕ್ (ಬುಶ್ನರ್ ಅವರ ಜರ್ಮನ್ ನಾಟಕದ ಅನುವಾದ)
  • 1992 - ವಿದಿಶೆಯ ವಿದೂಶಕ (ಕಾಳಿದಾಸನ ಮಾಲವಿಕಾಗ್ನಿಮಿತ್ರಂ ಆಧರಿಸಿ.)
  • 1995 - ಕೆ. ವಿ. ಸುಬ್ಬಣ್ಣ ಅವರ ಆಯ್ದ ಬರಹಗಳು (ಸಂ: ಟಿ.ಪಿ. ಅಶೋಕ)
  • 1995 - ನಮ್ಮ ತವಕ ತಲ್ಲಣಗಳು (ಅಭಿನವ ಪ್ರಕಾಶನ ಬೆಂಗಳೂರು)
  • 1995 - ಕುವೆಂಪುಗೆ ಪುಟ್ಟ ಕನ್ನಡಿ (ಸಾಹಿತ್ಯ ಅಕಾಡೆಮಿ ಬೆಂಗಳೂರು)
  • 1999 - ರಂಗಭೂಮಿ ಮತ್ತು ಸಮುದಾಯ (ಕರ್ನಾಟಕ ಸಂಘ, ಪುತ್ತೂರು)
  • 2000 - ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು

ಭಾಷೆ ಮತ್ತು ಸಾಹಿತ್ಯ ಮಾತ್ರವಲ್ಲದೆ ಸಂಸ್ಕøತಿಯನ್ನು ಕುರಿತಂತೆ ಸುಬ್ಬಣ್ಣನವರು ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರೆನಿಸಿದ್ದಾರೆ. ಇವರ ಅತ್ಯುತ್ತಮ ಕೃತಿ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಈ ಪುಸ್ತಕದ ಮೂಲಕ ಕನ್ನಡ ವಿಮರ್ಶೆ ಯಾವುದೇ ಭಾಷೆಯ ಸಿದ್ಧಿಗೆ ಹೋಲಿಸಬಹುದಾದ ಎತ್ತರವನ್ನು ಮುಟ್ಟಿಬಿಟ್ಟಿದೆ ಎಂದು ಹೇಳಲು ನನಗೆ ಯಾವ ಸಂಕೋಚವು ಇಲ್ಲ ಎಂದು ಈ ಕೃತಿಯನ್ನು ಕುರಿತಾಗಿ ವಿಮರ್ಶಕ ಟಿ.ಪಿ. ಅಶೋಕ್ ಹೇಳಿದ್ದಾರೆ.

2004ರಲ್ಲಿ ಸುಬ್ಬಣ್ಣನವರ ಅರೆ ಶತಮಾನದ ಅಲೆ ಬರಹಗಳು ಕೃತಿ ಪ್ರಕಟವಾಯಿತು. ಕಳೆದ ಐವತ್ತು ವರ್ಷಗಳಲ್ಲಿ ಇವರು ವಿವಿಧ ವಿಷಯಗಳನ್ನು ಕುರಿತು ಬರೆದ ಲೇಖನಗಳ ಸಮಗ್ರ ಸಂಪುಟವಿದೆ.

ನೀನಾಸಂ ಆರಂಭವಾದಾಗಿನಿಂದಲೂ ಸುಬ್ಬಣ್ಣ ನಾಟಕ ನಿರ್ದೇಶನ ಮತ್ತು ನಟನೆಗಳಲ್ಲಿ ತೊಡಗಿಕೊಂಡರು. ಅವರು ನಿರ್ದೇಶಿಸಿದ ಕೆಲವು ಮುಖ್ಯ ರಂಗಕೃತಿಗಳೆಂದರೆ:

  • 1953 - ರಕ್ತಾಕ್ಷಿ
  • 1976 - ಕಾಡಿನಲ್ಲಿ ಕಥೆ
  • 1968 - ಆಮನಿ
  • 1969 - ಅಂಚೆಮನೆ
  • 1972 - ಅಂಬಪಾಲಿ
  • 1973 - ಸಾಂಗ್ಯಾಬಾಳ್ಯಾ
  • 1974 - ಆಷಾಢದ ಒಂದು ದಿನ
  • 1974 - ಮಣ್ಣಿನ ಬಂಡಿ
  • 1975 - ಬಕ
  • 1976 - ಫಾಸಿರಾಂ ಕೊತ್ವಾಲ್
  • 1978 - ಚೋಮನದುಡಿ
  • 1980 - ಮೇಘದೂತ
  • 1980 - ಬೆಟ್ಟಕ್ಕೆ ಚಳಿಯಾದರೆ
  • 1981 - ಜಯಂಟ್ ಮಾಮಾ
  • 1981 - ಹೆಡ್ಡಾಯಣ
  • 1982 - ಊರುಭಂಗ
  • 1982 - ಯಾರೋ ಅಂದರು
  • 1982 - ಲೋಕ ಶಾಕುಂತಲ
  • 1984 - ಹ್ಯಾಮ್ಲೆಟ್
  • 1984 - ಷಾಜಹಾನ್
  • 1985 - ಜಂಝವಾತ
  • 1986 - ಸಿರಿಸಂಪಿಗೆ

ಸುಬ್ಬಣ್ಣನವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ. ಅವರ ಕೃತಿಗಾಗಿ ಕೇಂದ್ರ ಹಾಗೂ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಿಕ್ಕಿವೆ. ಪ್ರತಿಷ್ಟಿತ ಕಾಳಿದಾಸ ಸಮ್ಮಾನ ಹಾಗೂ ಪದ್ಮಶ್ರೀ ಪ್ರಶಸ್ತಿ ಅವರಿಗೆ ದೊರಕಿವೆ. ಏಷ್ಯಾದ ನೊಬೆಲ್ ಪ್ರಶಸ್ತಿ ಎನ್ನಲ್ಪಡುವ "ರಾಮೊನ್ ಮ್ಯಾಗ್‍ಸೇಸೆ ಪ್ರಶಸ್ತಿ"(1991) ಇವರ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ದೊರೆಯಿತು. ಭಾರತದ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಾ ಅಲ್ಲಿನ ಸಮುದಾಯಕ್ಕೆ ಹೊಸ ಅರಿವನ್ನು ಮೂಡಿಸಿದ ಸಾಧಕ ಎಂದು ಈ ಪ್ರಶಸ್ತಿ ಹೇಳಲಾಗಿದೆ. ಆದರೆ ಈ ಪ್ರಶಸ್ತಿಯು ನನಗೆ ಬಂದಿದ್ದಲ್ಲ. ನಾನು ನಿಮಿತ್ತ ಮಾತ್ರ. ಇದು ಇಡೀ ಹೇಗ್ಗೋಡಿನ ಸಮುದಾಯಕ್ಕೆ ಸಂದಿರುವ ಪ್ರಶಸ್ತಿ ಎಂದು ಹೇಳಿ ಪ್ರಶಸ್ತಿಯೊಂದಿಗೆ ದೊರೆತ ಸುಮಾರು 7ಲಕಗಷ ರೂಪಾಯಿಗಳನ್ನು ನೀನಾಸಮ್ ಸಂಸ್ಥೆಗೆ ದಾನವಾಗಿ ನೀಡಿಬಿಟ್ಟರು.

ಆ ಹಣವನ್ನು ಠೇವಣಿಯಾಗಿಟ್ಟು ನೀನಾಸಮ್ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ಸಂಸ್ಥೆಯು ಕರ್ನಾಟಕದ ಅನೇಕ ಊರುಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಸಿನಿಮಾ ಸಹೃದಯತಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಯುತ್ತಾ ಬಂದಿದೆ.

ಸುಬ್ಬಣ್ಣನವರ ಪತ್ನಿ ಶ್ರೀಮತಿ ಶೈಲಜಾ. ಪುತ್ರ ಕೆ.ವಿ.ಅಕ್ಷರ ಸಹಾ ತಂದೆಯಂತೆಯೇ ಲೇಖಕ ಮತ್ತು ರಂಗ ನಿರ್ದೇಶಕರಾಗಿದ್ದು ನೀನಾಸಮ್ ತಿರುಗಾಟ ಯೋಜನೆಯ ಮುಖ್ಯಸ್ಥರಾಗಿದ್ದಾರೆ. ರಂಗಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಕಲಿತಿರುವ ಸೊಸೆ ವಿದ್ಯಾ ನೀನಾಸಮ್‍ನ ಹಲವು ರಂಗಪ್ರದರ್ಶನಗಳಲ್ಲಿ ನಟಿಸಿದ್ದಾರೆ. ಮಿವ್ಮ್ಮಗ ಶಿಶಿರ ಕಾಲೇಜು ಓದುತ್ತಿದ್ದಾರೆ. (ಎನ್.ವಿ.) (ಪರಿಷ್ಕರಣೆ: ವಿದ್ಯಾರಣ್ಯ)