ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬಣ್ಣ ಶಿವಮೊಗ್ಗ

ಸುಬ್ಬಣ್ಣ ಶಿವಮೊಗ್ಗ

1938- . ವೃತ್ತಿಯಲ್ಲಿ ವಕೀಲರು ಸುಗಮ ಸಂಗೀತದ ಗಾಯಕರು, ರಾಜ್ಯರಾಷ್ಟ್ರ ಪುರಸ್ಕøತರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ನಗರ ಎಂಬಲ್ಲಿ, 1938ರ ಫೆಬ್ರುವರಿ 14ರಂದು. ತಾಯಿ ರಂಗನಾಯಕಮ್ಮ, ತಂದೆ ಗಣೇಶರಾವ್. ಹುಟ್ಟು ಹೆಸರು ಸುಬ್ರಹ್ಮಣ್ಯ. ಗಾಯಕರಾಗಿ ಪ್ರವರ್ಧಮಾನಕ್ಕೆ ಬಂದ ಮೇಲೆ ಶಿವಮೊಗ್ಗ ಸುಬ್ಬಣ್ಣ ಎಂದೇ ನಾಮಾಂಕಿತರಾದರು.

ಸುಬ್ಬಣ್ಣನವರಿಗೆ ಸಂಗೀತ ವಂಶಪಾರಂಪರ್ಯವಾಗಿ ಬಂದ ಕೊಡುಗೆ. ಅಜ್ಜ ಶಾಮಣ್ಣನವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರು. ತಾಯಿಯವರ ತಂದೆ ಕೃಷ್ಣ ಉಡುಪರು ಸಂಗೀತ ವಿದ್ವಾಂಸರು. ಸುಬ್ಬಣ್ಣ ಬಾಲ್ಯದಿಂದಲೇ ಸಂಗೀತದ ಪರಿಸರದಲ್ಲಿ ಬೆಳೆದರು. ಕೃಷ್ಣ ಉಡುಪ ಹಾಗೂ ಶಿವಮೊಗ್ಗದ ರಾಮಾಜೋಯಿಸ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಗಳಿಸಿದ ಸುಬ್ಬಣ್ಣ, ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಓದಿ ಬಿ.ಕಾಂ. ಪದವೀಧರರಾದರು (1961). ಬೆಂಗಳೂರಿನಲ್ಲಿ ತೆರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ನ್ಯಾಯಶಾಸ್ತ್ರದ ಪದವೀಧರರಾದರು; ವಕಿಲರಾದರು, ರಾಜ್ಯ ಹೈಕೋರ್ಟಿನಲ್ಲಿ ಸರ್ಕಾರಿ ಪ್ಲೀಡರ್ ಆಗಿ ನೇಮಕಗೊಂಡು 9 ವರ್ಷಕಾಲ ಸೇವೆಸಲ್ಲಿಸಿದರು. 1959ರಲ್ಲಿ ಬಿ.ಕಾಂ ಪದವಿಗಾಗಿ ಮೈಸೂರಿನ ಬನುಮಯ್ಯ ಕಾಲೇಜಿಗೆ ಸೇರಿದಾಗ ಆಗ ಹಿಂದಿ ಚಲನಚಿತ್ರದ ಅದ್ವೀತೀಯ ಗಾಯಕರಾಗಿದ್ದ ರಫಿ ಮತ್ತು ಮುಖೇಶ್ ಹಾಡಿದ ಗೀತೆಗಳ ಆಕರ್ಷಣೆ. ಅಂತರ ಕಾಲೇಜುಗಳ ಭಾವಗೀತಾ ಸ್ಪರ್ಧೆಯಲ್ಲಿ ಬಹುಮಾನಗಳನ್ನು ದೋಚಿಕೊಂಡ ಸುಬ್ಬಣ್ಣನವರನ್ನು ಸ್ವಂತಿಕೆಯ ಜಾಡಿನಲ್ಲಿ ಸಾಗುವಂತೆ ಪ್ರೇರೇಪಿಸಿದವರು ಕವಿ ಲಕ್ಷ್ಮೀನಾರಾಯಣ ಭಟ್ಟ. ಆಗ ಮೈಸೂರಿನಲ್ಲೇ ಇದ್ದ ಮೈಸೂರು ಅನಂತಸ್ವಾಮಿಯವರ ಅಭಿಮಾನಿಯಾದ ಸುಬ್ಬಣ್ಣನವರು ಭಾವಗೀತಾ ಗಾಯನವನ್ನೇ ಭದ್ರವಾಗಿ ಹಿಡಿದುಕೊಂಡಿದ್ದರು. ಸುಬ್ಬಣ್ಣ ಶಿವಮೊಗ್ಗದಲ್ಲಿದ್ದಾಗ ಸುಗಮ ಸಂಗೀತದ ಗಾಯಕರಾಗಿದ್ದ ಎಂ. ಪ್ರಭಾಕರ್ ಅವರ ಬಳಿ ಕೆಲ ಕಾಲ ಸುಗಮಸಂಗೀತವನ್ನೂ ಅಭ್ಯಾಸ ಮಾಡಿದರು. ವೃತ್ತಿಯಿಂದ ವಕೀಲರಾದರೂ, ಪ್ರವೃತ್ತಿಯಿಂದ ಸುಗಮ ಸಂಗೀತ ಗಾಯಕರಾದರು. ಕರ್ನಾಟಕ ಸಂಗೀತದ ಪರಿಚಯವಿದ್ದುದರಿಂದ ಸುಬ್ಬಣ್ಣನವರು ತಮ್ಮ ಸಂಗೀತಜ್ಞಾನದ ಮಿತಿಯಲ್ಲಿಯೇ ಕವಿವರ್ಯರ ಗೀತೆಗಳಿಗೆ ರಾಗಸಂಯೋಜನೆ ಮಾಡಲು ಪ್ರಾರಂಭಿಸಿದ್ದರು. ಈ ಮಧ್ಯೆ ಹೆಚ್.ಆರ್. ಲೀಲಾವತಿ ಅವರ ಪ್ರೋತ್ಸಾಹದಿಂದ ಆಕಾಶವಾಣಿಯ ಧ್ವನಿಪರೀಕ್ಷೆಗೆ ಕುಳಿತು ಅಲ್ಲಿ ಆಯ್ಕೆಯಾದ ಮೇಲೆ ಸುಬ್ಬಣ್ಣನವರ ದನಿ ನಿರಂತರವಾಗಿ ಆಕಾಶವಾಣಿಯಲ್ಲಿ ಕೇಳತೊಡಗಿತು. ಪದ್ಮಚರಣ್ ಮತ್ತು ಎಚ್.ಕೆ ನಾರಾಯಣ್ ಅವರ ಸಹಾಯದಿಂದ ಕಂಚಿನ ಕಂಠದ ಸುಬ್ಬಣ್ಣನವರ ದನಿ ಆಕಾಶವಾಣಿಯಲ್ಲಿ ಮೊಳಗತೊಡಗಿತು. 1962ರಲ್ಲಿ ಮೊದಲ ಬಾರಿಗೆ ಸುಬ್ಬಣ್ಣನವರು ಆಕಾಶವಾಣಿಯಲ್ಲಿ ಹಾಡಿದರು. ಜನಪ್ರಿಯ ಮಾಧ್ಯಮವಾಗಿದ್ದ ಚಿತ್ರರಂಗವೂ ಸುಬ್ಬಣ್ಣನವರನ್ನು ಕೈಬೀಸಿ ಕರೆಯಿತು. ಚಂದ್ರಶೇಖರ ಕಂಬಾರರು ತಮ್ಮ 'ಕರಿಮಾಯಿ ಚಿತ್ರಕ್ಕೆ ಹಾಡಿಸಲು ಹೊಸ ಗಾಯಕರ ಅನ್ವೇಷಣೆಯಲ್ಲಿರುವಾಗ ಕವಿ ಲಕ್ಷ್ಮೀನಾರಾಯಣ ಭಟ್ಟರ ಸಲಹೆಯಂತೆ ಸುಬ್ಬಣ್ಣನವರನ್ನು ಆರಿಸಿಕೊಂಡರು. ಸುಬ್ಬಣ್ಣನವರು ಆ ಚಿತ್ರದಲ್ಲಿ ಹಾಡಿ ಅದು ಎಲ್.ಪಿ. ಧ್ವನಿ ತಟ್ಟೆಗಳ ಮೂಲಕ ಬಿಡುಗಡೆಯಾಯಿತು. ಸುಬ್ಬಣ್ಣನವರ ಹೆಸರು ಆಗ ಜಿ.ಸುಬ್ರಹ್ಮಣ್ಯಂ ಎಂದೇ ಇದ್ದದ್ದರಿಂದ ಆಕಾಶವಾಣಿಯಲ್ಲಿ ಸುಬ್ಬಣ್ಣನವರು ಹಾಡಿದ ಹಾಡನ್ನೇ `ಈ ಗೀತೆಯನ್ನು ಈಗ ಹಾಡಿದವರು ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂದು ಪ್ರಸಾರವಾಗತೊಡಗಿತು. ಈ ಗೊಂದಲವನ್ನು ತಪ್ಪಿಸುವುದಕ್ಕೋಸ್ಕರ ತಮ್ಮ ಎರಡನೇಯ ಚಿತ್ರ 'ಕಾಡುಕುದುರೆ ಯಲ್ಲಿ ಇವರ ಹೆಸರು ಶಿವಮೊಗ್ಗ ಸುಬ್ಬಣ್ಣ ಎಂದು ಬದಲಾಯಿಸಿದರು. ಜಿ. ಸುಬ್ರಹ್ಮಣ್ಯ ಎಂದು ನಾಮಾಂಕಿತರಾಗಿದ್ದ ಸುಬ್ಬಣ್ಣ, ಶಿವಮೊಗ್ಗ ಸುಬ್ಬಣ್ಣ ಎಂದೇ ಪ್ರಸಿದ್ಧರಾದರು. ಹೆಸರು ಬದಲಾಯಿಸಿದ್ದರಿಂದ ಅದೃಷ್ಟ ರೇಖೆಯೂ ಬದಲಾಯಿತು. ಕಾಡುಕುದುರೆ ಚಿತ್ರದಲ್ಲಿ (1979) ಸುಬ್ಬಣ್ಣ ಹಾಡಿದ 'ಕಾಡುಕುದುರೆ ಓಡಿ ಬಂದಿತ್ತ ಎಂಬ ಹಾಡಿಗೆ ರಾಷ್ಟ್ರಮಟ್ಟದ ಪ್ರಶಸ್ತಿ (1979) ಲಭಿಸಿತು. ಹಿನ್ನಲೆ ಗಾಯನಕ್ಕೆ ರಾಷ್ಟ್ರಪ್ರಶಸ್ತಿಗಳಿಸಿದ ಮೊದಲ ಕನ್ನಡಿಗ ಸುಬ್ಬಣ್ಣ ಜನಪ್ರಿಯ ಗಾಯಕರಾಗಿ ಬೆಳೆದರು. ಎಂ.ಎಸ್.ಎ.ಎಲ್. ಪ್ರಸ್ತುತಿ ಪಡಿಸಿದ ಶಿಶುನಾಳ ಶರೀಫರ ಹಾಡುಗಳಿಂದ ಸುಬ್ಬಣ್ಣ ಮನೆ ಮನೆ ಮಾತಾದರು. ತಮ್ಮ ರಾಷ್ಟ್ರಪ್ರಶಸ್ತಿಯ ಜನಪ್ರಿಯತೆಯನ್ನು ಭಾವಗೀತಾ ಗಾಯನಕ್ಕೆ ಮೀಸಲಿಟ್ಟರು. ಮೈಸೂರು ಅನಂತಸ್ವಾಮಿಯವರ ಕನ್ನಡ ಸುಗಮ ಸಂಗೀತದ ಮೊಟ್ಟಮೊದಲ ಧ್ವನಿಸುರುಳಿ ನಿತ್ಯೋತ್ಸವದಲ್ಲಿ ಹಾಡಿದ ಹಿರಿಮೆ ಸುಬ್ಬಣ್ಣನವರದು. ಸಿ. ಅಶ್ವತ್ಥ್ ಅವರ ಶಿಶುನಾಳ ಶರೀಫರ ಐದು ಧ್ವನಿಸುರುಳಿಗಳು ದೀಪಿಕಾ, ಕವಿಶೈಲ ಹಾಗೂ ಕೆ. ನಾರಾಯಣರ ಸಂಗೀತ ನಿರ್ದೇಶನದ ಬಾರೋ ವಸಂತ, ಅಗ್ನಿಹಾಸ, ಸುಬ್ಬಣ್ಣನವರಿಗೆ ಹೆಸರು ತಂದು ಕೊಟ್ಟ ಧ್ವನಿಸುರುಳಿಗಳು, `ಕುವೆಂಪು ಗೀತೆಗಳು ಧ್ವನಿ ಸುರುಳಿಗೆ ಅವರದೇ ರಾಗಸಂಯೋಜನೆ.

ಸುಬ್ಬಣ್ಣನವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಆರಿಸಿಕೊಂಡು ಬಂದವು. ಅವುಗಳು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1985), ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (1988), ಮೈಸುರು ಅನಂತಸ್ವಾಮಿ ಸ್ಮಾರಕ ಪ್ರಶಸ್ತಿ (1977), 1999ರಲ್ಲಿ ಸುಗಮ ಸಂಗೀತಕ್ಕೆ ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಷರೀಫ ಪ್ರಶಸ್ತಿ (1999) ಮುಖ್ಯವಾದವು. ಇವೆಲ್ಲಾ ಶಿವಮೊಗ್ಗ ಸುಬ್ಬಣ್ಣನವರ ಹೆಸರನ್ನು ಅನನ್ಯವಾಗಿಸಿವೆ. (ಎಚ್.ಕೆ.ಯು) (ಜಯಶ್ರೀ ಅರವಿಂದ್)