ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬರಾಯಪ್ಪ, ಡಿ ಸಿ

ಸುಬ್ಬರಾಯಪ್ಪ, ಡಿ ಸಿ 1878-1968. ಭಾಷಾ ಸೇವಕರು, ಸಮಾಜಸೇವಕರು. ದೊಡ್ಡಬಳ್ಳಾಪುರದ ಬಡ ದೇವಾಂಗ ಕುಟುಂಬವೊಂದರಲ್ಲಿ ಜನಿಸಿದರು. ಇವರ ತಂದೆ ಶಿವಪ್ಪ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಂ.ಶ್ರೀಕಂಠಯ್ಯನವರೊಂದಿಗೆ ಓದಿ ಕನ್ನಡದಲ್ಲಿ ಮೊದಲ ಶ್ರೇಣಿ ಪಡೆದು ಬಿ.ಎ. ಪದವೀಧರರಾಗಿ (1902) ಎಂಟು ತಿಂಗಳ ಕಾಲ ಅದೇ ಕಾಲೇಜಿನಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರ ಜಾಗದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಆಮೇಲೆ ಬಿ.ಎಲ್.ಪದವಿಯನ್ನು ಪಡೆದು ದಿವಾನರ ಕಚೇರಿ, ಹುಜೂರು ಕಾರ್ಯದರ್ಶಿಗಳ ಕಚೇರಿ ಮತ್ತು ಕಂದಾಯ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದರು. ಇವರು ಕೆಲಕಾಲ ಮೈಸೂರು ನಗರ ನ್ಯಾಯಾಧೀಶರೂ ಆಗಿದ್ದರು. ಸರ್ಕಾರಿ ಸೇವೆಯಿಂದ 1936ರಲ್ಲಿ ನಿವೃತ್ತರಾದ ಇವರು ತಮ್ಮ ಬಿಡುವಿನ ವೇಳೆಯನ್ನು ಸಾರ್ವಜನಿಕ ಕೆಲಸಗಳಲ್ಲಿ ಕಳೆದರು. ಕನ್ನಡ, ಇಂಗ್ಲಿಷ್, ಸಂಸ್ಕøತ, ಉರ್ದುಗಳಲ್ಲಿ ಪಾಂಡಿತ್ಯಗಳಿಸಿಕೊಂಡಿದ್ದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದರಲ್ಲದೆ, ಪರಿಷತ್ತಿನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳಾಗಿಯೂ ಪರಿಷತ್ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಇಂಗ್ಲಿಷ್-ಕನ್ನಡ ಮತ್ತು ಕನ್ನಡ-ಕನ್ನಡ ನಿಘಂಟುಗಳ ಸಂಪಾದಕ ಮಂಡಳಿಗಳ ಸದಸ್ಯರೂ ಆಗಿದ್ದರು. ಸರ್ಕಾರದ ಪಠ್ಯಪುಸ್ತಕ ಸಮಿತಿ, ಬೆಂಗಳೂರು ನಗರ ಸಾರಿಗೆ ಸಂಸ್ಥೆ, ಮೈಸೂರು ಸಕ್ಕರೆ ಕಾರ್ಖಾನೆ, ದೇವರಾಜ ಬಹದ್ದೂರ್ ಧರ್ಮನಿಧಿ ಸಮಿತಿ, ಜಯಚಾಮರಾಜೇಂದ್ರ ಸಂಸ್ಕøತ ಕಾಲೇಜು, ಬಸಪ್ಪ ಇಂಟರ್‍ಮಿಡಿಯೇಟ್ ಕಾಲೇಜು, ಅಖಿಲ ಕರ್ನಾಟಕ ಮಕ್ಕಳ ಕೂಟ, ದೇವಾಂಗ ಸಂಘ, ಜನೋಪಕಾರಿ ದೊಡ್ಡಣ್ಣಶೆಟ್ಟರ ಮತ್ತು ಬಿ.ಕೆ.ಮರಿಯಪ್ಪನವರ ಧರ್ಮಸಂಸ್ಥೆಗಳು ಈ ಮುಂತಾದ ಸಂಘ ಸಂಸ್ಥೆಗಳ ಅಭಿವೃದ್ಧಿಗಾಗಿ ಶ್ರಮಿಸಿದರು. ಸಾರ್ವಜನಿಕ ಸೇವೆಯನ್ನು ಗಮನಿಸಿ ಆಗಿನ ಮೈಸೂರು ಮಹಾರಾಜರು ಇವರಿಗೆ 1948ರಲ್ಲಿ ರಾಜಸೇವಾಸಕ್ತ ಎಂಬ ಬಿರುದನ್ನು ನೀಡಿ ಗೌರವಿಸಿದರು. 1968ರಲ್ಲಿ ಇವರು ನಿಧನರಾದರು. (ಡಿ.ಎಸ್.ಎಸ್.)