ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬರಾಯಪ್ಪ, ಬಿ ವಿ

ಸುಬ್ಬರಾಯಪ್ಪ, ಬಿ ವಿ ಬಿದರೆ ವೆಂಕಟಸುಬ್ಬಯ್ಯ ಸುಬ್ಬರಾಯಪ್ಪ ಜನನ 18-5-1925; ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಯಲ್ಲಿ, ಅಂತಾರಾಷ್ಟ್ರೀಯ ವಿಜ್ಞಾನ ಇತಿಹಾಸಕಾರರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನದಲ್ಲಿ ಎಂ.ಎಸ್‍ಸಿ ಪದವಿಯನ್ನು ಪ್ರತಿಭಾ ಪುರಸ್ಕಾರದೊಂದಿಗೆ ಪಡೆದ ನಂತರ ವಿಜಯಾ ಕಾಲೇಜಿನಲ್ಲಿ ಎಂಟು ವರ್ಷಗಳ ಕಾಲ ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 1955ರಲ್ಲಿ ಮೈಸೂರಿನ ಕೇಂದ್ರ ಆಹಾರ ಸಂಶೋಧನ ಸಂಸ್ಥೆಯಲ್ಲಿ ಪ್ರಚಾರಾಧಿಕಾರಿಯಾಗಿ ಸೇರಿದರು. ಆ ಸಂಸ್ಥೆಯ ಮುಖ ಪತ್ರಿಕೆ `ಆಹಾರ ವಿಜ್ಞಾನದ ಸ್ಥಾಪಕರು (1956) ಮುಂದೆ ಹತ್ತು ವರ್ಷಗಳ ಕಾಲ (1967-77) ದೆಹಲಿಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವಾಗಲೇ ಇಡೀ ಭಾರತದ ಪ್ರಾಚೀನ ವಿಜ್ಞಾನದ ಅಧ್ಯಯನ ಮಾಡಿದರು. ಸಿ.ಎಸ್.ಐ.ಆರ್. ಸಂಸ್ಥೆ ಹೊರತರುತ್ತಿರುವ `ಸೈನ್ಸ್ ರಿಪೋರ್ಟರ್ ಮಾಸ ಪತ್ರಿಕೆಯ ಮೊದಲ ಸಂಪಾದಕರಾದರು (1960). ಮುಂಬೈನ ನೆಹರೂ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿ (1978) ಡಿಸ್ಕವರಿ ಆಫ್ ಇಂಡಿಯಾ ಯೋಜನೆಗೆ ಸುಬ್ಬರಾಯಪ್ಪ ಉತ್ತಮ ತಳಹದಿ ಹಾಕಿಕೊಟ್ಟಿದ್ದಾರೆ. ಅಷ್ಟೇ ಅಲ್ಲ "ಇಂಡಿಯನ್ ಅಸ್ಟ್ರಾನಮಿ ಎ ಸೋರ್ಸ್ ಬುಕ್" ಎಂಬ ಬೃಹತ್ ಪುಸ್ತಕವನ್ನು ಆ ಕೇಂದ್ರದಿಂದ ಹೊರತಂದರು (1985). ಈ ಕೃತಿಯ ವಿಶೇಷವೆಂದರೆ, ದೇಶದ ಉದ್ದಗಲಕ್ಕೂ ಹಂಚಿಹೋಗಿದ್ದ ತಾಳೆಗರಿ ಮುಂತಾದ ಪರಿಕರಗಳಲ್ಲಿ ಅಡಗಿದ್ದ ವಿಜ್ಞಾನ ಸಂಬಂಧೀ ಪ್ರಾಚೀನ ಲೇಖನಗಳನ್ನು ಹೆಕ್ಕಿ ಮೂರು ಸಾವಿರ ಶ್ಲೋಕಗಳನ್ನು ಕೂಲಂಕಷವಾಗಿ ಅಧ್ಯಯನಮಾಡಿ ಖಗೋಳದಲ್ಲಿ ಪ್ರಾಚೀನ ಭಾರತೀಯರಿಗಿದ್ದ ಜ್ಞಾನವನ್ನು ಅತ್ಯಂತ ತುಲನಾತ್ಮಕವಾಗಿ ವಿವೇಚಿಸಿ ನಮ್ಮ ಮುಂದಿಟ್ಟಿದ್ದಾರೆ. ಇದೊಂದು ಅಪೂರ್ವ ಪ್ರಯತ್ನ ಎಂಬುದನ್ನು ಅದೇ ಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ಮತ್ತು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ ತುಂಬು ಗೌರವದಿಂದ ಸ್ಮರಿಸಿದ್ದಾರೆ.

`ಎ ಕನ್‍ಸೈಸ್ ಹಿಸ್ಟರಿ ಆಫ್ ಸೈನ್ಸ್ ಇನ್ ಇಂಡಿಯಾ ಕೃತಿಯೂ ಸೇರಿದಂತೆ ಹದಿಮೂರು ಮೌಲಿಕ ಗ್ರಂಥ, 70ಕ್ಕೂ ಮಿಕ್ಕಿ ವಿಜ್ಞಾನ, ವಿಜ್ಞಾನ ಇತಿಹಾಸ ಕುರಿತ ಲೇಖನಗಳನ್ನು ಪ್ರಕಟಿಸಿದ್ದಾರೆ. ಸಿಂಧೂ ಲಿಪಿ ಸಂಖ್ಯಾಪದ್ಧತಿಯನ್ನು ಸೂಚಿಸುತ್ತದೆ ಎಂಬ ನಿಲವು ತಳೆದು `ಇಂಡಸ್ ಸ್ಕ್ರಿಪ್ಟ್ ಎಂಬ ಕೃತಿ ರಚಿಸಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಚರಿತ್ರೆ ಕುರಿತು ಇವರು ಬರೆದಿರುವ `ಇನ್ ಪರ್ಸೂಟ್ ಆಫ್ ಎಕ್ಸ್‍ಲೆನ್ಸ್ '(1992) ಎಂಬ ಕೃತಿ ವಸಾಹತು ಶಾಹಿ ಮನೋಭಾವಗಳು ಭಾರತದಲ್ಲಿ ವಿಜ್ಞಾನ ಬೇರೂರಿ ಬೆಳೆಯಲು ಹೇಗೆ ಅಡ್ಡಿಪಡಿಸಿದುವು ಎಂಬುದನ್ನು ವಿಶ್ಲೇಷಿಸುತ್ತದೆ. ಜೊತೆಗೆ, ಭಾರತೀಯ ವಿಜ್ಞಾನ ಮಂದಿರದ ಎಲ್ಲ ಹಂತದ ಬೆಳವಣಿಗೆಯನ್ನು ಅತ್ಯಂತ ವಿವರವಾಗಿ ಧಾಖಲಿಸುತ್ತದೆ.

ಫ್ರಾನ್ಸ್‍ನ ಅಂತಾರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಗೌರವ ಸದಸ್ಯತ್ವ ಪಡೆದಿರುವ ಏಕೈಕ ಭಾರತೀಯ. ಪೋಲಿಷ್ ವಿಜ್ಞಾನ ಅಕಾಡೆಮಿ ಅತ್ಯುನ್ನತ ಪ್ರಶಸ್ತಿಯಾದ ಕೊಪರ್ನಿಕಸ್ ಸ್ವರ್ಣಪದಕವನ್ನು ನೀಡಿ ಪೋಲೆಂಡ್ ಇವರನ್ನು 1973ರಲ್ಲಿ ಗೌರವಿಸಿದೆ.

1983ರಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್ ಸಂಸ್ಥೆಯಲ್ಲಿ ವಿಜ್ಞಾನದ ಇತಿಹಾಸ ಮತ್ತು ತತ್ತ್ವಶಾಸ್ತ್ರಗಳ ಕೇಂದ್ರ ಸ್ಥಾಪಿಸಿದ್ದಾರೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಬೇಸಿಗೆಯಲ್ಲಿ ಶಿಬಿರ ಏರ್ಪಡಿಸಿ, ಆಧುನಿಕ ಮತ್ತು ಪ್ರಾಚೀನ ವಿಜ್ಞಾನಗಳ ಮಹತ್ವ ಕುರಿತಂತೆ ಅನುಭವಿ ತಜ್ಞರಿಂದ ಉಪನ್ಯಾಸಗಳನ್ನು ಈ ಕೇಂದ್ರ ಯೋಜಿಸುತ್ತದೆ. ರಸ ವಿದ್ಯೆಗೆ ಸಂಬಂಧಿಸಿದಂತೆ ಈ ಕೇಂದ್ರ 500 ಪುಟಗಳ ಆಕರ ಗ್ರಂಥ ಪ್ರಕಟಿಸಿದೆ. 12ನೇ ಶತಮಾನ ಗೋವಿಂದ ಭಟ್ಟ. ರಚಿಸಿದ `ರಸ ಹೃದಯ ತಂತ್ರ ಕೃತಿಯನ್ನು ಪರಿಷ್ಕರಿಸಿ ಹೊಸ ವ್ಯಾಖ್ಯೆಯೊಂದಿಗೆ ಪ್ರಕಟಿಸಿದೆ. ಚಿತ್ರದುರ್ಗ ಜಿಲ್ಲೆಯ ಘಟ್ಟಿ ಹೊಸಹಳ್ಳಿಯಲ್ಲಿ ಕಳೆದ ಶತಮಾನದ ಹಾದಿಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಮೂಸೆ ಉಕ್ಕನ್ನು ತಯಾರಿಸುತ್ತಿದ್ದ ಜಾಗವನ್ನು ಉತ್ಖನನ ಮಾಡಿಸಿ ಗ್ರಾಮೀಣ ತಂತ್ರಜ್ಞಾನದ ಬಗ್ಗೆ ಸಂಶೋಧನಾ ವರದಿಯನ್ನು ಈ ಕೇಂದ್ರ ತಯಾರಿಸಿದೆ.

`ಇಂಡಿಯನ್ ಕೌನ್ಸಿಲ್ ಆಫ್ ಫಿಲಾಸಫಿ ಸಂಸ್ಥೆ ಯೋಜಿಸಿರುವ ಮೂವತ್ತು ಸಂಪುಟಗಳ ವಿಶ್ವಕೋಶದಲ್ಲಿ ಭಾರತೀಯ ವಿಜ್ಞಾನ ತಂತ್ರಜ್ಞಾನ ಮತ್ತು ಸಂಸ್ಕøತಿ ಕುರಿತ ಮೂರು ಸಂಪುಟಗಳ ಸಂಪಾದಿಸಿದ್ದಾರೆ. ರಸಾಯನ ವಿಜ್ಞಾನ ಮತ್ತು ರಾಸಾಯನಿಕ ತಂತ್ರಗಳು ಸಂಪುಟ 1999ರಲ್ಲೂ ವೈದ್ಯಕೀಯ ಮತ್ತು ಜೀವವಿಜ್ಞಾನ ಸಂಪುಟ 2001ರಲ್ಲೂ, ಭೌತಪ್ರಪಂಚ ಕುರಿತ ಭಾರತೀಯರ ದೃಷ್ಟಿ 2004ರಲ್ಲೂ ಹೊರಬಂದಿದೆ. ಹಂಗೇರಿಯ ಬುಡಪಸ್ಟ್‍ನಲ್ಲಿ 1999ರಲ್ಲಿ ಜರಗಿದ ವಿಜ್ಞಾನ ಕುರಿತ ಜಾಗತಿಕ ಸಮ್ಮೇಳನದಲ್ಲಿ ವಿಜ್ಞಾನ ಮತ್ತು ಜ್ಞಾನದ ಇತರ ಶಾಖೆಗಳು ಎಂಬ ಗೋಷ್ಠಿಗೆ ಅಧ್ಯಕ್ಷರಾಗಿದ್ದರು. ಇದೇ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್‍ಅವರು ಕೂಡ ಅಭಿವೃದ್ಧಿಗಾಗಿ ವಿಜ್ಞಾನ ಎಂಬ ಗೋಷ್ಠಿಗೆ ಅಧ್ಯಕ್ಷರಾಗಿದ್ದರು. 21ನೆಯ ಅಂತಾರಾಷ್ಟ್ರೀಯ ವಿಜ್ಞಾನ ಇತಿಹಾಸ ಸಮ್ಮೇಳನ ಮೆಕ್ಸಿಕೊದಲ್ಲಿ ನಡೆಯಿತು. ಪ್ರ್ರಸಿದ್ಧ ವಿಜ್ಞಾನ ಇತಿಹಾಸಕಾರರಾದ ಸಿ. ಸಿಂಗರ್, ಜಿ. ಸರ್ಟಾನ್, ಐ.ಬಿ,. ಕೋಹೆನ್, ಜೆ. ನೀಡ್‍ಹಮ್, ಆರ್. ಟಟಾನ್ ಮುಂತಾದವರ ಸಾಲಿಗೆ ಸುಬ್ಬರಾಯಪ್ಪ ಸೇರುತ್ತಾರೆಂದು ಅಲ್ಲಿ ಇವರ ಸೇವೆಯನ್ನು ಕೊಂಡಾಡಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಇತಿಹಾಸ ಒಕ್ಕೂಟದ ಅಧ್ಯಕ್ಷರಾಗಿ (ಐ.ಸಿ.ಎಸ್.ಯು) ಆಯ್ಕೆಯಾಗಿ ಮೊತ್ತ ಮೊದಲ ಐರೋಪ್ಯೇತರ ವ್ಯಕ್ತಿ ಆಸ್ಥಾನವನ್ನು ಅಲಂಕರಿಸಿದ ಕೀರ್ತಿಗೆ ಭಾಜನರು (1997). ಇಟಲಿಯ ಬೊಲೋಗ್ನ ವಿಶ್ವವಿದ್ಯಾಲಯ ಡಾ| ಸುಬ್ಬರಾಯಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. (ಟಿ.ಆರ್.ಎ)