ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬರಾವ್, ಎನ್ ಎಸ್

ಸುಬ್ಬರಾವ್, ಎನ್ ಎಸ್ 1885-1943. ಶಿಕ್ಷಣತಜ್ಞರು. ಅರ್ಥಶಾಸ್ತ್ರ ಪ್ರವೀಣರು. ಕನ್ನಡಕ್ಕಾಗಿ ದುಡಿದವರು. ಶ್ರೀಮಂತ ಮನೆತನದಲ್ಲಿ ಜನಿಸಿದರು. ತಂದೆ ನಂಜನಗೂಡು ಸುಬ್ಬರಾಯರು. ಮೈಸೂರು, ಬೆಂಗಳೂರು, ತಮಿಳುನಾಡು ಮತ್ತು ಕೇಂಬ್ರಿಜ್‍ಗಳಲ್ಲಿ ಓದಿ ಎಂ.ಎ. ಪದವೀಧರರಾಗಿ ಬಾರ್-ಅಟ್-ಲಾ ಆಗಿ ಮೈಸೂರು ಸಂಸ್ಥಾನದ ಸಾರ್ವಜನಿಕ ವಿದ್ಯಾ ಇಲಾಖೆಯ ನಿರ್ದೇಶಕರು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು (1937-42) ಮುಂತಾದ ಅನೇಕ ಹುದ್ದೆಗಳನ್ನು ಅಲಂಕರಿಸಿದರು. ಅನೇಕ ವಿಶ್ವವಿದ್ಯಾಲಯಗಳು ಇವರನ್ನು ಅರ್ಥಶಾಸ್ತ್ರದ ಮಹಾ ಪ್ರಾಧ್ಯಾಪಕರೆಂದು ಮನ್ನಿಸಿದ್ದುವು. ತಮ್ಮ ಉನ್ನತ ಅಧಿಕಾರಾವಧಿಯಲ್ಲಿ ಕನ್ನಡ ಸಾಹಿತ್ಯದ ಅಭಿಮಾನವನ್ನು ಮೆರೆದು ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಪುರಸ್ಕಾರಗಳು ದೊರೆಯುವಂತೆ ಮಾಡಿದರು. ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಬೋಧನ ಮಾಧ್ಯಮವಾಗಿ ಬಳಸಲು ಮೊದಲಾದುದು ಇವರ ಕಾಲದಲ್ಲೆ, ಇವರ ಪ್ರೋತ್ಸಾಹ ದಿಂದಲೇ. ಪ್ರಸಿದ್ಧ ವಿದ್ವತ್ಪತ್ರಿಕೆಯಾದ ಪ್ರಬುದ್ಧ ಕರ್ಣಾಟಕದ ಉದಯ ಹಾಗೂ ವಿಕಾಸಗಳಿಗೆ ಇವರು ಅಪಾರ ನೆರವು ನೀಡಿದರು. ಇವರ ಪ್ರೋತ್ಸಾಹದಿಂದಲೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಗ್ರಂಥಮಾಲೆಯೂ ಪ್ರಚಾರ ಪುಸ್ತಕ ಮಾಲೆಯೂ ಬೆಳೆದು ವಿಕಸಿತವಾ ದುವು. 1931ರಲ್ಲಿ ಲಂಡನ್ ನಗರದಲ್ಲಿ ಜರುಗಿದ ದುಂಡುಮೇಜಿನ ಪರಿಷತ್ತಿಗೆ ಇವರು ಭಾರತ ಸರ್ಕಾರದ ಪ್ರತಿನಿಧಿಯಾಗಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರೊಂದಿಗೆ ಹೋಗಿಬಂದರು. ಅಧಿಕಾರದಿಂದ ನಿವೃತ್ತರಾದ ಮೇಲೆ ಇವರು ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಧಾನ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇವರು ನಾಡಿಗೆ ಸಲ್ಲಿಸಿದ ಸೇವೆಗೆ ಕೃತಜ್ಞತಾರೂಪವಾಗಿ ಮೈಸೂರಿನ ಮಹಾರಾಜರು ರಾಜಕಾರ್ಯ ಪ್ರವೀಣ ಎಂಬ ಬಿರುದು ನೀಡಿ ಇವರನ್ನು ಸನ್ಮಾನಿಸಿದರು. ರಾಜನಿಷ್ಠೆ ಇವರಲ್ಲಿದ್ದರೂ ಪ್ರಜಾ ಪ್ರಭುತ್ವದ ಕಡೆಗೆ ಅಪಾರ ಒಲವಿತ್ತು. ಕನ್ನಡ ನಾಡುನುಡಿಯ ಬಗೆಗೆ ಅನನ್ಯ ಕಳಕಳಿಯಿದ್ದ ಇವರನ್ನು ಕನ್ನಡಿಗರು 1935ರಲ್ಲಿ ಮುಂಬಯಿಯಲ್ಲಿ ನಡೆದ 21ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ಗೌರವಿಸಿದರು. ಇವರು 1943 ಜೂನ್ 29ರಂದು ನಿಧನಹೊಂದಿದರು. (ಕೆ.ಕೆ.)