ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬರಾವ್, ಕೆರೋಡಿ

ಕೆರೋಡಿ ಸುಬ್ಬರಾವ್: - 1863-1928. ಹೊಸಗನ್ನಡ ಅರುಣೋದಯ ಕಾಲದ ಆದ್ಯ ಲೇಖಕರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸಾಹಿತ್ಯ, ಪತ್ರಿಕೋದ್ಯಮ, ಕೃಷಿ ಹಾಗೂ ಸಾಮಾಜಿಕ ರಂಗಗಳಲ್ಲಿ ದುಡಿದವರು. ಗವಾನಂದ ಎಂಬುದು ಇವರ ಕಾವ್ಯನಾಮ. ವಿಚಿತ್ರ ಮೂರ್ತಿ ಎಂಬ ಹೆಸರಿನಲ್ಲಿಯೂ ಇವರು ಬರೆದಿದ್ದಾರೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ತೀರ್ಥಹಳ್ಳಿ ತಾಲ್ಲೂಕಿನ ಕೆರೋಡಿ ಗ್ರಾಮದಲ್ಲಿ 1863 ಮೇನಲ್ಲಿ ಜನಿಸಿದರು. ಆರಂಭದ ವಿದ್ಯಾಭ್ಯಾಸವನ್ನು ತೀರ್ಥಹಳ್ಳಿ, ಶಿವಮೊಗ್ಗಗಳಲ್ಲಿ ಪಡೆದು 1885ರಲ್ಲಿ ಎಂ.ಎ. ಪರೀಕ್ಷೆ ಪಾಸು ಮಾಡಿದರು. ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದರು (1891). ಮುಂದೆ ಕಾನೂನು ವ್ಯಾಸಂಗ ಮಾಡುವ ಅಪೇಕ್ಷೆಯಿಂದ ಬಿ.ಎಲ್. ಪದವಿಗೆ ಸೇರಿದರೂ ಅದನ್ನು ಪೂರ್ಣಗೊಳಿಸಲಾಗಲಿಲ್ಲ. ಉಡುಪಿಯಲ್ಲಿ ವೈವಾಹಿಕ ಸಂಬಂಧವನ್ನು ಬೆಳೆಸಿದ್ದರಿಂದ ಹಾಗೂ ಇವರ ಮಾವನವರಾದ ಅನಂತಕೃಷ್ಣರಾಯರು ಅಕಾಲ ಮರಣ ಹೊಂದಿದ್ದರಿಂದ ಇವರು ಉಡುಪಿಯ ಕುತ್ಪಾಡಿಯಲ್ಲಿ ನೆಲೆ ನಿಲ್ಲಬೇಕಾಯಿತು. ಕಮಲಮ್ಮ ಇವರ ಪತ್ನಿ.

ಉಡುಪಿಯಂತಹ ಸಾಂಸ್ಕøತಿಕ ಕೇಂದ್ರದಲ್ಲಿ ಕೃಷಿ ಹಾಗೂ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಶ್ರೀಕೃಷ್ಣಸೂಕ್ತಿ (1906) ಎಂಬ ಸಾಹಿತ್ಯಕ ಮಾಸಪತ್ರಿಕೆಯನ್ನು ಆರಂಭಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯಕ ಚಟುವಟಿಕೆಗೆ ಚಾಲನೆ ನೀಡಿದರು. ಆಗಿನ ಕಾಲಕ್ಕೆ ಈ ಪತ್ರಿಕೆ ಕನ್ನಡನಾಡಿನ ಹೆಸರಾಂತ ಸಾಹಿತ್ಯಕ ಪತ್ರಿಕೆಯಾಗಿತ್ತು. ಇವರ ಹತ್ತಿರದ ಬಂಧುಗಳಾದ ಕಡೇಕಾರು ರಾಜಗೋಪಾಲಕೃಷ್ಣರಾಯರು (1885-1953) ಈ ಪತ್ರಿಕೆಯ ಇನ್ನೊಬ್ಬ ಸಂಪಾದಕರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬಹುಮುಖ್ಯ ಬರೆಹಗಾರರಲ್ಲಿ ಒಬ್ಬರಾಗಿದ್ದ ಕೆರೋಡಿಯವರು ಸುಮಾರು ಮೂರುವರೆ ದಶಕಗಳ ಕಾಲ ಯಕ್ಷಗಾನ, ನಾಟಕ, ಕಾವ್ಯ, ಭಾಷಾಂತರ - ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಇವರು ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕøತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಬಂಗಾಲಿ, ಉರ್ದು ಭಾಷೆಗಳನ್ನೂ ಬಲ್ಲವರಾಗಿದ್ದರು. ಸೌಭಾಗ್ಯವತೀ ಪರಿಣಯ (1893), ತಾರಾನಾಥ ಚರಿತ್ರೆ (1896), ಕುಮಾರಶೇಖರ ನಾಟಕ, ಸಂಕ್ಷಿಪ್ತ ಶಾಕುಂತಲ ನಾಟಕ - ಇವು ಇವರ ನಾಟಕ ಕೃತಿಗಳು. ಸೌಭಾಗ್ಯವತೀ ಪರಿಣಯ ಆ ಕಾಲಕ್ಕ ಎಂ.ಎ. ಪರೀಕ್ಷೆಗೆ ಪಠ್ಯಪುಸ್ತಕವಾಗಿತ್ತು. ಪಲಾಂಡುಚರಿತೆ, ಜರಾಸಂಧವಧೆ, ಪಾಂಡವ ದಿಗ್ವಿಜಯ - ಇವು ಇವರ ಸ್ವತಂತ್ರ ಯಕ್ಷಗಾನ ಕೃತಿಗಳು. ಪ್ರಭಾವತೀ ಸ್ವಯಂವರ, ಕಾಲನೇಮಿ ಕಾಳಗ - ಇವು ಸಂಪಾದಿತ ಯಕ್ಷಗಾನಗಳು. ಗಂಭೀರ ಶೃಂಗಾರ ಶತಕ (1905), ಅನುಕೂಲ ಸಿಂಧು (1926), ಗೋಕೀರ್ತನೆ (1920), ದ್ರೌಪದಿಯ ಉದಯರಾಗ (1922), ಶ್ರೀಕೃಷ್ಣ ಜೋಗುಳ (1926) - ಇವು ಕಾವ್ಯಪದ್ಯ ಸಂಗ್ರಹಗಳು. ಸಮೂಲ ಭಾಷಾಂತರಗಳು (ಭಾಗ-1, 2), ಶ್ರೀಕೃಷ್ಣ, ಶ್ರೀಕೃಷ್ಣರಾಸಲೀಲೆ - ಇವು ಅನುವಾದಗಳು. ಇವರ ಅನೇಕ ಲೇಖನಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಾಗಿದ್ದ ಸುವಾಸಿನಿ (1900), ವಿನೋದಿನಿ (1905), ಶ್ರೀಕೃಷ್ಣಸೂಕ್ತಿ (1906), ಸ್ವದೇಶಾಭಿಮಾನಿ (1907), ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ (1916), ಕಂಠೀರವ (1919), ನವಯುಗ (1922), ಕಾನಡಾ ಧುರೀಣ (1923), ಕನ್ನಡಿಗ (1924), ರಂಗಭೂಮಿ (1925) ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕನ್ನಡದಲ್ಲಿ ಯಕ್ಷಗಾನ ಕುರಿತು ವಿಚಾರಮಾಡಿದವರಲ್ಲಿ ಇವರೇ ಮೊದಲಿಗರು. ಯಕ್ಷಗಾನದ ಉಗಮ, ವಿಕಾಸಗಳನ್ನು ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಇಂಗ್ಲಿಷ್‍ನ ವಿಡಂಬನ ಸಾಹಿತ್ಯದ (ಸೆಟೈರ್) ಮಾದರಿಯಲ್ಲಿ ಕನ್ನಡದಲ್ಲಿ ಸಾಹಿತ್ಯ ರಚಿಸಿದ ಆದ್ಯ ಲೇಖಕರೂ ಆಗಿದ್ದಾರೆ. ಇವರ ಅನುಕೂಲ ಸಿಂಧು (1926) ಆಧುನಿಕ ಕನ್ನಡ ಸಾಹಿತ್ಯದ ಮೊದಲ ವಿಡಂಬನ ಕಾವ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾವ್ಯಾತ್ಮಕ ಸ್ಪರ್ಶ ಪಡೆದ ಸರಳತೆ ಇವರ ಬರೆವಣಿಗೆಯ ವೈಶಿಷ್ಟ್ಯ. ಇಂಗ್ಲಿಷ್ ಭಾಷೆಯ ವ್ಯಾಮೋಹವನ್ನೂ ಆಗಿನ ಕಾಲಕ್ಕೇ ಆಧುನಿಕ ವಿದ್ಯಾಭ್ಯಾಸ ಕ್ರಮವನ್ನೂ ವಿಡಂಬಿಸುವ ಒಂದು ಪದ್ಯವಿದು :

ಆ ಬಾಲ್ಯದಿನೇ ಮಕ್ಕಳಿ
ಗೇ - ಬಿ - ಸಿ - ಡಿ ಗಳೆ ಶ್ರೀಗಣಾಧಿಪನಮಹಂ
ದೋಬಿಯ ಕೋಟು ವಿಜಾರವೆ
ಶೋಭಿಪನಾರ್ಮಡಿ ಇದೊಂದು ವಿದ್ಯಾಭ್ಯಾಸಂ

ಮೊಮ್ಮನ ಮೃತ್ಯು : ಅಜ್ಜನ ಅನುತಾಪ (1927), ಮುದ್ದುಮಣಕನ ಸಾವು (1920) - ಇವು ಇವರ ಎರಡು ಅತ್ಯುತ್ತಮ ಶೋಕಗೀತೆಗಳು. ಕೊಲ್ಲೂರು ಗೋ ಭೂ ನಂದನದ ಆಮೂಲಾಗ್ರ ಚರಿತ್ರೆ ಎಂಬ ಲೇಖನ ಇವರ ಕೃಷಿಯ ಅನುಭವಗಳನ್ನು ಅತ್ಯಂತ ಆಪ್ತವಾಗಿ ವರ್ಣಿಸುತ್ತದೆ; ಇವರ ಅತ್ಯುತ್ತಮ ಗದ್ಯ ಬರೆವಣಿಗೆಗೂ ಇದು ಸಾಕ್ಷಿಯಾಗಿದೆ. ಸಮೂಲ ಭಾಷಾಂತರಗಳು ಎಂಬ ಹೆಸರಿನಲ್ಲಿ ಸಂಸ್ಕøತದ ಆಯ್ದ ಶ್ಲೋಕಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಇವರು ಭಾಷಾಂತರಿಸಿದ್ದಾರೆ. ಜೊತೆಗೆ ಅರ್ಥವಿವರಣೆ ನೀಡಿರುವುದು ಈ ಅನುವಾದಗಳ ವೈಶಿಷ್ಟ್ಯ. ಈ ಬಗೆಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳು ವಿರಳವೆಂದೇ ಹೇಳಬೇಕು. ಗಂಭೀರ ಶೃಂಗಾರಶತಕ 100 ಪದ್ಯಗಳ ಶೃಂಗಾರ ಜಾವಡಿ ಗ್ರಂಥ. ಇಲ್ಲಿನ ಹಲವು ಪದ್ಯಗಳು ಆ ಕಾಲದ ನಾಟಕಗಳಲ್ಲಿ ಸಂದರ್ಭೋಚಿತವಾಗಿ ಬಳಕೆಗೊಂಡಿವೆ.

ಇವರಿಗೆ ಆ ಕಾಲದ ಅನೇಕ ಪ್ರಸಿದ್ಧ ಲೇಖಕರ, ವ್ಯಕ್ತಿಗಳ ಸಂಪರ್ಕ ಹಾಗೂ ಪರಿಚಯವಿತ್ತು. ಅರಮನೆ ಜಯರಾಯಾಚಾರ್ಯ, ಎಂ.ಡಿ. ಅಳಸಿಂಗರಾಚಾರ್ಯ, ಬೆನಗಲ್ ರಾಮರಾವ್, ಪಂಜೆಮಂಗೇಶರಾವ್, ಆಲೂರ ವೆಂಕಟರಾವ್, ಗುಬ್ಬಿವೀರಣ್ಣ, ರಾ.ಹ. ದೇಶಪಾಂಡೆ, ಕಾರ್ನಾಡು ಸದಾಶಿವರಾವ್ ಮೊದಲಾದವರು ಇವರ ಆಪ್ತವರ್ಗಕ್ಕೆ ಸೇರಿದವರಾಗಿದ್ದರು. ಕೆರೋಡಿಯವರು 1928 ಮಾರ್ಚ್ 7ರಂದು ನಿಧನರಾದರು. ಇವರ ಜೀವನ ಹಾಗೂ ಸಾಧನೆಯನ್ನು ಕುರಿತಂತೆ ಕೆರೋಡಿ ಸುಬ್ಬರಾಯರು : ಜೀವನ ಮತ್ತು ಕೃತಿಗಳು ಎಂಬ ಕೃತಿ ಪ್ರಕಟವಾಗಿದೆ (ಹಾ.ತಿ.ಕೃಷ್ಣೇಗೌಡ, 1989). *