ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬಾರಾವ್, ತ ರಾ

ತ.ರಾ.ಸುಬ್ಬಾರಾವ್ : - 1920-84. ಕನ್ನಡದ ಪ್ರಸಿದ್ಧ ಕಾದಂಬರಿಕಾರರು. ತ.ರಾ.ಸು. ಇವರ ಕಾವ್ಯನಾಮ. ಇವರು ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನಲ್ಲಿ 1920 ಏಪ್ರಿಲ್ 21ರಂದು ಜನಿಸಿದರು. ತಂದೆ ತಳುಕಿನ ರಾಮಸ್ವಾಮಯ್ಯ ಮಲೆಬೆನ್ನೂರಿನಲ್ಲಿ ಶೇಕದಾರ್‍ರಾಗಿದ್ದರು, ತಾಯಿ ಸೀತಮ್ಮ. ಸುಬ್ಬರಾಯರ ಅಜ್ಜ ಸುಬ್ಬಣ್ಣ ಆಶುಕವಿಗಳಾಗಿದ್ದರು. ಇವರ ದೊಡ್ಡಪ್ಪ ತಳುಕಿನ ವೆಂಕಣ್ಣಯ್ಯನವರು ಕನ್ನಡ ಸಾಹಿತ್ಯದಲ್ಲಿ ಹೆಸರಾದವರಾಗಿದ್ದರು (ಕುವೆಂಪು ಇವರ ಶಿಷ್ಯರಾಗಿದ್ದರು). ಚಿಕ್ಕಪ್ಪ ತಳುಕಿನ ಶಾಮರಾಯರು ಅಧ್ಯಾಪಕರೂ ವಿದ್ವಾಂಸರೂ ಆಗಿದ್ದರು. ಸಾಹಿತ್ಯ ಪ್ರೇಮಿಯೂ ಕಲಾಪ್ರೇಮಿಯೂ ಆಗಿದ್ದ ರಾಮಸ್ವಾಮಯ್ಯನವರು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ವಕೀಲವೃತ್ತಿ ಆರಂಭಿಸಿ ಚಿತ್ರದುರ್ಗದಲ್ಲಿ ನೆಲೆಸಿದ್ದರಿಂದ ಸುಬ್ಬರಾಯರ ಶಿಕ್ಷಣ ಇಲ್ಲಿ ಸೀನಿಯರ್ ಇಂಟರ್‍ಮಿಡಿಯೇಟವರೆಗೆ ನಡೆಯಿತು. ಚಿತ್ರುದುರ್ಗ, ಶಿವಮೊಗ್ಗ, ತುಮಕೂರುಗಳಲ್ಲಿ ಇವರ ಶಾಲೆ, ಕಾಲೇಜು ವಿದ್ಯಾಭ್ಯಾಸ ನಡೆಯಿತು.

ಮನೆಯಲ್ಲಿ ಸಾಹಿತ್ಯಕ ವಾತಾವರಣವಿದ್ದುದರಿಂದ ಬಾಲ್ಯದಲ್ಲಿ ತಾಯಿ ತೀರಿಕೊಂಡಿದ್ದರಿಂದ ಇವರು ಪುಸ್ತಕಗಳಿಗೆ ಶರಣುಹೋದರು. ಇವರಲ್ಲಿ ಓದುವ ಅಭಿರುಚಿ ಬೆಳೆಯಿತು. ಒಮ್ಮೆ ವೆಂಕಣ್ಣಯ್ಯನವರು ಇವರ ವಾಚಾಳಿತನವನ್ನು ನೋಡಿ ಹೀಗೆ ಬಡಬಡಿಸುವುದಕ್ಕಿಂತ ಏನಾದರೂ ಬರೆಯಬಾರದೇ ಎಂದು ಮೂದಲಿಸಿದಾಗ ಆತ್ಮಾಭಿಮಾನ ಗರಿಗೆದರಿ ಪುಟ್ಟಳ ಚೆಂಡು ಎಂಬ ಕಥೆಯನ್ನು ಬರೆದು ದೊಡ್ಡಪ್ಪನಿಗೆ ತೋರಿಸಿ ಹತ್ತು ರೂಪಾಯಿ ಭಕ್ಷೀಸು ಪಡೆದರು.

ಹುಲ್ಲೂರು ಶ್ರೀನಿವಾಸ ಜೋಯಿಸ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಪ್ರೀತಿಯ ಸುಬ್ಬು ಆಗಿದ್ದ ಇವರು ನಿಜಲಿಂಗಪ್ಪನವರ ನೇತೃತ್ವದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲಿಗೆ ಹೋದರು (1937). ಬಿಡುಗಡೆಯಾದ ಅನಂತರ ಕಾಲೇಜು ಶಿಕ್ಷಣ ಮುಂದುವರಿಸದೆ ದೇಶ ಸ್ವತಂತ್ರವಾಗುವವರೆಗೆ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಗಾಂಧೀವಾದಿಯಾಗಿದ್ದ ಸಿದ್ಧವನಹಳ್ಳಿ ಕೃಷ್ಣಶರ್ಮರು ವಿಶ್ವಕರ್ನಾಟಕ ಪತ್ರಿಕೆಯ ಮೂಲಕ ಜನರಲ್ಲಿ ರಾಷ್ಟ್ರೀಯ ಭಾವನೆ ಬಿತ್ತುತ್ತಿದ್ದರು (1942). ಅವರ ಮತ್ತು ತಿ.ತಾ.ಶರ್ಮ ಮಾರ್ಗದರ್ಶನದಲ್ಲಿ ಇವರು ಪತ್ರಿಕೋದ್ಯಮದ ಪಟ್ಟುಗಳನ್ನು ಕಲಿತರು. 1943ರಲ್ಲಿ ಅ.ನ.ಕೃಷ್ಣರಾಯರ ಪರಿಚಯವಾದ ಅನಂತರ ಅವರ ಗರಡಿಯಲ್ಲಿ ಓದು ಮತ್ತು ಬರೆವಣಿಗೆಯಲ್ಲಿ ಪಳಗಿದರು. ಭಾಷಣ ಕಲೆ ಬೆಳೆಯಿಸಿಕೊಂಡರು.

ಮನೆಗೆ ಬಂದ ಮಹಾಲಕ್ಷ್ಮಿ ಇವರ ಮೊದಲ ಕಾದಂಬರಿ. ಮಸಣದ ಹೂ, ಕೇದಿಗೆ ವನ, ಮಾರ್ಗದರ್ಶಿ, ಮರಳು ಸೇತುವೆ, ಬೇಲಿ ಮೇಯ್ದ ಹೊಲ, ಪಂಜರದ ಪಕ್ಷಿ, ಚದುರಂಗದ ಮನೆ ಮೊದಲಾದ 53 ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ನೃಪತುಂಗ, ಸಿಡಿಲಮೊಗ್ಗು, ಶಿಲ್ಪಶ್ರೀ, ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಬೆಳಕು ತಂದ ಬಾಲಕ, ನಾಲ್ಕು ಘಿ ನಾಲ್ಕು = ಒಂದು, ದುರ್ಗಾಸ್ತಮಾನ - ಇವು ಐತಿಹಾಸಿಕ ಕಾದಂಬರಿಗಳು. ರೂಪಸಿ (1946), ತೊಟ್ಟಿಲು ತೂಗಿತು (1947), ಗಿರಿಮಲ್ಲಿಗೆಯ ನಂದನದಲ್ಲಿ (1955), ಇದೇ ನಿಜವಾದ ಸಂಪತ್ತು (1965), ಮೂರು ಮತ್ತೊಂದು (1982, ಸಮಗ್ರ ಕಥಾಸಂಕಲನ) - ಇವು ಕಥಾಸಂಗ್ರಹಗಳು. ಅ.ನ.ಕೃ., ರೇಖಾಚಿತ್ರಗಳು, ಶೃಂಗೇರಿಯ ಸೌಭಾಗ್ಯ - ಇವು ಜೀವನ ಚರಿತ್ರೆಗಳು. ಜ್ವಾಲಾ, ಮೃತ್ಯುಸಿಂಹಾಸನ (1955) - ಇವು ನಾಟಕಗಳು. ಅನ್ನಾವತಾರ, ಮಹಾಶ್ವೇತೆ - ಇವು ಬಾನುಲಿ ನಾಟಕಗಳು (1954). ಡಾ. ಕೊಟ್ನೀಸ್, ಬಾರ್ಬೋಸಾ ಕಂಡ ವಿಜಯನಗರ, ನಂದನವನ, ಮದಾಂಬಾವರಿ ಮೊದಲಾದ ಒಂಬತ್ತು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಿವಾರ್ಪಣಂ, ಶ್ರೀಜಗದ್ಗುರು ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. `ಹಿಂತಿರುಗಿ ನೋಡಿದಾಗ ಇವರ ಆತ್ಮಚರಿತ್ರೆ. ಮಂಥನ ಎಂಬ ಇನ್ನೊಂದು ಕೃತಿಯಲ್ಲಿ ತಾವು ಕಂಡುಂಡ ಅನುಭವಗಳನ್ನು ರಸವತ್ತಾಗಿ ಚಿತ್ರಿಸಿದ್ದಾರೆ.

ಇವರು ಬರೆದ ಹಂಸಗೀತೆ, ಚಂದವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು, ಮಾರ್ಗದರ್ಶಿ, ನಾಗರಹಾವು, ಚಂದನದಗೊಂಬೆ, ಗಾಳಿಮಾತು, ಬೆಂಕಿಯಬಲೆ, ಬಿಡುಗಡೆಯ ಬೇಡಿ, ಮಸಣದ ಹೂವು ಮೊದಲಾದ ಕಾದಂಬರಿಗಳು ಜನಪ್ರಿಯ ಚಲನಚಿತ್ರಗಳಾಗಿವೆ. ಇವರ ಕಾದಂಬರಿಯನ್ನಾಧರಿಸಿ ಹಿಂದಿಯಲ್ಲಿ ನಿರ್ಮಿಸಿದ ಬಸಂತಬಹಾರ್, ಕನ್ನಡದಲ್ಲಿ ನಿರ್ಮಿಸಿದ ಚಂದವಳ್ಳಿಯ ತೋಟ, ಹಂಸಗೀತೆ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಚಂದವಳ್ಳಿಯ ತೋಟ, ನಾಗರಹಾವು, ಚಂದನದಗೊಂಬೆ ಚಿತ್ರಕಥೆಗಳಿಗೆ ಪ್ರಶಸ್ತಿ ಬಂದಿದೆ. ಯಕ್ಷಪ್ರಶ್ನೆ ಕಾದಂಬರಿಗೆ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ (1974), ಶಿಲ್ಪಶ್ರೀ ಕಾದಂಬರಿಗೆ ಗೊಮ್ಮಟೇಶ್ವರ ಪ್ರಶಸ್ತಿ, ವಿದ್ಯಾವಾರಿಧಿ ಪ್ರಶಸ್ತಿ ದೊರೆತಿದೆ. ದುರ್ಗಾಸ್ತಮಾನ ಕಾದಂಬರಿಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ (1983), ಕೇಂದ್ರ ಸಾಹಿತ್ಯ ಅಕಾಡೆಮಿ (1985, ಮರಣೋತ್ತರ) ಪ್ರಶಸ್ತಿಗಳು ದೊರಕಿವೆ. ಪ್ರಗತಿಶೀಲ ಚಳವಳಿ, ಕನ್ನಡ ಚಳವಳಿಯಲ್ಲಿ ಸಕ್ರಿಯರಾಗಿ ದುಡಿದ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಷ್ಠ ಕಾದಂಬರಿಕಾರ ಪ್ರಶಸ್ತಿ (1970), ಚಿತ್ರದುರ್ಗದಲ್ಲಿ ನಡೆದ ಭಾರತೀಯ ಧರ್ಮಸಮ್ಮೇಳನದಲ್ಲಿ ಸಾಹಿತ್ಯ ರತ್ನ ಪ್ರಶಸ್ತಿ (1981) ಲಭಿಸಿವೆ.

ವಿಶ್ವಕರ್ನಾಟಕ, ಪ್ರಜಾಮತ, ವಾಹಿನಿ, ಚೇತನ, ಪ್ರಜಾವಾಣಿ, ವಿಚಾರವಾಣಿ, ಕಾಲದೂತ, ಶ್ರೀಶಂಕರಕೃಪಾ ಪತ್ರಿಕೆಗಳಲ್ಲಿ ಸಂಪಾದಕೀಯ ವರ್ಗದಲ್ಲಿ ದುಡಿದ(1942-84) ಇವರು ನುರಿತ ಪತ್ರಕರ್ತರಾಗಿದ್ದರು. ಇವರು ನಾಲ್ಕು ವರ್ಷ ಮೈಸೂರು ಪುರಸಭೆಯ ಸದಸ್ಯರಾಗಿದ್ದರು (1962-66).

ಸ್ವಾತಂತ್ರ್ಯ ಚಳವಳಿಯ ಅನುಭವಗಳನ್ನು ರಕ್ತತರ್ಪಣ ಕಾದಂಬರಿಯಲ್ಲಿ, ಪತ್ರಿಕಾರಂಗದ ಅನುಭವಗಳನ್ನು ಮುಂಜಾವಿನಿಂದ ಮುಂಜಾವು ಕೃತಿಯಲ್ಲಿ, ತಮ್ಮ ಬಾಲ್ಯದ ಒಳತೋಟಿಯನ್ನು ನಾಗರಹಾವು ಕಾದಂಬರಿಯಲ್ಲಿ, ತಮ್ಮ ಊರಿನ ಚರಿತ್ರೆಯನ್ನು ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ, ಹೊಸಹಗಲು, ದುರ್ಗಾಸ್ತಮಾನ ಕಾದಂಬರಿಗಳಲ್ಲಿ ಚಿತ್ರಿಸಿದ ಇವರು ತಮ್ಮ ಆಕರ್ಷಕ ಶೈಲಿ, ವ್ಯಕ್ತಿಚಿತ್ರಣ, ಸನ್ನಿವೇಶ ನಿರ್ಮಾಣ, ಸಂಭಾಷಣೆ, ಚುರುಕು ನಿರೂಪಣೆಯಿಂದ ಕಾದಂಬರಿ ಪ್ರಕಾರಕ್ಕೊಂದು ವಿಶಿಷ್ಟ ಆಯಾಮ ನೀಡಿದರು.

ಇವರ ಪತ್ರಿಕಾರಂಗದ ಸೇವೆ, ಸಾಹಿತ್ಯ ಸೇವೆ, ಸಮಾಜಸೇವೆಗಳನ್ನು ಗುರುತಿಸಿ ಇವರಿಗೆ ತ.ರಾ.ಸು. ಬದುಕು ಬರೆಹ ಎಂಬ ಗೌರವಗ್ರಂಥ ಅರ್ಪಿಸಲಾಯಿತು (1982). ಇವರು 1984 ಏಪ್ರಿಲ್ 10ರಂದು ನಿಧನರಾದರು. ಇವರ ಮರಣಾನಂತರ ಗಿರಿಮಲ್ಲಿಗೆ ಎಂಬ ಸಂಸ್ಮರಣ ಗ್ರಂಥ ಪ್ರಕಟವಾಯಿತು. ಅಂಬುಜಾ ಇವರ ಪತ್ನಿ. (ಕೆ.ಎಸ್.ಎಮ್.)