ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ಬುಲಕ್ಷ್ಮಿ, ಮಧುರೈ ಷಣ್ಮುಗವಡಿವು

ಸುಬ್ಬುಲಕ್ಷ್ಮಿ, ಮಧುರೈ ಷಣ್ಮುಗವಡಿವು 1916-2004. ಕರ್ಣಾಟಕ ಸಂಗೀತದ ಮೇರು ಕಲಾವಿದೆ. ಗಾಯಕಿಯಾಗಿ ಇವರ ಶೈಲಿ ಅಪೂರ್ವ ಮಾಧುರ್ಯ, ಅನುಪಮ ಸೃಜನಶೀಲತೆ, ಪರಿಶುದ್ಧ ಸಾಹಿತ್ಯಸ್ಫುಟತೆ, ವಿಶಿಷ್ಟ ರಾಗಭಾವ ಮತ್ತು ವಿಹಿತ ಲಯಸೌಂದರ್ಯ ಎಂಬ ಪಂಚಾಮೃತಗಳ ಪರಿಪಕ್ವ ರಸಪಾಕ. ಇಂಥ ದೈವಿಕ ಶೈಲಿಯ ಮೂಲದಲ್ಲಿದ್ದುದು ಎಮ್ ಎಸ್ (ಹೀಗೆಂದೇ ಜನಪ್ರಿಯರು) ಅವರ ಸಾತ್ತ್ವಿಕ ಜೀವನ - ಅಪರಿಗ್ರಹ, ದಾನಶೀಲತೆ, ಕಾರುಣ್ಯ, ಭಕ್ತಿ ಮತ್ತು ಪಾರದರ್ಶಕತೆ ಎಂಬ ಐದು ಪರಸ್ಪರ ಪೂರಕ ಪೋಷಕ ಗುಣಗಳ ಮಧುರ ಸಂಯುಕ್ತ. ಕರ್ಣಾಟಕ ಸಂಗೀತದ ಕಂಪನ್ನು ಅಂತಾರಾಷ್ಟ್ರೀಯ ವೇದಿಕೆಗಳ ಮೂಲಕ ಪ್ರಪಂಚಕ್ಕೆ ಪಸರಿಸಿದ ಮಧುರವಾಣಿ ಎಮ್‍ಎಸ್.

ತಮಿಳುನಾಡಿನ ಸಾಂಸ್ಕøತಿಕ ರಾಜಧಾನಿಯೂ ದೇವಾಲಯಕೇಂದ್ರವೂ ಆಗಿದ್ದ ಮಧುರೈಯಲ್ಲಿ, ಕಲಾರಾಧನೆಯೇ ಜೀವನಸಾಧನೆ ಎಂದು ಭಾವಿಸಿದ್ದ ಸಾಂಪ್ರದಾಯಿಕ ಕುಟುಂಬದಲ್ಲಿ ಇವರು 1916 ಸೆಪ್ಟೆಂಬರ್ 16ರಂದು ಜನಿಸಿದರು. ಕುಞ್ಞಮ್ಮಾಳ್ (ಕುಂಜಮ್ಮ) ಇವರ ಮೊದಲ ಹೆಸರು. ತಂದೆ ಸುಬ್ರಹ್ಮಣ್ಯ ಅಯ್ಯರ್ ವಕೀಲರು, ತಾಯಿ ಷಣ್ಮುಗವಡಿವು ಅಮ್ಮಾಳ್ ಅವರು ಮಧುರೈ ಮೀನಾಕ್ಷಿ ದೇವಸ್ಥಾನದ ಆಸ್ಥಾನ ವೀಣಾವಾದಕಿ, ಅಜ್ಜಿ ಅಕ್ಕಮ್ಮಾಳ್ ಪಿಟೀಲುವಾದಕಿ, ಹಿರಿಯ ಸಹೋದರ ಮೃದಂಗಪಟು, ಸಹೋದರಿ ವಡಿವಾಂಬಾಳ್ ಪಿಟೀಲು ಕಲಾವಿದೆ. ಕುಂಜಮ್ಮನಿಗೆ ವೀಣೆ ಹಾಗೂ ಮೃದಂಗವಾದನಗಳ ರುಚಿಯೂ ಗೊತ್ತಿತ್ತು. ತಾಯಿಯ ಇವರ ಮೊದಲ ಸಂಗೀತಗುರು. ದೈವದತ್ತ ಹುಟ್ಟುಪ್ರತಿಭೆಯೂ ಕೌಟುಂಬಿಕ ಪರಿಸರವೂ ಸಂಗೀತ ಇವರಲ್ಲಿ ಹೃದ್ಗತವಾಗಲು ಕಾರಣವಾದುವು. ಹೀಗಾಗಿ ಎಳವೆಯಲ್ಲೇ ಜೊತೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದುಂಟು. ತಾಯಿಯ ವೀಣಾವಾದನದೊಂದಿಗೆ ಇವರೂ ದನಿಗೂಡಿಸುತ್ತಿದ್ದರು. ಒಮ್ಮೆ ತನಿಯಾಗಿ ಮರಾಠಿ ಭಜನೆ ಆನಂದಜವನ್ನು ಹಾಡಿದ್ದೂ ಇತ್ತು. ಇವರ ವಯಸ್ಸು ಆಗ ಕೇವಲ ಎಂಟು ವರ್ಷ. ಅದೇ ಸ್ಫೂರ್ತಿ ಮುಂದಿನ ಎರಡೇ ವರ್ಷಗಳಲ್ಲಿ ಅಂದರೆ, 1926ರಲ್ಲಿ ಪ್ರಸಿದ್ಧ ಧ್ವನಿಮುದ್ರಣ ಸಂಸ್ಥೆ ಎಚ್‍ಎಮ್‍ವಿಗಾಗಿ ತಮ್ಮ ಸ್ವರಮಾಧುರ್ಯವನ್ನು ಮೊತ್ತಮೊದಲಬಾರಿಗೆ ದಾಖಲಿಸಲು ಕಾರಣವಾಯಿತು.

ಮುಂದೆ ಮದರಾಸು ಸಂಗೀತ ಅಕಾಡೆಮಿಗಾಗಿ ಕೊಟ್ಟ ಕಛೇರಿಯೇ ಇವರ ಮೊದಲ ಸ್ವತಂತ್ರ ಸಂಗೀತ ಬೈಠಕ್ಕು (1933). ಪ್ರಸಿದ್ಧ ತಮಿಳು ಪತ್ರಿಕೆ ಕಲ್ಕಿಯ ಗೌರವ ಸಂಪಾದಕರೂ ಕಾಂಗ್ರೆಸ್ ಕಟ್ಟಾಳುವೂ ಸ್ವಾತಂತ್ರ್ಯ ಯೋಧರೂ ಆಗಿದ್ದ ಟಿ. ಸದಾಶಿವಂ (1902-97) ಅವರೊಂದಿಗೆ ವಿವಾಹವಾಯಿತು (1940). ಅಲ್ಲಿಂದ ಕುಞ್ಞಮ್ಮಾಳ್ ಸುಬ್ಬುಲಕ್ಷ್ಮಿಯಾಗಿ ಸಂಗೀತಪ್ರಪಂಚದ ಮೇರುತಾರೆಯಾಗುವ ಒಂದೊಂದೇ ಘಟ್ಟಗಳು ಆರಂಭವಾದುವು. ಇವರ ಖಾಸಗಿತನಕ್ಕೆ ಪೂರ್ಣರಕ್ಷಣೆ ನೀಡಿ, ಸಂಗೀತ ಪ್ರತಿಭೆಯ ಪರಿಪೂರ್ಣ ವಿಕಸನಕ್ಕೆ ಅವಕಾಶ ಒದಗಿಸಿ, ಕಛೇರಿ, ದಾನ, ಧರ್ಮ, ಪ್ರಯಾಣ ಮುಂತಾದ ವ್ಯಾವಹಾರಿಕ ವಿಚಾರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಈ ಸರಳ ಮುಗ್ಧ ಕಲಾವಿದೆಯನ್ನು ಜಗದ್ವಂದ್ಯೆಯಾಗಿ ಮಾರ್ಪಡಿಸುವುದರಲ್ಲಿ ಸದಾಶಿವಂ ಅವರ ಪಾತ್ರ ಬಲು ಪ್ರಮುಖವಾದದ್ದು.

ಭಾರತದ ಪಿತಾಮಹ ಗಾಂಧೀಜಿಯವರ ಕೋರಿಕೆ ಮೇರೆಗೆ ಹಾಡಿದ ವೈಷ್ಣವ ಜನತೋ ಭಾವೈಕ್ಯ ಗೀತೆ ಭಾರತೀಯನ ನಿತ್ಯ ಜೀವನದ ರಾಗವಾಗಿ ಬೆರೆತುಹೋಗಿರುವುದು ಈ ಕಲಾವಿದೆಯ ಪರಮಸಿದ್ಧಿ.

ಇವರನ್ನು ಅಮರವಾಣಿ, ಸ್ವರಸಾಮ್ರಾಜ್ಞಿ ಮತ್ತು ಮಧುರವಾಣಿ ಎಂದು ಮುಂತಾಗಿ ಜನ ಆದರದಿಂದ ಗೌರವಿಸಲು ವಿಶೇಷ ಕಾರಣವಿದೆ: ಮೂರ್ತಿವೆತ್ತ ಸಂಗೀತ-ಭಕ್ತಿ-ಅಪರಿಗ್ರಹ-ಸೇವಾಪರಾಯಣತೆ-ಜೀವಾನುಕಂಪ ಎಂಬ ಪಂಚಾಮೃತ ಇವರ ವ್ಯಕ್ತಿತ್ವ. ಸ್ಪಷ್ಟ ಶ್ರುತಿ ಮತ್ತು ಸ್ವರಜ್ಞಾನದೊಂದಿಗೆ ಒಬ್ಬ ಕಲಾವಿದನಿಗೆ ಆತ್ಮಪರೀಕ್ಷಣ, ಆತ್ಮನಿರೀಕ್ಷಣ, ಆತ್ಮವಿಕಾಸ, ಆತ್ಮಾನುಸಂಧಾನ, ಆತ್ಮಸಾಕ್ಷಾತ್ಕಾರಗಳೆಂಬ ಪಂಚಶೀಲಗಳೂ ಸಂಸ್ಕಾರಗಳೂ ಇರಬೇಕೆಂದು ಭಾರತೀಯ ಸಂಸ್ಕøತಿಪ್ರಜ್ಞೆ ಭಾವಿಸುತ್ತದೆ. ಇವೆಲ್ಲ ಸೇರಿದಾಗಲೇ ಒಬ್ಬ ವ್ಯಕ್ತಿ ಋಜುಕಲಾತಪಸ್ವಿಯಾಗಲು ಸಾಧ್ಯ - ನಿದರ್ಶನ ಸುಬ್ಬುಲಕ್ಷ್ಮಿ. ಇವರದು ಅದಮ್ಯ ಚೇತನವೆಂದೂ ಇವರು ಬಾಳಿದುದು ದಿವ್ಯಪಥವೆಂದೂ ಇವರ ಕಂಠದಿಂದ ಹೊರಹೊಮ್ಮುತ್ತಿದ್ದುದು ದಿವ್ಯಸಂಗೀತವೆಂದೂ ಕಲಾವಿಮರ್ಶಕರು ದಾಖಲಿಸಿದ್ದಾರೆ.

ದೇವಾಲಯಗಳಲ್ಲಿ ಹಾಡುವುದರಿಂದ ಆರಂಭಗೊಂಡು ದೇಶವಿದೇಶಗಳ ಪ್ರತಿಷ್ಠಿತ ಸಭೆಗಳಲ್ಲಿ ತಮ್ಮ ಕಂಠಮಾಧುರ್ಯವನ್ನು ಸ್ಥಾಪಿಸಿದ ಇವರು ರಸಿಕರ ಬಾಯಿಯಲ್ಲಿ ಎಮ್‍ಎಸ್ ಎಂದೇ ಖ್ಯಾತರು. ತಮಿಳರ ನುಡಿಯಲ್ಲಿ ಇವರು ಎಮ್ಮೆಸ್ಸಮ್ಮ. ಸಂಗೀತ ಕ್ಷೇತ್ರಕ್ಕಷ್ಟೇ ಇವರ ಪ್ರತಿಭೆ ಮೀಸಲಲ್ಲ. 1930ರ ದಶಕದಲ್ಲಿ ಅರಳಿದ ದೇಶಭಕ್ತಿ, ದೈವಭಕ್ತಿ ಪರಾಕಾಷ್ಠೆಯ ದಿನಗಳಂದು ಇವರು ತಮಿಳು ಹಾಗೂ ಹಿಂದಿಯ ಮೀರಾ ಸಿನೆಮಗಳಲ್ಲಿ ನಟಿಸಿದ್ದಾರೆ. ಸಂತ ಮೀರಾಬಾಯಿಯ ಭಜನೆಗಳನ್ನು ದಕ್ಷಿಣ ಭಾರತೀಯ ಸಂಗೀತಕ್ಷೇತ್ರದಲ್ಲಿ ವಿಶಿಷ್ಟವಾಗಿ ಜನಪ್ರಿಯಗೊಳಿಸಿದ ಖ್ಯಾತಿ ಇವರದು. ಇವರು ಹಾಡುತ್ತಾರೆಂದರೆ ಜನಪ್ರವಾಹವೇ ಅಲ್ಲಿ ಸಂದಣಿಸುತ್ತಿತ್ತು. ಇದು ಇವರ ಪ್ರತಿಭಾನೈಪುಣ್ಯಕ್ಕೆ ಸಾಕ್ಷಿ. ಜಿಎನ್‍ಬಿ ಎಂದೇ ಖ್ಯಾತರಾಗಿದ್ದ ಕರ್ನಾಟಕ ಸಂಗೀತದ ಪ್ರತಿಭಾನ್ವಿತ ಕಲಾವಿದ ಜಿ.ಎನ್.ಬಾಲಸುಬ್ರಹ್ಮಣ್ಯಮ್ ಅವರ ಜೊತೆ ನಟಿಸಿದ ಶಾಕುಂತಲ ಚಿತ್ರ ಇವರ ಕಂಠಮಾಧುರ್ಯವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಪರಿಚಯಮಾಡಿಕೊಟ್ಟಿತು. ಆ ಚಿತ್ರ ಪತಿ ಸದಾಶಿವಂರ ನಿರ್ಮಾಣ, ಅದರ ನಿರ್ದೇಶಕ ಅಮೆರಿಕದ ಹಾಲಿವುಡ್‍ನ ಎಸ್.ಆರ್. ದುಂಗನ್. ಈ ಮೂವರ ಪ್ರತಿಭಾಸಮ್ಮಿಲನ ಅಂದಿನ ಗ್ರಾಮೊಫೋನ್ ರೆಕಾರ್ಡುಗಳಲ್ಲಿ ದಾಖಲಾಗಿದೆ.

ಘಟ ಪಕ್ಕವಾದ್ಯ ಕಛೇರಿಗಳಲ್ಲಿ ಅದ್ವಿತೀಯ ಯಶಸ್ಸು ಕಾಣಲು ಸುಬ್ಬುಲಕ್ಷ್ಮಿಯವರೇ ಮುಖ್ಯ ಕಾರಣ ಎಂದು ಪಕ್ಕವಾದ್ಯಗಳನ್ನು ಕುರಿತು ಅವರಿಗಿದ್ದ ಕಾಳಜಿ ಹಾಗೂ ಔದಾರ್ಯವನ್ನು ಹಿರಿಯ ಘಟವಾದ್ಯಕಾರ ಟಿ.ಎಚ್. ವಿನಾಯಕರಾಮ್ ನೆನಪಿಸಿಕೊಳ್ಳುತ್ತಾರೆ. ಇಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಇವರು ಬದುಕಿದ್ದು, ಸೇವೆಮಾಡಿದ್ದು, ಉಸಿರಾಡಿದ್ದು ಸಂಗೀತಕ್ಕಾಗಿಯೇ. ಅದಕ್ಕೆ ಸಾಟಿ ಇಲ್ಲ. ಇವರೊಬ್ಬ ಹುಟ್ಟು ಸಂಗೀತಗಾರ್ತಿ ಎಂದು ಪ್ರಶಂಸಿಸಿದ್ದಾರೆ. ಪ್ರಸಿದ್ಧ ಗಾಯಕ ಮಂಗನಪಲ್ಲಿ ಬಾಲಮುರಳೀಕೃಷ್ಣ ಎಲ್ಲಿಯವರೆಗೆ ಸಂಗೀತ ಇರುವುದೋ ಅಲ್ಲಿಯವರೆಗೆ ಎಮ್‍ಎಸ್ ಇರುತ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಈ ಎಲ್ಲ ಮಾತುಗಳು ವಿದ್ವಾಂಸರ ಹೃದಯಾಂತರಾಳದಿಂದ ಬಂದವಷ್ಟೇ ಆಗಿರದೆ ಭಾರತದ ಎಲ್ಲ ಸಂಗೀತಪ್ರಿಯರ ಮಾತೂ ಆಗಿವೆ.

ಇವರು ಹಾಡಿದ ಶ್ರೀವೆಂಕಟೇಶ್ವರ ಸುಪ್ರಭಾತ ಇವರ ವಿಶಿಷ್ಟ ಗಾಯನಶೈಲಿಗೊಂದು ಸ್ಪಷ್ಟ ನಿದರ್ಶನ. ಅದೊಂದು ಶ್ರೀವೆಂಕಟೇಶ್ವರನಿಗೆ ಬೆಳ್ಳನೆ ಬೆಳಗಾಯಿತು ಎಂದು ಏಳಿಸುವ ಕ್ರಿಯೆ ಮಾತ್ರವಾಗಿರದೆ ಜನಸಾಮಾನ್ಯನಿಗೆ ಹೃದ್ಗತವಾಗುವಂಥ ಸ್ವರಮಾಧುರ್ಯವೂ ಆಗಿದೆ. ಹಾಗೆಯೇ ಮುತ್ತುಸ್ವಾಮಿ ದೀಕ್ಷಿತರ ಬೃಂದಾವನ ಸಾರಂಗ ರಾಗದ ರಂಗಪುರ ವಿಹಾರ ಕೃತಿಯಲ್ಲಿ, ಸ್ವಾತಿ ತಿರುನಾಳರ ಭಾವಯಾಮಿ ರಾಗಮಾಲಿಕೆಯಲ್ಲಿ ಶಂಕರಾಚಾರ್ಯರ ಭಜಗೋವಿಂದಂ ಶ್ಲೋಕಮಾಲಿಕೆಯಲ್ಲಿ, ಇತ್ಯಾದಿ ಶ್ರೋತೃಗಳಿಗೆ ನಾಭಿಹೃತ್ ಕಂಠ ರಸನೆಯ (ತ್ಯಾಗರಾಜರ ಜಗನ್ಮೋಹಿನಿ ರಾಗದ ಶೋಭಿಲ್ಲು ಸಪ್ತಸ್ವರ ಕೃತಿ) ಮಾರ್ಗದಲ್ಲಿ ರಾಗವೂ ನಾದವೂ ಪ್ರವಹಿಸುವ ರೀತಿ ಎಂತಹುದೆಂಬುದು ಮನದಟ್ಟಾಗುತ್ತದೆ.

ಇವರು ಖ್ಯಾತಿಶಿಖರದಲ್ಲಿದ್ದಾಗಲೂ (ಬಹುಶಃ ಇವರ 70ನೆಯ ವಯಸ್ಸಿನಲ್ಲಿ) ಶೆಮ್ಮಂಗುಡಿಯವರಲ್ಲಿಗೆ ಹೋಗಿ ಹೊಸಕೀರ್ತನೆ ಕಲಿಸಿಕೊಡಿ ಎಂದು ಕೋರುತ್ತಿದ್ದುದನ್ನು ವಿದ್ವಾಂಸರು ನೆನಪಿಸಿಕೊಳ್ಳುತ್ತಾರೆ. ಸಂಗೀತ ಎಂಬುದು ಸಾಧನೆ, ತಪಸ್ಸುಗಳಿಗೆ ಮಾತ್ರ ಒಲಿಯುವ ಕಷ್ಟಸಾಧ್ಯ ಕಲೆ. ಅದಕ್ಕೆ ದೈವಿಕ ಸ್ಪರ್ಶವಿದೆಯೆಂಬುದನ್ನು ಮೊತ್ತಮೊದಲು ಶ್ರುತಪಡಿಸಿದ್ದು ಸಾಮವೇದ (ನೋಡಿ), ಪ್ರಚಾರಮಾಡಿದ್ದು ಭಾರತೀಯ ಸಂಗೀತಕ್ಷೇತ್ರದ ಅನೇಕ ಋಷಿಗಾಯಕರು. ಆ ಸಾಲಿನಲ್ಲಿ ಇವರು ಅಮರಗಾಯಕಿ ಎಂದು ಭಾವಿಸಲ್ಪಟ್ಟಿದ್ದಾರೆ, ಅವರ ಕಛೇರಿ ಎಂಬುದು ಹಾರಿಹೋಗುವ ಹಕ್ಕಿ ಸಂಭ್ರಮದಿಂದ ಹಾಡುವ ಹಾಗೆ, ಮೈವೆತ್ತ ಲಾಲಿತ್ಯ ಭಾವಜೀವಗಳ ಸಂಸ್ಕಾರ ಸಾಕಾರ, ಕಾವ್ಯಕಮಲದ ಮಧುರಮಕರಂದ ಸಾರ ಎಂದು ಮುಂತಾಗಿ ಎದೆತುಂಬಿ ಹಾಡಿದವರಿದ್ದಾರೆ.

ಇವರಿಗೆ ಸಂದ ಗೌರವ ಪುರಸ್ಕಾರಗಳು ಅಸಂಖ್ಯ. ದಕ್ಷಿಣಭಾರತೀಯ ಸಂಗೀತದ ದಿಗ್ಗಜಗಳಾಗಿದ್ದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ (1908-2003) ಮತ್ತು ರಾಜಮಾಣಿಕ್ಯಂ ಪಿಳ್ಳೈ ಅವರು ಕೊಡಮಾಡುವ ಇಸೈವಾಣಿ ಎಂಬ ಪ್ರತಿಷ್ಠಿತ ಬಿರುದು ವಿವಾಹದ ತರುಣದಲ್ಲೇ ಇವರಿಗೆ ದೊರೆಯಿತು (1940). ಮುಂದೆ ಲಭಿಸಿದ ಗಮನಾರ್ಹ ಪ್ರಶಸ್ತಿಗಳಿವು: ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿ (1954), ರಾಷ್ಟ್ರಪತಿ ಪದಕ (1956), ಸಂಗೀತ ಕಲಾನಿಧಿ ಪ್ರಶಸ್ತಿ (1968). ಪ್ರತಿಷ್ಠಿತ ಮದರಾಸು ಸಂಗೀತ ಅಕಾಡೆಮಿ ಪ್ರದಾನ ಮಾಡುವ ಸಂಗೀತ ಕಲಾನಿಧಿ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಇವರು. ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯ (1971) ಮತ್ತು ದೆಹಲಿ ವಿಶ್ವವಿದ್ಯಾಲಯಗಳು (1973) ಇವರಿಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವವನ್ನು ಪ್ರದಾನಿಸಿದುವು. ರೋಮನ್ ಮ್ಯಾಗ್ಸೇಸೆ ಪ್ರಶಸ್ತಿಯೂ ಇವರ ಪ್ರಶಸ್ತಿಪಟ್ಟಿಗಳ ಮುಡಿಗೇರಿತು (1974). ಎಡಿನ್‍ಬರೊ ಕಲೋತ್ಸವ (1963), ವಿಶ್ವಸಂಸ್ಥೆ ಸಾಮಾನ್ಯ ಸಭೆ (1966), ಅಮೆರಿಕ ಪ್ರವಾಸ (1977), ಬ್ರಿಟನ್ ಉತ್ಸವದಲ್ಲಿ ದ್ವಿತೀಯ ಎಲಿಜóಬೆತ್ ರಾಣಿಯ ಸಮ್ಮುಖದಲ್ಲಿ ಗಾಯನ (1982), ಬರ್ಲಿನ್ ಸಮ್ಮೇಳನ (1987) - ಇವು ಇವರ ಅತ್ಯಂತ ಖ್ಯಾತ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು. ಅಂತಾರಾಷ್ಟ್ರೀಯ ಸಂಗೀತ ಸಮಿತಿಯ ಪ್ರತಿಷ್ಠಿತ ಗೌರವ (1981), ಕಾಳಿದಾಸ್ ಸಮ್ಮಾನ್ (1988), ಉಸ್ತಾದ್ ಹಫೀಸ್ ಅಲಿಖಾನ್ ಪ್ರಶಸ್ತಿ (1988), ರಾಷ್ಟ್ರೀಯ ಭಾವೈಕ್ಯ ಇಂದಿರಾಗಾಂಧಿ ಪ್ರಶಸ್ತಿ (1990), ಕೊನಾರ್ಕ್ ಸಮ್ಮಾನ್ (1991), ಸ್ವರಲಯ ಪ್ರಶಸ್ತಿ (1997), ಭಾರತರತ್ನ (1998) - ಇವು ಇವರಿಗೆ ಸಂದ ಇತರ ಪ್ರತಿಷ್ಠಿತ ಗೌರವ ಪ್ರಶಸ್ತಿಗಳು. (ಜಿ.ಎನ್.ಎಸ್.)