ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ರಹ್ಮಣ್ಯ 1

ಸುಬ್ರಹ್ಮಣ್ಯ 1

ಶಿವನ ಮಗ. ಇವನಿಗೆ ಕುಮಾರಸ್ವಾಮಿ, ಕುಮರ, ವೇಲ, ಮುರುಗ, ಬಾಲ, ಸ್ಕಂದ, ಷಣ್ಮುಗ ಎಂಬ ಹೆಸರುಗಳೂ ಇವೆ. ಇವನಿಗೆ ಆರುಮುಖಗಳು ಆದ್ದರಿಂದ ಈತ ಆರ್ಮುಗ, ಷಣ್ಮುಗ. ಸ್ವಾಹಾದೇವಿ ಅಗ್ನಿಯಲ್ಲಿ ಅನುರಕ್ತಳಾಗಿ, ಸಪ್ತಋಷಿ ಪತ್ನಿಯರಲ್ಲಿ ಅರುಂಧತಿಯನ್ನು ಬಿಟ್ಟು ಉಳಿದೆಲ್ಲರ ರೂಪದಲ್ಲಿ ಅವನೊಂದಿಗೆ ವಿಹರಿಸಿದಳು. ಮೋಹಗೊಂಡ ಅಗ್ನಿಯಿಂದ ರೇತಸ್ಸು ಸ್ಖಲನವಾಯಿತು. ಸ್ವಾಹಾದೇವಿ ಅದನ್ನು ಚಿನ್ನದ ಕುಂಭದಲ್ಲಿ ಆರು ಭಾಗಮಾಡಿ ಇರಿಸಿದಳು. ಅದರಿಂದ ಆರು ಮುಖದ ಕುಮಾರ ಹುಟ್ಟಿದನೆಂದು ಸ್ಕಾಂದಪುರಾಣದಲ್ಲಿ ಹೇಳಿದೆ. ದೇವಾಧಿದೇವನಾದ ಇಂದ್ರನ ಸಲಹೆಯಂತೆ ದಕ್ಷಬ್ರಹ್ಮನ ಮಗಳಾದ ದೇವಸೇನೆ ಅಥವಾ ದೇವಯಾನಿಯನ್ನು ಈತ ಮದುವೆಯಾದ ಮತ್ತು ತಾರಕಾಸುರ ವಧೆಯ ಸಂದರ್ಭದಲ್ಲಿ ಶಿವನ ಆಣತಿಯಂತೆ ದೇವಾಧಿದೇವನ ಸೇನೆಗೆ ಅಧಿಪತಿಯಾದ. ಆದ್ದರಿಂದ ಇವನನ್ನು ದೇವ ಸೇನಾಪತೇ ಎಂದೂ ಸ್ತುತಿಸಲಾಗುತ್ತದೆ. ಈತ ಜನಪದರಲ್ಲಿ ಯುದ್ಧದೇವತೆ.

ತಮಿಳಿನ ಅರುಣಗಿರಿನಾಥರ ತಿರುಪ್ಪುಗಳ್ ಗ್ರಂಥ ಜನಪದ ದೈವವಾಗಿ ಇವನ ಮಹತ್ತ್ವವನ್ನು ಸಾರುತ್ತದೆ. ಇದರಲ್ಲಿನ ಭೂತಬೇತಾಳ ವಗುಪ್ಪುವಿನಲ್ಲಿ (ಭೂತ ಬೇತಾಳ ಭಾಗ) ಮುರುಗನಿಗೂ ಸೂರಪದ್ಮನೆಂಬ ರಾಕ್ಷಸನಿಗೂ ನಡೆದ ಯುದ್ಧದಲ್ಲಿ ಭೂತಬೇತಾಳಗಳು ನರ್ತಿಸುತ್ತಿದ್ದ ಬಗೆಯನ್ನೂ ಮತ್ತೊಂದೆಡೆ ಭೀಕರ ಕಾಳಗರೂಪಿ ಸುಬ್ರಹ್ಮಣ್ಯನನ್ನೂ ಸಮೀಕರಿಸಿ ವರ್ಣಿಸಲಾಗಿದೆ. ಈ ಗ್ರಂಥ ಸುಬ್ರಹ್ಮಣ್ಯನ ಬಾಲಲೀಲೆಯಿಂದ ಹಿಡಿದು ದೈವತ್ವದವರೆಗಿನ ವಿವಿಧ ಹಂತಗಳನ್ನು ವರ್ಣಿಸುತ್ತದೆ.

ಸುಬ್ರಹ್ಮಣ್ಯನ ಮತ್ತೊಬ್ಬ ಪತ್ನಿ ಶ್ರೀವಳ್ಳಿ. ಸಂಚಾರ ಸಂದರ್ಭವೊಂದರಲ್ಲಿ ಕಾಡಿನ ನಡುವೆ ಇದ್ದ ಎಲೆತೋಟದಲ್ಲಿ ಸುಬ್ರಹ್ಮಣ್ಯ ಅವಳ ರೂಪಕ್ಕೆ ಮನಸೋತನೆಂದೂ ತಿಳಿದರೆ ದೇವಯಾನಿ ಮುನಿಯುತ್ತಾಳೆಂದೂ ಸಂಕಟದಲ್ಲಿರುವಾಗ ಮಂತ್ರಿಯು ಉಪಾಯದಿಂದ ಕಾಡುಜನರ ಸಮ್ಮುಖದಲ್ಲಿ ವೇಲನಿಗೂ ವಳ್ಳಿಗೂ ಮದುವೆ ಮಾಡಿಸಿದನೆಂದೂ ತಮಿಳು ಜನಪದ ಸಾಹಿತ್ಯದಲ್ಲಿದೆ. ತಂದೆಯೊಂದಿಗೆ ಆಧ್ಯಾತ್ಮ ವಿಷಯದಲ್ಲಿ ವಾದಮಾಡಿ ಜಯಿಸಿದ ಮುರುಗ ಕಾರಣಾಂತರದ ಸಂದರ್ಭವೊಂದರಿಂದ ಕುಪಿತನಾಗಿ ಪಳನಿಮಲೆಯೆಂಬ ಕಡಿದಾದಬೆಟ್ಟ ಪ್ರದೇಶವೇರಿ ಕುಳಿತಿರುವನೆಂದೂ ಜನಪದ ನಂಬಿಕೆ. ಆ ಸ್ಥಳವೇ ಇಂದಿನ ಸುಪ್ರಸಿದ್ಧ ಯಾತ್ರಾಸ್ಥಳ ಪಳನಿಮಲೆ. ಕರ್ನಾಟಕದಲ್ಲೂ ಈತ ದಕ್ಷಿಣ ಕನ್ನಡದ ಪುತ್ತೂರು ತಾಲ್ಲೂಕಿನ ಸುಬ್ರಹ್ಮಣ್ಯ ಎಂಬ ಕ್ಷೇತ್ರದಲ್ಲಿ ಪ್ರಸಿದ್ಧ. ಸ್ಕಾಂದ ಪುರಾಣದ ಪ್ರಕಾರ ಈ ಕ್ಷೇತ್ರಕ್ಕೆ ದೈವಿಕ ಮಹತ್ತ್ವವುಂಟು. ಇಲ್ಲಿ ಮಯೂರವಾಹನನಾದ ಸುಬ್ರಹ್ಮಣ್ಯನ ವಿಗ್ರಹವಿದೆ. ಸುಬ್ರಹ್ಮಣ್ಯ ಷಷ್ಠಿಯ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ದೇವಸೇನೆಯನ್ನು ಸುಬ್ರಹ್ಮಣ್ಯ ವಿವಾಹವಾದ ದಿನವೇ ಷಷ್ಠಿ. ಇದಕ್ಕೆ ಸ್ಕಂದಷಷ್ಠೀ ಎಂದೂ ಹೆಸರಿದೆ. ಯುದ್ಧ ದೇವತೆಯಾದ ಸುಬ್ರಹ್ಮಣ್ಯ ಬ್ರಹ್ಮನ ಶಾಪದಿಂದ ಘಟಸರ್ಪನಾದನೆಂದೂ ಇದರಿಂದ ಭೀತಳಾದ ಪಾರ್ವತಿ 108 ಷಷ್ಠಿಗಳನ್ನು ಉಪವಾಸ ವ್ರತದಿಂದ ಕಳೆದಳೆಂದೂ ಷಷ್ಠೀ ವ್ರತದಂದು ಉಪಸ್ಥಿತನಿದ್ದ ವಿಷ್ಣುವಿನ ಕರಸ್ಪರ್ಶದಿಂದ ಸುಬ್ರಹ್ಮಣ್ಯನಿಗೆ ಸ್ವಸ್ವರೂಪ ಪ್ರಾಪ್ತವಾಯಿತೆಂದೂ ಕಥೆಯಿದೆ.

ಸುಬ್ರಹ್ಮಣ್ಯನ ವಾಹನ ಮಯೂರ. ಜನಪದರಲ್ಲಿ ಇವನು ಕಾಡುಮೇಡುಗಳ ಮಧ್ಯೆ ವಿಹರಿಸುವ, ಕಾಯುವ, ಕಾದುವ ದೇವತೆ. ಇವನ ಆಯುಧ ಈಟಿ. ಇದನ್ನೇ ತಮಿಳಿನಲ್ಲಿ ವೇಲ್ ಎಂದೂ ಕರೆಯುತ್ತಾರೆ. ವೇಲ್‍ಮುರುಗ ಎಂದೂ ಇವನ ಹೆಸರು. ಇವನ ಆರು ಮುಖಗಳನ್ನು ಕುರಿತು ಜನಪದರಲ್ಲಿ ಬೇರೆಯೇ ಕಥೆ ಇದೆ. ಒಂದು ಮುಖ ಬಾಲಸುಬ್ರಹ್ಮಣ್ಯ. ಇದು ಇವನ ಬಾಲ ಸಹಜ ಕ್ರೀಡೆಗಳನ್ನು ಸಂಕೇತಿಸುವಂಥದ್ದು. ಬಾಲನ ಆಟಕ್ಕೆ ಬೇಕಾದದ್ದು ವನವಿಹಾರಿ ಮಯೂರ. ಮಯೂರವಾಹನಾರೂಢ ಬಾಲ ಸುಬ್ರಹ್ಮಣ್ಯ ಎರಡನೆಯ ಮುಖ. ಈಶನೊಂದಿಗೆ ತತ್ತ್ವಜ್ಞಾನ ಸಂಬಂಧವಾಗಿ ವಾದಕ್ಕಿಳಿದು ಜ್ಞಾನಮುಖನಾದ. ಇದು ಮುರುಗನ ಮೂರನೆಯ ಮುಖ. ದೇವಸೇನಾಪತಿಯಾದ, ಆಡಳಿತ ಸಂಬಂಧವಾದ ಮುಖ ನಾಲ್ಕನೆಯದು. ವೇಲ್ ಮುರುಗನಾಗಿ, ಸಾಮಾನ್ಯರೊಂದಿಗೆ ಸಾಮಾನ್ಯನಾಗಿ ಸಮಾಜಮುಖಿಯಾಗಿ ಎದುರಾದ ಅರಿಷಡ್ವರ್ಗಗಳನ್ನು ಗೆದ್ದ ಕುಮಾರನ ಮುಖ ಐದನೆಯದು. ವಳ್ಳಿಯನ್ನು ಪ್ರೀತಿಸಿದ ಪ್ರೇಮಮುಖೀ ಸಂಕೇತದ ಮುಖ ಆರನೆಯದು. ಇದು ಜನಪದರಲ್ಲಿರುವ ಸುಬ್ರಹ್ಮಣ್ಯನ ಆರುಮುಖವನ್ನು ಕುರಿತ ಸಾಂಕೇತಿಕ ಕಥೆ. (ಬಿ.ಎಮ್.ಎಸ್.)