ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬ್ರಹ್ಮಣ್ಯ 2

ಸುಬ್ರಹ್ಮಣ್ಯ 2

ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರುವ ಒಂದು ಗ್ರಾಮ ಹಾಗೂ ತೀರ್ಥಕ್ಷೇತ್ರ. ಸುಳ್ಯಕ್ಕೆ 44 ಕಿಮೀ ದೂರದಲ್ಲೂ ಪುತ್ತೂರಿಗೆ 33 ಕಿಮೀ ದೂರದಲ್ಲೂ ಇದೆ. ಈ ಸ್ಥಳ ಕುಕ್ಕೆ ಸುಬ್ರಹ್ಮಣ್ಯ, ಪುಷ್ಪಗಿರಿ ಎಂದೂ ಪ್ರಸಿದ್ಧವಾಗಿದೆ. ಕುಮಾರಪರ್ವತ, ಶೇಷಪರ್ವತ ಎಂಬ ಎರಡು ಬೆಟ್ಟಗಳ ಮಧ್ಯೆ ಇರುವ ಈ ಪ್ರದೇಶ ಒಂದು ಸುಂದರ ತಾಣ. ಈ ಕ್ಷೇತ್ರ ಪ್ರಾಚೀನದಲ್ಲಿ ಕುಕ್ಕೆ ಪಟ್ಟಣವೆಂದು ಪ್ರಸಿದ್ಧವಾಗಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. ಸ್ಕಾಂದಪುರಾಣದ ಸನತ್ಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿಖಂಡ ತೀರ್ಥಕ್ಷೇತ್ರ ಮಹಿಮಾ ನಿರೂಪಣದೊಳಗೆ ಈ ಕ್ಷೇತ್ರ ವರ್ಣಿತವಾಗಿದೆ. ಶಂಕರಾಚಾರ್ಯರು ಈ ಸ್ಥಳವನ್ನು ಸಂದರ್ಶಿಸಿದ್ದರೆಂದು ಆನಂದಗಿರಿ ರಚಿತ ಶಂಕರವಿಜಯ ಎಂಬ ಗ್ರಂಥದಿಂದ ತಿಳಿದುಬರುತ್ತದೆ.

ಇಲ್ಲಿರುವ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಸಿದ್ಧವಾದುದು. ದೇವಾಲಯದ ಪ್ರಾಕಾರದೊಳಗೆ ಸುಬ್ರಹ್ಮಣ್ಯ, ಲಕ್ಷ್ಮೀನರಸಿಂಹ, ಉಮಾಮಹೇಶ್ವರರ ಗುಡಿಗಳಿವೆ. ಸುಬ್ರಹ್ಮಣ್ಯದೇವರ ಗುಡಿಯೊಳಗಿರುವ ಲಿಂಗ ಕುಕ್ಕೆ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧ. ಈ ದೇವಾಲಯದ ಉತ್ತರಭಾಗದಲ್ಲಿ ಶಂಕರಮಠವೆಂಬ ಪ್ರಾಚೀನ ಮಠವಿದೆ. ಲಕ್ಷ್ಮೀನರಸಿಂಹ ದೇವಾಲಯ ಇಲ್ಲಿರುವ ಮಾಧ್ವಮಠದ ಉಸ್ತುವಾರಿಗೆ ಸೇರಿದೆ. ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ದೊಡ್ಡಜಾತ್ರೆ ನಡೆಯುತ್ತದೆ. ಸುಬ್ರಹ್ಮಣ್ಯದ ಆಸುಪಾಸಿನಲ್ಲಿ ವಿಶೇಷ ಜಾತಿಯ ಬೆತ್ತ ದೊರೆಯುತ್ತದೆ. ಈ ಕ್ಷೇತ್ರಕ್ಕೆ ಸಮೀಪದಲ್ಲಿ ಕುಮಾರಧಾರಾ ನದಿ ಹರಿಯುತ್ತದೆ. ಧರ್ಮಸ್ಥಳಕ್ಕೆ ಹೋಗುವಾಗ ಅಥವಾ ಬರುವಾಗ ಈ ಕ್ಷೇತ್ರವನ್ನು ಭಕ್ತಾದಿಗಳು ಸಂದರ್ಶಿಸುವ ವಾಡಿಕೆಯಿದೆ. (ಜಿ.ಎನ್.)