ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಮೇರಿಯನ್ ಕಲೆ

ಸುಮೇರಿಯನ್ ಕಲೆ - ಮಾನವ ನಾಗರಿಕತೆಯ ಇತಿಹಾಸದಲ್ಲಿ ಪ್ರಮುಖ ಆರಂಭಿಕ ಕಲೆ ಹಾಗೂ ಪಾಶ್ಚಿಮಾತ್ಯ ಕಲಾ ಸಂಪ್ರದಾಯದ ಮೊದಲ ಹಂತ. ಮೆಸೊಪೊಟೇಮಿಯ ಜನಾಂಗದಲ್ಲಿ ಪ್ರೋಟೋ ಎಲಮೈಟರು, ಸುಮೇರಿಯನರು, ಸೆಮಿಟಿಕ್ ಅಕ್ಕಾಡಿಯನರು, ಬ್ಯಾಬಿಲೋನಿಯನ್ನರು (ದಕ್ಷಿಣದಲ್ಲಿ), ಅಸ್ಸೀರಿಯನರು (ವಾಯವ್ಯದಲ್ಲಿ), ಆಯಾರೈಟರು (ಪಶ್ಚಿಮದಲ್ಲಿ) ಸೇರಿದ್ದರು. ಸುಮೇರಿಯನರ ಮುಖ್ಯಪಟ್ಟಣ ಅಗಡೆ. ಅಗಡೆಯ ರೂಪಾಂತರವೆ ಅಕ್ಕಾಡ್ ಆಯಿತು. ಕ್ರಿ.ಪೂ. 40ನೆಯ ಶತಮಾನದಲ್ಲಿನ ಮಧ್ಯಕಾಲದಲ್ಲಿ ಸುಮೇರಿಯನರು, ಮೆಸೊಪೊಟೇಮಿ ಯದ ದಕ್ಷಿಣಕ್ಕೆ ಬಂದು ಅಲ್ಲಿನ ಮೂಲವಾಸಿಗಳನ್ನು ನಾಗರಿಕರಾಗಿ ಮಾಡಿದರೆಂದೂ ಆ ಮೂಲವಾಸಿಗಳು ಮಡಿಕೆಗಳ ಮೇಲಿನ ಕ್ಷೇತ್ರಗಣಿತದ ನಮೂನೆಗಳನ್ನೊಳಗೊಂಡ ಜಾನುವಾರುಗಳ ರೂಪಗಳನ್ನು ಕೆಂಪು ಮತ್ತು ಕಪ್ಪುರೇಖೆಗಳಿಂದ ರಮ್ಯವಾಗಿ ರಚಿಸಲಾಗಿತ್ತೆಂದೂ ತಿಳಿದುಬರುತ್ತದೆ. ಪ್ರೋಟೋ ಸುಮೇರಿಯನ್ನರ ಕಲಾಕೃತಿಗಳಲ್ಲಿ ಜಾನುವಾರು ಮತ್ತು ಮನುಷ್ಯ ರೂಪಗಳನ್ನೊಳಗೊಂಡ ಮೃಣ್ಮಯ ಶಿಲ್ಪ ಮತ್ತು ಪಕ್ಷಿ ಮುಖದ ಸ್ತ್ರೀಯರ ಪ್ರತಿಮೆಗಳು, ಹಾಲುಕುಡಿಸುವ ಭಂಗಿಯಲ್ಲಿ ಮಕ್ಕಳನ್ನು ಹಿಡಿದುಕೊಂಡ ಸ್ತ್ರೀಯರ ಶಿಲ್ಪಗಳು ಸೇರಿವೆ. ಈ ಬಗೆಯ ರೂಪಗಳು ಸುಮೇರಿಯನ್ನರ ಮಾತೃ ದೇವತೆಯಾಗಿರ ಬಹುದು. ಸುಮೇರಿಯನರ ದೇವಸ್ಥಾನಗಳು ಮೆಕ್ಸಿಕೊ ಪ್ರದೇಶದ ಪ್ರಾಚೀನ ಅಜ್ಟೆಕ್ಕರ ಜಿಗ್ಗುರಾಟ್‍ಗಳಿಗೆ ಹೋಲಿಕೆ ಇರುವುದರಿಂದ (ಹಾಗೂ ಪೂಜೆ ವಿಧಾನದಲ್ಲಿ ಕೂಡ) ಸುಮೇರಿಯನರು ಅಜ್ಟೆಕ್ಕರ ಶಾಖೆಯಾಗಿ ಮೆಸೊಪೊಟೇಮಿಯಕ್ಕೆ ಬಂದಿರಬಹುದು. ಅವರ ನೀತಿ ನಿಯಮಗಳು ಕೂಡ ಈ ಅಭಿಪ್ರಾಯಕ್ಕೆ ಮತ್ತಷ್ಟು ಬೆಂಬಲಕೊಡುತ್ತವೆ. ಅದಲ್ಲದೆ ಸುಮೇರಿಯನ್ನರ ನಾಗರಿಕತೆಗೂ ಹರಪ್ಪ-ಮೊಹೆಂಜೊದಾರೊ ಮೂಲನಿವಾಸಿಗಳಾದ ಪೂರ್ವ ದ್ರಾವಿಡರ ನಾಗರಿಕತೆಗೂ ಹೆಚ್ಚು ಹೋಲಿಕೆ ಇದೆ. ಪ್ರೊಟೋ ಎಲಮೈಟರು, ಹರಪ್ಪ, ಮೊಹೆಂಜೊದಾರೊ ಮೂಲನಿವಾಸಿಗಳು ಮತ್ತು ಸುಮೇರಿಯನರು ಒಂದೇ ಮೂಲಪುರುಷ ನಿಂದ ಜನಿಸಿರಬಹುದು. ಸುಮೇರಿಯನರು ಮಣಿಗಳ ಅಲಂಕಾರಕ್ಕಾಗಿ ಪಚ್ಚೆಗಳನ್ನು ನೀಲಗಿರಿ ಪ್ರಾಂತದಿಂದಲೂ ಲ್ಯಾಪಿಜ್ ಲಾಜುಲಿಯನ್ನು ಒರಿಸ್ಸ, ಮಧ್ಯಪ್ರದೇಶಗಳಿಂದಲೂ (ಭಾರತ) ತರಿಸಿಕೊಳ್ಳುತ್ತಿದ್ದರು. ಅದಲ್ಲದೆ ಅವರ ಕೊಳವಿ ಮುದ್ರೆಗಳ (ಕ್ಯೂನಿಫಾರಮ್ ಅಥವಾ ಕೋನಾಕೃತಿಯ ಬರೆವಣಿಗೆ) ಅಲಂಕಾರದ ಶೈಲಿಯ ಮಡಕೆಗಳ ಚಿತ್ರಣ ಮೊಹೆಂಜೊದಾರೊ, ಹರಪ್ಪ ಶೈಲಿಯಲ್ಲಿವೆ. ಕ್ರಿ.ಪೂ. 3000ದ ವೇಳೆಗೆ ಸುಮೇರಿಯನರ ಸಂಸ್ಕøತಿ ಉತ್ತುಂಗಶಿಖರಕ್ಕೇರಿತ್ತೆಂದು ನಿರ್ಧರಿಸಲಾಗಿದೆ. ಮಡಿಕೆಗಳ ಶೃಂಗಾರ, ಆಯುಧಗಳ ಮೇಲಿನ ಕೆತ್ತನೆ, ಆಡು, ಜಿಂಕೆ, ಸಿಂಹ ಮತ್ತಿತರ ಕಾಡು ಪ್ರಾಣಿಗಳ ದೃಶ್ಯಗಳು, ತಂತಿ ವಾದ್ಯಗಳು, ಬಾವುಟದ ಅಲಂಕಾರ, ವ್ಯವಸಾಯದ ಸಲಕರಣೆಗಳು, ಪಚ್ಚೆ, ಕಾರ್ನೀಲಿಯನ್, ಲ್ಯಾಪಿಜ್‍ಲಾಜುಲಿ ಮುಂತಾದವುಗಳಿಂದ ರಚಿಸಿದ ಚಿನ್ನ ಆಭರಣಗಳು, ಹಿಂಗಾಲುಗಳ ಮೇಲೆ ನಿಂತು ಜೀವವೃಕ್ಷದ ಮೇಲೆ ಮುಂಗಾಲುಗಳನ್ನಿಟ್ಟು ಎಲೆಗಳನ್ನು ತಿನ್ನುವ ಟಗರಿನ ಪ್ರತಿಮೆ, ಮಹಾಗೋರಿಯಲ್ಲಿ ದೊರೆತ ವಿವಿಧಾಲಂಕೃತ ಶಿರಸ್ಸು, ಚಿನ್ನದ ಹೋರಿ ಮುಖವಾಡದ ಒಳಗೆ ಪ್ರಸ್ತರ ಖಚಿತವಾದ ತಂತಿವಾದ್ಯ, ಸುಂದರ ಸ್ವರೂಪಗಳನ್ನೊಳಗೊಂಡ ಬಾವುಟ ಮುಂತಾದವು ಸಾದೃಶ್ಯಗಳಾಗಿವೆ. ಸುಮೇರಿಯನರ ರಾಜವಂಶೀಕ ಯುಗ ಕ್ರಿ.ಪೂ 3000-2340ರ ಅವಧಿಯಲ್ಲಿ, ಸುಮೇರೋ ಅಕ್ಕಾಡಿಯನರ ಯುಗ ಕ್ರಿ.ಪೂ 2340-2180 ಅವಧಿಯಲ್ಲಿ, ಪ್ರಾಚೀನ ಯುಗ ಕ್ರಿ.ಪೂ. 2125-2025 ಅವಧಿಯಲ್ಲಿ ನೆಲೆಗೊಂಡಿವೆ. ಅವಧಿಗಳನ್ನು 4 ಯುಗಗಳಾಗಿ; 1. ನರಂಸಿನ್ (ಕ್ರಿ.ಪೂ. 2340), 2. ಗುಡಿಯಾ (ಕ್ರಿ.ಪೂ. 2125-2025) ಮತ್ತು ಸುಮೇರೋ ಅಕ್ಕಾಡಿಯನ್ನರ ಕಾಲಮಾನ, 3. ಕ್ಷರ್ನರ್ಸಿಪಾಲ್, 4. ಅಷುರ್‍ಬನಿಪಾಲ್ ಕಾಲಮಾನಗಳಾಗಿ ವಿಂಗಡಿಸಲಾಗಿದೆ. ಈಜಿಪ್ಶಿಯನ್ ಕಲೆಗೆ ಸಮಾನವಾಗದೇ ಇದ್ದರೂ ಸುಮೇರೋ ಅಕ್ಕಾಡಿಯನ್ನರ ಕಲೆಯ ಪ್ರಭಾವ ಸಿರಿಯ, ಪರ್ಷಿಯ, ಮೆಡಿಟರೇನಿಯನ್ ಪ್ರದೇಶಗಳಿಗೆ ವಿಸ್ತರಿಸಿತ್ತು.

ಪ್ರಾಚೀನ ರಾಜರ ಕಾಲದ (ಕ್ರಿ.ಪೂ. 3000-2340) ಶಿಲ್ಪಿಗಳ ಕಲಾಕೃತಿಗಳಲ್ಲಿ ಅದ್ಭುತ ಪಕ್ವತೆಯನ್ನು ಸಾಧಿಸಿದ್ದರು. ಸಮರಾನ್ ಪ್ರದೇಶದಲ್ಲಿನ ಮೀನು, ಪಕ್ಷಿಗಳನ್ನೊಳಗೊಂಡ ಕಟ್ಟೆಗಳ ಕೆತ್ತನೆ ಚಂದ್ರಕಾಂತಶಿಲೆಯ ಹೂದಾನಿ, ನೀರುಹಂಚುವ ಪಾತ್ರೆ ಸೇರಿವೆ. ಇದು ಸುಮೇರಿಯನರ ಕಲಾಸಾಧನೆಯಲ್ಲಿ ಪ್ರಥಮ ಮೆಟ್ಟಿಲು ಹಾಗೂ ಇದೇ ಯುಗದ ಅತ್ಯುತ್ತಮ ಶಿಲ್ಪಗಳು. ದೇವಸ್ಥಾನದಲ್ಲಿ ಇಡುವುದಕ್ಕಾಗಿ ರಾಜರ ಪುರೋಹಿತರ ಮತ್ತು ಕುಲೀನರ ಪ್ರತಿಮೆಗಳನ್ನು ರಚಿಸಲಾಗಿದೆ. ದೇವತೆಗಳನ್ನು ಗುರುತಿಸುವುದಕ್ಕಾಗಿ ಪ್ರತಿಮೆಗಳ ಮೇಲೆ ಸಿಂಹ ಶಿರಸ್ಸಿನ ಗರುಡಪಕ್ಷಿ, ವಿಶಾಲವಾದ ಕಣ್ಣುಗಳು ಮುಂತಾದ ಚಿಹ್ನೆಗಳನ್ನು ಕೊಡಲಾಗಿದೆ. ಬಾಗ್‍ದಾದ್ ಹತ್ತಿರದ ಟೆಲ್ ಅಸ್ಮಾರ್ ಪ್ರದೇಶದಲ್ಲಿ ದೊರೆತ ಪ್ರತಿಮೆಗಳು ಪುರುಷರವಾಗಿದ್ದು, ಅವು ಪುರೋಹಿತರ ಪ್ರತಿಮೆಗಳಾಗಿರಬಹುದು. ಕೊಳವಿಯ ಗುಂಡಾದ ಸ್ವರೂಪಗಳಿಗೆ ಲ್ಯಾಪಿಜ್ ಲಾಜುಲಿ ಕಣ್ಣುಗಳಿದ್ದು, ಗೊಂಬೆಗಳ ಕಣ್ಣುಗಳಿಗೆ ಕಪ್ಪುಬಣ್ಣದ ಸುಣ್ಣ ಕಲ್ಲುಗಳನ್ನೋ ಕಪ್ಪೆಚಿಪ್ಪುಗಳನ್ನೋ ಉಪಯೋಗಿಸುತ್ತಿದ್ದರು. 2,3ನೆಯ ರಾಜವಂಶಸ್ಥರ ಕಾಲದಲ್ಲಿ ನಯವಾದ, ಮೃದುತ್ವದ ಶಿಲ್ಪಗಳು ರಚನೆಯಾದವಲ್ಲದೆ ಮಂದಸ್ಮಿತವನ್ನು ಕೂಡ ಸಾಧಿಸಲಾಯಿತು. ತಂತಿವಾದ್ಯಕ್ಕೆ ಚಿನ್ನದ ಗೋಮುಖ ಸಹಿತ ಹೊಳೆಯುವ ಕಪ್ಪೆಚಿಪ್ಪು, ಲ್ಯಾಪಿಜ್ ಲಾಜುಲಿ, ಕೆಂಪುಸೂರ್ಯಕಾಂತಿ ಮಣಿಗಳಿಂದ ಕುಂದಣದ ಅಲಂಕಾರ ಮಾಡಲಾಗಿದೆ.

ಸುಮೇರೋ ಅಕ್ಕಾಡಿಯನ್ ಯುಗ: ಕಡೆಯ ಸುಮೇರಿಯನರ ರಾಜ ಲೂಗಲ್ ಜಗ್ಗಿಸಿ, ಉತ್ತರ ಅಕ್ಕಾಡಿಯನ್ ರಾಜನಾದ ಸಾರ್ಗಾನ್‍ನಿಂದ ಪರಾಭವ ಹೊಂದಿದ ಮೇಲೆ (ಕ್ರಿ.ಪೂ. 2500) ಚಿಕ್ಕಪುಟ್ಟರಾಜ್ಯಗಳಿಗೆ ಸಾರ್ಗಾನ್ ಚಕ್ರವರ್ತಿ ಆದನಂತರ ಸುಮೇರೋ ಅಕ್ಕಾಡಿಯನರ ಸಂಕೀರ್ಣ ವರ್ಗ ಜಾರಿಯಲ್ಲಿ ಬಂತು. ಅಕ್ಕಾಡಿಯನರ ಭಾಷೆ ಬೇರೆಯಾದರೂ ಅವರು ಸುಮೇರಿಯನರ ಸಂಸ್ಕøತಿಯನ್ನೇ ಅವಲಂಬಿಸಿ, ಅವರ ಶಾಸನಗಳನ್ನು ಸುಮೇರಿಯನರ ಬರೆವಣಿಗೆಯಲ್ಲಿಯೇ ಪ್ರಕಟಿಸ ತೊಡಗಿದರು.

ಇತ್ತೀಚಿನ ಸುಮೇರಿಯನರ ಕಾಲ: ಕ್ರಿ.ಪೂ 2125-2025. ಈ ಕಾಲದ ಅತ್ಯುತ್ತಮ ಶಿಲ್ಪ ಗುಂಡುಗುಂಡಾಗಿದ್ದು ಚಿಕ್ಕರಾಜ್ಯವಾದ ಲಾಲಗಾಷಿಗೆ ಸೇರಿದೆ. ಸ್ಥಾನಿಕವಾಗಿದ್ದರೂ ಆಸನಿಕವಾಗಿದ್ದರೂ ಈ ಕಾಲದ ಶಿಲ್ಪದಲ್ಲಿ ಪಟುತ್ವ, ಭಂಗಿಗಳಲ್ಲಿ ಶಾಂತತೆ ಕಂಡುಬರುತ್ತವೆ. ಪ್ರತಿಮೆಗಳು ಕೈಗಳನ್ನು ಮಡಿಚಿಕೊಂಡಿರುವುದಲ್ಲದೆ ಇವುಗಳ ಸ್ಥೈರ್ಯ ಅದ್ಭುತವಾಗಿವೆ. ಸ್ಥಾನಿಕ ಬುದ್ಧ ಅಥವಾ ಬೋಧಿಸತ್ವ ರೂಪಗಳನ್ನು ತಾಳಿವೆ. ಅಂಗವಿಚ್ಚೇದನ ತಂತ್ರದಲ್ಲಿ ಬಾಯಿ ಕೆನ್ನೆಗಳ ರಚನೆಯಲ್ಲಿ, ಶಿಲ್ಪಿಗಳು ಚತುರರಾಗಿರಬೇಕು. ಈಜಿಪ್ಟಿನ ದೇವತಾ ಶಿಲ್ಪದಂತೆ ಈ ಶಿಲ್ಪಾಕೃತಿಗಳು, ಯಾವ ದೇವತಾರಾಧನೆಯಲ್ಲಿ ರಾಜರು ತತ್ಪರರಾಗಿದ್ದರೆಂದು ಸ್ಪಷ್ಟವಾಗಿ ತಿಳಿಸುವುದಿಲ್ಲ. ಇವರು ಪ್ರಾಚೀನ ಇಂದುದೇವತೆಯ ಭಕ್ತರಾಗಿರಬೇಕು. ಅಲಂಕಾರಕ್ಕಾಗಿ ಶಿಲ್ಪಿಗಳು ರಚಿಸಿದ ನಕ್ಷತ್ರ, ಸೂರ್ಯ ಮತ್ತು ಅರ್ಧಚಂದ್ರಾಕಾರಗಳನ್ನು ನೋಡಿದರೆ ಭಾರತೀಯರಂತೆ ಇವರು ನವಗ್ರಹಾರಾಧನೆಯಲ್ಲಿ ಆಸಕ್ತರಾಗಿರಬಹುದು. ಗುಡಿಯಾಕಾಲದ ಶಿಲ್ಪವು ವೈಯಕ್ತಿಕವಾಗಿದೆ. ಉದ್ದನೆಯ ಗಡ್ಡಗಳು, ವಿಶಾಲವಾದ ಕಣ್ಣುಗಳು, ಕಲೆಗಳ ಮೇಲಿನ ಕೊಂಬುಗಳಿವೆ. ಇದರಲ್ಲಿ ಈಜಿಪ್ಟಿನ ಧಾರ್ಮಿಕ ಭಾವ ಗೋಚರವಾಗುತ್ತದೆ.

ಅಕ್ರೋಪೊಲಿಸ್‍ನಲ್ಲಿ ಸಿಕ್ಕ 7 ಅಡಿಗಳ ಹಮೂರಬಿಯ ಶಿಲಾಶಾಸನ (ಕ್ರಿ.ಪೂ. 1728-1676) ಸುಮೇರಿಯನರ ಕಲಾಸಂಪ್ರದಾಯಕ್ಕೂ, ಬ್ಯಾಬಿಲೋನಿಯನ್ ಕಲಾಸಂಪ್ರದಾಯಕ್ಕೂ ಇದ್ದ ಸಂಬಂಧವನ್ನು ಪ್ರಕಟಿಸುತ್ತದೆ. (ಎಸ್.ಎಚ್.ಎ.ಪಿ.)