ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುರತ್ಕಲ್ಲು

ಸುರತ್ಕಲ್ಲು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಒಂದು ಗ್ರಾಮ ಮತ್ತು ಹೋಬಳಿ ಕೇಂದ್ರ. ಮಂಗಳೂರು-ಮುಲ್ಕಿ ಮಾರ್ಗದಲ್ಲಿ ಮಂಗಳೂರಿನ ಉತ್ತರಕ್ಕೆ 14 ಕಿಮೀ ದೂರದಲ್ಲೂ ಮುಲ್ಕಿಯ ದಕ್ಷಿಣಕ್ಕೆ 11 ಕಿಮೀ ದೂರದಲ್ಲೂ ಇದೆ.

ಇಲ್ಲಿ ಪ್ರಸಿದ್ಧ ಕರ್ನಾಟಕ ಎಂಜನಿಯರಿಂಗ್ ಕಾಲೇಜು, ಕಲಾ ಮತ್ತು ವಿಜ್ಞಾನ ಕಾಲೇಜು, ಜೊತೆಗೆ ವಿವಿಧ ಹಂತಗಳ ಇತರ ಶಾಲೆಗಳಿವೆ. ಕಡಲ ತೀರದಲ್ಲಿರುವ ಈ ಗ್ರಾಮದಲ್ಲಿ ಮತ್ಸ್ಯೋದ್ಯಮವಿದ್ದು, ಮಂಜುಗಡ್ಡೆ ತಯಾರಿಸುವ ಹಾಗೂ ಮೀನು ಸಂಸ್ಕರಿಸುವ ಕಾರ್ಖಾನೆಗಳಿವೆ. ಬೀಡಿ ತಯಾರಿಕೆ, ಬಟ್ಟೆ ತಯಾರಿಕೆಯುಂಟು. ಇತ್ತೀಚೆಗೆ ಮೋಂಬತ್ತಿ, ಬೆಂಕಿಪೆಟ್ಟಿಗೆ, ಅಲ್ಯುಮೀನಿಯಂ ಪಾತ್ರೆಗಳ ತಯಾರಿಕೆಯ ಸಣ್ಣ ಕಾರ್ಖಾನೆಗಳಿವೆ. ವ್ಯಾಪಾರ ಕೇಂದ್ರವಾಗಿರುವ ಈ ಊರು ಸಮುದ್ರತೀರದ ಒಂದು ಸುಂದರ ಪ್ರವಾಸಿ ತಾಣ. ಇಲ್ಲಿನ ಹೆಬ್ಬಂಡೆಯ ಮೇಲೆ ಇತ್ತೀಚೆಗೆ ಒಂದು ದೀಪಸ್ತಂಭವನ್ನು ಕಟ್ಟಲಾಗಿದೆ. ಕರಾವಳಿಯ ರಾಷ್ಟ್ರೀಯ ಹೆದ್ದಾರಿ ಸುರತ್ಕಲ್ಲನ್ನು ಹಾದು ಹೋಗಿದ್ದು ಸುತ್ತಲ ಗ್ರಾಮ ಮತ್ತು ಪಟ್ಟಣಗಳಿಗೆ ಇಲ್ಲಿಂದ ಮಾರ್ಗ ಸಂಪರ್ಕಗಳಿವೆ. ಕಿರಿಯ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಈ ಗ್ರಾಮ ಸೇರಿದೆ.

ಇಲ್ಲಿರುವ ಸದಾಶಿವ ದೇವಾಲಯ ಖರಾಸುರ ಪ್ರತಿಷ್ಠಿತವೆಂದು ಪ್ರತೀತಿ. ಇಲ್ಲಿ ಸದಾಶಿವ ದೇವರ ಪೂಜೆಯ ಅನಂತರವೇ ಗಣಪತಿಪೂಜೆ ನೆರವೇರುವ ಅತಿ ವಿರಳ ಸಂಪ್ರದಾಯವಿದೆ. ಹಿಂದೆ ಈ ದೇವಾಲಯದ ಶಿಲ್ಪ ರಚನೆ ಪೌಳಿಯೆದುರುಗಡೆ ತಡೆಗಟ್ಟು ಮಹಡಿಗಳುಳ್ಳದ್ದಾಗಿ ಉಡುಪಿಯಲ್ಲಿರುವ ಜೈನಶಿಲ್ಪ ಶೈಲಿಯಂತಿತ್ತು; ಇತ್ತೀಚೆಗೆ ಇದು ಸಂಪೂರ್ಣ ರೂಪಾಂತರಗೊಂಡಿದೆ. ಇಡ್ಯದಲ್ಲಿ ಮಹಾಲಿಂಗೇಶ್ವರ ದೇವಾಲಯವಿದೆ. ಇದು ವಿದ್ಯಾಧರಮುನಿ ಪೂಜಿತವೆಂದು ಪ್ರತೀತಿ. ವೀರಭದ್ರ ದೇವಸ್ಥಾನ ಮತ್ತು ಇತ್ತೀಚೆಗೆ ಸ್ಥಾಪನೆಯಾದ ವೆಂಕಟರಮಣ ದೇವಾಲಯ ಹಾಗೂ ಮೂರು ಮಾರಿಯಮ್ಮ ಗುಡಿಗಳಿವೆ. ಇಲ್ಲಿ ನವರಾತ್ರಿಯ ವೇಳೆಗೆ ಬಯಲಾಟಗಳು ನಡೆಯುತ್ತವೆ. ಉಡುಪಿಯ ಅಷ್ಟಮಠಗಳಲ್ಲೊಂದಾದ ಕೃಷ್ಣಾಪುರ ಮಠದ ಮೂಲಭೂಮಿ ಸುರತ್ಕಲ್ಲಿನಲ್ಲಿದೆ. (ಎಮ್.ವಿ.)