ಸುರಪುರ ಭಾರತದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಯಾದಗಿರಿ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕನ್ನು ದಕ್ಷಿಣ ಮತ್ತು ಆಗ್ನೇಯದಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳೂ ಪಶ್ಚಿಮ ಮತ್ತು ವಾಯವ್ಯದಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಸಿಂದಗಿ ತಾಲ್ಲೂಕುಗಳೂ ಉತ್ತರದಲ್ಲಿ ಜೇವರಗಿ ಮತ್ತು ಪೂರ್ವಕ್ಕೆ ಶಾಹಪುರ ತಾಲ್ಲೂಕುಗಳೂ ಸುತ್ತುವರಿದಿವೆ. ಕಸಬೆ, ಹುಣಸಗಿ, ಕೆಂಭಾವಿ, ಕೊಡೆಕಲ್ಲು, ಕಕ್ಕೇರ ಇವು ಹೋಬಳಿಗಳು. 186 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 1,854.9 ಚ.ಕಿಮೀ. ಜನಸಂಖ್ಯೆ 3,36,689.

ಈ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿರುವ ಕನ್ನೆಳ್ಳಿ ಮಂಗಳೂರು ಬಳಿ ಬೆಟ್ಟಗಳಿವೆ. ತಾಲ್ಲೂಕಿನ ಉಳಿದೆಡೆ ಸಣ್ಣಪುಟ್ಟ ಗುಡ್ಡಗಳನ್ನು ಕಾಣಬಹುದು. ಗಾಜಿನ ಕೈಗಾರಿಕೆಗೆ ಬೇಕಾದ ಕಣಶಿಲೆ ಜೊತೆಗೆ ಜಿಪ್ಸಂ, ಕ್ಯಲ್ಕೇರಿಯಸ್ ಪುಡಿ ಮತ್ತು ಲವಣ ಈ ತಾಲ್ಲೂಕಿನಲ್ಲಿ ಸಿಗುತ್ತವೆ.

ಕೃಷ್ಣಾ ಈ ತಾಲ್ಲೂಕಿನ ಮುಖ್ಯ ನದಿ. ತಾಲ್ಲೂಕಿನ ದಕ್ಷಿಣದಲ್ಲಿ ಗಡಿಯಾಗಿ ಹರಿದು ರಾಯಚೂರು ಜಿಲ್ಲೆಯ ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳನ್ನು ಬೇರ್ಪಡಿಸಿದೆ. ಈ ನದಿಯ ಫಲವತ್ತಾದ ಎಡದಂಡೆಯ ಭೂಪ್ರದೇಶ ಈ ತಾಲ್ಲೂಕಿಗೆ ಸೇರಿದೆ. ಬಿಜಾಪುರ ಜಿಲ್ಲೆಯಿಂದ ಹರಿದುಬರುವ ಡೋಣಿನದಿ ಈ ತಾಲ್ಲೂಕಿನ ನೈಋತ್ಯ ಭಾಗದಲ್ಲಿ ವಾಯವ್ಯದಿಂದ ಆಗ್ನೇಯಾಭಿಮುಖವಾಗಿ ಹರಿದು ಕೃಷ್ಣಾ ನದಿಯನ್ನು ಸೇರುವ ಮೊದಲು ಅಮ್ಮಾಪುರ ಮತ್ತು ತಂಗದ ಬೈಲು ಗ್ರಾಮಗಳ ಮಧ್ಯೆ ಹರಿಯುವುದು. ಇವಲ್ಲದೆ ಕೆಲವು ತೊರೆಗಳು ಈ ತಾಲ್ಲೂಕಿನಲ್ಲಿ ಹರಿದು ಕೃಷ್ಣಾನದಿಯನ್ನು ಸೇರುತ್ತವೆ. ಈ ತಾಲ್ಲೂಕಿನ ನಾರಾಯಣಪುರದಿಂದ ಸು. 3 ಕಿಮೀ ಕೆಳಗೆ ಕೃಷ್ಣಾನದಿಯ ಜಲದುರ್ಗ ಜಲಪಾತವಿದೆ.

ತಾಲ್ಲೂಕಿನ ವಾಯುಗುಣ ಶುಷ್ಕ ಮತ್ತು ಆರೋಗ್ಯಕರವಾಗಿದ್ದು ವಾರ್ಷಿಕ ಸರಾಸರಿ ಮಳೆ 687.91 ಮಿಮೀ. ತಾಲ್ಲೂಕಿನಲ್ಲಿ ಸು.5,439.15 ಹೆಕ್ಟೇರ್ ಕುರುಚಲು ಅರಣ್ಯಪ್ರದೇಶವಿದೆ. ತೋಳ, ಕಿರುಬ, ಕಾಡುನಾಯಿ, ಜಿಂಕೆ, ನರಿ ಮುಂತಾದ ಪ್ರಾಣಿಗಳನ್ನು ಇಲ್ಲಿ ಕಾಣಬಹುದು.

ಒಣ ಬೇಸಾಯಕ್ಕೆ ಸಹಾಯಕವಾದ ಕಪ್ಪುಮಣ್ಣು ಈ ತಾಲ್ಲೂಕಿನಲ್ಲಿ ಬಹಳ ಆಳದವರೆಗೆ ಹೆಚ್ಚು ಕಂಡುಬರುವುದರ ಜೊತೆಗೆ ಕೆಂಪುಮರಳು ಮಿಶ್ರಿತ ಮಣ್ಣೂ ಅಲ್ಲಲ್ಲಿ ಕಂಡುಬರುವುದು. ಈ ಬಗೆಯ ಮಣ್ಣಿಗನುಗುಣವಾಗಿ ಈ ತಾಲ್ಲೂಕಿನಲ್ಲಿ ಮಳೆ, ಬಾವಿ, ನದಿ ಮುಂತಾದವುಗಳ ಜಲ ಬಳಕೆಯಿಂದ ಜೋಳ, ಸಜ್ಜೆ, ಗೋದಿ, ತೊಗರಿ, ಕಡಲೆ, ಮೆಣಸಿನಕಾಯಿ, ಹತ್ತಿ, ನೆಲಗಡಲೆ ಬೆಳೆಯುತ್ತಾರೆ. ಪಶುಪಾಲನೆಯ ಜೊತೆಗೆ ಮತ್ಸ್ಯೋದ್ಯಮವೂ ಸ್ವಲ್ಪಮಟ್ಟಿಗಿದೆ.

ಈ ತಾಲ್ಲೂಕಿನಲ್ಲಿ ಸಿಮೆಂಟ್ ಉತ್ಪಾದನೆಗೆ ಬೇಕಾದ ಸುಣ್ಣಕಲ್ಲು, ಗಾಜು ತಯಾರಿಕೆಗೆ ಬೇಕಾದ ಉತ್ತಮ ಬೆಣಚುಕಲ್ಲು ಇದ್ದು ಅವನ್ನು ಹತ್ತಿರದ ಕಾರ್ಖಾನೆಗಳಿಗೆ ಸರಬರಾಜು ಮಾಡುತ್ತಾರೆ. ಈ ತಾಲ್ಲೂಕಿನ ತಿಂತಿಣಿ ಗ್ರಾಮದ ಸುತ್ತ ತಾಮ್ರನಿಕ್ಷೇಪಗಳಿವೆ. *

ಈ ತಾಲ್ಲೂಕಿನ ವಾಗಣಗೇರಿ ಚರಿತ್ರಾರ್ಹವಾದದ್ದು. ಸುರಪುರಕ್ಕೆ ಪಶ್ಚಿಮದಲ್ಲಿ 6 ಕಿಮೀ ದೂರದಲ್ಲಿರುವ ಈ ಸ್ಥಳ ಒಮ್ಮೆ ರಾಜಧಾನಿ ಯಾಗಿತ್ತು. ಮೊಗಲ್ ಚಕ್ರವರ್ತಿ ಔರಂಗಜೇಬನಿಗೂ (17ನೆಯ ಶತಮಾನ) ಸುರಪುರದ ರಾಜರಿಗೂ ಇಲ್ಲಿ ಯುದ್ಧ ನಡೆದಿತ್ತು. ಇಲ್ಲಿ ಕೋಟೆಯ ಅವಶೇಷವಿದೆ. ಸುರಪುರಕ್ಕೆ ನೈಋತ್ಯದಲ್ಲಿರುವ ಕಕ್ಕೇರದ ಸೋಮನಾಥ ದೇವಾಲಯ ಪ್ರಸಿದ್ಧವಾದದ್ದು. ಜೈಮಿನಿ ಭಾರತದ ಕರ್ತೃ ಲಕ್ಷ್ಮೀಶನ ಹುಟ್ಟಿದ ಊರೆನ್ನುವ ದೇವಪುರ ಸುರಪುರದ ದಕ್ಷಿಣಕ್ಕೆ 13 ಕಿಮೀ ದೂರದಲ್ಲಿ ಕೃಷ್ಣಾ ನದಿಯ ಎಡದಂಡೆಯ ಮೇಲಿದೆ. ಸುರಪುರಕ್ಕೆ ನೈಋತ್ಯದಲ್ಲಿ 19 ಕಿಮೀ ದೂರದಲ್ಲಿ ಕೃಷ್ಣಾನದಿಯ ಎಡದಂಡೆಯ ಮೇಲಿರುವ ತಿಂತಿಣಿ ಹಿಂದು ಮತ್ತು ಮುಸಲ್ಮಾನರ ಒಂದು ಪವಿತ್ರ ಕ್ಷೇತ್ರ. ಇಲ್ಲಿನ ಮೌನಪ್ಪಯ್ಯ ದರ್ಗಾ ಎಂದು ಕರೆಯುವ ಮೌನೇಶ್ವರ ದೇವಾಲಯ ಪ್ರಸಿದ್ಧ. ಸುರಪುರದ ನೈಋತ್ಯದಲ್ಲಿರುವ ಕೊಡೆಕಲ್ಲು ಹೋಬಳಿ ಕೇಂದ್ರ. ತಾಲ್ಲೂಕಿನ ನೈಋತ್ಯದ ಅಂಚಿನಲ್ಲಿ ಕೃಷ್ಣಾ ನದಿಯ ಎಡದಂಡೆಯ ಮೇಲಿರುವ ನಾರಾಯಣಪುರದ ಬಳಿ ಛಾಯಾಭಗವತಿ ದೇವಾಲಯವಿದೆ. ಕೃಷ್ಣಾನದಿಯ ಒಂದು ಕವಲು ಇಲ್ಲಿನ ಒಂದು ಗುಹೆಯೊಳಗೆ ಹೊಕ್ಕು ಹೊರಗೆ ಬರುವುದು. ವೈಶಾಖ ಶುದ್ಧ ತದಿಗೆ ಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಬೆಳಗಿನ ಹೊತ್ತು ಸೂರ್ಯಕಿರಣ ಇಲ್ಲಿನ ಛಾಯಾಭಗವತಿಯ ಪಾದಗಳ ಮೇಲೆ ಬೀಳುತ್ತದೆ. ನಾರಾಯಣಪುರದಿಂದ ಸು. 3 ಕಿಮೀ ಕೆಳಗೆ ಕೃಷ್ಣಾನದಿ 60ಮೀಟರ್ ಆಳಕ್ಕೆ ದುಮುಕಿ ಜಲದುರ್ಗ ಜಲಪಾತವನ್ನುಂಟುಮಾಡಿದೆ. ಸುರಪುರದ ನೈಋತ್ಯದಲ್ಲಿ ತಾಲ್ಲೂಕು ಪಶ್ಚಿಮ ಗಡಿಗೆ ಹತ್ತಿರದಲ್ಲಿರುವ ಹಗರಟಗಿ ಯಲ್ಲಿ ಕಬ್ಬಿಣಯುಗದ ಬೃಹತ್ ಶಿಲಾ ಸಮಾಧಿಗಳು ಕಂಡುಬಂದಿವೆ. ಸುರಪುರದ ವಾಯವ್ಯಕ್ಕೆ 35 ಕಿಮೀ ದೂರದಲ್ಲಿರುವ ಮುದನೂರಿನ ರಾಮನಾಥ ದೇವಾಲಯ ಪ್ರಸಿದ್ಧವಾದದ್ದು, ಈ ಊರು ವಚನಕಾರ ದೇವರದಾಸಿಮಯ್ಯನ ಜನ್ಮಸ್ಥಳವೆಂದೂ ಪ್ರತೀತಿ. ಸುರಪುರದ ವಾಯವ್ಯಕ್ಕೆ 29ಕಿಮೀ ದೂರದಲ್ಲಿರುವ ಕೆಂಭಾವಿಯಲ್ಲಿ ಬಹಮನೀ ಸುಲ್ತಾನರ ಕಾಲದ ಅನೇಕ ಚಾರಿತ್ರಿಕ ಅವಶೇಷಗಳು ಇವೆ. ಇದು ಶಿವಶರಣ ಭೋಗಣ್ಣನ ಜನ್ಮಸ್ಥಳ. (ಬಿ.)

ಸುರಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಜನಸಂಖ್ಯೆ 43591. ಇದು ವ್ಯಾಪಾರ ಕೇಂದ್ರ.

ಐತಿಹಾಸಿಕ ಕಾದಂಬರಿಗಳನ್ನು ಬರೆದಿರುವ ಕರ್ನಲ್ ಮೆಡೋಸ್ ಟೇಲರನು ಈ ಪಟ್ಟಣದಲ್ಲಿ ಕಟ್ಟಿದ ಮನೆ ಟೇಲರ್ ಮಂಜಿûಲ್ ಎಂದು ಈಗಲೂ ಪ್ರಸಿದ್ಧವಾಗಿದೆ. ಸುರಪುರ ಸ್ವಲ್ಪಕಾಲ ನಿಜಾಮನ ಸೇನಾಕೇಂದ್ರವಾಗಿತ್ತು. ಇಲ್ಲಿರುವ ಗೋಪಾಲಸ್ವಾಮಿ ಗುಡಿ, ಅರಮನೆ ಮತ್ತು ಕೋಟೆ ಅವಶೇಷಗಳು ಪ್ರೇಕ್ಷಣೀಯವಾದವು. (ಎ.ಎಮ್.ಎ.)