ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುರೇಶ್, ಬೆಂಗಳೂರು ನೀಲಕಂಠನ್

ಸುರೇಶ್, ಬೆಂಗಳೂರು ನೀಲಕಂಠನ್ 1946-90. ಕರ್ನಾಟಕ ವೇಣುವಾದನ ಪ್ರಪಂಚದಲ್ಲಿ ಅಲ್ಪಕಾಲ ಬಾಳಿ ಮಹತ್ಸಾಧನೆ ಮಾಡಿ ಶಾಶ್ವತ ಪರಿಮುದ್ರೆ ಛಾಪಿಸಿ ಮರೆಯಾದ ಕೊಳಲು ಕಲಾವಿದ. ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ವೇಣುವಾದನ ಪಟು. ಇವರು ಕೇವಲ ಎಂಟು ವರ್ಷದ ಬಾಲಕನಾಗಿದ್ದಾಗ ಬೆಂಗಳೂರಿನಲ್ಲಿ ವೇಣುಗಾರುಡಿಗ ಟಿ.ಆರ್. ಮಹಾಲಿಂಗಂ (1926-86) ಅವರ ಮೋಹಕ ಶೈಲಿಗೆ ಮನಸೋತು ಕೊಳಲೇ ತನ್ನ ಮಾಧ್ಯಮವೆಂದು ನಿರ್ಧರಿಸಿದರು. ಸ್ವತಃ ಎಂಜಿನಿಯರ್ ಆಗಿದ್ದ ತಂದೆ ಬಿ. ನೀಲಕಂಠನ್ (1916-83), ತಾಯಿ ಜಯಲಕ್ಷ್ಮಿ ಇಬ್ಬರೂ ಸಂಗೀತ ಪ್ರಿಯರಾಗಿದ್ದರು. ಅನೇಕ ಸಂದರ್ಭಗಳಲ್ಲಿ ಪಿಟೀಲು ಮಾಂತ್ರಿಕ ಮೈಸೂರು ಟಿ. ಚೌಡಯ್ಯನವರಿಗೆ (1895-1967) ಆತಿಥೇಯರೂ ಆಗಿದ್ದರು. ಆಗೆಲ್ಲ ಇವರಿಗೆ ಮನೆಯಲ್ಲೇ ಸಂಗೀತದ ಔತಣ.

ಇವರ ಮೊದಲ ಗುರು ಎಂ.ಎಸ್. ಶ್ರೀನಿವಾಸಮೂರ್ತಿ. ಮುಂದೆ ಖುದ್ದು ಮಾಲಿಯವರ (ಮಹಾಲಿಂಗಂ) ನಿರ್ದೇಶನದ ಮೇರೆಗೆ ಅವರ ನಿಕಟ ಅನುವರ್ತಿ ಮಿತ್ರ ಬಿ.ಶಿವರಾಮಯ್ಯನವರ ಬಳಿ ಶಿಷ್ಯತ್ವ. ಇನ್ನು ಶಿವರಾಮಯ್ಯನವರಾದರೂ ಮಾಲಿಯವರ ಏಕಲವ್ಯ ಶಿಷ್ಯ ಮತ್ತು ಗುರುವಿನ ವಿಶ್ವಾಸಗಳಿಸಿದ್ದ ಸ್ನೇಹಿತ. ಹೀಗಾಗಿ ಮಾಲಿ ನಿರ್ಮಿಸಿದ ವಿನೂತನ ಚೌಕಟ್ಟಿನೊಳಗೆ ಸುರೇಶ್ ಅವರ ಶಿಕ್ಷಣ ಮುಂದುವರಿಯಿತು. ಈ ಚೌಕಟ್ಟಿನ ಕ್ರಾಂತಿಕಾರೀ ಸುಧಾರಣೆಗಳು ಮುಖ್ಯವಾಗಿ ಮೂರು: ಉಚ್ಚ ಶ್ರುತಿಯ ಕಡಿಮೆ ಉದ್ದದ ಕೊಳಲು, ತುತ್ತೂಕಾರ ತಂತ್ರದ ಬಳಕೆ ಮತ್ತು ಬೆರಳಾಡಿಕೆಯಲ್ಲಿ ನವಶೈಲಿ.

ದೀರ್ಘಶ್ವಾಸಬಂಧನ ಹಾಗೂ ಕಠಿಣ ಪರಿಶ್ರಮವಿದ್ದ ಹೊರತು ಉಚ್ಚ ಶ್ರುತಿಯ ಕೊಳಲಿನಲ್ಲಿ ಜೀವಭಾವನಾದೋತ್ಪತ್ತಿ ಆಗದು. ತುತ್ತೂಕಾರ ತಂತ್ರದ ಬಳಕೆಯಿಂದ ಕೊಳಲು ಅಕ್ಷರಶಃ ಕೃತಿಯ ಸಾಹಿತ್ಯವನ್ನೇ ಹಾಡುತ್ತಿರುವ ಅನುಭವ ಕೇಳುಗರಿಗಾಗುವುದು. ಬೆರಳಾಡಿಕೆಯಲ್ಲಿಯ ನಯಗಾರಿಕೆ ಮನೋಧಾರ್ಮಿಕ ಸಂಗೀತದ ಪ್ರಮುಖ ಅಂಗವಾಗಿರುವ ಜಾದೂಗಮಕಗಳ ವಿನಿಕೆಗೆ ಅತ್ಯವಶ್ಯ.

ಇಂಥ ಪ್ರತಿಭೆ ಹೊಂದಿದ್ದ ಇವರು ಅತಿ ಶೀಘ್ರವಾಗಿ ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ್ದು, ಅಂದಿನ ಮುಂಚೂಣಿ ಪಕ್ಕವಾದ್ಯಕಾರರು ಇವರಿಗೆ ಪಿಟೀಲು, ಮೃದಂಗ ಮತ್ತು ಘಟ ಸಾರಥ್ಯ ಒದಗಿಸಲು ಮುಂಬಂದರು. ಘಟವಿದ್ವಾಂಸ ಬೆಂಗಳೂರು ಕೆ.ವೆಂಕಟರಾಮ್ ಇವರಿಗೆ ಮಾರ್ಗದರ್ಶನ ನೀಡಿದರು. ಖಾಸಗಿ ಬೈಠಕ್ಕಿನಲ್ಲಿ ಇವರ ವಾದನವನ್ನು ತನ್ಮಯತೆಯಿಂದ ಆಲಿಸಿದ ಮಾಧುರ್ಯರಾಜ್ಞಿ ಎಂ.ಎಸ್.ಸುಬ್ಬುಲಕ್ಷ್ಮಿ (1916-2004) ಸಾಕ್ಷತ್ ವೇಣುಗಾನ ಲೋಲ ಶ್ರೀಕೃಷ್ಣನೇ ಎದುರಿದ್ದಂಥ ಅನುಭವ ಎಂದು ಉದ್ಗರಿಸಿದ್ದರು.

ಇವರ ಹೆಸರು ದೇಶ ವಿದೇಶಗಳಲ್ಲಿ ಕೊಳಲಿನೊಂದಿಗೆ ಸಮೀಕೃತವಾಗಿತ್ತು. 1983ರಲ್ಲಿ ಇವರು ಸ್ವಗೃಹದಲ್ಲೇ (ಬೆಂಗಳೂರು) ಅಕಸ್ಮಾತ್ತಾಗಿ ಜಾರಿಬಿದ್ದರು. ಮೂಳೆಗಳು ಮುರಿದವು. ಚಿಕಿತ್ಸಾನಂತರ ಕುರ್ಚಿಮೇಲೆ ಕುಳಿತು ಕಚೇರಿ ನೀಡುತ್ತಿದ್ದರು. ಆರೋಗ್ಯ ಕೆಡುತ್ತ ಹೋಗಿ 1990 ಅಕ್ಟೋಬರ್ 7ರಂದು ಇವರು ನಿಧನರಾದರು. ಇವರ ವೇಣುವಾದನ ಧ್ವನಿಸುರಳಿಗಳು ಜನಪ್ರಿಯವಾಗಿವೆ. *

ಸುರೈಯ: 1929-2004. ಪ್ರಸಿದ್ಧ ಹಿಂದಿ ಚಲನಚಿತ್ರ ನಟಿ. 1929 ಜೂನ್ 18ರಂದು ಲಾಹೋರಿನಲ್ಲಿ ಜನಿಸಿದಳು. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಸಿಗಲಿಲ್ಲ. ಹತ್ತನೆಯ ವಯಸ್ಸಿಗೆ ಅಭಿನಯಕ್ಕೆ ತೊಡಗಿದಳು. ಹದಿನೈದನೆಯ ವರ್ಷಕ್ಕೆ ಪ್ರಸಿದ್ಧ ತಾರೆಯಾದಳು. ಗುರು ಮುಖೇನ ಕಲಿಯದಿದ್ದರೂ ಶಾಸ್ತ್ರೀಯ ಸಂಗೀತವನ್ನು ಹಾಡಬಲ್ಲವಳಾಗಿದ್ದಳು. ಪ್ರಸಿದ್ಧಗಾಯಕ ಸೈಗಲ್‍ನ ಮಧುರ ಸ್ವರಕ್ಕೆ ಮರುಳಾಗಿದ್ದಳು. ಕಾನನ್-ಬಾಲಾ ಖುರ್ಷೀದರ ಹಾಡುಗಳೂ ಎಳವೆಯಲ್ಲಿ ಈಕೆಯ ಮನಸ್ಸಿನ ಮೇಲೆ ತುಂಬ ಪರಿಣಾಮವನ್ನುಂಟುಮಾಡಿದುವು.

ಈಕೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಈಕೆ ನಟಿಸಿದ ಮೊದಲ ಚಿತ್ರ ಮಮತಾಜ್ ಮಹಲ್ (1941). ಶಾರದಾ (1942) ಚಿತ್ರಕ್ಕೆ ಗಾಯನ ಒದಗಿಸಿದಳು. ಪಂಚೀ ಜಾ ಪೀಚೇ ರಹಾ ಬಚಪನ್ ಮೇರಾ ಎಂಬ ಗೀತೆ ಪ್ರಸಿದ್ಧಿಯಾಯಿತು. ಹಮಾರಿ ಬಾತ್ ಎಂಬ ಚಿತ್ರಕ್ಕೆ ನೃತ್ಯ ಸಂಯೋಜಿಸಿದಳು. ಇದು ಪ್ರಖ್ಯಾತಿ ಪಡೆಯಿತು. 1948-49ರಲ್ಲಿ ಈಕೆ ನಟಿಸಿದ ಪ್ಯಾರ್ ಕಿ ಜೀತ್, ಬಡೀ ಬೆಹನ್ ಮತ್ತು ದಿಲ್ಲಗಿ ಈ ಮೂರೂ ಚಿತ್ರಗಳು ಒಳ್ಳೆಯ ಹೆಸರನ್ನೂ ಹಣವನ್ನೂ ತಂದು ಕೊಟ್ಟವು; ಆ ಕಾಲಕ್ಕೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿದಳು. ಸೊಹ್ರಾಬ್ ಮೋದಿಯವರ ಮಿರ್ಜಾಗಾಲಿಬ್ ಚಿತ್ರದಲ್ಲಿ ಗಾಲಿಬ್‍ನ ಹೆಂಡತಿಯಾಗಿ ಅಮೋಘವಾಗಿ ನಟಿಸಿದ್ದಳು. ಈಕೆಯ ಅಭಿನಯವನ್ನು ಈ ಚಿತ್ರ ನೋಡಿದ ಜವಾಹರಲಾಲ್ ನೆಹರೂ ಪ್ರಶಂಸಿಸಿದ್ದರು. ಅನ್ಮೋಲ್‍ಘಡಿ ಈಕೆ ನಟಿಸಿದ ಇನ್ನೊಂದು ಪ್ರಖ್ಯಾತ ಚಿತ್ರ. 1948ರಲ್ಲಿ ಜೆ.ಕೆ. ನಂದಾ ಅವರ ಪರವಾನ ಎಂಬ ಚಿತ್ರದಲ್ಲಿ ಸೈಗಲ್‍ನೊಡನೆ ಅಭಿನಯಿಸಿದಳು. ಈ ಚಿತ್ರವೂ ಪ್ರಸಿದ್ಧಿಯಾಗಿ ಆ ಕಾಲಕ್ಕೆ ಶತದಿನೋತ್ಸವ ಆಚರಿಸಿತು. ಈಕೆಯ ಶ್ರೇಷ್ಠ ಅಭಿನಯಕ್ಕಾಗಿ ಬಂಗಾರದ ಪದಕ ನೀಡಿ ಸನ್ಮಾನಿಸಲಾಯಿತು (1950). ಸಾಹಿತ್ಯ ಕೃತಿಗಳ ಓದು, ಸಂಗೀತ, ಉಮರ್‍ಖಯ್ಯಾಮ್‍ನ ರುಬಾಯತ್ ಗಾಯನ ಈಕೆಯ ಹವ್ಯಾಸಗಳಾಗಿದ್ದುವು. ಈಕೆ 2004ರಲ್ಲಿ ಮುಂಬೈನಲ್ಲಿ ನಿಧನಳಾದಳು. *