ಸುರೈಯ 1929-2004. ಪ್ರಸಿದ್ಧ ಹಿಂದಿ ಚಲನಚಿತ್ರ ನಟಿ. 1929 ಜೂನ್ 18ರಂದು ಲಾಹೋರಿನಲ್ಲಿ ಜನಿಸಿದಳು. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಸಿಗಲಿಲ್ಲ. ಹತ್ತನೆಯ ವಯಸ್ಸಿಗೆ ಅಭಿನಯಕ್ಕೆ ತೊಡಗಿದಳು. ಹದಿನೈದನೆಯ ವರ್ಷಕ್ಕೆ ಪ್ರಸಿದ್ಧ ತಾರೆಯಾದಳು. ಗುರು ಮುಖೇನ ಕಲಿಯದಿದ್ದರೂ ಶಾಸ್ತ್ರೀಯ ಸಂಗೀತವನ್ನು ಹಾಡಬಲ್ಲವಳಾಗಿದ್ದಳು. ಪ್ರಸಿದ್ಧಗಾಯಕ ಸೈಗಲ್‍ನ ಮಧುರ ಸ್ವರಕ್ಕೆ ಮರುಳಾಗಿದ್ದಳು. ಕಾನನ್-ಬಾಲಾ ಖುರ್ಷೀದರ ಹಾಡುಗಳೂ ಎಳವೆಯಲ್ಲಿ ಈಕೆಯ ಮನಸ್ಸಿನ ಮೇಲೆ ತುಂಬ ಪರಿಣಾಮವನ್ನುಂಟುಮಾಡಿದುವು.

ಈಕೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಈಕೆ ನಟಿಸಿದ ಮೊದಲ ಚಿತ್ರ ಮಮತಾಜ್ ಮಹಲ್ (1941). ಶಾರದಾ (1942) ಚಿತ್ರಕ್ಕೆ ಗಾಯನ ಒದಗಿಸಿದಳು. ಪಂಚೀ ಜಾ ಪೀಚೇ ರಹಾ ಬಚಪನ್ ಮೇರಾ ಎಂಬ ಗೀತೆ ಪ್ರಸಿದ್ಧಿಯಾಯಿತು. ಹಮಾರಿ ಬಾತ್ ಎಂಬ ಚಿತ್ರಕ್ಕೆ ನೃತ್ಯ ಸಂಯೋಜಿಸಿದಳು. ಇದು ಪ್ರಖ್ಯಾತಿ ಪಡೆಯಿತು. 1948-49ರಲ್ಲಿ ಈಕೆ ನಟಿಸಿದ ಪ್ಯಾರ್ ಕಿ ಜೀತ್, ಬಡೀ ಬೆಹನ್ ಮತ್ತು ದಿಲ್ಲಗಿ ಈ ಮೂರೂ ಚಿತ್ರಗಳು ಒಳ್ಳೆಯ ಹೆಸರನ್ನೂ ಹಣವನ್ನೂ ತಂದು ಕೊಟ್ಟವು; ಆ ಕಾಲಕ್ಕೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿದಳು. ಸೊಹ್ರಾಬ್ ಮೋದಿಯವರ ಮಿರ್ಜಾಗಾಲಿಬ್ ಚಿತ್ರದಲ್ಲಿ ಗಾಲಿಬ್‍ನ ಹೆಂಡತಿಯಾಗಿ ಅಮೋಘವಾಗಿ ನಟಿಸಿದ್ದಳು. ಈಕೆಯ ಅಭಿನಯವನ್ನು ಈ ಚಿತ್ರ ನೋಡಿದ ಜವಾಹರಲಾಲ್ ನೆಹರೂ ಪ್ರಶಂಸಿಸಿದ್ದರು. ಅನ್ಮೋಲ್‍ಘಡಿ ಈಕೆ ನಟಿಸಿದ ಇನ್ನೊಂದು ಪ್ರಖ್ಯಾತ ಚಿತ್ರ. 1948ರಲ್ಲಿ ಜೆ.ಕೆ. ನಂದಾ ಅವರ ಪರವಾನ ಎಂಬ ಚಿತ್ರದಲ್ಲಿ ಸೈಗಲ್‍ನೊಡನೆ ಅಭಿನಯಿಸಿದಳು. ಈ ಚಿತ್ರವೂ ಪ್ರಸಿದ್ಧಿಯಾಗಿ ಆ ಕಾಲಕ್ಕೆ ಶತದಿನೋತ್ಸವ ಆಚರಿಸಿತು. ಈಕೆಯ ಶ್ರೇಷ್ಠ ಅಭಿನಯಕ್ಕಾಗಿ ಬಂಗಾರದ ಪದಕ ನೀಡಿ ಸನ್ಮಾನಿಸಲಾಯಿತು (1950). ಸಾಹಿತ್ಯ ಕೃತಿಗಳ ಓದು, ಸಂಗೀತ, ಉಮರ್‍ಖಯ್ಯಾಮ್‍ನ ರುಬಾಯತ್ ಗಾಯನ ಈಕೆಯ ಹವ್ಯಾಸಗಳಾಗಿದ್ದುವು. ಈಕೆ 2004ರಲ್ಲಿ ಮುಂಬೈನಲ್ಲಿ ನಿಧನಳಾದಳು. *