ಸೆನಫಾನ್

Xenophon

ಸು. ಕ್ರಿ.ಪೂ. 434-355. ಗ್ರೀಕ್ ಯೋಧ ಹಾಗೂ ಇತಿಹಾಸಕಾರ. ಅಥೆನ್ಸ್‍ನಲ್ಲಿ ಜನಿಸಿದ. ಸಾಕ್ರಟೀಸನ ಶಿಷ್ಯನಾದ ಈತ ಪರ್ಷಿಯದ ರಾಜಕುಮಾರ ಸೈರಸ್‍ನ ಬಳಿ ನೌಕರಿಗೆ ಸೇರಿದ. ಈತ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಸೈರಸ್ ಸಿಂಹಾಸನಕ್ಕಾಗಿ ತನ್ನ ಹಿರಿಯಣ್ಣನೊಡನೆ ನಡೆಸಿದ ಸಮರದ ವರ್ಣನೆಯನ್ನು ಅನಾಬೆಸಿಸ್ ಎಂಬ ಕೃತಿಯಲ್ಲಿ ವಿವರಿಸಿದ್ದಾನೆ. ಸ್ಪಾರ್ಟನ್ನರ ಬಗ್ಗೆ ತೋರಿದ ಸಹಾನುಭೂತಿಗಾಗಿಯೋ ಅಥವಾ ಸಾಕ್ರಟೀಸನ ಮಿತ್ರನಾದ ತಪ್ಪಿಗೋ ಈತ ದೇಶಭ್ರಷ್ಟನಾಗಬೇಕಾಯಿತು. 396ರಲ್ಲಿ ಈತ ಸ್ಪಾರ್ಟದ ಸೇನೆ ಸೇರಿದ. ಅಥೆನ್ಸ್ - ಸ್ಪಾರ್ಟ ನಡುವೆ ಪುನಃ ಮೈತ್ರಿ ಸ್ಥಾಪನೆ ಆದ ಮೇಲೆ ಈತನ ಮೇಲೆ ವಿಧಿಸಿದ್ದ ಗಡಿಪಾರು ಆಜ್ಞೆ ರದ್ದಾಯಿತು. ಈತ ತನ್ನ ಜೀವನದ ಕಡೆಯ ದಿನಗಳನ್ನು ಕಾರಿಂಥ್‍ನಲ್ಲಿ ಕಳೆದ. ಅಜಿಸಿಲಸ್ ಜೀವನ ಚರಿತ್ರೆ, ಗ್ರೀಸ್ ಚರಿತ್ರೆ (ಕ್ರಿ.ಪೂ.411 ರಿಂದ 362) ಹೆಲೆನಿಕ, ಮೆಮೋರಾ ಬಿಲಿಯ ಆಫ್ ಸಾಕ್ರಟೀಸ್, ಅಪೊಲೋಜಿಯ, ಎಕನಾಮಿಕಸ್, ಸಿಂಪೋನಿಯಮ್ - ಇವು ಈತ ರಚಿಸಿದ ಇತರ ಕೃತಿಗಳು. ಈ ಎಲ್ಲ ಕೃತಿಗಳ ಮೇಲೂ ಸಾಕ್ರಟೀಸನ ಪ್ರಭಾವ ಮೂಡಿದೆ. (ಪಿ.ಎಲ್.ಜಿ.)