ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೋಮಶೇಖರ್, ವಿ

ಸೋಮಶೇಖರ್, ವಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರುಗಳಾದ ರವೀ, ವೈ.ಆರ್.ಸ್ವಾಮಿ, ಆರ್.ರಾಮಮೂರ್ತಿ ಮತ್ತಿತರರಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ-ಪರಿಣತಿ ಪಡೆದ ವಿ.ಸೋಮಶೇಖರ್ ಎಪ್ಪತ್ತರ ದಶಕದಲ್ಲಿ ಯಶಸ್ವೀ ಚಿತ್ರಗಳ ನಿರ್ದೇಶಕರೆಂದೇ ಹೆಸರಾದವರು. ಡಾ||ರಾಜಕುಮಾರ್ ಅಭಿನಯದ ಬಂಗಾರದ ಪಂಜರ (1974) ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾದರು. ``ಪ್ರೇಮದ ಕಾಣಿಕೆ (1976) ಚಿತ್ರವನ್ನು ನಿರ್ದೇಶಿಸಿದ ಇವರು ``ಶಂಕರ್‍ಗುರು (1978) ಚಿತ್ರವನ್ನು ನಿರ್ದೇಶಿಸಿ ಭಾರೀ ಜನಪ್ರಿಯತೆಗಳಿಸಿದರು. ಇವೆರಡೂ ಚಿತ್ರಗಳಲ್ಲಿ ಡಾ||ರಾಜಕುಮಾರ್ ಅಭಿನಯಿಸಿದ್ದರು. ``ಶಂಕರ್‍ಗುರು ರಾಜ್ ಅವರ ತ್ರಿಪಾತ್ರಾಭಿನಯದ ಮೊದಲ ಚಿತ್ರ. ಹಿಂದಿನ ಎಲ್ಲಾ ದಾಖಲೆಗಳನ್ನೂ ಬದಿಗೊತ್ತಿ ಆರ್ಥಿಕವಾಗಿ ಅಪಾರ ಯಶಸ್ಸು ಗಳಿಸಿದ ಚಿತ್ರವೂ ಹೌದು. ಡಾ||ರಾಜಕುಮಾರ್ ಅವರಲ್ಲದೆ, ಅಂಬರೀಷ್, ವಿಷ್ಣುವರ್ಧನ್, ಶಂಕರನಾಗ್, ಶಶಿಕುಮಾರ್ ಹಾಗೂ ಪ್ರಭಾಕರ್ ನಾಯಕನಟರಾಗಿ ಅಭಿನಯಿಸಿದ. ಚಿತ್ರಗಳನ್ನೂ ಇವರು ನಿರ್ದೇಶಿಸಿದ್ದಾರೆ. ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಸುಮಾರು ನಲವತ್ತು.

ಕನ್ನಡದ ಇನ್ನೊಬ್ಬ ಪ್ರಸಿದ್ಧ ನಿರ್ದೇಶಕ `ಗಂಧದ ಗುಡಿ' ಖ್ಯಾತಿಯ ವಿಜಯ್‍ರೆಡ್ಡಿ ಅವರ ಪಾಲುದಾರಿಕೆಯಲ್ಲಿ ಹಲವು ಚಿತ್ರಗಳನ್ನು ಸೋಮಶೇಖರ್ ನಿರ್ಮಿಸಿದ್ದಾರೆ. ಇವರ ನಿರ್ದೇಶನದ ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ಯಶಸ್ವೀದಾಖಲೆ ಮಾಡಿವೆ. ಸದಾಶ್ವೇತವಸ್ತ್ರಧಾರಿ ಇವರ ಮನಸ್ಸು-ಹೃದಯ ಕೂಡ ಬಿಳಿಯಷ್ಟೇ ಸ್ವಚ್ಛ. ತಮ್ಮದೇ ಆದ ಚಿತ್ರೀಕರಣ ಘಟಕವನ್ನೂ ಹೊಂದಿದ್ದರಲ್ಲದೆ, ಕೆಲವೊಂದು ಅಪರೂಪದ ಪ್ರಾಪರ್ಟಿಗಳನ್ನು ಸಂಗ್ರಹಿಸಿಟ್ಟಿದ್ದು, ಇತರರಿಗೆ ಬಾಡಿಗೆಗೆ ನೀಡುವ ಮೂಲಕ ಆ ವಸ್ತುಗಳಿಗೆ ಒಳ್ಳೆಯ ಬೇಡಿಕೆಯನ್ನೂ ಹೊಂದಿದ್ದರು. ಸಿನಿಮಾರಂಗದಲ್ಲಿ ವಿ.ಸೋಮಶೇಖರ್ ಹಾಗೂ ವಿಜಯ್ ಇಬ್ಬರೂ ಯಶಸ್ವೀ ನಿರ್ದೇಶಕರೆಂದೇ ಹೆಸರಾದವರು.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ವಿ.ಸೋಮಶೇಖರ್ ಸಲ್ಲಿಸಿರುವ ಸೇವೆಗಾಗಿ ಇವರಿಗೆ ರಾಜ್ಯಸರ್ಕಾರವು 1999-2000ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. (ಶ್ರೀಕೃಪಾ)