ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೀರಾಲ್ಗಳು

ಸ್ಟೀರಾಲ್‍ಗಳು ಸ್ಟೀರಾಯ್ಡ್ ಗುಂಪಿನ ಪದಾರ್ಥಗಳಿಂದ ನಿಷ್ಪತ್ತಿಸಲಾದ ಲಿಪಿಡ್‍ಗಳು. ಮಾನವ ದೇಹದಲ್ಲಿ ಉತ್ಪಾದನೆ ಗೊಳ್ಳುತ್ತವೆ. ಇವುಗಳಲ್ಲಿ ಆಲ್ಕೊಹಾಲಿನ ಒಂದು ರೂಪ ಉಂಟು. ನೆಣದಂತೆ ಕರಗುತ್ತವೆ. ಕೊಲೆಸ್ಟೀರಾಲ್ ಮತ್ತು ಎರ್ಗೊಸ್ಟೀರಾಲ್ ಉದಾಹರಣೆಗಳು.

ಕೊಲೆಸ್ಟೀರಾಲ್: ಪಿತ್ತಾಮ್ಲಗಳ ಪೂರ್ವಗಾಮಿ ರಾಸಾಯನಿಕ. ದೇಹಕೋಶಗಳ ಭಿತ್ತಿ ರಚನೆಗೆ ಅಗತ್ಯ ಮೂಲವಸ್ತು. ಯಕೃತ್ತಿನಲ್ಲಿ ಇದರ ಉತ್ಪಾದನೆಯಾಗಿ ದುಗ್ಧರಸದ ಮೂಲಕ ರಕ್ತ ಸೇರಿ ದೇಹದ ವಿವಿಧ ಭಾಗಗಳಿಗೆ ಪೂರೈಕೆಗೊಳ್ಳುತ್ತದೆ. ಕೊಲೆಸ್ಟೀರಾಲ್ — ಅಭಾವದಲ್ಲಿ ಕೋಶನಿರ್ಮಾಣ ಸ್ಥಗಿತಗೊಳ್ಳುವುದು. ಕೊಲೆಸ್ಟೀರಾಲ್ ರಕ್ತದಲ್ಲಿಯ ಲೈಪೊಪ್ರೋಟೀನ್ ಸೇರಿ ಪಿತ್ತಕೋಶದಲ್ಲಿ ಹರಳುಗಟ್ಟ ಬಹುದು. ಕೊಲೆಸ್ಟೀರಾಲನ್ನು ಎಮಲ್ಸೀಕರಣ ಪದಾರ್ಥದಂತೆಯೂ ಬಳಸುತ್ತಾರೆ. ದೇಹದಲ್ಲಿಯ ಕೆಲವು ಕಿಣ್ವಗಳನ್ನು ಉದ್ರೇಕಿಸಿ ಮತ್ತು ಕೆಲವು ಬಗೆಯ ವಿಶಿಷ್ಟ ಆಹಾರಗಳನ್ನು ಸೇವಿಸಿ ಕೊಲೆಸ್ಟೀರಾಲ್-ಉತ್ಪಾದನೆಯನ್ನು ತ್ವರೆಗೊಳಿಸಬಹುದು. ಉತ್ಪಾದನೆಗೊಂಡ ಕೊಲೆಸ್ಟೀರಾಲಿನ ಸೇ. 93 ಅಂಶ ಅಪಧಮನಿಭಿತ್ತಿಯಲ್ಲಿ ಹದಿಗಟ್ಟಿ ಅಪಧಮನಿಪೆಡಸಣೆ (ಅಥಿರೊಸ್ಕ್ಲಿರೋಸಿಸ್) ಎಂಬ ಬೇನೆಗೆ ಕಾರಣವಾಗ ಬಹುದು. ಪರಿಣಾಮವಾಗಿ ರಕ್ತಸಂಚಾರ ಮಂದವಾಗುತ್ತದೆ, ವ್ಯಕ್ತಿ ಹೃದಯಾಘಾತ, ಮಿದುಳು ಸ್ತಂಭನ, ಲಕ್ವ ಹೊಡೆತ ಮುಂತಾದ ಮಾರಕ ಸನ್ನಿವೇಶಗಳಿಗೆ ಈಡಾಗುತ್ತಾನೆ. ಜೀನ್‍ಗಳ ಮೇಲೆಯೂ ಕೊಲೆಸ್ಟೀರಾಲ್-ಆಧಿಕ ಪರಿಣಾಮ ಬೀರುವುದು ವಿರಳವಲ್ಲ.

ಎರ್ಗೊಸ್ಟೀರಾಲ್: ಸ್ಫಟಿಕರೂಪದ, ನೀರಿನಲ್ಲಿ ವಿಲೀನವಾಗದ ಅಪರ್ಯಾಪ್ತ ಸ್ಟೀರಾಲ್ . ಇದನ್ನು ಎಲೆಕ್ಟ್ರಾನ್‍ಗಳಿಂದ ಕ್ರಿಯಾಶೀಲವಾಗಿಸಿ ಅಥವಾ ಅತಿನೇರಿಳೆ ಕಿರಣಗಳಿಂದ ಬೆಳಗಿಸಿ (ಆ2) ಜೀವಸತ್ತ್ವವಾಗಿ ಪರಿವರ್ತಿಸಬಹುದು.

(ಎಸ್.ಕೆ.ಎಚ್.)