ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೀಲ್, ಸರ್ ರಿಚರ್ಡ್

ಸ್ಟೀಲ್, ಸರ್ ರಿಚರ್ಡ್ 1672-1729. ಐರಿಷ್ ಮೂಲದ ಇಂಗ್ಲಿಷ್ ಪ್ರಬಂಧಕಾರ, ನಾಟಕಕಾರ. ಡಬ್ಲಿನ್‍ನಲ್ಲಿ ಜನಿಸಿದ ಈತ ಐದನೆಯ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡ. 1684ರಲ್ಲಿ ಲಂಡನ್ನಿನ ಚಾರ್ಟರ್ ಹೌಸ್ ಸ್ಕೂಲಿನಲ್ಲಿ ಆರಂಭದ ವಿದ್ಯಾಭ್ಯಾಸ ಪಡೆದ. ಇಲ್ಲಿ ಇವನಿಗೆ ಸಹಪಾಠಿಯಾಗಿದ್ದ ಜೋಸೆಫ್ ಎಡಿಸನ್ನನ ಗೆಳೆತನವಾಯಿತು. ಮುಂದೆ ಈ ಸ್ನೇಹ ಸ್ಟೀಲ್‍ನ ಬದುಕಿನಲ್ಲಿ ಬಹುಕಾಲ ಉಳಿದುಬಂತು. ಆಕ್ಸ್‍ಫರ್ಡ್‍ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವಾಗ ಸೈನ್ಯವನ್ನು ಸೇರಿದ. 1709-11 ಅವಧಿಯಲ್ಲಿ ಟ್ಯಾಟ್ಲರ್ ಎಂಬ ಪತ್ರಿಕೆಯನ್ನೂ 1711-12 ಅವಧಿಯಲ್ಲಿ ಸ್ಪೆಕ್ಟೇಟರ್ ಎಂಬ ಪತ್ರಿಕೆಯನ್ನೂ ನಡೆಸಿದ. ಸ್ವಲ್ಪಕಾಲ ಪಾರ್ಲಿಮೆಂಟಿನ ಸದಸ್ಯನಾಗಿದ್ದ. 1715ರಲ್ಲಿ ಇವನಿಗೆ ನೈಟ್ ಪದವಿ ನೀಡಿ ಗೌರವಿಸಲಾಯಿತು. ಮಾರ್ದವ, ನಯ, ಪಕೃತಿದತ್ತ ಸದ್ಗುಣಪ್ರೇಮ ಇವನ ವಿಶೇಷ ಗುಣಗಳು. ಟ್ಯಾಟ್ಲರ್ ಕ್ಲಬ್, ಸ್ಪೆಕ್ಟೇಟರ್ ಕ್ಲಬ್ ಎರಡನ್ನೂ ಸೃಷ್ಟಿಸಿದವನು. ಬಿಕರ್‍ಸ್ಟಾಫ್, ಜೆನಿ ಡಿಸ್ಟಾಫ್, ಸರ್ ರೋಜರ್ ಮೊದಲಾದ ಪಾತ್ರಗಳನ್ನು ಸೃಷ್ಟಿಸಿದವನು ಈತನಾದರೂ ಇದಕ್ಕೆ ಪೂರ್ಣರೂಪ ಕೊಟ್ಟವನು ಎಡಿಸನ್. ಸ್ಟೀಲನದು ಭಾವನಾಪ್ರಧಾನ ವ್ಯಕ್ತಿತ್ವ; ಮಾನವ ಸ್ವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳ ಬಲ್ಲವನಾಗಿದ್ದ. ಒಂದು ಸನ್ನಿವೇಶವನ್ನು ಹೃದಯಸ್ಪರ್ಶಿಯಾಗುವಂತೆ ಚಿತ್ರಿಸುವ ಕಲೆಗಾರಿಕೆ ಈತನಿಗೆ ಸಿದ್ಧಸಿತ್ತು.

ಈತ ದಿ ಫ್ಯೂನರಲ್ (1701), ದಿ ಲೈಯಿಂಗ್ ಲವರ್ಸ್ (1703), ದಿ ಟೆಂಡರ್ ಹಸ್ಬೆಂಡ್ (1705), ದಿ ಕಾನ್‍ಷಿಯಸ್ ಲವರ್ಸ್ (1722) ಎಂಬ ನಾಲ್ಕು ನಗೆನಾಟಕಗಳನ್ನು ಬರೆದಿದ್ದಾನೆ. ಇವುಗಳಲ್ಲಿ ದಿ ಫ್ಯೂನರಲ್ ಎಂಬ ನಾಟಕ ಅಪಾರ ಜನಪ್ರಿಯತೆ ಗಳಿಸಿತ್ತು. (ಎಲ್.ಎಸ್.ಎಸ್.)