ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೀವನ್ಸ್‌, ವ್ಯಾಲೇಸ್

ಸ್ಟೀವನ್ಸ್, ವ್ಯಾಲೇಸ್ 1879-1955. ಅಮೆರಿಕದ ಕವಿ. ಈತ ಕಾನೂನು ವ್ಯಾಸಂಗ ಮಾಡಿ ಕೆಲಕಾಲ ವಕೀಲಿ ವೃತ್ತಿ ನಿರ್ವಹಿಸುತ್ತಿದ್ದು ತನ್ನ ನಲವತ್ತನೆಯ ವಯಸ್ಸಿನಲ್ಲಿ ಕಾವ್ಯ ರಚನೆಗೆ ತೊಡಗಿದ. ಆರಂಭದ ಕೆಲವು ಕವನಗಳು ಪೊಯಿಟ್ರಿ ಎಂಬ ಪತ್ರಿಕೆಯಲ್ಲಿ ಪ್ರಕಟವಾದುವು (1914-15). ಇವನ ಪ್ರಥಮ ಕವನಸಂಕಲನ ಹಾರ್‍ಮೋನಿಯಮ್ 1923ರಲ್ಲಿ ಪ್ರಕಟವಾಯಿತು. ಐಡಿಯಾಸ್ ಆಫ್ ಆರ್ಡರ್ (1935), ದಿ ಮ್ಯಾನ್ ವಿತ್ ದಿ ಬ್ಲೂ ಗಿಟಾರ್ (1937), ಆರೋರ್ಸ್ ಆಫ್ ಅಟಮನ್ (1950)-ಇವು ಮುಖ್ಯ ಕವನ ಸಂಗ್ರಹಗಳು. ದಿ ನೆಸೆಸರಿ ಏಂಜಲ್ (1951) ಎಂಬುದು ವಿಮರ್ಶಾ ಲೇಖನಗಳ ಸಂಗ್ರಹ. ಇವನ ಆಯ್ದ ಕವನಗಳ ಸಂಗ್ರಹ ಕಲೆಕ್ಟೆಡ್ ಪೊಯಮ್ಸ್ 1954ರಲ್ಲಿ ಪ್ರಕಟವಾಯಿತು. 1955ರಲ್ಲಿ ಇದಕ್ಕೆ ಪುಲಿಟ್ಜರ್ ಬಹುಮಾನ ಲಭಿಸಿತು.

ತೋರಿಕೆ ಮತ್ತು ವಾಸ್ತವಿಕತೆಗಳ ಪರಸ್ಪರ ಪ್ರಭಾವ, ಜೀವನದಲ್ಲಿ ಓರಣವನ್ನು ಮೂಡಿಸುವುದರಲ್ಲಿ ವಿಭಾವದ ಪಾತ್ರ ಮತ್ತು ಬಾಳಿನಲ್ಲಿ ಇಂದ್ರಿಯಗಳು ಅನುಭವಿಸುವ ಸುಖದ ಪ್ರಾಮುಖ್ಯ - ಇವು ಈತನ ಕಾವ್ಯದ ಮುಖ್ಯ ವಸ್ತುಗಳು. ಇವನ ತಂತ್ರದಲ್ಲಿ ಫ್ರೆಂಚ್ ಪ್ರತೀಕ ತತ್ವಪಂಥದವರ ಪ್ರಬಲ ಪ್ರಭಾವ ಕಂಡುಬರುತ್ತದೆ; ಅವರಂತೆ ಉಜ್ವಲ ಚಾಕ್ಷುಷ ಪರಿಣಾಮಗಳನ್ನೂ ವಿವಿಧ ಇಂದ್ರಿಯಗಳ ಮೇಲಾದ ಪ್ರಭಾವಗಳ ಸಂಮಿಶ್ರಣವನ್ನೂ ಬಳಸುತ್ತಾನೆ. ತರ್ಕದ ನಿರ್ಲಕ್ಷ್ಯ, ವಿಲಕ್ಷಣ ಪ್ರತಿಮೆಗಳು, ಜಟಿಲ ಪ್ರತೀಕ ತತ್ತ್ವ ಮತ್ತು ತಾಂತ್ರಿಕ ಜಟಿಲತೆಗಳಿಂದ ಇವನ ಕಾವ್ಯ ಅತಿಕ್ಲಿಷ್ಟ ಎಂಬ ಆಪಾದನೆಗೆ ಗುರಿಯಾಗಿದೆ. (ಎಮ್.ಕೆ.ಎನ್.)