ಸ್ಟೆಂಟ್ - ಕಿರೀಟಕ ಧಮನಿ ಸುರೂಪಿಕ ಚಿಕಿತ್ಸೆ ಅನೇಕ ಕಿರೀಟಕ ಧಮನಿ ರೋಗಿಗಳಲ್ಲಿ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದೆ. ಆದರೂ ಕೆಲವೊಮ್ಮೆ ಈ ಚಿಕಿತ್ಸೆಯನ್ನು ಕೈಗೊಂಡ ನಂತರ ಕೂಡಲೇ ಧಮನಿಯಲ್ಲಿ ತಡೆಯುಂಟಾಗಬಹುದು ಇಲ್ಲವೆ ಕಾಲಾಂತರದಲ್ಲಿ ಮತ್ತೆ ರಕ್ತಪ್ರವಾಹಕ್ಕೆ ಅಡ್ಡಿಯಾಗುವಂತೆ ಧಮನಿಯ ಒಳವ್ಯಾಸ ಕಿರಿದಾಗಬಹುದು. ಇಂತಹ ಸನ್ನಿವೇಶದಲ್ಲಿ ಪಕಳೆಯನ್ನು ತೆಗೆದು ಹಾಕುವ ಇಲ್ಲವೆ ಬೆಸೆಯುವ ವಿಧಾನಗಳಿಗಿಂತ ಧಮನಿಗೆ ಒಳಗಿನಿಂದ ಆಧಾರನೀಡಿ ಅದರ ಮಾರ್ಗ ತೆರೆದಿರುವಂತೆ ಮಾಡುವ ವಿಧಾನ (ಸ್ಟೆಂಟ್ ಅಳವಡಿಕೆ)ಕ್ಕೆ ಹೆಚ್ಚು ಪ್ರಾಶಸ್ತ್ಯ ದೊರಕಿದೆ.

ಧಮನಿಗೆ ಆಧಾರವೆಂದರೆ ಧಮನಿಯಲ್ಲಿ ರಕ್ತವನ್ನು ಕೇಂಕೇಯ್ಯುವ ತನ್ನ ಕಾರ್ಯವನ್ನು ಸರಾಗವಾಗಿ ಜರುಗುವಂತೆ ಅದರ ಒಳಭಾಗದಲ್ಲಿ ಆಧಾರದ ಬೆಂಬಳಿಕ (ಸ್ಟೆಂಟ್)ಯನ್ನು ನೀಡುವುದಾಗಿದೆ.

ಕಿರೀಟದ ಧಮನಿಗೆ ಆಧಾರ ನೀಡುವ ಸ್ಟೆಂಟನ್ನು ಕೊಡಲೇ ಅದರೊಳಗಿನ ಅಡ್ಡಿಯ ಪ್ರದೇಶದೊಳಕ್ಕೆ ಸರಿಯಾಗಿ ಸೇರಿಕೊಳ್ಳುವ ರೀತಿಯಲ್ಲಿ ರೂಪಿಸಲಾಗಿದೆ. ಅದಕ್ಕೆ ಬಳಸುವ ವಸ್ತು ಮತ್ತು ಆಕೃತಿ ಮಣಿಯುವಂತಿದ್ದು ಅದನ್ನು ಬಲೂನಿನ ಸಹಾಯದಿಂದ ಹಿಗ್ಗಿಸಬಹುದಾಗಿದೆ. ಹಾಗೆ ಮಾಡಿದಾಗ ಆ ಸಾಧನ ಕಿರೀಟಕ ಧಮನಿಯ ಆಕೃತಿ ಮತ್ತು ವಕ್ರತೆಗೆ ಹೊಂದಿಕೊಳ್ಳುತ್ತದೆ. ಸೀಳಿಕೊಂಡ ಕಿರೀಟಕ ಧಮನಿಗೆ ಆಧಾರ ನೀಡುವ ವಸ್ತು ರಕ್ತಕರಣೆಗೆ ಹೆಚ್ಚಾಗಿ ಆಪ್ಸರವೀಯದ ತುಕ್ಕು ಹಿಡಿಯದ ಉಕ್ಕಿನ ಕೊಳವೆ ತಂತಿಯ ಅಥವ ಟಾಂಟಲಮ್ ಎಳೆಗಳ ಬಲೆಯಾಗಿದೆ. ಉಕ್ಕಿನ ತಂತಿ 1. ಶೇ ಮಿ. ಮೀ ಉದ್ದ 1.6 ಮಿ.ಮೀ. ಸುತ್ತಳತೆ ಮತ್ತು 0.4 ಮಿ.ಮೀ.ದಪ್ಪವಾಗಿರುತ್ತದೆ. ಈ ವಿಜಾತಿಯ ವಸ್ತುಗಳು ದೇಹದ ಊತಕಕ್ಕೆ ಒಗ್ಗಬೇಕು. ಅದರಲ್ಲಿ ಬಳಸುವ ಲೋಹ ತುಂಬ ಪರಿಶುದ್ಧವಾಗಿ, ನಯವಾಗಿ ತಿಕ್ಕಲ್ಪಟ್ಟ ಮೇಲ್ಮೈ ಹೊಂದಿರಬೇಕು. ಅದು ಮಣಿಯುವಂತಿರಬೇಕು. ಭದ್ರವಾಗಿ ನೆಲೆಯೂರುವಂತಿರಬೇಕು, ಮತ್ತು ಎಕ್ಸ್-ಕಿರಣಗಳಿಗೆ ಕಾಣಿಸುವಂತಿರಬೇಕು.

ಕಿರೀಟಕ ಧಮನಿಯ ಆಧಾರ ಸಾಧನವಾಗ ಸ್ಟೆಂಟನ್ನು ಬಲೂನು ತುದಿ ಹೊಂದಿದ ತೂರ್ನಳಿಗೆಯಲ್ಲಿ ಇರಿಸಿ ಅದನ್ನು ಚರ್ಮದ ಮೂಲಕ ಕಿರೀಟಕಧಮನಿಯೊಳಕ್ಕೆ ಸಾಗಿಸಿ ಅಡ್ಡಿಯಿರುವ ನಿರ್ದಿಷ್ಟ ತಾಣವನ್ನು ತಲುಪಬೇಕು. ಆಗ ಬಲೂನನ್ನು ನಿಧಾನವಾಗಿ ಉಬ್ಬುವಂತೆ ಮಾಡಿದರೆ ಮಣಿದ ತಂತಿಯ ಬಲೆಯು ಹಿಗ್ಗುವುದು. ನಂತರ ಬಲೂನನ್ನು ಕುಗ್ಗಿಸಿ ತೂರ್ನಳಿಗೆಯನ್ನು ಹೊರ ತೆಗೆಯಬೇಕು. ಅಗಲಗೊಂಡ ಬಲೆಯ ಆಧಾರ ಕಿರೀಟಕಧಮನಿಯೊಳಗೆ ಉಳಿಯುವುದು. ಅದು ಸೇರಿಸಲ್ಪಟ್ಟ ಕೆಲವು ಗಂಟೆಗಳಲ್ಲಿ ಕಿರುಫಲಕಗಳು ಮತ್ತು ಕರಣೆ ವಸ್ತುವಿನ ತೆಳು ಪದರು ಅದರ ಮೇಲೆ ಹರಡುವುದು. ಒಂದೆರಡು ವಾರಗಳಲ್ಲಿ ಅಲ್ಲಿ ಧಮನಿಯ ಒಳಪದರು ಬೆಳೆಯುವುದು.

ಈ ವಿಧಾನವನ್ನು ಚರ್ಮದ ಮೂಲದ ಧಮನಿಯೊಳಗಿನಿಂದ ಕಿರೀಟಕಧಮನಿಯ ಸುರೂಪಿಕ ಚಿಕಿತ್ಸೆಯ (ಆಂಜಿಯೋಪ್ಲಾಸ್ಟಿ)ಯನ್ನು ಮಾಡಿಸಿಕೊಂಡ ವ್ಯಕ್ತಿಯಲ್ಲಿ ಕೂಡಲೇ ರಕ್ತನಾಳ ಕುಗ್ಗಿ ಹೋಗಿ ರಕ್ತಪರಿಚಲನೆಗೆ ಭಂಗವನ್ನುಂಟು ಮಾಡಿದ ಸನ್ನಿವೇಶದಲ್ಲಿ ಬಳಸಲು ಪುರಸ್ಕಾರವಿದೆ. ಅಲ್ಲಿ ಕಿರೀಟಕ ಧಮನಿಯ ಗಾತ್ರ ಕನಿಷ್ಟ 3 ಮಿಲಿಮೀಟರ್‍ನಷ್ಟಾದರೂ ಇರಬೇಕು. ಶಿರೆಯನಾಟ ಮಾಡಿದ ನಂತರ ಕಿರೀಟಕ ಧಮನಿಯ ರಕ್ತಪೂರೈಕೆ ಅಸಮರ್ಪಕವಾದ ಕೆಲವು ಸನ್ನಿವೇಶಗಳಲ್ಲೂ ಈ ವಿಧಾನವನ್ನು ಅನುಸರಿಸಲಾಗುವುದು.

ಕಿರೀಟಕ ಧಮನಿಗೆ ಆಧಾರ ಒದಗಿಸುವ ಸ್ಟೆಂಟನ್ನು ಸರಿಯಾಗಿ ಆಯ್ದ ವ್ಯಕ್ತಿಗಳಲ್ಲಿ ಸಮರ್ಪಕವಾಗಿ ಕೈಗೊಂಡರೆ ಅದು ಮತ್ತೆ ಮುಚ್ಚಿಕೊಳ್ಳುವ ಪ್ರಮೇಯವನ್ನು ತಪ್ಪಿಸಿಲ್ಲ. ಕೆಲವೊಮ್ಮೆ ರಕ್ತಕರಣೆಯಿಂದ ಅಡ್ಡಿ, ಕಿರೀಟಕ ಧಮನಿಯ ಸಂಕೋಚನ, ಕಿರೀಟಕಧಮನಿಯ ರಂಧ್ರಗೊಳಿಕೆ ಮತ್ತು ರಕ್ತೋದ್ರೇಕದಂತಹ ಅಡ್ಡ ಪರಿಣಾಮಗಳು ಗೋಚರಿಸಬಹುದು.

ಈ ವಿಧಾನದಿಂದ ಆಂಜಿಯೋಪ್ಲಾಸ್ಟಿ ನಂತರ ಉಂಟಾಗಬಹುದಾದ ಮರು ಅಡ್ಡಿಯ ಸಂಭಾವ್ಯವನ್ನು ಕಡಿಮೆ ಮಾಡಿಲ್ಲವಾದರೂ ತುರ್ತಾಗಿ ಕಿರೀಟಕ ಧಮನಿಯ ಬದಲಿ ಹಾದಿಯ ನಾಡಿ ಶಸ್ತ್ರ ಚಿಕಿತ್ಸೆಯ ತುರ್ತಾಗಿ ಕಿರೀಟಕ ಧಮನಿಯ ಬದಲಿ ಹಾದಿಯ ನಾಡಿ ಶಸ್ತ್ರ ಚಿಕಿತ್ಸೆಯ ಸಂಭಾವ್ಯವನ್ನು ಕಡಿಮೆಮಾಡಿದೆ. ಸ್ಟೆಂಟ್ ವಿಧಾನವನ್ನು ಬೈಪಾಸ್ ನಾಡಿಯಲ್ಲಿನ ಧಮನಿ ಪೆಕಸಣೆಯ ಚಿಕಿತ್ಸೆಯಲ್ಲಿ ಬಳಸಬಹುದು.

ಸ್ಟೆಂಟ್ ಇರಿಸಿದ ಮೇಲೂ ಪುನಃ ಧಮನಿ ಕಿರಿದುಗೊಂಡಲ್ಲಿ ಕಿರೀಟಕ ಧಮನಿಯೊಳಕ್ಕೆ ಬೀಟಾ-ವಿಕಿರಣತೆ (ಬ್ರಾಣ್‍ಥಿರಾತಿ)ಯನ್ನು ನೀಡಿ ಚಿಕಿತ್ಸೆಗೊಳಪಡಿಸಬಹುದು. ಸ್ಧಳಿಕವಾಗಿ ಔಷಧಿಗಳನ್ನು ಹೊರಸೂಸುವ (ಎಲ್ಸೂಟ್) ಸ್ಟೆಂಟ್‍ಗಳು ಈಚೆಗೆ ಬಳಕೆಗೆ ಬಂದಿವೆ. ಅವುಗಳ ಜೊತೆ ಸೇರಿಸಿದ ಔಷಧಗಳು (ಟ್ರಾಕೊಲಿಮಸ್, ಸಿರೋಲಿಮಸ್, ಪಾಕ್ಲಿಬಾಕ್ಸೆಲ್) ಸ್ಟೆಂಟಿನಿಂದ ಹೊರಸೂಸಿ ಪ್ರತಿರೋಧವನ್ನು ದಮನ ಮಾಡುತ್ತವೆ ಮತ್ತು ಕೋಶವೃದ್ಧಿಯಾಗಿ ಬೆಳೆಯುವುದನ್ನು ತಪ್ಪಿಸುತ್ತದೆ. ಅದರ ಫಲವಾಗಿ ಕಿರೀಟಕ ಧಮನಿ ಪುನಃ ಕಿರಿದುಗೊಳ್ಳವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು. (ಪಿ.ಎಸ್.ಎಸ್)