ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೆತೊಸ್ಕೋಪ್

ಸ್ಟೆತೊಸ್ಕೋಪ್ - ಹೃದಯ, ಶ್ವಾಸಕೋಶಗಳು, ಜಠರ, ಕರುಳು, ರಕ್ತನಾಳಗಳು ಮುಂತಾದ ಆಂತರಿಕ ಅಂಗಗಳ ತುಡಿತ ಅಥವಾ ಮಿಡಿತದ ದನಿ ಆಲಿಸಿ ರೋಗನಿದಾನಿಸಲು ಬಳಸುವ ಉಪಕರಣ (ಆಕರ್ಣಕ). ಫ್ರೆಂಚ್ ವೈದ್ಯ ರೀನೆ ಥಿಯೋಫಿಲೆ ಹಯಸಿಂಥೇ ಲೆನೆಕ್ (1781-1826) ಇದರ ನಿರ್ಮಾತೃ (1816). ಆ ಮೊದಲು ವೈದ್ಯರು ತಮ್ಮ ಒಂದು ಕಿವಿಯನ್ನು ಎದೆಗೆ ಆನಿಸಿ ಗುಂಡಿಗೆ ಬಡಿತ ಆಲಿಸುತ್ತಿದ್ದರು. ಲೆನೆಕ್ ಬಳಿ ಕ್ಷಯರೋಗಗ್ರಸ್ತೆಯೊಬ್ಬಳು ಚಿಕಿತ್ಸೆ ಪಡೆಯಲು ಬಂದಾಗ ಆತ ಮಾಮೂಲೀ ಪರೀಕ್ಷೆ ಮಾಡಲು ಹಿಂಜರಿದ. ಆಗ ಅವನಿಗೊಂದು ಸಂಗತಿ ಸ್ಫುರಿಸಿತು: ಘನವಸ್ತುವಿನ ಒಂದು ಕೊನೆಯಲ್ಲಿ ಕುಟ್ಟಿದ ಪೆಟ್ಟಿನ ಅನುನಾದ ಅದರ ಮೂಲಕ ಹರಿದು ಇನ್ನೊಂದು ಕೊನೆಯಲ್ಲಿ ನಿನಾದಿಸುತ್ತದೆ! ತತ್‍ಕ್ಷಣ ಈತ ದಪ್ಪ ಕಾಗದದ ಟೊಳ್ಳು ಕೊಳವೆ ರಚಿಸಿ ಒಂದು ತುದಿಯನ್ನು ಆಕೆಯ ಎದೆ ಮೇಲಿಟ್ಟು ಇನ್ನೊಂದು ತುದಿಗೆ ಕಿವಿ ಕೊಟ್ಟ. ಗುಂಡಿಗೆ ಮಿಡಿತ, ಧ್ವನಿವರ್ಧಕದ ಮೂಲಕ ಬರುತ್ತಿದೆಯೋ ಎಂಬಂತೆ, ಸ್ಫುಟವಾಗಿ ಕೇಳಿಸಿತು. ಹೀಗೆ ಆರಂಭವಾಯಿತು ಒಂಟಿ ಕಿವಿ ಆಕರ್ಣಕ. ಇದಕ್ಕೆ ಲೆನೆಕ್ ಕಿವಿ ಎಂಬ ಹೆಸರು ರೂಢಿಗೆ ಬಂತು. ಮುಂದೆ ಪಿಯರೆ ಅಡಾಲ್ಫೆ ಪಿಯೋರಿ (1794-1898) ಎಂಬಾತ ಪ್ಲೆಕ್ಸಿಮೀಟರ್ ಎಂಬ ಬಿಡಿಭಾಗವನ್ನು ಆಕರ್ಣಕಕ್ಕೆ ಜೋಡಿಸಿ (1828) ಅದರಲ್ಲಿ ಸುಧಾರಣೆ ತಂದ. ಎರಡು ಕಿವಿಗಳಿಂದಲೂ ಆಲಿಸಲು ಅನುಕೂಲವಾಗುವಂಥ (ಅಂದರೆ ಆಧುನಿಕ ಸ್ಟೆತೊಸ್ಕೋಪಿನ ಆರಂಭ ರೂಪ) ಉಭಯಕರ್ಣಆಕರ್ಣಕವನ್ನು 1850ರಲ್ಲಿ ರಚಿಸಲಾಯಿತು. ಆಧುನಿಕ ಮಾದರಿಯ ರಬ್ಬರ್ ನಾಳಯುತ ಉಭಯಕರ್ಣಆಕರ್ಣಕ 1894ರಲ್ಲಿ ಬಳಕೆಗೆ ಬಂದಿತು. 1900ರಲ್ಲಿ ಕಾರ್ಡಿಯೊಫೋನ್ ಎಂಬ ಅಧಿಕ ಉಪಯುಕ್ತ ವಿದ್ಯದುಪಕರಣವನ್ನು ನಿರ್ಮಿಸಲಾಯಿತು. (ಎಸ್.ಕೆ.ಎಚ್.)