ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೆಫಿ ಗ್ರಾಫ್

ಸ್ಟೆಫಿ ಗ್ರಾಫ್ 1969-. ಪ್ರಪಂಚ ಪ್ರಸಿದ್ಧ ಜರ್ಮನ್ ಟೆನಿಸ್ ಆಟಗಾರ್ತಿ. ಪಶ್ಚಿಮ ಜರ್ಮನಿಯ ಮ್ಯಾನ್‍ಹೈಮ್ ಎಂಬಲ್ಲಿ 1969 ಜೂನ್ 14ರಂದು ಜನಿಸಿದಳು. ತಂದೆ ಪೀಟರ್ ಮತ್ತು ತಾಯಿ ಹೈಡಿ ಗ್ರಾಫ್. ತಂದೆ ರಾಷ್ಟ್ರಮಟ್ಟದ ಟೆನಿಸ್ ಆಟಗಾರ. ಈಕೆಗೆ 3ನೆಯ ವಯಸ್ಸಿಗೆ ಟೆನಿಸ್ ಆಡುವ ಹುರುಪು. 6ನೆಯ ವಯಸ್ಸಿಗೆ ಜೂನಿಯರ್ ಟೂರ್ನಮೆಂಟ್ ಗೆದ್ದಳು. ಜರ್ಮನ್ ಟೆನಿಸ್ ಫೆಡರೇಷನ್‍ನ ಕೋಚ್ ಆಗಿದ್ದ ಬೋರಿಸ್ ಬ್ರೆಸ್ಕವರ್ ಅವರಲ್ಲಿ ತರಬೇತಿ ಪಡೆದಳು. ಶಾಲೆಯನ್ನು ಬಿಟ್ಟು ಆಟಕ್ಕೆ ಪೂರ್ಣಾವಧಿ ಸೇರ್ಪಡೆ ಗೊಂಡಳು (1982). ಅದೇ ವರ್ಷ ಅಂತಾರಾಷ್ಟ್ರೀಯ ರ್ಯಾಂಕಿಂಗ್ ಪಡೆದ ಅತಿಕಿರಿಯರಲ್ಲಿ ಎರಡನೆಯವಳಾಗಿದ್ದಳು. ಜರ್ಮನ್ ಜೂನಿಯರ್ 18 ಚಾಂಪಿಯನ್ ಪಂದ್ಯಗಳಲ್ಲಿ, ಯುರೋಪಿಯನ್ ಜೂನಿಯರ್ ಚಾಂಪಿಯನ್ ಪಂದ್ಯಗಳಲ್ಲಿ ಗೆದ್ದಳು. ಕೇವಲ 13ವರ್ಷಕ್ಕೆ ವೃತ್ತಿಪರ ಟೆನಿಸ್ ಆಟಗಾರಳಾದ ಇವಳನ್ನು ಬಾಲ್‍ಗರ್ಲ್ ಎಂದು ಹಾಸ್ಯ ಮಾಡುತ್ತಿದ್ದರು. ಅನಂತರ ಸಮ್ಮರ್ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ಪಡೆದಳು (1984). ತರುವಾಯ ಮೊದಲ 10 ರ್ಯಾಂಕ್‍ಗಳಲ್ಲಿ ಸೇರ್ಪಡೆ (1985). 1986ರಲ್ಲಿ ಪ್ರಥಮ ಯಶಸ್ಸು ಗಳಿಸಿದಳು. ಫ್ರೆಂಚ್ ಓಪನ್‍ನಲ್ಲೂ ಮಾರ್ಟಿನಾ ನವ್ರಾತಿಲೋವಾಳ ಮೇಲೆ ಜಯಗಳಿಸಿ ಮೊದಲ ಗ್ರಾಂಡ್ ಸ್ಲಾಮ್ ಗಳಿಸಿದಳು (1987). ವಿಶ್ವದ ನಂ.1 ಆಟಗಾರ್ತಿಯೆನಿಸಿದಳು. ಅನಂತರ ಗ್ರಾಂಡ್ ಸ್ಲಾಮ್ ಪೂರೈಸಿ ಚಾರಿತ್ರಿಕವಾಗಿ ಅಂಥ ಮೂರನೆಯ ಮಹಿಳೆಯಾಗಿ ದಾಖಲಾದಳು (1988). ಅದೇ ವರ್ಷ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕವೂ ಬಂತು. ತರುವಾಯ ವಿಂಬಲ್ಡನ್, ಆಸ್ಟ್ರೇಲಿಯನ್ ಓಪನ್ ಮತ್ತು ಯು.ಎಸ್.ಓಪನ್‍ಗಳಲ್ಲಿ ಜಯಗಳಿಸಿದಳು (1989). ಆ ವರ್ಷಕ್ಕೆ ಅವಳಿಗೆ 14 ಪ್ರಶಸ್ತಿಗಳೂ 86.2 ದಾಖಲೆಯೂ ದೊರೆತವು. ಅನಂತರ ಆಸ್ಟ್ರೇಲಿಯನ್ ಓಪನ್‍ನಲ್ಲಿ ಯಶಸ್ಸು ದೊರಕಿತು (1990).

ಲೆಪ್‍ಜಿಗ್‍ನಲ್ಲಿ ಆಡಿಗಳಿಸಿದ ಬಹುಮಾನದ ಮೊಬಲಗು 70,000 ಡಾಲರ್‍ಗಳನ್ನು ಪೂರ್ವಜರ್ಮನಿಯಲ್ಲಿ ಟೆನಿಸ್ ಕ್ರೀಡೆಯ ಅಭಿವೃದ್ಧಿಗೆಂದು ದಾನಮಾಡಿದಳು (1991). ವಿಂಬಲ್ಡನ್‍ನಲ್ಲಿ ಪ್ರಶಸ್ತಿ ಪಡೆದಳು (1991,1992). ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯು.ಎಸ್.ಓಪನ್‍ಗಳಲ್ಲಿ ಜಯಗಳಿಸಿದಳು (1993). ಆಸ್ಟ್ರೇಲಿಯ ಓಪನ್‍ನಲ್ಲಿ ಗೆಲುವು ಸಾಧಿಸಿದಳು (1994). ಅದೇ ವರ್ಷ ಯಾರೂ ಗಳಿಸಿರದ ಅತ್ಯುತ್ತಮ ರ್ಯಾಂಕಿಂಗ್ ಸರಾಸರಿ 441.1746 ಗಳಿಸಿದಳು. ತರುವಾಯ ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯು.ಎಸ್.ಓಪನ್‍ಗಳಲ್ಲಿ ಜಯಗಳಿಸಿದಳು (1995). 750 ಮ್ಯಾಚ್ ಗೆದ್ದು ದಾಖಲೆ ಸ್ಥಾಪಿಸಿದಳು. 1996ರಲ್ಲಿ ಅತಿದೀರ್ಘ ಕಾಲ (ಆರು ವರ್ಷ) ವಿಶ್ವದ ನಂ. 1 ಸ್ಥಾನದಲ್ಲಿ ಇದ್ದ ಮಹಿಳೆ ಹಾಗೂ ಪುರುಷರ ದಾಖಲೆಗಳನ್ನೂ ಮುರಿದಳು. ಅತಿಹೆಚ್ಚು ಬಹುಮಾನ ಮೊತ್ತ ಪಡೆದವಳೆಂಬ ಕೀರ್ತಿಗೆ ಪಾತ್ರಳಾದಳು (1998). ಫ್ರೆಂಚ್ ಓಪನ್ ಗೆದ್ದು ತನ್ನ 900ನೆಯ ಪಂದ್ಯ ಗೆಲುವನ್ನು ಸಾಧಿಸಿ ನಿವೃತ್ತಿ ಘೋಷಿಸಿದಳು (1999). ಅನಂತರ ಪ್ರಖ್ಯಾತ ಟೆನಿಸ್ ಆಟಗಾರ ಆಂಡ್ರೆ ಅಗಾಸಿಯನ್ನು ಮದುವೆಯಾದಳು (2001). ನಿವೃತ್ತಳಾಗುವ ವೇಳೆಯಲ್ಲಿ ಆಡಿದ ಪಂದ್ಯಗಳಲ್ಲಿ 902 ಗೆಲುವು, 115 ಸೋಲು ದಾಖಲಿಸಿದ್ದಾಳೆ. 107 ಸಿಂಗಲ್ಸ್ ಪ್ರಶಸ್ತಿಗಳನ್ನೂ 22 ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನೂ ದಾಖಲಿಸಿದ್ದಾಳೆ. ಈಕೆಗೆ ಪಶ್ಚಿಮ ಜರ್ಮನಿಯ ವರ್ಷದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಯೂ (1986) ಶತಮಾನದ ಅಥ್ಲೆಟ್ ಪ್ರಶಸ್ತಿಯೂ (1999) ದೊರಕಿವೆ. (ಡಿ.ಎನ್.ಎಸ್.)