ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೋನ್ ಹೆಂಜ್

ಸ್ಟೋನ್ ಹೆಂಜ್ ದಕ್ಷಿಣ ಇಂಗ್ಲೆಂಡಿನ ಸ್ಯಾಲಿಸ್‍ಬರಿಯ ಹುಲ್ಲುಗಾವಲಿನ ವಿಶಾಲ ಮೈದಾನದಲ್ಲಿರುವ ಇತಿಹಾಸಪೂರ್ವ ಕಾಲದ ಒಂದು ಅದ್ಭುತ ಶಿಲಾನಿರ್ಮಿತಿ. ಇದು ನೂತನ ಶಿಲಾಯುಗ-ಕಂಚಿನ ತಾಮ್ರಯುಗದ ಉತ್ತರಕಾಲೀನ ಅವಧಿಯಲ್ಲಿ (ಕ್ರಿ.ಪೂ. 1800-1400) ನಿರ್ಮಿಸಲ್ಪಟ್ಟಿದೆ. ಆಧುನಿಕ ಪುರಾತತ್ತ್ವ ಸಂಶೋಧನೆ ಹಾಗೂ ರೇಡಿಯೋ ಕಾರ್ಬನ್ ಡೇಟಿಂಗ್‍ನಿಂದ ಇದರ ಮುಖ್ಯ ಭಾಗದ ಕಟ್ಟಡ ಕ್ರಿ.ಪೂ.2000 ದಷ್ಟು ಹಿಂದಿನದೆಂದು ಗುರುತಿಸಲಾಗಿದೆ. ಈ ಸ್ಮಾರಕದ ಕುರಿತು ಮೊನಮೌತ್‍ನ ಜಿಯೋಫೆರೆ ಹಿಸ್ಟೋರಿಯ ರೇಗಮ್ ಬ್ರಿಟಾನಿಕದಲ್ಲಿ (ಸು. 1136) ಉಲ್ಲೇಖಿಸಿದ ದಂತಕಥೆಯ ಪ್ರಕಾರ ಈ ಕಲ್ಲುಗಳನ್ನು ಮೆರ್ಲಿನ್ ಎಂಬವನು ಮಾಂತ್ರಿಕವಾಗಿ ಐರ್ಲೆಂಡ್‍ನಿಂದ ಇಲ್ಲಿಗೆ ಸ್ಥಳಾಂತರಿಸಿದ. 17ನೆಯ ಶತಮಾನದಲ್ಲಿ ಜಾನ್ ಆಬ್ರೆ ಮತ್ತು ವಿಲಿಯಮ್ ಸ್ಟಕೇಲೇ ಈ ನಿರ್ಮಿತಿ ಪ್ರಾಯಃ ಡುಯಿಡ್ ಜನ ಸಮುದಾಯಕ್ಕೆ ಸಂಬಂಧಿಸಿದ್ದೆಂಬ ತಿಳಿವಳಿಕೆ ಸಾಮಾನ್ಯ ಜನರಲ್ಲಿ ಗಟ್ಟಿಯಾಗಿ ನೆಲೆಯೂರಿತೆಂದು ಹೇಳಿದ್ದಾರೆ. ಈ ನಿರ್ಮಿತಿಯ ಬಗ್ಗೆ ಈಗಿನ ತಿಳಿವಳಿಕೆ ಮುಖ್ಯವಾಗಿ ಸೊಸೈಟಿ ಆಫ್ ಆ್ಯಂಟಿಕ್ವರೀಸ್ ಆಫ್ ಲಂಡನ್ ನಡೆಸಿದ ಉತ್ಖನನ, ಸಂಶೋಧನೆಯನ್ನು ಆಧರಿಸಿದೆ.

ಈ ನಿರ್ಮಿತಿ ಕೆಲವು ಪ್ರಮುಖ ರಚನೆಗಳಿಂದ ಕೂಡಿದೆ. ಇದರ ವಿನ್ಯಾಸ ವೃತ್ತಾಕಾರ. ವೃತ್ತದ ಹೊರಬದಿಯಲ್ಲಿ ಸುತ್ತಲೂ ಅಗಳದಂತೆ ಅಗಲವಾದ ಗುಂಡಿ ಇದ್ದರೂ ಅಲ್ಲಲ್ಲಿ ಪ್ರವೇಶಕ್ಕೋಸ್ಕರ ಈಶಾನ್ಯದಿಕ್ಕಿಗೆ ಮಾತ್ರ ಇದಕ್ಕೆ ಅಡ್ಡಲಾಗಿ ಕಾಲು ದಾರಿ ಇದೆ. ಈ ಗುಂಡಿಯ ಒಳಬದಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಸಮಾನ ಅಂತರದಲ್ಲಿ ಸುತ್ತಲೂ 56 ಗುಂಡಿಗಳುಳ್ಳ ಒಂದು ಒಡ್ಡು (ಗುಪ್ಪೆ) ಇದೆ. ಇವುಗಳನ್ನು ಆಬ್ರೆ ಗುಂಡಿಗಳೆಂದು ಕರೆಯಲಾಗಿದೆ. ವೃತ್ತದ ಮಧ್ಯದಲ್ಲಿರುವ ಶಿಲಾನಿರ್ಮಿತಿ ಮತ್ತು ಸುತ್ತುವರಿದ ಒಡ್ಡು ಇವೆರಡರ ನಡುವೆ ಏಕಕೇಂದ್ರದ ಮತ್ತೆರಡು ಗುಂಡಿಗಳ ವೃತ್ತಗಳಿವೆ. ಈ ವೃತ್ತಗಳ ಗುಂಡಿಗಳನ್ನು ಕ್ರಮವಾಗಿ ಜóಡ್ ಮತ್ತು ವೈ ಗುಂಡಿಗಳೆಂದು ಗುರುತಿಸಲಾಗಿದೆ. ಕೇಂದ್ರದಲ್ಲಿ ಏಕಕೇಂದ್ರದ ಎರಡು ಶಿಲಾ ಗಜಪೃಷ್ಠ ವಿನ್ಯಾಸ ನಿರ್ಮಿತಿಗಳಿವೆ. ಹೊರಗಿನದು ಸರಸೇನ್ ಎಂಬ ಮರಳು ಶಿಲೆಯದು. ಒಳಗಿನದು ನೀಲಿವರ್ಣದ ಕಲ್ಲಿನದು. ಲಾಳಾಕೃತಿಯ ವಿನ್ಯಾಸದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ನಡುವೆ ಅಂತರವಿಟ್ಟು ನಿಲ್ಲಿಸಿ ರಚಿಸಿದ ಏಕ ಕೇಂದ್ರದ ಎರಡು ರಚನೆಗಳಿವೆ. ಹೊರಬದಿಯ ವೃತ್ತ ಮತ್ತು ಲಾಳಾಕಾರದ ವಿನ್ಯಾಸದ ನಿಂತ ಕಲ್ಲುಚಪ್ಪಡಿಗಳ ಮೇಲೆ ಅಡ್ಡಲಾಗಿ ಕಲ್ಲು ಚಪ್ಪಡಿಗಳನ್ನು ಇಡಲಾಗಿದೆ. ಒಳಗಿನ ಲಾಳಾಕಾರದ ವಿನ್ಯಾಸದ ಶಿಲಾರಚನೆಯ ಮಧ್ಯದಲ್ಲಿ ಈಶಾನ್ಯ-ನೈಋತ್ಯಕ್ಕೆ ಅಭಿಮುಖವಾಗಿ ಒಂದು ದೊಡ್ಡ ಚಪ್ಪಡಿ ಕಲ್ಲು ನೆಲದ ಮೇಲಿದೆ. ಇದನ್ನು ಪೂಜಾ ವೇದಿಕೆ ಎಂದು ಗುರುತಿಸಲಾಗಿದೆ. ಒಳಬದಿಯ ಪ್ರವೇಶ ದ್ವಾರದ ಒಡ್ಡಿನ ಒಳಬದಿಯಲ್ಲಿ ಬಲಿಪೀಠವೆಂದು ಗುರುತಿಸಲಾದ ಒಂದು ದೊಡ್ಡ ಕಲ್ಲುಚಪ್ಪಡಿ ಇದೆ. ಹೊರಬದಿಯ ಗುಂಡಿಗಳ ವಾಯವ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಎರಡು ಬೃಹತ್ ಕಲ್ಲುಚಪ್ಪಡಿಗಳಿವೆ. ಪ್ರವೇಶ ದ್ವಾರದ ಹೊರಬದಿಯಲ್ಲಿರುವ ಹಾದಿಯ ಮಧ್ಯದಲ್ಲಿ ಒಂದು ಚಪ್ಪಡಿ ಶಿಲೆಯಿದ್ದು ಅದನ್ನು ಹೀಲ್ ಸ್ಟೋನ್ ಎಂದು ಕರೆಯಲಾಗಿದೆ. ಒಂದು ಭೂತ ಒಬ್ಬ ಸಂನ್ಯಾಸಿಯ ಕಡೆಗೆ ಇದನ್ನು ಎಸೆದು ಅವನ ಹಿಮ್ಮಡಿಯನ್ನು ಹಿಡಿಯಿತೆಂಬ ಕಥೆಯನ್ನು ಈ ಕಲ್ಲನ್ನು ಕುರಿತು ಹೇಳಲಾಗುತ್ತದೆ. ಗ್ರೀಕ್ ಭಾಷೆಯಲ್ಲಿ ಹೀಲ್ ಪದಕ್ಕೆ ಸೂರ್ಯನೆಂಬ ಅರ್ಥವಿದೆ. ಹೊರಬದಿಯ ಗುಂಡಿಗಳ ಸಾಲಿನ ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ ಎರಡು ಸಮತಟ್ಟಿನ ಪ್ರವೇಶವಿದ್ದು ಅದರ ಸುತ್ತಲೂ ಅಗಳು ಇದೆ.

ಈ ನಿರ್ಮಿತಿಯ ಎಲ್ಲ ಕಲ್ಲುಗಳೂ ಅಚ್ಚುಕಟ್ಟಾಗಿ ನಿರ್ಮಿಸಿದ ಆಯತಾಕಾರದವುಗಳಾಗಿವೆ. ತಲೆಯ ಮೇಲಿನ ಅಡ್ಡ ಕಲ್ಲು ಚಪ್ಪಡಿಗಳು ಕ್ರಮಬದ್ಧವಾಗಿ ಸ್ವಲ್ಪ ವೃತ್ತಾಕಾರವಾಗಿ ಎರಡೂ ತುದಿಗಳು ಸ್ವಲ್ಪ ಒಳಬಾಗಿರುವಂತೆ ಮಾಡಲಾಗಿದೆ ಮತ್ತು ಈ ಚಪ್ಪಡಿಗಳು ಒಂದರ ಪಕ್ಕ ಒಂದು ಸರಿಯಾಗಿ ಸೇರಿಕೊಳ್ಳುವಂತೆ ಜೋಡಿಸಲಾಗಿದೆ. ಒಟ್ಟಿನಲ್ಲಿ ಮೇಲಿನಿಂದ ನೋಡಿದಾಗ ಈ ತಲೆಪಟ್ಟಿಕೆಗಳ ಜೋಡಣೆ ಒಂದು ಸರಿಯಾದ ವೃತ್ತವಾಗಿ ಕಾಣುತ್ತದೆ. ಹೀಗೆ ನಿಂತ ಮತ್ತು ಅಡ್ಡ ಇಟ್ಟ ಶಿಲೆಗಳನ್ನು ಭದ್ರವಾಗಿ ಜೋಡಿಸಲು ಎರಡು ತಂತ್ರಗಳನ್ನು ಉಪಯೋಗಿಸ ಲಾಗಿದೆ. ನಿಂತ ಶಿಲೆಗಳ ತುದಿಯಲ್ಲಿ ಕೀಲನ್ನು, ಅಡ್ಡ ಶಿಲಾಪಟ್ಟಿಕೆಗಳ ತುದಿಯ ಗುಣಿಯಲ್ಲಿ ಸೇರಿಸಿ ಜೋಡಿಸಲಾಗಿದೆ. ಪ್ರತಿಯೊಂದು ತಲೆ ಶಿಲೆಗೆ ಎರಡು ಬದಿಗಳಿದ್ದು, ಒಂದರಲ್ಲಿ ಅಡ್ಡಲಾಗಿ ಚಾಚಿದ ನಾಲಗೆಯ ರೀತಿಯ ವಿನ್ಯಾಸವಿದೆ. ಪಕ್ಕದ ಕಲ್ಲಿನ ಬದಿಯ ಅಡ್ಡಗುಳಿಯಲ್ಲಿ ಕೀಲು ಇದ್ದು ಈ ನಾಲಗೆಯು ಅದರಲ್ಲಿ ಸೇರುವಂತೆ ಮಾಡಲಾಗಿದೆ. ಹೀಗೆ ಈ ನಿರ್ಮಿತಿಯಲ್ಲಿ ಅದ್ಭುತ ರಚನಾ ಕೌಶಲವನ್ನು ಕಾಣಬಹುದು. ಈ ನಿರ್ಮಿತಿಯನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಬಹುಶಃ ಸೂರ್ಯ ಹಾಗೂ ಚಂದ್ರರ ಚಲನೆಗಳ ನಡುವಿನ ಸಂಬಂಧವನ್ನು ತೋರಿಸುವ ನಕ್ಷೆಯನ್ನು ಹಾಗೂ ಗ್ರಹಣಗಳನ್ನು ಸೂಚಿಸುವ ಉದ್ದೇಶ ಈ ರಚನೆಗಿತ್ತೆಂದು ಖಗೋಳ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಇದು ಪ್ರಾಗಿತಿಹಾಸದ ಬಾಹ್ಯಾಕಾಶ ನಿರೀಕ್ಷಣಾಲಯವೆಂದು ಹೇಳಲಾಗುತ್ತದೆ. ಇದು ಧಾರ್ಮಿಕ ಕಾರ್ಯಕ್ಕೆ ಸಂಬಂಧಿಸಿದ್ದೆಂಬ ಅಭಿಪ್ರಾಯವೂ ಇದೆ. ಇದು ಪ್ರಚಲಿತ ಸಾರ್ವಜನಿಕ ತಿಳಿವಳಿಕೆಯ ಮೇಲೆ ಪ್ರಭಾವ ಬೀರಿದೆ ಎಂದು ಗೆರಾಲ್ಡ್ ಹಾವರೆನ್ಸ್, ಫ್ರೇಡ್ ಹಾಯ್ಲೆ ಹಾಗೂ ಇತರ ಖಗೋಳವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

(ಸಿ.ಬಿ.ಟಿ.)