ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ನಿಗ್ಧತೆ

ಸ್ನಿಗ್ಧತೆ ತರಲದಲ್ಲಿ (ಅಂದರೆ ದ್ರವ ಅಥವಾ ಅನಿಲ) ಆಕಾರ ಬದಲಾವಣೆಗೆ ಅಥವಾ ಅಕ್ಕಪಕ್ಕದಲ್ಲಿರುವ ಕಣಗಳ ಸಾಪೇಕ್ಷ ಚಲನೆಗೆ ತಲೆದೋರುವ ವಿರೋಧ (ವಿಸ್ಕಾಸಿಟಿ). ಆಂತರಿಕ ಘರ್ಷಣೆ (ಇಂಟರ್ನಲ್ ಫ್ರಿಕ್ಷನ್) ಪರ್ಯಾಯ ಪದ. ಪ್ರವಹಿಸುವ ತರಲದಲ್ಲಿ, ಪದರದಿಂದ ಪದರಕ್ಕೆ ಇರುವ ವೇಗ ವ್ಯತ್ಯಾಸದ ಬದಲಾವಣೆಯನ್ನು ಸ್ನಿಗ್ಧತೆ ವಿರೋಧಿಸುತ್ತದೆ. ಸ್ನಿಗ್ಧತೆಯೇ ಇಲ್ಲದಂಥವು ಆದರ್ಶ ತರಲಗಳು, ಇರುವಂಥವು ನ್ಯೂಟನ್-ತರಲಗಳು. ಯಾವುದೇ ಸಮತಲದ ಮೇಲೆ ನ್ಯೂಟನ್-ತರಲ ಹರಿಯುತ್ತಿರುವಾಗ ಅದರ ಪದರಗಳಲ್ಲಿ ವೇಗ ವ್ಯತ್ಯಾಸ ಉಂಟಾಗುವುದು. ಪ್ರವಾಹಕ್ಕೆ ಲಂಬವಾಗಿ ಏಕಮಾನ ಅಂತರದಲ್ಲಿ ತೋರುವ ವೇಗವ್ಯತ್ಯಾಸದ ಹೆಸರು ವೇಗ ಪ್ರವಣತೆ (ವೆಲಾಸಿಟಿ ಗ್ರೇಡಿಯೆಂಟ್). ಸ್ಥಿರ ಹರಿವಿಗೆ ಸ್ಪರ್ಶಕೀಯ ಒಲವೇ ಕಾರಣ. ಏಕಮಾನ ಸಲೆಯ ಮೇಲೆ ವರ್ತಿಸುವ ಈ ಬಲಕ್ಕೆ ಸ್ಪರ್ಶಕೀಯ ಪೀಡನೆ ಅಥವಾ ಅಪರೂಪಣ ಪೀಡನೆ (ಷಿಯರ್ ಸ್ಟ್ರೆಸ್) ಎಂದು ಹೆಸರು. ಅಪರೂಪಣ ಪೀಡನೆ ಮತ್ತು ವೇಗ ಪ್ರವಣತೆಗಳ ನಿಷ್ಪತ್ತಿ ತರಲದ ಸ್ನಿಗ್ಧತಾಂಕ. ಇದನ್ನು ಗತ್ಯಾತ್ಮಕ ಸ್ನಿಗ್ಧತೆ (ಡೈನಾಮಿಕ್ ವಿಸ್ಕಾಸಿಟಿ) ಎಂದೂ ಹೇಳುವುದುಂಟು. ಗತ್ಯಾತ್ಮಕ ಸ್ನಿಗ್ಧತೆಯನ್ನು ತರಲದ ಸಾಂದ್ರತೆಯಿಂದ ಭಾಗಿಸಿದಾಗ ಕೈನ್‍ಮ್ಯಾಟಿಕ್ ಸ್ನಿಗ್ಧತೆ ದೊರೆಯುತ್ತದೆ. ನೀರು, ಸೀಮೆ ಎಣ್ಣೆಗಳಿಗೆ ಹೋಲಿಸಿದರೆ ಜೇನುತುಪ್ಪ, ಹರಳೆಣ್ಣೆಗಳ ಸ್ನಿಗ್ಧತೆ ಹೆಚ್ಚು. ಉಷ್ಣತೆ ಹೆಚ್ಚಿದಂತೆ ದ್ರವದ ಸ್ನಿಗ್ಧತೆ ಕಡಿಮೆಯಾಗುತ್ತದೆ, ಅನಿಲದ್ದಾದರೋ ಹೆಚ್ಚುತ್ತದೆ. ವಿವಿಧ ಸ್ನಿಗ್ಧತಾಮಾಪಕಗಳನ್ನು ಬಳಸಿ ಸ್ನಿಗ್ಧತೆಯನ್ನು ಅಳೆಯುತ್ತಾರೆ. (ಎ.ಕೆ.ಬಿ.)