ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ನೋ, ಚಾಲ್ರ್ಸ್‌ ಪರ್ಸಿ

ಸ್ನೋ, ಚಾಲ್ರ್ಸ್ ಪರ್ಸಿ 1905-80. ಇಂಗ್ಲಿಷ್ ಭೌತವಿಜ್ಞಾನಿ, ಪ್ರಖರ ವಿಚಾರವಾದಿ, ಮನುಕುಲ ಹಿತಾಕಾಂಕ್ಷಿ ಮತ್ತು ಕಾದಂಬರಿಕಾರ. ಲೈಸೆಸ್ಟರ್‍ನಲ್ಲಿ ಜನನ. ಅಲ್ಲಿಯ ಮತ್ತು ಮುಂದೆ ಕೇಂಬ್ರಿಜಿನ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ. ತಮ್ಮ ತೀವ್ರ ಮತ್ತು ಗಹನ ವೈಚಾರಿಕ ಉಪನ್ಯಾಸಗಳಿಂದಲೂ ಲೇಖನ-ಕಾದಂಬರಿಗಳಿಂದಲೂ ಜನಸಾಮಾನ್ಯರಲ್ಲಿ ಕೂಡ ವೈಜ್ಞಾನಿಕ ಚಿಂತನೆ ಮತ್ತು ವಿಮರ್ಶೆ ಬೆಳಗುವಂತೆ ಮಾಡಿದರು.

ನಾಗರಿಕತೆಯ ಅನುಸ್ಯೂತ ಪ್ರವಹನದಲ್ಲಿ ಎರಡು ಪ್ರಧಾನ ಚಿಂತನ ಪ್ರಕಾರಗಳು ಮೈದಳೆದಿವೆ. ಮಾನವಿಕಗಳು (ಹ್ಯುನ್ಯಾನಿಟೀಸ್) ಮತ್ತು ವಿಜ್ಞಾನಗಳು (ಸೈನ್ಸಸ್). ಇವು ಒಂದೇ ಮಾನವ ಮತಿಯ ಎರಡು ಸೃಷ್ಟಿಗಳಾಗಿದ್ದರೂ ಪರಸ್ಪರ ಪೂರಕ ಪೋಷಕ ಆಗಿರಬೇಕಾಗಿದ್ದರೂ ಸಂದ ಹಲವಾರು ಶತಮಾನಗಳಲ್ಲಿ ಎರಡು ಪ್ರತ್ಯೇಕ ಜಲಬಂಧ (ವಾಟರ್‍ಟೈಟ್) ಸಂಸ್ಕøತಿಗಳ (ಕಲ್ಚರ್ಸ್) ಉಗಮಕ್ಕೆ ಕಾರಣವಾಗಿವೆ: ವಿಜ್ಞಾನ ಸಂಸ್ಕøತಿ, ಮಾನವಿಕ ಸಂಸ್ಕøತಿ. ಯಾವುದೇ ಒಂದು ಸಂಸ್ಕøತಿಯ ಅನುಯಾಯಿಗಳು (ಅಂದರೆ ವಿಜ್ಞಾನಿಗಳು ಅಥವಾ ಮಾನವಿಕ ತಜ್ಞರು) ಇನ್ನೊಂದರ ಬಗ್ಗೆ ನಿರಾಸಕ್ತರು ಇಲ್ಲವೇ ಅಜ್ಞರು. ತಮ್ಮ ಅಜ್ಞತೆ ಮುಚ್ಚಲು ಇನ್ನೊಂದು ಸಂಸ್ಕøತಿಯನ್ನು ನಿಕೃಷ್ಟವಾಗಿ ಕಾಣುವುದೂ ವಿರಳವಲ್ಲ. ಈ ಅಶೈಕ್ಷಣಿಕ ಜ್ಞಾನಬಂಧ ಮತ್ತು ಗರ್ವಾಂಧ ಅವಜ್ಞೆಯನ್ನು ಸ್ನೋ ಕಟುವಾಗಿ ಟೀಕಿಸುತ್ತಿದ್ದರು. ದ ಟೂ ಕಲ್ಚರ್ಸ್ ಆ್ಯಂಡ್ ದ ಸೈಂಟಿಫಿûಕ್ ರೆವಲ್ಯೂಷನ್ (ವ್ಶೆಜ್ಞಾನಿಕ ಕ್ರಾಂತಿ ಮತ್ತು ದ್ವಂದ್ವ ಸಂಸ್ಕøತಿಗಳು) ಎಂಬ ಕೃತಿಯಲ್ಲಿ ತಮ್ಮ ಚಿಂತನೆಗಳನ್ನು ಪ್ರಕಟಿಸಿದರು (1959).

ಪ್ರಪಂಚದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ; ಉದಾಹರಣೆಗೆ ಬಲುಮಂದಿ ವಿಜ್ಞಾನಿಗಳು ಚಾಲ್ರ್ಸ್ ಡಿಕನ್ಸ್ (1812-70) ಎಂಬ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರನ ಬಗ್ಗೆ ಅಜ್ಞರು, ಇನ್ನು ಮಾನವಿಕ ತಜ್ಞರಾದರೋ ವಿಜ್ಞಾನದ ಬಗ್ಗೆ ಅಷ್ಟೇ ವಿಚಿತ್ರದೂರರು ಎಂಬುದು ಇವರ ವಾದ.

“ಪಾರಂಪರಿಕ ಸಂಸ್ಕøತಿ ಮಾನಕಗಳ ಪ್ರಕಾರ ಉಚ್ಚಶಿಕ್ಷಣ ಪಡೆದವರೆಂದು ಭಾವಿಸಲಾಗಿರುವ ಮಾನವಿಕ ತಜ್ಞರ ಹಲವಾರು ಸಭೆಗಳಿಗೆ ಹೋಗಿದ್ದೇನೆ. ಮಾನವಿಕಗಳ ಬಗ್ಗೆ ವಿಜ್ಞಾನಿಗಳ ಅಗಾಧ ಅಜ್ಞತೆ ಕುರಿತು ಸಾಕಷ್ಟು ಹಮ್ಮು ಬಿಮ್ಮುಗಳಿಂದ ಇವರು ಘೋಷಿಸುವುದನ್ನು ಕೇಳಿದ್ದೇನೆ. ಒಂದೆರಡು ಸಲ ಉದ್ರಿಕ್ತನಾಗಿ ಆ ಸದಸ್ಯರನ್ನು ಅವರಲ್ಲಿ ಎಷ್ಟು ಮಂದಿ ಉಷ್ಣಗತಿ ವಿಜ್ಞಾನದ ಎರಡನೆಯ ನಿಯಮ ವಿವರಿಸಬಲ್ಲವರಾಗಿದ್ದಾರೆ ಎಂದು ಪ್ರಶ್ನಿಸಿದ್ದೇನೆ. ಶೀತಲ ಮೌನವೇ ಅನುಕ್ರಿಯೆ! ಅಂದರೆ ನಿಷೇಧಾತ್ಮಕ ಪ್ರತಿಕ್ರಿಯೆ. ಇಂತಿದ್ದವು ನನ್ನ ಪ್ರಶ್ನೆ `ಷೇಕ್‍ಸ್ಪಿಯರನ ಯಾವುದೇ ಕೃತಿಯನ್ನು ಓದಿರುವಿರಾ? ಎಂಬ ಪ್ರಶ್ನೆಯ ವೈಜ್ಞಾನಿಕ ಸಂವಾದಿ ಆಗಿತ್ತು. ನಾನಿನ್ನೂ ಸರಳ ಪ್ರಶ್ನೆ ಹಾಕಿದ್ದರೆ, ಉದಾ: `ದ್ರವ್ಯರಾಶಿ ಅಥವಾ ವೇಗೋತ್ಕರ್ಷ ಎಂದರೇನು?-`ನೀನು ಓದಬಲ್ಲೆಯಾ? ಎಂಬುದರ ವೈಜ್ಞಾನಿಕ ಸಂವಾದಿ -ಆ ಸುಶಿಕ್ಷಿತ ಸಮುದಾಯದಲ್ಲಿಯ ಹತ್ತಕ್ಕಿಂತ ಹೆಚ್ಚು ಮಂದಿಗೆ ಕೂಡ ನಾನು ಅವರದೇ ಭಾಷೆಯಲ್ಲಿ ಮಾತಾಡುತ್ತಿದ್ದೇನೆ ಎಂಬ ಸೂಕ್ಷ್ಮ ಹೊಳೆದಿರುತ್ತಿರಲಿಲ್ಲ! ಒಂದುಕಡೆ ಆಧುನಿಕ ಭೌತವಿಜ್ಞಾನದ ಬೃಹತ್ಸೌಧ ಊಧ್ರ್ವಗಾಮಿಯಾಗಿರುವಾಗಲೇ ಇನ್ನೊಂದು ಕಡೆ ಹೀಗೆ, ಪಾಶ್ಚಾತ್ಯ ಪ್ರಪಂಚದಲ್ಲಿಯ ಪರಮಧೀಮಂತ ಬುದ್ಧಿಜೀವಿಗಳ ಪೈಕಿ ಬಹುಸಂಖ್ಯಾತರಿಗೆ ಇದರ [ಆಧುನಿಕ ಭೌತವಿಜ್ಞಾನ] ಬಗ್ಗೆ ಅವರ ನವಶಿಲಾಯುಗೀನ ಪೂರ್ವಜರಿಗೆಷ್ಟು ಒಳನೋಟವಿದ್ದಿರಬಹುದೋ ಅಷ್ಟೇ ಇರುವುದಾಗಿದೆ!”

ಸಹಜವಾಗಿ ಇಂಥ ನೇರ ಮತ್ತು ಚುಚ್ಚುನುಡಿ ಮಾನವಿಕಗಳಲ್ಲಿಯೂ ಅನೇಕ ಮುಂಚೂಣಿ ಬುದ್ಧಿಜೀವಿಗಳಿಗೆ ಪಥ್ಯವಾಗಲಿಲ್ಲ. ಪ್ರಸಿದ್ಧ ಸಾಹಿತ್ಯ ವಿಮರ್ಶಕ ಎಫ್.ಆರ್.ಲೀವಿಸ್ (1895-1978) ಸ್ನೋ ಮಂಡಿಸಿದ ದ್ವಂದ್ವ ಸಂಸ್ಕøತಿವಾದವನ್ನು ಒಪ್ಪಲಿಲ್ಲ, ಕಟುವಾಗಿ ಟೀಕಿಸಿದರು. (ನೋಡಿ- ಲೀವಿಸ್,-ಎಫ್-ಆರ್)

ಸಮಕಾಲೀನ ಬೌದ್ಧಿಕ ನಾಯಕರು ಅನೀತಿವಂತರು, ಬೌದ್ಧಿಕತೆಯ ವೈರಿಗಳು ಮತ್ತು ಕಲೆ ಹಾಗೂ ಚಿಂತನೆಗಳ ಪ್ರತಿಬಂಧಕರು ಎಂಬುದು ಇವರ ಅಭಿಪ್ರಾಯ: “ಮಾನವನ ಸುದೀರ್ಘ ಮತ್ತು ವಿಷಾದಕರ ಇತಿಹಾಸ ಕುರಿತು ಯೋಚಿಸುವಾಗ ನಿಮಗೊಂದು ಸಂಗತಿ ಸ್ವಷ್ಟವಾಗು ತ್ತದೆ: ಯಾವುದೇ ದಂಗೆ ಹೆಸರಿನಲ್ಲಿ ಎಂದೂ ಸಂಭವಿಸಿರದಷ್ಟು ಕ್ರೌರ್ಯವನ್ನು ಮೀರುವ ತೀವ್ರತರ ದೌಷ್ಟ್ಯಗಳು ವಿಧೇಯತೆಯ ಹೆಸರಿನಲ್ಲಿ ಮನುಕುಲದ ಮೇಲೆ ಹೇರಲ್ಪಟ್ಟಿವೆ”. ಇನ್ನೊಮ್ಮೆ ಬರೆದರು, “ಸುಖಾನುಶೀಲನೆಯೊಂದು (ಪರ್ಸೂಟ್ ಆಫ್ ಹ್ಯಾಪಿನೆಸ್) ಹಾಸ್ಯಾಸ್ಪದ ಭಾವನೆ, ನೀವು ಸುಖದ ಬೆನ್ನು ಹತ್ತಿದರೆ ಎಂದೂ ಅದನ್ನು ಪತ್ತೆ ಹಚ್ಚಲಾರಿರಿ. (ಎಮ್.ಕೆ.ಕೆ.)