ಸ್ಪಾರ್ಟ ಗ್ರೀಸ್ ದೇಶದ ಅತ್ಯಂತ ಪುರಾತನ ನಗರ. ಗ್ರೀಸ್ ದೇಶದ ದಕ್ಷಿಣದಲ್ಲಿರುವ ಪೆಲಪನೀಸ್ ಪರ್ಯಾಯ ದ್ವೀಪದ ಈಗಿನ ಲೆಕೊನಿಯ ಪ್ರಾಂತ್ಯದ ರಾಜಧಾನಿ ಮತ್ತು ಆಡಳಿತ ಕೇಂದ್ರ. ಯೂರೊಟಸ್ ನದಿ ದಡದ ಮೇಲಿದೆ. ಸ್ಯೂಸ್ ಮತ್ತು ಟೇಗೇಟ್ ದಂಪತಿಗಳ ಮಗನಾದ ಲೇಕಡ್‍ಮನ್ ತನ್ನ ಪತ್ನಿಯ ನೆನಪಿಗಾಗಿ ಈ ನಗರವನ್ನು ನಿರ್ಮಿಸಿದನೆಂದು ಪೌರಾಣಿಕ ಕಥೆ. ಟ್ರೋಜನ್ ಸಮರದ 80 ವರ್ಷಗಳ ಬಳಿಕ ಡೋರಿಯನರು ವಲಸೆ ಹೋಗಲಾರಂಭಿಸಿದರು. ಈ ವಲಸೆಗಾರರು ಲೆಕೊನಿಯಕ್ಕೆ ಬಂದ ಬಳಿಕ ಸ್ಪಾರ್ಟ ಅವರ ಮುಖ್ಯ ವಾಸಸ್ಥಳವಾಯಿತು. ಪರಸ್ಪರ ವೈಷಮ್ಯ, ಕಲಹಗಳಿಂದಾಗಿ ಸ್ಪಾರ್ಟ ಅಭಿವೃದ್ಧಿಗೊಳ್ಳಲೇ ಇಲ್ಲ. ಇದರಿಂದಾಗಿ ಇಲ್ಲಿ ಸುವ್ಯವಸ್ಥಿತ ಸಾಮಾಜಿಕ ಜೀವನ ಬೆಳೆಯಲಿಲ್ಲ. ಆದರೆ ಲೈಕರ್ಗಸ್ ಅಧಿಕಾರಕ್ಕೆ ಬಂದ ಬಳಿಕ ಶಾಸನಾತ್ಮಕವಾಗಿ ಇಲ್ಲಿಯ ಜನರ ಜೀವನವನ್ನು ವ್ಯವಸ್ಥಿತ ಗೊಳಿಸಿ ಸಂಘಟಿಸಿದ. ಇದರಿಂದಾಗಿ ಇಲ್ಲಿಯ ನಾಗರಿಕರ ವಿದ್ಯಾಭ್ಯಾಸದ ಕ್ರಮದಲ್ಲಿಯೇ ತೀವ್ರವಾದ ಮಾರ್ಪಾಡುಗಳುಂಟಾದವು. ಪ್ರತಿಯೊಬ್ಬ ಪ್ರಜೆಯೂ ವಿಧೇಯತೆ, ಸಹಿಷ್ಣುತೆ ಹಾಗೂ ಸಮರ ವಿe್ಞÁನಗಳಲ್ಲಿ ಕಟ್ಟುನಿಟ್ಟಾದ ತರಬೇತಿ ಪಡೆಯಬೇಕಾಯಿತು. ಪ್ರತಿ ನಾಗರಿಕನನ್ನೂ ದಕ್ಷ ಸೈನಿಕನನ್ನಾಗಿ ತಯಾರಿಸುವುದೇ ಈ ಹೊಸ ವಿದ್ಯಾಭ್ಯಾಸ ಯೋಜನೆಯ ಗುರಿಯಾಗಿತ್ತು. ಆದರೆ ಸ್ಪಾರ್ಟನರ ಜೀವನದಲ್ಲಿ ಸೌಂದರ್ಯ, ಸೌಮ್ಯತೆ, ಗಾಂಭೀರ್ಯಗಳಿಗೆ ಸ್ಥಾನವಿಲ್ಲದೆ ಹೋಯಿತು. ಇವರಲ್ಲಿ ಸಮರ ಕ್ರೌರ್ಯ ನೆಲೆಗೊಂಡಿತು. ವಿಪರೀತ ನಿಬಂಧನೆಗಳಿಂದ ನಿಯಂತ್ರಿಸಲ್ಪಟ್ಟ ಸ್ಪಾರ್ಟನರು ರಾಜನ ಅಧಿಕಾರ ವ್ಯಾಪ್ತಿಯಿಂದ ಹೊರಬಿದ್ದ ಕೂಡಲೇ ಅನಿರ್ಬಂಧಿತ ಕುಡಿತ, ದುರಾಚಾರಗಳಲ್ಲಿ ಮಗ್ನರಾಗುತ್ತಿದ್ದರು. ಇವರು ದಕ್ಷ ಸೈನಿಕರಾದರೇ ಹೊರತು ನುರಿತ ಆಡಳಿತಗಾರರಾಗಲಿಲ್ಲ.

ಲೆಕೊನಿಯವನ್ನು ಸ್ಪಾರ್ಟ ತನ್ನ ಅಧೀನಕ್ಕೆ ತಂದುಕೊಂಡುದರ ಬಗ್ಗೆ ವಿವರಗಳು ನಮಗೆ ಹೆಚ್ಚಿಗೆ ತಿಳಿದುಬಂದಿಲ್ಲ. ಅರ್ಕೆಲಸ್ ಮತ್ತು ಕಾರಿಲಸರ ಆಡಳಿತದ ಕಾಲದಲ್ಲಿ ಯೂರೊಟಸ್ ಕಣಿವೆಯನ್ನು ಆಕ್ರಮಣ ಮಾಡುವುದರಿಂದ ಆರಂಭವಾದ ಸ್ಪಾರ್ಟನ್ನರ ರಾಜ್ಯ ವಿಸ್ತರಣಾ ಯೋಜನೆ ಕ್ರಮವಾಗಿ ಸುತ್ತಲಿನ ನಗರಗಳನ್ನು ಕಬಳಿಸಿ ಪೆಲಪನೀಸ್‍ನ ಪಶ್ಚಿಮ ತೀರದಲ್ಲಿದ್ದ ಆರ್ಗಿವ್ಸ್ ಜನರನ್ನು ಹೊರದೂಡಿ ಆ ಪ್ರದೇಶವನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುವುದರಿಂದ ಪೂರ್ಣವಾಗಿ ಲೆಕೊನಿಯವನ್ನೂ ಆಕ್ರಮಿಸಿದಾಗ ಒಂದು ಘಟ್ಟ ಮುಟ್ಟಿತು. ಪೂರ್ವದಿಶೆಯಲ್ಲಿ ತಮ್ಮ ನೆರೆಯವರಾದ ಮೆಸ್ಸೆನಿಯರನ್ನು ಸದೆಬಡಿದು ಅವರಿಂದ ಕಪ್ಪಪಡೆಯಲು ಸ್ಪಾರ್ಟಕ್ಕೆ 20 ವರ್ಷಗಳು ಹಿಡಿದವು. ಎರಡನೆಯ ಮೆಸ್ಸೆನಿಯ ಕದನದ ಕೊನೆಗೆ ಅದು ಸಂಪೂರ್ಣವಾಗಿ ಸ್ಪಾರ್ಟದ ಅಧೀನವಾಯಿತು. ಈ ವೇಳೆಗೆ (ಕ್ರಿ.ಪೂ.ಸು. 631) ಅರ್ಕೆಡಿಯ ಮತ್ತು ಆರ್ಗೊಲಿಸ್ ಹೊರತಾಗಿ ಉಳಿದ ಯಾವ ರಾಜ್ಯಕ್ಕೂ ಸ್ಪಾರ್ಟವನ್ನು ಎದುರಿಸುವ ಶಕ್ತಿಯಿರಲಿಲ್ಲ. ಅಲೆಗ್ಜಾಂಡ್ರಿಡಸ್ ಮತ್ತು ಅರಿಸ್ಟೊನ್ ಇವರ ಆಳಿಕೆಯ ಕಾಲದಲ್ಲಿ ಇವರು ಸು. 550ರಲ್ಲಿ ಟೆಗಿಯ ನಗರವನ್ನು ವಶಪಡಿಸಿಕೊಂಡು ಅರ್ಕೆಡಿಯವನ್ನು ತಮ್ಮ ಸ್ವಾಧೀನಪಡಿಸಿಕೊಂಡರು. ಅನಂತರ ಮೊದಲನೆಯ ಕ್ಲಿಯೊಮೆನಸ್ ಕ್ರಿ.ಪೂ.545ರಲ್ಲಿ ಆರ್ಗೊಲಿಸ್‍ನ ಪ್ರಾಬಲ್ಯವನ್ನು ಮುರಿದು ಪೆಲಪನೀಸ್‍ನ ನಾಯಕತ್ವವನ್ನು ಸ್ಪಾರ್ಟಕ್ಕೆ ದೊರಕಿಸಿಕೊಟ್ಟ.

ಕ್ರಿ.ಪೂ. 5ನೆಯ ಶತಮಾನದಲ್ಲಿ ಗ್ರೀಸ್ ದೇಶಕ್ಕೆ ಪ್ರಥಮತಃ ಪರ್ಷಿಯನ್ನರ ಆಕ್ರಮಣದ ಭಯ ಆರಂಭವಾಯಿತು. ಪರ್ಷಿಯ ಸಾಮ್ರಾಜ್ಯದ ಸೈರಸ್ ಎಂಬಾತ ಕ್ರಿ.ಪೂ.546ರಲ್ಲಿ ಕ್ರೋಷಸ್‍ನನ್ನು ಸೋಲಿಸಿ ಲಿಡಿಯವನ್ನು ಸ್ವಾಧೀನಪಡಿಸಿಕೊಂಡ. ಬಳಿಕ ಐಯೊನಿಯದ ಗ್ರೀಕರನ್ನು ಸುಲಭವಾಗಿ ಸೋಲಿಸಿದ. ಆದರೆ ಅನಂತರ ಐಯೊನಿಯದ ನಾಗರಿಕರು ದಂಗೆಯೆದ್ದರು. ಇತ್ತ ಪರ್ಷಿಯದ ವಿರುದ್ಧದ ಸಹಾಯಕ್ಕಾಗಿ ಗ್ರೀಸ್ ದೇಶಕ್ಕೆ ಮೊರೆಯಿಟ್ಟಾಗ ಸ್ಪಾರ್ಟ ಸಹಾಯಮಾಡಲು ನಿರಾಕರಿಸಿತು. ಐಯೊನಿಯದ ದಂಗೆಯಲ್ಲಿ ಅಥೆನರೂ ಎರೆಟ್ರಿಯನರೂ ಸ್ಪಾರ್ಟನರಿಗೆ ಸಹಾಯ ಮಾಡಿದರೆಂಬ ಕಾರಣ ಅವರನ್ನು ಶಿಕ್ಷಿಸಲೆಂಬ ನೆಪದಿಂದ ಕ್ರಿ.ಪೂ. 490ರಲ್ಲಿ ಪರ್ಷಿಯದ ಡೇರಿಯಸ್ 40,000 ಸೈನ್ಯಬಲದೊಂದಿಗೆ ಗ್ರೀಸ್ ದೇಶದ ಮೇಲೆ ದಂಡೆತ್ತಿ ಬಂದ. ಆಗ ಸ್ಪಾರ್ಟ ಡೇಟಿಸ್ ಮತ್ತು ಆರ್ಟಾಫರ್ನೆ ಎಂಬವರ ನಾಯಕತ್ವದಲ್ಲಿ ಸೈನ್ಯವೊಂದನ್ನು ಅಥೆನ್ಸಿನ ಸಹಾಯಕ್ಕಾಗಿ ಕಳುಹಿಸಿತು. ಆದರೆ ಈ ಸೈನ್ಯ ಮ್ಯಾರತಾನ್ ಕದನ ಮುಗಿದ ಬಳಿಕ ಯುದ್ಧಭೂಮಿಗೆ ಬಂತು. 10 ವರ್ಷಗಳ ಅನಂತರ ಡೇರಿಯಸ್‍ನ ಮಗನಾದ ಸóರಕ್ಸೀಸ್ ಎಂಬಾತ ಮತ್ತೆ ದಂಡೆತ್ತಿ ಬಂದಾಗ ಸ್ಪಾರ್ಟದ ದೊರೆ ಲಿಯೊನಿಡಾಸ್ ಗ್ರೀಸಿನ ಸಂಯುಕ್ತ ಸೈನ್ಯದ ನಾಯಕತ್ವ ವಹಿಸಿ ಥರ್ಮೊಪಿಲೆಯನ್ನು ಕಾಪಾಡಲು ಬಹಳವಾಗಿ ಹೋರಾಡಿ ಕೊನೆಗೆ ರಣರಂಗದಲ್ಲಿ ಅಸುನೀಗಿದ. ಅಥೆನ್ಸಿನ ಥೆಮಿಸ್ಟೊಕ್ಲಿಸನ ನಾಯಕತ್ವದಲ್ಲಿ ಸಲುಮಿಸ್ ಎಂಬಲ್ಲಿ ನಡೆದ ನೌಕಾಕದನದಲ್ಲಿ ಪರ್ಷಿಯನರು ಭಾರಿಸೋಲು ಅನುಭವಿಸಿ ಹಿಮ್ಮೆಟ್ಟಬೇಕಾಯಿತು.

ಪರ್ಷಿಯನರೊಡನೆ ನಡೆದ ಈ ಕದನಗಳಲ್ಲಿ ಸ್ಪಾರ್ಟದ ಯುದ್ಧಸಾಮಥ್ರ್ಯ ಪ್ರಕಟಗೊಂಡಿತು; ಆದರೆ ಇದರೊಂದಿಗೆ ಅವರಲ್ಲಿದ್ದ ಸ್ವಾರ್ಥ, ಅಲ್ಪತ್ವ ಮೊದಲಾದ ಅವಗುಣಗಳೂ ಬಯಲಾದುವು. ಕ್ರಮೇಣ ಅಥೆನ್ಸ್ ಮತ್ತು ಸ್ಪಾರ್ಟಗಳ ನಡುವಣ ಸಂಬಂಧ ಕಡಿದುಹೋಗಿ ಪರಸ್ಪರ ವೈಷಮ್ಯ ತಲೆದೋರಿತು. ಪೆಲಪನೀಸಿಯನ್ ಕದನದ ಮೊದಲ ಘಟ್ಟಗಳಲ್ಲಿ ಅಥೆನ್ಸಿನ ವಿರುದ್ಧ ಹೋರಾಡಲು ಸ್ಪಾರ್ಟ ಹಿಂಜರಿಯಿತು. ಅನಂತರ ಪೆಲಪನೀಸಿಯನ್ ಲೀಗಿನ ನಾಯಕತ್ವ ವಹಿಸಿದ್ದ ಕಾರಣದಿಂದಲೂ ಮಿತ್ರರಾಷ್ಟ್ರಗಳ ಬಲವಂತದಿಂದಲೂ ಇವೆಲ್ಲಕ್ಕಿಂತ ಹೆಚ್ಚಾಗಿ ಆ ತನಕ ಆಂತರಿಕವಾಗಿ ಬೆಳೆದು ಬಂದಿದ್ದ ವಿದ್ವೇಷದಿಂದಲೂ ಅದು ಆ ಸಮರದಲ್ಲಿ ಪ್ರಮುಖ ಪಾತ್ರ ವಹಿಸಿತು; ಅಥೆನ್ಸ್ ಸಂಪೂರ್ಣವಾಗಿ ನಾಶವಾಗಲು ಕಾರಣವಾಯಿತು. ಇದರಿಂದ ತನ್ನ ಬಲವನ್ನು ಸ್ಪಾರ್ಟ ನಿರೂಪಿಸಿಕೊಂಡಿತಾದರೂ ವಿಜಯದಿಂದ ಲಭ್ಯವಾದ ಅಧಿಕಾರಕ್ಕೆ ಅನರ್ಹತೆಯನ್ನೂ ತೋರಿಸಿಕೊಂಡಿತು. ತನ್ನ ಅಧೀನದ ರಾಜ್ಯಗಳಲ್ಲೆಲ್ಲ ಪ್ರಜಾಪ್ರಭುತ್ವಕ್ಕೆ ತಿಲಾಂಜಲಿಯಿತ್ತು ಮಿತಜನಾಧಿಪತ್ಯವನ್ನು ಸ್ಥಾಪಿಸತೊಡಗಿ ಅಲ್ಲಿಯ ಜನರ ವಿರೋಧವನ್ನು ಕಟ್ಟಿಕೊಂಡಿತು.

ಆದರೆ ಈ ಅಧಿಕಾರ ವ್ಯವಸ್ಥೆ ಬಹಳ ಕಾಲನಿಲ್ಲಲಿಲ್ಲ. ಪರ್ಷಿಯ ದೊಡನೆ ಪುನಃ ನಡೆದ ನೌಕಾಕದನದಲ್ಲಿ ಸೋಲಿಸಲ್ಪಟ್ಟ ಸ್ಪಾರ್ಟ ನೌಕಾರಂಗದಲ್ಲಿ ತನ್ನ ಸ್ಥಾನ ಕಳೆದುಕೊಂಡಿತು. ಅಲ್ಲದೆ, ಪರ್ಷಿಯನರ ನಿರಂತರ ಆಕ್ರಮಣ ನಿಲ್ಲಿಸಲು ಮತ್ತು ಅವರ ಸಹಾಯದೊಡನೆ ಗ್ರೀಸ್ ದೇಶದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಪರ್ಷಿಯದ ದೊರೆ ಎರಡನೆಯ ಸರಕ್ಸಿಸ್‍ನೊಡನೆ ಒಂದು ಒಪ್ಪಂದ ಮಾಡಿಕೊಂಡಿತು. ಅದರಂತೆ ಏಷ್ಯಮೈನರ್ ತೀರದಲ್ಲಿಯ ಗ್ರೀಕ್ ನಗರಗಳನ್ನೂ ಸೈಪ್ರಸನ್ನೂ ಪರ್ಷಿಯನ್ನರಿಗೆ ಒಪ್ಪಿಸಿ, ಇತರ ಗ್ರೀಕ್ ನಗರಗಳಿಗೆ ಸ್ವಾತಂತ್ರ್ಯ ನೀಡಲೂ ಒಪ್ಪಿಕೊಂಡಿತು. ಆದರೆ ತನ್ನ ಅಧೀನದಲ್ಲಿದ್ದ ಬೊಇಷಿಯದ ನಗರಗಳು ಕೈತಪ್ಪಿ ಹೋಗುವವೆಂಬ ಹೆದರಿಕೆಯಿಂದ ತೀಬ್ಸ್ ಈ ಕೊನೆಯ ಕರಾರಿಗೆ ಒಪ್ಪಲಿಲ್ಲ. ಇದರಿಂದ ತೀಬ್ಸ್ ಮತ್ತು ಸ್ಪಾರ್ಟಗಳ ನಡುವೆ ಘರ್ಷಣೆಗಳುಂಟಾಗಿ ತೀಬ್ಸ್‍ನ ಎಪಮಿನಾಂಡಸ್ ನಾಲ್ಕು ಬಾರಿ ಸ್ಪಾರ್ಟದ ಮೇಲೆ ದಂಡೆತ್ತಿ ಹೋಗಿ ಅದರ ಶಕ್ತಿಯನ್ನು ಮುರಿಯುವಲ್ಲಿ ಸಫಲನಾದ. ಇದರಿಂದ ಸ್ಪಾರ್ಟದ ಪ್ರಾಬಲ್ಯ ಕ್ಷೀಣಿಸಿತು. ಮ್ಯಾಸಿಡೋನಿಯದ ಫಿಲಿಪ್‍ನಿಗೆ ಸ್ಪಾರ್ಟವನ್ನು ಕಬಳಿಸಲು ಸದವಕಾಶ ಕಲ್ಪಿಸಿಕೊಟ್ಟಿತು. ಕೊನೆಯತನಕವೂ ಹೋರಾಡಿ ಅವನನ್ನು ಹಿಮ್ಮೆಟ್ಟಲು ಸ್ಪಾರ್ಟ ಯತ್ನಿಸಿತಾದರೂ ಸಫಲಗೊಳ್ಳಲಿಲ್ಲ. ಮ್ಯಾಸಿಡೋನಿಯದವರಿಗೂ ಸುಲಭವಾಗಿ ಸ್ಪಾರ್ಟವನ್ನು ಎಕಿಯನ್ ಸಂಘದಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ ಐದನೆಯ ಫಿಲಿಪ್‍ನು ರೋಮನರ ಸಹಾಯದಿಂದ ಈ ಕಾರ್ಯ ಸಾಧಿಸಿದ. ಇದರೊಡನೆ ಸ್ಪಾರ್ಟದ ಸ್ವಾತಂತ್ರ್ಯವೂ ಅಂತ್ಯಗೊಂಡಿತು. (ಬಿ.ಆರ್.ಜಿ.)

ಈಗ ಪ್ರಾಚೀನ ನಗರ ಸ್ಪಾರ್ಟ ನಿವೇಶನಕ್ಕೆ ಸಮೀಪದಲ್ಲಿ ಆಧುನಿಕ ನಗರವೊಂದು ತಲೆಯೆತ್ತಿದೆ. 1835ರಲ್ಲಿ ಈ ನಗರವನ್ನು ರೂಪಿಸಲಾಯಿತು. ಪ್ರಾಚೀನ ನಗರ ನಿವೇಶನದಲ್ಲಿ ಅನೇಕ ಉತ್ಖನನಗಳು ನಡೆದಿದ್ದು, ಈ ನಗರದ ಪೂರ್ವೇತಿಹಾಸಕ್ಕೆ ಸಂಬಂಧಿಸಿದ ನಾನಾ ಬಗೆಯ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ. *