ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಪಾರ್ಟಕಸ್

ಸ್ಪಾರ್ಟಕಸ್ ಕ್ರಿ.ಪೂ.-71. ರೋಮನ್ ಗುಲಾಮರ ನಾಯಕ. ಖಡ್ಗಮಲ್ಲನಾಗಿದ್ದ(ಗ್ಲ್ಯಾಡಿಯೇಟರ್) ಈತನ ಜನನ ಮತ್ತು ಬಾಲ್ಯಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಚಿಕ್ಕಂದಿನಲ್ಲಿ ಕುರುಬನಾಗಿದ್ದ. ಇವನು ರೋಮನ್ ಸೈನ್ಯಕ್ಕೆ ಸೇರಿದ್ದ, ಅದನ್ನು ಬಿಟ್ಟಾಗ ರೋಮನರು ಇವನನ್ನು ಸೆರೆಹಿಡಿದು ಗುಲಾಮನಾಗಿ ಮಾಡಿ ಕಾಪುಲಿ ಎಂಬಲ್ಲಿನ ಖಡ್ಗಮಲ್ಲ ಶಾಲೆಗೆ ಮಾರಿದರು. ಗುಲಾಮಗಿರಿ ಪ್ರಾಚೀನ ಬ್ಯಾಬಿಲೋನಿಯ, ಗ್ರೀಸ್, ರೋಮ್ ದೇಶಗಳಲ್ಲಿ ವಿಶೇಷವಾಗಿ ಆಚರಣೆಯಲ್ಲಿತ್ತು. ಯುದ್ಧದಲ್ಲಿ ಸೆರೆಸಿಕ್ಕವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದರು, ಅನಂತರ ಮಾರುತ್ತಿದ್ದರು. ಪ್ರಾಚೀನ ರೋಮ್‍ನಲ್ಲಿ ಜನಪ್ರಿಯವಾಗಿದ್ದ ಸಾರ್ವಜನಿಕ ಖಡ್ಗಮಲ್ಲಯುದ್ಧಗಳಲ್ಲಿ ಭಾಗವಹಿಸಲು ಗುಲಾಮರಿಗೆ ಶಿಕ್ಷಣ ಕೊಡಲಾಗುತ್ತಿತ್ತು.

ಈತನಿಗೆ ಗುಲಾಮರ ಬಗ್ಗೆ ಬಹಳ ಅನುಕಂಪವಿತ್ತು. ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ ಗುಲಾಮನಾಗಿರುವುದು ಸರಿಯಲ್ಲ; ಎಲ್ಲರೂ ಸ್ವತಂತ್ರರಾಗಿ ಬಾಳಬೇಕೆಂಬ ಉದಾತ್ತ ಭಾವನೆಯಿಂದ ಪ್ರೇರಿತನಾಗಿ ಮಲ್ಲಶಾಲೆಯೊಂದರಲ್ಲಿ ಗುಲಾಮರಾಗಿದ್ದ ಎಪ್ಪತ್ತು ಜನ ಜರ್ಮನಿ ಮತ್ತು ಫ್ರಾನ್ಸ್‍ನ ಒಡನಾಡಿ ಮಲ್ಲರೊಡನೆ ಸೇರಿ ರೋಮನ್ ದೊರೆಯ ವಿರುದ್ಧ ದಂಗೆ ಎದ್ದ. ಅವರೊಡನೆ ವೆಸೂವಿಯಸ್ ಪರ್ವತದಲ್ಲಿ ಆಶ್ರಯ ಪಡೆದ. ಅಲ್ಲಿ ಈಗಾಗಲೇ ಸೇರಿಕೊಂಡಿದ್ದ ಅನೇಕ ಗುಲಾಮರು ಇವನನ್ನು ಕೂಡಿಕೊಂಡರು. ಇವರು ಸ್ವಲ್ಪ ಶಸ್ತ್ರಾಸ್ತ್ರಗಳನ್ನು ಪಡೆದು ರೋಮನರ ಎರಡು ಪಡೆಗಳನ್ನು ಒಂದಾದ ಮೇಲೊಂದರಂತೆ ಸೋಲಿಸಿದರು; ದಕ್ಷಿಣ ಇಟಲಿಯ ಬಹುಭಾಗವನ್ನು ಗೆದ್ದರು, ಆರಂಭಕ್ಕೆ ಸೇ. 70 ರಷ್ಟಿದ್ದ ಯೋಧರ ಬಲ ಅನೇಕ ಸಾವಿರವಾಯಿತು. ಅನೇಕ ಗುಲಾಮರು ಇಟಲಿಯನ್ನು ಬಿಡಲು ಒಪ್ಪದಿದ್ದಾಗ ಈತ ಮತ್ತು ಈತನ ಒಡನಾಡಿಗಳೂ ಸಿಸಿಲಿಗೆ ಹೋಗಬೇಕೆಂದಿದ್ದಾಗ ಇವರನ್ನು ಹೊಸ ರೋಮನ್ ನಾಯಕ ಮಾರ್ಕಸ್ ಲಿಸಿನಿಯಸ್ ಕ್ರಾಸಸ್ ಎದುರಿಸಿ ಜರ್ಮನಿ ಮತ್ತು ಫ್ರಾನ್ಸ್ ಗುಲಾಮರನ್ನು ಸೋಲಿಸಿದ. ಸ್ಪಾರ್ಟಕಸ್ ಕೊನೆಯವರೆಗೂ ಶೂರತನದಿಂದ ಹೋರಾಡಿ ಮಡಿದ (ಕ್ರಿ.ಪೂ 71). ಸೆರೆ ಸಿಕ್ಕಿದ ಸಾವಿರಾರು ಗುಲಾಮರನ್ನು ಶಿಲುಬೆಗೇರಿಸಲಾಯಿತು.

ಕ್ರಿಸ್ತಪೂರ್ವ ಒಂದನೆಯ ಶತಮಾನದಿಂದ ಇಂದಿನವರೆಗೂ ಸ್ಪಾರ್ಟಕಸ್ ಎಂಬ ಹೆಸರು ಅನೇಕ ಕ್ರಾಂತಿಕಾರರ ಗುಪ್ತನಾಮವಾಗಿದೆ. ಎಂದೂ ನಂದದ ಮನುಷ್ಯನ ಸ್ವಾತಂತ್ರ್ಯದಾಹಕ್ಕೆ ಈತ ಸಂಕೇತವಾಗಿದ್ದಾನೆ. ಈತನ ಉದಾತ್ತ ಭಾವನೆ ಇಂದಿಗೂ ತುಳಿತಕ್ಕೆ ಒಳಗಾದವರ ಸ್ವಾತಂತ್ರ್ಯದ ಬಯಕೆಗೆ ಪ್ರೇರಣೆಯಾಗಿದೆ. (ಎಸ್.ಎಲ್.)