ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಪಿನೋಜ, ಬೆನಡಿಕ್ಟ್‌

ಸ್ಪಿನೋಜ, ಬೆನಡಿಕ್ಟ್ 1637-77. ಯುರೋಪಿನ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ. ಈತ 1632 ನವೆಂಬರ್ 24ರಂದು ಜನಿಸಿದ. ಈತ ಬುದ್ಧಿಪ್ರಧಾನವಾದಿ. ಗಣಿತ ಅಥವಾ ತರ್ಕಜ್ಞಾನದ ಶುದ್ಧ ಮಾರ್ಗವನ್ನನುಸರಿಸಿದರೆ ಮಾತ್ರ ಸಂಪೂರ್ಣ ಜ್ಞಾನ ಲಭಿಸುವುದೆಂಬುದು ಈತನ ಅಭಿಮತ. ಅಂಥ ಶುದ್ಧ ಮತ್ತು ಸಂಪೂರ್ಣ ಜ್ಞಾನದಿಂದ ದೇವರು, ಆತ್ಮ, ಪ್ರಕೃತಿ ಅಥವಾ ಪ್ರಕೃತಿಯಲ್ಲಡಗಿರುವ ಚೇತನವೆಲ್ಲವೂ ಒಂದೇ ಎನ್ನುವ ಸತ್ಯ ಅರಿವಾಗುತ್ತದೆ. ಅಂಥ ಜ್ಞಾನಸಾಧನೆ ಮಾಡಿದ್ದಾದರೆ ಎಲ್ಲವೂ ಸುಂದರವಾಗಿಯೇ ಕಂಡುಬರುತ್ತದೆ. ಒಂದು ವಸ್ತು ವಿಕೃತ ಅಥವಾ ಹೇಯವೆಂದು ಕಂಡುಬಂದಲ್ಲಿ, ಅದು ಕಾಣುವವನ ದೃಷ್ಟಿದೋಷ. ಪೂರ್ಣದೃಷ್ಟಿಯುಳ್ಳವನಿಗೆ ಯಾವುದೂ ವಿಕೃತವಲ್ಲ, ಅಸುಂದರವಲ್ಲ, ಹೇಯವಲ್ಲ, ಅಸಂಬದ್ಧವೂ ಅಲ್ಲ. ಅಸುಂದರವೆನ್ನುವುದು ನಮ್ಮ ಗ್ರಹಣಶಕ್ತಿಗೆ ಸಾಪೇಕ್ಷವಾಗಿರುವುದಲ್ಲದೆ ಸಮ್ಯಕ್‍ಜ್ಞಾನಿಯ ದೃಷ್ಟಿಗೆ ಸಮಸ್ತ ಸೃಷ್ಟಿಯಲ್ಲಿ ಎಲ್ಲವೂ ವಿಹಿತ ಹಾಗೂ ಸಮರಸವಾಗಿಯೇ ಕಾಣುತ್ತದೆಂದು ಈತ ಪ್ರತಿಪಾದಿಸಿದ. ಈತನ ಈ ಸೌಂದರ್ಯ ಸಿದ್ಧಾಂತ ಅರಿಸ್ಟಾಟಲನ ಸಿದ್ಧಾಂತದೊಂದಿಗೆ ಹೋಲುವುದನ್ನು ಕಾಣಬಹುದು. ಈತ ಯಹೂದಿ ಸಂಪ್ರದಾಯದ ಮೌಢ್ಯಗಳನ್ನು ಖಂಡಿಸಿ, ಬಹಿರಂಗಗೊಳಿಸಿದ ಕಾರಣ ಸಂಪ್ರದಾಯ ನಿಷ್ಠರ ವಿರೋಧ, ಸಾಮಾಜಿಕ ಬಹಿಷ್ಕಾರಗಳಿಗೆ ಗುರಿಯಾಗಬೇಕಾಯಿತು. ಜೀವನಯಾಪನೆ ಮಾಡಲು ಅನೇಕ ಕಷ್ಟಕಾರ್ಪಣ್ಯಗಳನ್ನು ಸಹಿಸಿದ. ಇದರಿಂದ ಇವನಿಗೆ ದೊರೆತ ಏಕಾಂತವಾಸ ತತ್ತ್ವಚಿಂತನೆಗೆ ಎಡೆಮಾಡಿತು. ಆಧ್ಯಾತ್ಮಿಕತೆಯ ಅಂತಿಮ ಘಟ್ಟ ಭಕ್ತಿರೂಪಾತ್ಮಕ ಜ್ಞಾನವೆಂದು (ಅಮೂರ್ ಇಂಟೆಲೆಕ್ಚುಯಾಲಿಸ್ ಡೈ) ಈತ ಹೇಳುತ್ತಾನೆ. ಎಥಿಕಾ ಈತನ ಪ್ರಸಿದ್ಧ ಗ್ರಂಥ. ಟ್ರಾಕೋಡಿಸ್ ಥಿಯಲ್ ಜಿಕೋ ಪೊಲಿಟಿಕಸ್ ಹಾಗೂ ದಿ ಇಂಟೆನಿಕ್ಟಾಸ್ ಎಮೆಂಗೇಷನ್ - ಇವು ಇವನ ಇತರ ಕೃತಿಗಳು.

ಮಾನವನ ಅಲ್ಪಮತಿಗೂ ಒಂದು ವಸ್ತು ಸುಂದರವಾಗಿ ಕಂಡುಬಂದಲ್ಲಿ ಸತ್ಯದ ಒಂದು ಅಂಶ ಅಲ್ಲಿ ಪ್ರಕಾಶ ಅಥವಾ ಪ್ರಕಟಗೊಂಡಿದೆ ಎಂದು ಭಾವಿಸಬೇಕು. ಮೂಲತತ್ತ್ವವಾದ ಸತ್ಯವನ್ನು ಪ್ರಕಾಶಗೊಳಿಸಿ, ನಮ್ಮ ಅಂತರ್ಗತ ಚೈತನ್ಯವನ್ನು ಉದ್ಬೋಧನ ಮಾಡುವುದೇ ಒಂದು ಕಲಾಕೃತಿಯ ಉದ್ದೇಶ. ಯಾವ ಕೃತಿ ಇದನ್ನು ಸಾಧಿಸಬಲ್ಲದೋ ಅದು ಸಫಲತೆಯನ್ನು ಹೊಂದಿದಂತೆಯೇ. ಅದೇ ಉತ್ತಮ ಕೃತಿ ಎಂಬುದು ಇವನ ಮತ. ಪಾಶ್ಚಾತ್ಯ ತತ್ತ್ವಜ್ಞಾನ ಕ್ಷೇತ್ರದಲ್ಲಿ ಈತನಿಗೆ ವಿಶಿಷ್ಟ ಸ್ಥಾನವಿದೆ. ಈತ 1677 ಫೆಬ್ರವರಿ 20ರಂದು ನಿಧನನಾದ. (ಕೆ.ಬಿ.ಆರ್.; ಎಮ್.ವೈ.)