ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಪ್ಯಾನಿಷ್ ಅಮೆರಿಕದ ಸಾಹಿತ್ಯ

ಸ್ಪ್ಯಾನಿಷ್ ಅಮೆರಿಕದ ಸಾಹಿತ್ಯ

ಲ್ಯಾಟಿನ್ ಅಮೆರಿಕದಲ್ಲಿ ಬೆಳೆದುಬಂದ ಸಾಹಿತ್ಯವನ್ನು ಈ ಹೆಸರಿನಲ್ಲಿ ಗುರುತಿಸುವ ಸಂಪ್ರದಾಯ ರೂಢಿಯಲ್ಲಿದೆ. ಮಧ್ಯ ಅಮೆರಿಕ (ಬಿಲೈಸ್ ಉಳಿದು), ದಕ್ಷಿಣ ಅಮೆರಿಕ (ಬ್ರಜಿಲ್ ಮತ್ತು ಗಿಯಾನಾಗಳನ್ನುಳಿದು), ಮೆಕ್ಸಿಕೊ, ಕ್ಯೂಬ, ಪೋರ್ಟೊರೀಕೊ ಪ್ಯೂಯೆರ್‍ಟೂ, ಡಾಮಿನಿಕನ್ ರಿಪಬ್ಲಿಕ್, ವೆಸ್ಟ್ ಇಂಡೀಸ್‍ನ ಕೆಲವು ದ್ವೀಪಗಳು-ಈ ಮುಂತಾದ ಪ್ರದೇಶಗಳಲ್ಲಿ ಸ್ಪ್ಯಾನಿಷ್ ಭಾಷೆ ಪ್ರಚಲಿತವಿದೆ. 1495ರಲ್ಲಿ ಕೊಲಂಬಸ್ ಅಮೆರಿಕವನ್ನು ಶೋಧಿಸಿದ ತರುಣದಲ್ಲಿ ಸ್ಪ್ಯಾನಿಷ್ ಭಾಷೆ ಮತ್ತು ಸಂಸ್ಕøತಿಗಳು ದಕ್ಷಿಣ ಅಮೆರಿಕ ಮಧ್ಯ ಅಮೆರಿಕ ಮತ್ತು ವೆಸ್ಟ್ ಇಂಡಿಸ್ ದ್ವೀಪಗಳಲ್ಲಿ ಬಿರುಸಿನಿಂದ ಹರಡಿದುವು. ಈ ಪ್ರದೇಶಗಳು ಸು. 300ವರ್ಷ ಸ್ಪ್ಯಾನಿಷ್ ವಸಾಹತುಗಳಾಗಿಯೇ ಉಳಿದಿದ್ದವು.

16ನೆಯ ಶತಮಾನ : ಮೊದಲಿಗೆ ಸ್ಪ್ಯಾನಿಷ್ ಯೋಧರು ಮತ್ತು ಪಾದ್ರಿಗಳು ಹೊಸ ಭೂಭಾಗಗಳನ್ನೂ ತಮ್ಮ ಜಯಗಳನ್ನೂ ವರ್ಣಿಸುವ ಲೇಖನಗಳನ್ನು ಬರೆದರು. ಇವುಗಳಲ್ಲಿ ಸುದೀರ್ಘವಾದವು ಗೋನ್ಸಾಲೊ ಎರ್ನಾಂಡೆತ್ ವಾಲ್ಡೇಸ್‍ನ (1478-1557) ಇಂಡೀಸ್ ಪ್ರದೇಶಗಳ ಪ್ರಾಕೃತಿಕ ಮತ್ತು ಸಾಮಾನ್ಯ ಚರಿತ್ರೆಯ ಸಂಗ್ರಹ (1526) ಮತ್ತು ಫ್ರಾನ್ಸಿಸ್ಕೊ ಲೋಪೆ ದೆ ಗೋಮಾರಾನ (1474-1566) ಇಂಡೀಸ್ ದೇಶಗಳ ವಿನಾಶದ ಸಂಕ್ಷಿಪ್ತ ನಿರೂಪಣೆಗಳು. ಗಾರ್ಸಿಲಾಸೊ ದೆ ಲಾ ವೇಗ (1540-1616) ಮತ್ತು ಫರ್ನಾಂಡೊ ಡೆ ಲಾ ಅಲ್ವ ಇಶಿಟ್ಲಕೊಚಿತ್ಲ್ ಎಂಬ ಇಬ್ಬರು ಇತಿಹಾಸ ಲೇಖಕರು ರೆಡ್ ಇಂಡಿಯನ್ ಭಾಷೆಗಳ ವ್ಯಾಕರಣ, ನಿಘಂಟುಗಳನ್ನು ಬರೆದುದಲ್ಲದೆ ಆ ಭಾಷೆಗಳಲ್ಲಿ ಕ್ರೈಸ್ತಬೋಧೆಗಳನ್ನೂ ಸ್ತುತಿಪದ್ಯಗಳನ್ನೂ ಬರೆದರು. ಈ ಶತಮಾನದಲ್ಲಿ ಸ್ಪ್ಯಾನಿಷ್ ಅಮೆರಿಕದಲ್ಲಿ ಬೌದ್ಧಿಕ ಚಟುವಟಿಕೆ ಇಲ್ಲದಿರಲಿಲ್ಲ. ಅರಿಯೋಸ್ಟೋವಿನ ಪ್ರಭಾವ ಸಾಹಿತ್ಯದಲ್ಲಿ ವಿಸ್ತರಿಸಿತ್ತು. ಆದರೆ ಚಿಲಿದೇಶದ ಕವಿ ಪೇದ್ರೂ ಡೆ ಓನ್ಯಾ ಬರೆದ ಆರೋಕೊ ಡೋಮಾಡೊ (1594) ಎಂಬ ಇತಿಹಾಸ ಕಾವ್ಯವೂ ಪೋರ್ಟೊರೀಕೋವಿನ ಪಾದ್ರಿ ಬರ್ನಾರ್ಡೋ ಡೆ ಬಾಲ್‍ಬ್ವೇನಾ (1568-1627) ಬರೆದ ವರ್ಣನಾತ್ಮಕ ಕಾವ್ಯವೂ ರೆಡ್ ಇಂಡಿಯನ್ ಕಥಾ ವಸ್ತುವನ್ನು ಕುರಿತವುಗಳಾಗಿವೆ.

17ನೆಯ ಶತಮಾನ : ಈ ಶತಮಾನದಲ್ಲಿ ಗಾಂಗೋರ ಕವಿಯ ಪ್ರಭಾವ ಸ್ಪ್ಯಾನಿಷ್ ಅಮೆರಿಕದಲ್ಲಿ ವಿಶೇಷವಾಗಿತ್ತು. ಗಾಸೀಂಟೊ ಡೆ ಏವೀಯನ ಪದ್ಯ ಮತ್ತು ಗದ್ಯ ಸಂಕಲನದಲ್ಲೂ ಜುಆನ್‍ಡೆ ಎಸ್ಪಿನ್ಯೋಸಾ ಮೇಡ್ರಾನೊವಿನ ಕಾವ್ಯ ವಿಮರ್ಶೆಯಲ್ಲಿಯೂ ಸೋರ್ ಜುಆನ್ ಈನೇಸ್ ಡೆಲಾಕ್ರೂಸ್(1651-95) ಬರೆದ ಅನುಭಾವ ಕವನಗಳಲ್ಲೂ ಗಾಂಗೋರನ ಪ್ರಭಾವ ಎದ್ದುಕಾಣುವುದು. ಮೆಕ್ಸಿಕೋದಲ್ಲಿ ಹುಟ್ಟಿ ಸ್ಪೇನಿಗೆ ಹೋಗಿ ನೆಲಸಿದ ಪ್ರಸಿದ್ಧ ನಾಟಕಕಾರ ಅಲರ್ಕಾನ್‍ನಲ್ಲಿ ಮಾತ್ರ ಇಂಥ ಪ್ರಭಾವ ಕಂಡುಬರುವುದಿಲ್ಲ.

18-19ನೆಯ ಶತಮಾನ : ಈ ಶತಮಾನದಲ್ಲಿ ಮೆಕ್ಸಿಕೊ, ಬ್ರಜಿಲ್, ಉರುಗ್ವೆ ಮುಂತಾದ ಅನೇಕ ದೇಶಗಳಲ್ಲಿ ತಮ್ಮ ತಮ್ಮ ದೇಶ ಪ್ರೇಮದಿಂದ ಪ್ರೇರಿತವಾದ ಲೇಖನಗಳ ಹೊರತು ಹೆಚ್ಚು ಸಾಹಿತ್ಯ ಸೃಷ್ಟಿಯಾಗಲಿಲ್ಲ. ಫ್ರೆಂಚ್ ಮಹಾಕ್ರಾಂತಿಯ ಕಿರುಪುಸ್ತಕಗಳೂ ಸ್ಪ್ಯಾನಿಷ್ ಅಮೆರಿಕ ಕ್ರಾಂತಿಕಾರಿ ಪತ್ರಿಕೆಗಳೂ ಸ್ಪ್ಯಾನಿಷ್ ದಬ್ಬಾಳಿಕೆಯನ್ನು ಖಂಡಿಸಿ ಸ್ಪೇನಿನ ವಿರುದ್ಧ ವಸಾಹತುಗಳ ಸ್ವಾತಂತ್ರ್ಯ ಸಮರಕ್ಕೆ ಕರೆಗೊಟ್ಟವು. ಈ ಪ್ರೇರಣೆಯ ಲೇಖಕರಲ್ಲಿ ಮುಖ್ಯರಾದವರೆಂದರೆ ಈಕ್ವೆಡಾರಿನ ಜೊಸೆ ಗೋಯಾಕೀನ್ ಒಲ್ಮೇಡೊ (1784-1847) ಮತ್ತು ಕ್ಯೂಬದ ಜೊಸೆ ಮರೀಯ ಡೆ ಎರೇಡೀಯ (1803-39). ಸ್ವಾತಂತ್ರ ಸಮರದ ಅಂತ್ಯದಲ್ಲಿ ಸ್ಪ್ಯಾನಿಷ್ ಅಮೆರಿಕದಲ್ಲಿ ಸ್ಪೇನಿನ ಬಗ್ಗೆ ಜುಗುಪ್ಸೆ ಬೆಳೆದಿತ್ತು. ಹಾಗಾಗಿ ಅಲ್ಲಿಯ ಲೇಖಕರು ಮೂಲನಿವಾಸಿಗಳ ಜೀವನವನ್ನು ಕಥಾವಸ್ತುವನ್ನಾ ಗಿಸಿಕೊಂಡು ಬರೆಯತೊಡಗಿದರು. ಈ ಬಗೆಯ ಕೃತಿಗಳಲ್ಲಿ ಆರ್ಜೆಂಟೀನದ ಕವಿ ಎಸ್ಟೆವಾನ್ ಎಚೇಎರ್ರೀಯ (1805-51) ಬರೆದ ಲಾ ಕೌಟೀವ ಮತ್ತು ಬ್ರಜಿಲ್‍ನ ಡೋಮಿಂಗ್ಸ್ ಜೊಸೆ ಗೋನ್ಸಾಲ್ವಿಸ್ ದೆ ಮಾಗಲ್ಯೇಯಸ್ (1811-82) ಬರೆದ ಟಮೋಯದ ಬಂಡಾಯ ಎಂಬ ಕಾವ್ಯಗಳು ಗಣನೀಯವಾದವು. ಪ್ಯಾರಿಸಿನಲ್ಲಿ ಅಧ್ಯಯನ ಮಾಡಿ ಬಂದವರಿಂದ ಸ್ಪ್ಯಾನಿಷ್ ಅಮೆರಿಕಕ್ಕೆ ಫ್ರೆಂಚ್ ರೊಮ್ಯಾಂಟಿಕ್ ಸಾಹಿತ್ಯದ ಪ್ರಭಾವ ಬೀರಲಾರಂಭಿಸಿತು. ಜುಆನ್ ಮರೀಯ ಗೂಟಿಯೆರ್ರೇಸ್ (1809-70) ಸಂಗ್ರಹಿಸಿದ ಅಮೆರಿಕ ಪೋಯೇಟಿಕ ಎಂಬ ಕವಿತಾ ಸಂಕಲನ, ಜೊಸೆ ಮಾರ್ಮೋಲ್ (1818-81) ಬರೆದ ಎಲ್‍ಪೆರೆಗ್ರೀ ನೊ ಮತ್ತು ಆರ್ಜೆಂಟೀನದ ಓಲೆಗಾರಿಯೋ ವಿಕ್ಟೋರ್ ಆಂಡ್ರಾಡ್ (1838-83) ಬರೆದ ಅಟ್ಲಾಂಟೀಡ-ಈ ಕಾವ್ಯಗಳಲ್ಲಿ ಫ್ರೆಂಚ್ ರೊಮ್ಯಾಂಟಿಕ್ ಪ್ರೇರಣೆ ಇರುವುದು ಕಾಣಬರುತ್ತದೆ. ಕೆಲವು ಕಡೆ ರೊಮ್ಯಾಂಟಿಕ್ ಪ್ರೇರಣೆ ಸ್ಪೇನಿನಿಂದಲೇ ಬಂತು. ಮೆಕ್ಸಿಕೊದ ಇಗ್ನಾಸೀಯೊ ರೋಡ್ರೀಗೆಸ್ ಗಾಲ್ವಾನ್ (1816-42) ಮತ್ತು ಫರ್ನಾಂಡೊ ಕಾಲ್ಡೇರಾನ್ ಇ ಬೇಲ್ಟ್ರಾನ್ (1809-54) - ಇವರು ಎಸ್ಪೋನ್ಸೀಡ ಮತ್ತು ತೋರ್ರೀಲ್ಯರ ಮೇಲ್ಪಂಕ್ತಿಯಲ್ಲಿ ಭಾವಗೀತೆಗಳನ್ನೂ ನಾಟಕಗಳನ್ನೂ ಬರೆದರು.

ರೊಮ್ಯಾಂಟಿಕ್ ಯುಗದ ಸ್ಪ್ಯಾನಿಷ್ ಅಮೆರಿಕದಲ್ಲಿ ಮೂರು ಮಹತ್ತ್ವದ ಕಾದಂಬರಿಗಳು ರಚಿತವಾದುವು. ಮಾರ್ಮೋಲ್‍ನ ಅಮೇಲಿಯ, ಗೋರ್ಗೆ ಈಸಾಕ್‍ನ (1837-1895) ಮರೀಯ, ಗೋಯಕೀಮ್ ಮನೋಯೆಲ್ ದೆ ಮಾಸೇದೊನ (1820-82) ಮೋರೆನ್ನೀಹ್ನ. ಜುಆನ್ ತೋರ್ರೀಲ್ಯ ಸಾನ್ ಮಾರ್ಟೀನ್‍ನ (1855-1931) ಟಾಬಾರೆ ಎಂಬುದು ಒಂದು ಪದ್ಯ ಕಾದಂಬರಿಯಾಗಿದೆ (1888).

19ನೆಯ ಶತಮಾನದಲ್ಲಿ ಗೌಚೆಸ್ಕಾ ಎಂಬ ಒಂದು ವಿಶಿಷ್ಟ ಸಾಹಿತ್ಯ ಸ್ಪ್ಯಾನಿಷ್ ಅಮೆರಿಕದಲ್ಲಿ ಬೆಳೆಯಿತು. ಇದು ಗೌಚೊ ಅಥವಾ ರೆಡ್ ಇಂಡಿಯನ್ ಮೂಲ ನಿವಾಸಿ ಗೊಲ್ಲ ಕುರುಬರ ಜೀವಿತದ ಐತಿಹ್ಯ ಕುರಿತದ್ದು. ಈ ವಸ್ತುವನ್ನು ಮೊದಲು ಬಾರ್ತೊಲೋಮೆ ಇಡಾಲ್ಗೊ (1788-1823) ಎಂಬಾತ ತನ್ನ ಗಾರೊ ಇ ಕಾಂಟ್ರೆರಾಸ್ ಎಂಬ ಕೃತಿಯಲ್ಲಿಯೂ ಡೋಮಿಂಗೊ ಫೌಸ್ಟೀನೊ ಸಾರ್‍ಮ್ಯೇಂಟೋ ತನ್ನ ಫೆಕುಂಡೊ (1845) ಎಂಬ ಕೃತಿಯಲ್ಲಿಯೂ ಬಳಸಿಕೊಂಡಿದ್ದರು. ಅನಂತರದಲ್ಲಿ ಈ ವಸ್ತುವಿನ ಮೇಲೆ ಎಸ್ಟಾನಿಸ್ಲಾವೊ ಡೆಲ್ ಕಾಂಪೊ ಎಂಬಾತ ಫೌಸ್ಟೊ ಎಂಬ ಭವ್ಯಕಾವ್ಯವನ್ನೂ ಜೋಸೆ ಎರ್ನಾಂಡೆ ಎಂಬಾತ ಮಾರ್ಟೀನ್ ಫ್ಯೇರ್ರೊ (1872) ಎಂಬ ಭವ್ಯಕಾವ್ಯವನ್ನೂ ಗಿರಾಲ್ಡೇಸ್ ಎಂಬಾತ ಡಾನ್ ಸೇಗುಂಡೊ ಸೋಂಬ್ರೆ ಎಂಬ ಕಾದಂಬರಿಯನ್ನೂ ಆಸ್ಕಾಸೂಬಿ ಎಂಬಾತ ಸಾಂಟೋಸ್‍ವೇಗ ಎಂಬ ಕಾವ್ಯವನ್ನೂ ಬರೆದರು.

20ನೆಯ ಶತಮಾನ : ಈ ಶತಮಾನದಲ್ಲಿ ಮುಖ್ಯವಾಗಿ ಎರಡು ಪ್ರೇರಣೆಗಳು ಎದ್ದು ಕಾಣುತ್ತವೆ. ಒಂದನೆಯದು ಮೋಡೆರ್ನಿಸ್ಟಾ ಅಥವಾ ನವ್ಯಕಾವ್ಯ. ಇದರಲ್ಲಿ ಮುಖ್ಯವಾಗಿ ಕಾವ್ಯದ ಬಾಹ್ಯರೂಪವಾದ ಛಂದಸ್ಸು, ಶಬ್ದಪ್ರಯೋಗ ಇತ್ಯಾದಿ ವಿಷಯಗಳಿಗೆ ಪ್ರಧಾನ ಆದ್ಯತೆ. ಈ ಪಂಥದ ಪ್ರವರ್ತಕ ರೂಬೀನ್ ಡಾರೀಯೊ. ಇನ್ನೊಂದು ಬಗೆಯ ಪ್ರೇರಣೆ ಅಮೆರಿಕನಿಸ್ಮೊ ಅಥವಾ ಕ್ರಿಯೋಲೀಸ್ಮೊ - ಅಂದರೆ ಅಮೇರಿಕೀಯತೆ. ಈ ಪಂಥದ ಕಾವ್ಯವಸ್ತುವು ಅಮೆರಿಕದ ಜೀವನ, ರಾಷ್ಟ್ರೀಯತೆ ಮತ್ತು ಸ್ಪ್ಯಾನಿಷ್ ಅಮೆರಿಕನ್ ಬುಡಕಟ್ಟಿನ ಏಕತೆಯನ್ನು ಕುರಿತಿರಬೇಕೆಂಬ ಅಭಿಲಾಷೆಯಿಂದ ಹುಟ್ಟಿದುದು. ಆರಿಯೆಲ್ ಎಂಬ ಸಂದೇಶಾತ್ಮಕ ಪ್ರಬಂಧವನ್ನು ಬರೆದ ಉರುಗ್ವೆ ಲೇಖಕ ಜೊಸೆ ಎನ್‍ರೀಕೆ ರೋಡೊ (1872-1917) ಇದರ ಪ್ರೇರಕ. ಜೊಸೆ ಸಾಂಟೋಸ್ ಚೋಕಾನೊ (1875-1934) ಎಂಬ ಕವಿ, ಮಾನ್ವೆಲ್ ರಾಮೇರೊ ಗಾರ್ತೀಯ (1865-1916) ಎಂಬ ಕಾದಂಬರಿಕಾರ, ಫ್ಲೋರೆಂತಿಯೊ ಸಾಂಚೇಸ್ (1875-1910) ಎಂಬ ನಾಟಕಕಾರ ಮುಂತಾದವರು ಈ ಬಗೆಯ ಕೃತಿಗಳನ್ನು ರಚಿಸಿದವರಲ್ಲಿ ಮುಖ್ಯರಾದವರು.

ಈ ಶತಮಾನದಲ್ಲಿ ಸ್ಪ್ಯಾನಿಷ್ ಅಮೆರಿಕನ್ ರಾಜ್ಯಗಳಲ್ಲಿ ಆರ್ಥಿಕ ಔದ್ಯೋಗಿಕ ಪ್ರಗತಿಯಿಂದ ಉತ್ಪನ್ನವಾದ ಸಾಮಾಜಿಕ ಅಸಮಾನತೆಗಳ ಬಗ್ಗೆ ಪ್ರತಿಭಟನೆ ಕಾವ್ಯದಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಕ್ರಾಂತಿ ಸಾಹಿತ್ಯಕ್ಕೆ ಪ್ರಧಾನರೂಪವಾಗಿರುವ ಕಾದಂಬರಿಯಲ್ಲಿ ವ್ಯವಸಾಯ, ಉದ್ಯಮ, ಮತ, ಬುಡಕಟ್ಟು ಮುಂತಾದ ಅನೇಕ ಸಮಸ್ಯೆಗಳ ಮಥನ ಕಾಣಬರುತ್ತದೆ. ಮೆಕ್ಸಿಕೊದ ಮರೀಯಾನೋ ಆತೇಲ, ಮಾರ್ಟೀನ್ ಲೂಯಿಸ್ ಗಸ್ಮಾನ್, ಗ್ರೇಗಾರಿಯೊ ಲೋಪೆ ಇ ಫ್ವೇಂಟೀಸ್ - ಇವರು ಈ ಬಗೆಯ ಕಾದಂಬರಿ ಸಾಹಿತ್ಯವನ್ನು ಬೆಳೆಸಿದ ಮುಖ್ಯ ಲೇಖಕರು. ವೆನಿಜೂವೆಲಾ ಮತ್ತು ಕೊಲಂಬಿಯ ರಾಜ್ಯಗಳಲ್ಲಿ ರೊಮೂಲೊ ಗಾಯೇಗಾಸ್ ಮತ್ತು ಹೋಸೆ ಎ ಯೂಸ್ಟಾಸಿಯೊ ರೀವೇರಾ ಎಂಬವರು ಕ್ರಮವಾಗಿ ಹುಲ್ಲುಗಾವಲು ಪ್ರದೇಶ ಮತ್ತು ಕಾಡು ಪ್ರದೇಶಗಳ ಜೀವನವನ್ನು ನಿಷ್ಠುರ ವಾಸ್ತವಿಕತೆಯಲ್ಲಿ ಚಿತ್ರಿಸಿದ್ದಾರೆ.

ಸ್ಪ್ಯಾನಿಷ್ ಅಮೆರಿಕದ ಕಾದಂಬರಿ ಸಾಹಿತ್ಯದಲ್ಲಿ ಇನ್ನೊಂದು ಪ್ರಮುಖ ವಸ್ತುವೆಂದರೆ ಪರಕೀಯರ ಆಳಿಕೆಯಲ್ಲಿ ಸಿಕ್ಕಿಬಿದ್ದ ಅಮೆರಿಕನ್ ಇಂಡಿಯನ್ ಜನರ ಸಮಸ್ಯೆಗಳು. ಪೆರುವಿನ ಸೀರೊ ಆಲೇಗ್ರಿಯ, ಈಕ್ವೆಡಾರಿನ ಗೋರ್ಗ್ ಈಕಾಸ, ಮೆಕ್ಸಿಕೊದ ಮರೀಯಾನೊ ಆತ್ವೇಲ ಮುಂತಾದವರು ಈ ಬಗೆಯ ಉದ್ದಾಮ ಕಾದಂಬರಿಗಳನ್ನು ಬರೆದಿದ್ದಾರೆ. ಪೋರ್ಟೊರೀಕೊವಿನ ಲೂಯಿಸ್ ಪಾಲೇಸ್ ಮಾಟೋಸ್ ಮತ್ತು ಕ್ಯೂಬದ ನಿಕೊಲಾಸ್ ಗೀಲ್ಯೇನ್ ಎಂಬುವರು ಕವಿತೆಗಳನ್ನು ಬರೆದಿದ್ದಾರೆ. ಇವರಲ್ಲಿ ಅತ್ಯುತ್ತಮ ಕವಿ ಚಿಲಿದೇಶದ ಪಾಬ್ಲೊ ನೆರೂಡ. ಇತ್ತೀಚೆಗೆ ಸ್ಪ್ಯಾನಿಷ್ ಅಮೆರಿಕದ ಸಾಹಿತ್ಯ ಸ್ಪೇನಿನಿಂದ ಸ್ಫೂರ್ತಿ ಪಡೆಯುವ ಬದಲು ತಾಯಿನುಡಿಗೇ ಸ್ಫೂರ್ತಿ ನೀಡುವ ರೀತಿಯಲ್ಲಿ ಬೆಳೆಯತೊಡಗಿದೆ.

(ಎಂ.ಕೆ.ಕೆ.)