ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಫೀತಾತ್ಮಕ ವಿಶ್ವ

ಸ್ಫೀತಾತ್ಮಕ ವಿಶ್ವ

ಮಹಾಬಾಜಣೆವಾದ (ಬಿಗ್ ಬ್ಯಾಂಗ್) ಸಮರ್ಪಕವಾಗಿ ವಿವರಿಸಲಾಗದ ಅಸಂಖ್ಯ ವೀಕ್ಷಣ ಮಾಹಿತಿಗಳನ್ನು ಅರ್ಥವಿಸಲು ಅಲನ್ ಎಚ್. ಗುತ್ 1980ರಲ್ಲಿ ಮಂಡಿಸಿದ ವಿನೂತನ ಪರಿಕಲ್ಪನೆ (ಇನ್‍ಫ್ಲೇಶನರಿ ಯೂನಿವರ್ಸ್). ಯಾವುದೇ ಲಭ್ಯ ಸಿದ್ಧಾಂತ ವ್ಯವಹರಿಸುವ ಚೌಕಟ್ಟಿನಲ್ಲಿ ವಿರೋಧಾಭಾಸ ಹಣುಕಿದರೆ ವಿಜ್ಞಾನಿಗಳು ಅಲ್ಲೊಂದು ಹೊಸಹಾದಿ ಕವಲೊಡೆಯುವುದನ್ನು ಕಾಣುತ್ತಾರೆ ಮತ್ತು ಅದರ ಕೂಲಂಕಷ ಶೋಧನೆಗೆ ಮುಂದಾಗುತ್ತಾರೆ. ಕೇವಲ ಭೌತವಿಜ್ಞಾನ ಕುರಿತು ಹೇಳುವುದಾದರೆ ನ್ಯೂಟನ್ ಪ್ರವರ್ತಿಸಿದ ವಿಶ್ವಗುರುತ್ವಾಕರ್ಷಣ ಸಿದ್ಧಾಂತ (17-18ನೆಯ ಶತಮಾನ), ಪ್ಲಾಂಕ್ ಮಂಡಿಸಿದ ಶಕಲಸಿದ್ಧಾಂತ (1900), ಐನ್‍ಸ್ಟೈನ್ ರೂಪಿಸಿದ ಸಾಪೇಕ್ಷತಾ ಸಿದ್ಧಾಂತಗಳು (1905, 1915) ಎಲ್ಲವೂ ಹೀಗೆ ವಿರೋಧಾಭಾಸಜನ್ಯಗಳೇ.

ಚಿತ್ರ-1

ಮಹಾಬಾಜಣೆವಾದವನ್ನು ವಿಶ್ವದ ಶಿಷ್ಟಪ್ರತಿರೂಪ ಎನ್ನುತ್ತೇವೆ (ಸ್ಟ್ಯಾಂಡರ್ಡ್ ಮೋಡೆಲ್). ಇಂದಿನ ವಿಸ್ತøತವಿಶ್ವ ಅಂದು ಅಂಡವಿಶ್ವವೆಂಬ ಏಕಘಟಕವಾಗಿ ಸಿಡಿದುಕೊಂಡಿತ್ತು. ಸ್ವಂತ ಗುರುತ್ವ, ಇದರ ಪರಿಣಾಮವಾಗಿ ಸಂಜನಿಸಿದ ಸಂಮರ್ದ ಹಾಗೂ ಅತಿತಾರ ಉಷ್ಣತೆಗಳನ್ನು ಭರಿಸಲಾಗದೇ ಇದು ಹಠಾತ್ತನೆ ಆಸ್ಫೋಟಿಸಿತು. - ಸು. 15 x 109 ವರ್ಷಗಳ ಹಿಂದೆ. ಮುಂದೆ ಕ್ರಮಶಃ ವ್ಯಾಕೋಚಿಸುತ್ತ ವರ್ತಮಾನ ಸ್ಥಿತಿಗೆ ಬಂದಿದೆ - ಇದಕ್ಕೆ ವ್ಯಾಕೋಚನಶೀಲ ವಿಶ್ವ (ಎಕ್ಸ್‍ಪಾಂಡಿಂಗ್ ಯೂನಿವರ್ಸ್) ಎಂದು ಹೆಸರು. ಈ ವಾದವನ್ನು ಪುರಸ್ಕರಿಸುವ ವಾಸ್ತವ ಮಾಹಿತಿಗಳು ಸಮೃದ್ಧವಾಗಿ ದೊರೆತಿವೆ. ಎಂದೇ ಇದಕ್ಕೆ ವಿಶ್ವದ ಶಿಷ್ಟ ಪ್ರತಿರೂಪವೆಂಬ ಹೆಸರು.

ಆದರೂ ಇದರಲ್ಲಿ ವಿವರಿಸಲಾಗದ ವೀಕ್ಷಿತ ವಿವರಗಳು ಸು.1970ರ ಅನಂತರ ಖಭೌತವಿಜ್ಞಾನಿಗಳ ಅರಿವಿಗೆ ಬಂದುವು. ಇವುಗಳಿಗೆ ಸಮರ್ಪಕ ವಿವರಣೆ ಅರಸುತ್ತಿದ್ದಾಗ ದೊರೆತದ್ದೇ ಸ್ಫೀತಾತ್ಮಕ ಪ್ರತಿರೂಪ. ಇದರ ಪ್ರಕಾರ ಆರಂಭದಲ್ಲಿ ಪ್ರೋಟಾನಿನ ಗಾತ್ರಕ್ಕಿಂತಲೂ ಕಿರಿದಾಗಿದ್ದ ಆದಿಮ ವಿಶ್ವ ಮೊದಲ 10-30 ಸೆಕೆಂಡಿನಷ್ಟು ಅತ್ಯಲ್ಪ ಕಾಲದಲ್ಲಿ ಹಠಾತ್ತನೆ 1050 ಮಡಿ ವ್ಯಾಕೋಚಿಸಿ ಕಾಲ್ಚೆಂಡಿನ ಗಾತ್ರಕ್ಕೆ ಹಿಗ್ಗಿತು. ಈ ಅತಿ ಹ್ರಸ್ವ ಆದರೆ ಸಂಧಿಸ್ಥ ಅವಧಿಯಲ್ಲಿ ವಿಶ್ವವಿಡೀ ಬಹುತೇಕ ಶೂನ್ಯವಾಗಿತ್ತು. ಅದರ ವಿಭವರಾಶಿ ಮತ್ತು ಶಕ್ತಿ ಇನ್ನೂ ಕಣರೂಪ ತಳೆಯಲಾರದವಾಗಿದ್ದುವು. ಏಕೆಂದರೆ ದೇಶ (ಸ್ಪೇಸ್) ಅತಿ ತ್ವರಿತಗತಿಯಲ್ಲಿ ವ್ಯಾಕೋಚಿಸುತ್ತಿತ್ತು. ಅದೊಂದು ಪ್ರಾವಸ್ಥಾವ್ಯತ್ಯಯ ಕ್ಷಣ (ಫೇಸ್ ಚೇಂಜ್ ಇನ್‍ಸ್ಟೆಂಟ್). ಕ್ರಮೇಣ ಅಂದರೆ 10-30 ಸೆಕೆಂಡಿನ ಅನಂತರ ಸ್ಫೀತಾತ್ಮಕ ಪ್ರತಿರೂಪ ಶಿಷ್ಟ ಪ್ರತಿರೂಪದೊಡನೆ ಸಂಗಮಿಸಿತೆಂಬುದು ಈ ವಾದದ ಸಾರ. (ನೋಡಿ- ವಿಶ್ವ) *