ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಯಾಂಡ್ಬರ್ಗ್, ಕಾರ್ಲ್

ಸ್ಯಾಂಡ್‍ಬರ್ಗ್, ಕಾರ್ಲ್ 1878-1967. ಅಮೆರಿಕದ ಕವಿ. ಶಿಕಾಗೊದಲ್ಲಿ 1878ರಲ್ಲಿ ಜನಿಸಿದ. ತನ್ನ 13ನೆಯ ವಯಸ್ಸಿನಲ್ಲೆ ಶಾಲೆಯನ್ನು ಬಿಟ್ಟು ಗಾರೆಕೆಲಸದವನಾಗಿ, ಬೆಳೆ ಕಟಾವು ಮಾಡುವ ಕೂಲಿಯಾಳಾಗಿ, ಅಡುಗೆಯವನಾಗಿ ನಾನಾವಿಧದ ಕೆಲಸಗಳಲ್ಲಿ ತೊಡಗಿದ. ಸ್ಪ್ಯಾನಿಷ್-ಅಮೆರಿಕ ಯುದ್ಧದಲ್ಲೂ ಭಾಗವಹಿಸಿದ್ದ. ಅನಂತರ ಗ್ಯಾಲ್ಸ್‍ಬರ್ಗ್‍ನ ಮೊರಿಬಾಲ್ಡ್ ಕಾಲೇಜಿನಲ್ಲಿ ಡಿ.ಲಿಟ್ ಪದವಿ ಪಡೆದ. ಶಿಕಾಗೊ ಮತ್ತು ಮಿಲ್‍ಪೌಕಿಯಲ್ಲಿ ಪತ್ರಿಕೋದ್ಯಮಿಯಾಗಿದ್ದಾಗ ಪದ್ಯಗಳನ್ನು ಬರೆದ. ಇಂಪಾದ ತನ್ನ ಗಾಯನದಿಂದ ಬಂದ ಹಣದಲ್ಲಿ ದೇಶವನ್ನು ಸುತ್ತಿದ. ಹೀಗೆ ಸುತ್ತುವಾಗ ಅಮೆರಿಕದ ಜನಪದಗೀತೆಗಳು ಮತ್ತು ಲಾವಣಿಗಳನ್ನು ಸಂಗ್ರಹಿಸಿ ದಿ ಅಮೆರಿಕನ್ ಸಾಂಗ್‍ಬ್ಯಾಗ್ ಎಂಬ ಹೆಸರಿನಲ್ಲಿ ಪ್ರಕಟಿಸಿದ (1927). ಸಮಕಾಲೀನ ಅಭಿರುಚಿಗೆ ಸವಾಲೆಸೆಯುವ ರೀತಿಯಲ್ಲಿ ಆಡುಮಾತಿನ ಶೈಲಿ ಹಾಗೂ ಮುಕ್ತಛಂದವನ್ನು ಬಳಸಿ ಕಾವ್ಯ ರಚಿಸಿದ. ಒಂದನೆಯ ಮಹಾಯುದ್ಧದ ಅವಧಿಯಲ್ಲಿ ಹಾಗೂ ಅನಂತರ ಬರೆದ ಶಿಕಾಗೊದ ಲೇಖಕರಲ್ಲಿ ಈತ ಪ್ರಮುಖನಾಗಿ ಹೊರಹೊಮ್ಮಿದ. ಅಬ್ರಹಾಮ್ ಲಿಂಕನ್‍ನ ಜೀವನ ಚರಿತ್ರೆಯ ಆರು ಸಂಪುಟಗಳು (1926-29) ಇವನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿರುವ ಗದ್ಯಕೃತಿ. ಇದಲ್ಲದೆ ಕಥೆ, ಕಾದಂಬರಿಗಳನ್ನೂ ಮಕ್ಕಳ ಸಾಹಿತ್ಯವನ್ನೂ ಬರೆದಿದ್ದಾನೆ. ಶಿಕಾಗೊ ಪೊಯಮ್ಸ್ (1916) ಮತ್ತು ದಿ ಪೀಪಲ್, ಎಸ್ ಗಳಲ್ಲಿ ವಿಟ್‍ಮನ್‍ನನ್ನು ನೆನಪಿಗೆ ತರುವ ಶೈಲಿಯಲ್ಲಿ ಆಧುನಿಕ ಕೈಗಾರಿಕಾ ಜೀವನವನ್ನು ನಿರೂಪಿಸಿದ್ದಾನೆ. ಇವನ ಇತರ ಸಂಗ್ರಹಗಳೆಂದರೆ ಕಾರ್ನ್‍ಹಸ್ಕರ್ಸ್ (1918), ಸ್ಮೋಕ್ ಅಂಡ್ ಸ್ಟೀಲ್ (1920), ಗುಡ್ ಮಾರ್ನಿಂಗ್ ಅಮೆರಿಕ (1928), ಕಂಪ್ಲೀಟ್ ಪೊಯೆಮ್ಸ್ (1950). ಮಕ್ಕಳಿಗಾಗಿ ಕಥೆಗಳು ಹಾಗೂ ಕವನಗಳನ್ನು ರಚಿಸಿದ್ದಾನೆ. 1948ರಲ್ಲಿ ಪ್ರಕಟಿಸಿದ ರಿಮೆಂಬ್ರೆನ್ಸ್ ರಾಕ್ ಎಂಬ ಬೃಹತ್ ಕಾದಂಬರಿ ಅಮೆರಿಕದ ಕುಟುಂಬವೊಂದರ ಆಂಗ್ಲ ಮೂಲವನ್ನು ಶೋಧಿಸುತ್ತದೆ. ಆಲ್ವೇಸ್ ದ ಯಂಗ್ ಸ್ಟ್ರೇಂಜರ್ (1953) ಇವನ ಆತ್ಮ ಚರಿತ್ರೆ. ಇವನ ಸಮಗ್ರ ಪದ್ಯ ಸಂಗ್ರಹಕ್ಕೆ ಪುಲಿಟ್ಜರ್ ಪ್ರಶಸ್ತಿ ದೊರಕಿದೆ (1950). ಈತ 1967ರಲ್ಲಿ ನಿಧನನಾದ. (ಎಂ.ಕೆ.ಎನ್.)