ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಯಾಮ್ಯುಯಲ್, ಹರ್ಬರ್ಟ್ ಲೂಯಿಸ್ ಸ್ಯಾಮ್ಯುಯಲ್

ಸ್ಯಾಮ್ಯುಯಲ್, ಹರ್ಬರ್ಟ್ ಲೂಯಿಸ್ ಸ್ಯಾಮ್ಯುಯಲ್ 1870-1963 ಇಂಗ್ಲೆಂಡಿನ ಪ್ರಸಿದ್ಧ ರಾಜನೀತಿಜ್ಞ, ತತ್ತ್ವಶಾಸ್ತ್ರಜ್ಞ ಹಾಗೂ ದಕ್ಷ ಆಡಳಿತಗಾರ. ಇವನು ಲಿವರ್‍ಪೂಲ್‍ನಲ್ಲಿ 1870 ನವೆಂಬರ್ 6ರಂದು ಜನಿಸಿದ. ಕೆಲವು ಇಲಾಖೆಗಳಲ್ಲಿ ಸೇವೆಸಲ್ಲಿಸಿದ ಅನಂತರ ಕ್ಲೀವ್‍ಲೆಂಡ್ ಪ್ರಾಂತದ ಯಾರ್ಕ್‍ಷೈರ್ ಕ್ಷೇತ್ರದಿಂದ ಲಿಬರಲ್ ಪಕ್ಷದ ಸದಸ್ಯನಾಗಿ ಸಂಸತ್ತಿಗೆ ಆಯ್ಕೆಗೊಂಡ (1902). ಸಂಸತ್ತಿನ ಗೃಹಕಚೇರಿಯಲ್ಲಿ ಅಧೀನ ಕಾರ್ಯದರ್ಶಿಯಾಗಿದ್ದಾಗ ಮಕ್ಕಳ ಕಾಯಿದೆ ಸೇರಿದಂತೆ ಹಲವು ಗಮನಾರ್ಹ ಸುಧಾರಣೆಗಳನ್ನು ಜಾರಿಗೆ ತಂದ (1908). ಅನಂತರ ಅಂಚೆ ಇಲಾಖೆಯಲ್ಲಿ ಪೋಸ್ಟ್‍ಮಾಸ್ಟರ್ ಜನರಲ್ ಆಗಿದ್ದಾಗ ಅಂಚೆ ಮತ್ತು ತಂತಿ ಸೇವೆಗಳನ್ನು ರಾಷ್ಟ್ರೀಕರಣಗೊಳಿಸಿದ (1910-16). ಗೃಹಕಾರ್ಯದರ್ಶಿಯಾಗಿ (1916), ರಾಷ್ಟ್ರೀಯ ಆಯವ್ಯಯ ಸಮಿತಿಯ ಅಧ್ಯಕ್ಷನಾಗಿ (1917-18), ಬೆಲ್ಜಿಯಮ್‍ನ ವಿಶೇಷ ಆಯುಕ್ತನಾಗಿ (1919) ಸೇವೆಸಲ್ಲಿಸಿದ. ಅನಂತರ ಪ್ಯಾಲಸ್ತೀನಿನ ರಾಯಭಾರಿಯಾಗಿ ಆಯ್ಕೆಗೊಂಡು ನಿರಾಶ್ರಿತರಿಗಾಗಿ ಪ್ರಗತಿಪರ ಕಾರ್ಯಗಳನ್ನು ಕೈಗೊಂಡ. ಅನಂತರ ಕಲ್ಲಿದ್ದಲು ಗಣಿಗಾರಿಕೆ ಆಯೋಗದ ಅಧ್ಯಕ್ಷನಾಗಿ, ಅದರ ಸಮತೋಲ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ. ಲಿಬರಲ್ ಪಕ್ಷದ ಅಧ್ಯಕ್ಷನಾಗಿ (1927-29) ಲಾಯ್ಡ್‍ಜಾರ್ಜ್ ಹಾಗೂ ಆಸ್ಕ್ವಿತ್‍ರ ನಡುವೆ ಚಾಣಾಕ್ಷತನದಿಂದ ವರ್ತಿಸಿ, ಅವರ ನಡುವೆ ಬಾಂಧವ್ಯ ಕಾಯ್ದುಕೊಂಡ. ಕೇಂದ್ರ ಸರ್ಕಾರದ ಗೃಹಕಾರ್ಯದರ್ಶಿಯಾಗಿ ಮುಕ್ತ ವ್ಯಾಪಾರ ನೀತಿ ಜಾರಿಗೊಳಿಸಿದ (1931). ಲಿಬರಲ್ ಪಕ್ಷದ ನಾಯಕನಾಗಿದ್ದಾಗ (1944-55) ಪ್ಯಾಲಸ್ತೀನಿಗೆ ಭೇಟಿನೀಡಿದ (1940). ಹೀಗೆ ಇವನು ಅನೇಕ ಸಮಿತಿಗಳ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದನಲ್ಲದೆ ಇಂಗ್ಲೆಂಡಿನ ತತ್ತ್ವಶಾಸ್ತ್ರ ಸಂಸ್ಥೆಯ ಅಧ್ಯಕ್ಷನಾಗಿಯೂ ಸೇವೆಸಲ್ಲಿಸಿದ(1931-59). ಇವನು ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದಾನೆ. ಪ್ರಾಕ್ಟಿಕಲ್ ಎಥಿಕ್ಸ್ (1935), ಬಿಲೀಫ್ ಅಂಡ್ ಆಕ್ಷನ್ ಆ್ಯನ್ ಎವರಿಡೇ ಫಿಲಾಸಫಿ (1937), ಮೆಮೊರೀಸ್ (1945), ಎ ಬುಕ್ ಆಫ್ ಕೊಟೇಶನ್ಸ್ (1947), ನ್ಯೂ ಎಡಿಶನ್ (1953) ಇವು ಕೆಲವು. ಇವನು 1963 ಫೆಬ್ರವರಿ 5ರಂದು ಲಂಡನ್ನಿನಲ್ಲಿ ನಿಧನನಾದ. *