ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಲಾವ್ ಸಾಹಿತ್ಯ ವಿಮರ್ಶೆ

ಸ್ಲಾವ್ ಸಾಹಿತ್ಯ ವಿಮರ್ಶೆ

ಸ್ಲಾವ್ ದೇಶಗಳ ಸಾಹಿತ್ಯ ವಿಮರ್ಶೆ ಯನ್ನು ಅಭ್ಯಾಸಮಾಡುವಾಗ ಎರಡು ಅಂಶಗಳನ್ನು ನೆನಪಿಡಬೇಕು. ಮೊದಲನೆಯದಾಗಿ ಈ ದೇಶಗಳಲ್ಲಿ ಲೌಕಿಕ ಸಾಹಿತ್ಯದ ಸೃಷ್ಟಿ ತಡವಾದು ದರಿಂದ ಸಾಹಿತ್ಯ ವಿಮರ್ಶೆ ಎಂದು ಸ್ಪಷ್ಟವಾಗಿ ಹೆಸರಿಸಬಹುದಾದ ಬರೆಹದ ಹುಟ್ಟೂ ತಡವಾಯಿತು. ಎರಡನೆಯದಾಗಿ ದೇಶದ ಚರಿತ್ರೆಯ ತಿರುವುಗಳು ಸಾಹಿತ್ಯದಲ್ಲಿ ದೇಶ ನಿರೀಕ್ಷಿಸುವ ಮೌಲ್ಯಗಳ ಕಲ್ಪನೆಯ ಮೇಲೆಯೂ ಪ್ರಭಾವವನ್ನು ಬೀರಿದುವು.

ಚೆಕೊಸ್ಲೊವಾಕಿಯದ ಸಾಹಿತ್ಯ ವಿಮರ್ಶೆಯಲ್ಲಿ ಮೊದಲನೆಯ ಹೆಸರು ಜೊಸೆಫ್ ಡಬ್ಬೊವಿಸ್ಕಿಯದು(1758-1829). ಸಮತೂಕದ ಮನೋಧರ್ಮದಿಂದ ಚೆಕ್ ಸಾಹಿತ್ಯದ ಚರಿತ್ರೆಯನ್ನು ಇವನು ಸಿದ್ಧಗೊಳಿಸಿದ. ದೇಶದಲ್ಲಿ ಸಾಹಿತಿಗಳನ್ನು ಮೊದಲ ಬಾರಿಗೆ ಒಂದುಗೂಡಿಸಿ, ಸಾಹಿತ್ಯದ ಸಮಸ್ಯೆಗಳತ್ತ ಅವರ ಗಮನವನ್ನು ಸೆಳೆದು ತುಲನಾತ್ಮಕ ವಿಮರ್ಶೆಗೆ ಅಸ್ತಿಭಾರ ಹಾಕಿದ. ರೊಮ್ಯಾಂಟಿಕ್ ಪಂಥವನ್ನು ಮೊದಲು ಪ್ರಾರಂಭಿಸಿದ. ಜೊಸೆಫ್ ಜುಂಗ್‍ಮನ್(1773-1847), ಫ್ರಾಂಟಿಸೆಕ್ ಪಲಾಕಿ (1798-1876) ಮತ್ತು ಜೊಸೆಫ್ ಸಫಾರಿಕ್(1795-1861) ಇವರು ಚೆಕ್ ಛಂದಸ್ಸಿನಂಥ ಶಾಸ್ತ್ರ ವಿಷಯಗಳ ಚರ್ಚೆಯಲ್ಲಿ ಆಸಕ್ತಿಯನ್ನು ಉಂಟುಮಾಡಲು ಶ್ರಮಿಸಿದವರು. ವಾಸ್ತವಿಕತೆಯ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಿದ ಸಾಧನೆ ವಿವೇಕಶಾಲಿಯೂ ವಿಶಾಲದೃಷ್ಟಿಯವನೂ ಆದ ಕ್ಯಾರೆಟ್ ಹ್ಯಾವ್‍ಲಿಸೆಕ್ ಬರೊವ್‍ಸ್ಕಿಯದು. ಚೆಕೊಸ್ಲೊವಾಕಿಯದಲ್ಲಿ 1870ರ ಹೊತ್ತಿಗೆ ಸಾಹಿತ್ಯ ವಿಮರ್ಶೆಯ ಕ್ಷೇತ್ರ ಲವಲವಿಕೆಗೊಂಡಿತು. ಜಾನ್‍ನೆರುಡ(1834-91) ಮಾಡಿದ ಸಮಕಾಲೀನ ಸಾಹಿತ್ಯದ ವಿಮರ್ಶೆ ಗಮನಾರ್ಹ. ಆನ್ವಯಿಕ ವಿಮರ್ಶೆ, ನಾಟಕ ಸಾಹಿತ್ಯದ ಅವನ ವಿಮರ್ಶೆ ಹಲವರ ಗಮನವನ್ನು ಸೆಳೆಯಿತು. ಈ ಕಾಲದಲ್ಲಿ ಸಾಹಿತಿಗಳೂ ವಿಮರ್ಶಕರೂ ಬಹುಮಟ್ಟಿಗೆ ಜರ್ಮನಿಯ ಪ್ರಭಾವಕ್ಕೆ ಒಳಗಾಗಿದ್ದರು. ಲುಮಿರ್ ಎಂಬ ಸಾಹಿತ್ಯಕ ಪತ್ರಿಕೆ ಫ್ರಾನ್ಸ್ ಮತ್ತು ರಷ್ಯ ದೇಶಗಳ ಸಾಹಿತ್ಯ ಕೃತಿಗಳತ್ತ ಲಕ್ಷ್ಯ ಸೆಳೆಯಲು ಪ್ರಯತ್ನಿಸಿತು. ಹೀಗೆ ದೇಶದಲ್ಲಿ ಸಾಹಿತ್ಯವನ್ನು ಕುರಿತು ವಿಚಾರಮಾಡು ವವರು ಹಲವು ದೇಶಗಳ ಸೃಜನಶೀಲ ಮತ್ತು ವಿಮರ್ಶನ ಸಾಹಿತ್ಯದತ್ತ ಮನಸ್ಸನ್ನು ಹರಿಸಿದುದು ಸಾಹಿತ್ಯ ವಿಮರ್ಶೆಯ ಬೆಳೆವಣಿಗೆಗೆ ಸಹಾಯಕವಾದ ವಾತಾವರಣವನ್ನು ಕಲ್ಪಿಸಿತು. ಮೇ ಎಂಬ ಪತ್ರಿಕೆಯ ಬರೆಹಗಾರರ ಗುಂಪು ಸಾಹಿತ್ಯದಲ್ಲಿ ವಾಸ್ತವಿಕತೆಗೆ ಪ್ರಾಧಾನ್ಯ ನೀಡಿತು. ಇದರ ಮುಂದಿನ ಯುಗದಲ್ಲಿ ಸಾಹಿತ್ಯ ವಿಮರ್ಶಕರಲ್ಲಿ ಎರಡು ಬಣಗಳಾದುವು. ರಾಷ್ಟ್ರೀಯ ವಾದಿಗಳು ಸಾಹಿತ್ಯ ದೇಶಭಕ್ತಿಯನ್ನು ಪ್ರಚೋದಿಸಬೇಕೆಂದು ವಾದಿಸಿದರು. ಜಾಗತಿಕ ದೃಷ್ಟಿ ವಾದಿಗಳು ಸಾಹಿತ್ಯ ಕೇವಲ ರಾಷ್ಟ್ರೀಯ ಸಮಸ್ಯೆಗಳಿಗೆ ಮುಡುಪಾಗದೆ, ಮನುಷ್ಯ ಕುಲವನ್ನೆ ಒಂದೆಂದು ಕಾಣಬೇಕೆಂಬ ದೃಷ್ಟಿಯನ್ನು ಪ್ರತಿಪಾದಿಸಿದರು. ಈ ಕಾಲದ ವಿಮರ್ಶಕರಲ್ಲಿ ಸಾಹಿತ್ಯದ ಬೆಳೆವಣಿಗೆಯ ಮೇಲೆ ಪರಿಣಾಮ ಕಾರಿಯಾದ ಪ್ರಭಾವವನ್ನು ಬೀರಿದವರು ಫ್ರಾಂಟಿಸೆಕ್ ಕ್ಸೇವರ್ ಸೆಲ್ಡ(1867-1937) ಮತ್ತು ತಾಮಸ್ ಜಿ. ಮಾಸಾರಿಕ್(1850-1937). ಇವರು ಒಂದು ಸಾಂಸ್ಕøತಿಕ ಕ್ರಾಂತಿಯನ್ನೇ ಉಂಟುಮಾಡಿದರು. ಸೆಲ್ಡ ಸಾಹಿತ್ಯ ವಿಮರ್ಶೆಯಲ್ಲಿ ಹೊಸ ವಿಚಾರ ರೀತಿಯನ್ನು ಯೋಚನಾಬದ್ಧ ರೀತಿಯಲ್ಲಿ ಪ್ರತಿಪಾದಿಸಲಿಲ್ಲ. ತನ್ನ ಅಭಿಪ್ರಾಯಗಳನ್ನು ಮತ್ತೆ ಮತ್ತೆ ಮಾರ್ಪಡಿಸಿದುದೂ ಉಂಟು. ಆದರೆ ಸಾಹಿತ್ಯ ಕೃತಿಯನ್ನು ಆಳವಾಗಿ ಒಳಹೊಕ್ಕು ಅದರ ಮೂಲ ಮನೋಧರ್ಮವನ್ನು ವಿಮರ್ಶಿಸುವ ಇವನ ಶಕ್ತಿ, ಶೈಲಿಯ ಗುಣಗಳ ವಿಮರ್ಶೆ-ಇವು ಇವನ ಪ್ರಭಾವವನ್ನು ವಿಸ್ತರಿಸಿದುವು. ಕಲೆ ಸಮಕಾಲೀನ ಜೀವನದಲ್ಲಿ ಬೇರುಬಿಡಬೇಕು, ಅದು ಜೀವಂತವಾಗಿ, ಶಕ್ತಿವಂತವಾಗಿರಬೇಕು ಎಂಬ ದೃಷ್ಟಿಯನ್ನು ಪ್ರತಿಪಾದಿಸಿದ. ಇದರಿಂದಲೆ ಇವನು ಹಲವು ಹೊಸ ಪಂಥಗಳನ್ನು ಸಮರ್ಥಿಸಿದುದು. ಸಾಹಿತ್ಯದಲ್ಲಿ ಕಲೆಯ ಅಂಶಕ್ಕೆ ಪ್ರಾಧಾನ್ಯ ಕೊಟ್ಟರೂ ಸಾಹಿತಿಗೆ ಸಾಮಾಜಿಕ ಹೊಣೆಯುಂಟು ಎಂಬ ಅಭಿಪ್ರಾಯವನ್ನೂ ಒತ್ತಿ ಹೇಳಿದ. ಮಾಸಾರಿಕ್‍ನ ಕಾವ್ಯದ ಅಭ್ಯಾಸ ಎಂಬ ಕೃತಿ(1898) ಬಹು ಪರಿಣಾಮಕಾರಿಯಾದ ಪ್ರಕಟಣೆಯಾಯಿತು. ರೊಮ್ಯಾಂಟಿಕ್ ಬರೆಹ, ಗಯಟೆ, ನೀಷೆ, ಜೆóೂೀಲ ಇವರ ಪ್ರಭಾವದಿಂದ ಜನಪ್ರಿಯವಾಗಿದ್ದ ಅತಿಮಾನವ ಚಿತ್ರ ನಿರೂಪಣೆ ಇವನ್ನು ವಿರೋಧಿಸಿ ಸಾಹಿತ್ಯದ ಸಾಮಾಜಿಕ ಮತ್ತು ನೈತಿಕ ಹೊಣೆಯನ್ನು ಪ್ರತಿಪಾದಿಸಿತು. ಸಾಹಿತ್ಯ ಸಮಾಜಕ್ಕೆ ಕನ್ನಡಿ ಹಿಡಿಯಬೇಕು ಎಂದು ಘೋಷಿಸಿದ. ಸಾಹಿತ್ಯದಲ್ಲಿ ನೀತಿಯ ಅಂಶಕ್ಕೆ ಒಮ್ಮೊಮ್ಮೆ ಇವನು ಅತಿಹೆಚ್ಚು ಪ್ರಾಧಾನ್ಯ ನೀಡಿದ. ಒಟ್ಟಿನಲ್ಲಿ ಸೆಲ್ಡ ಮತ್ತು ಮಾಸಾರಿಕ್ ಸಾಹಿತ್ಯದಲ್ಲಿ ವ್ಯಕ್ತಿತ್ವ, ಕಲೆಯ ಸೊಗಸು ಮತ್ತು ತತ್ತ್ವಗಳ ಮಹತ್ತ್ವವನ್ನು ಕಡಿಮೆ ಮಾಡಿ, ಸಾಮಾಜಿಕ ಪ್ರಜ್ಞೆ ಮತ್ತು ಸಾರ್ವಜನಿಕ ಸಮಸ್ಯೆಗಳಲ್ಲಿ ಆಸಕ್ತಿಯನ್ನು ಬೆಳೆಸಿದರು. 1918ರಲ್ಲಿ ಚೆಕೊಸ್ಲೊವಾಕಿಯ ಸ್ವತಂತ್ರವಾದ ಬಳಿಕ ಸಾಹಿತ್ಯ ವಿಮರ್ಶೆಯಲ್ಲಿ ಸೋವಿಯತ್ ಪ್ರಭಾವಕ್ಕೆ ಒಳಗಾಗಿದೆ. ಸರ್ರಿಯಲಿಸ್ಟ್ ಮತ್ತು ಸಂಕೇತವಾದಗಳನ್ನು ಹಲವರು ಪ್ರತಿಪಾದಿಸಿದರು. ಆದರೆ ಒಟ್ಟಿನಲ್ಲಿ ಸಾಹಿತ್ಯ ಕಮ್ಯೂನಿಸ್ಟ್ ಪಂಥದ ನೀತಿಗನುಗುಣವಾಗಿ ಸಮಾಜವನ್ನು ರೂಪಿಸಲು ನೆರವಾಗಬೇಕೆಂಬ ದೃಷ್ಟಿ ವಿಮರ್ಶೆಯಲ್ಲಿ ಮುಖ್ಯವಾಯಿತು.

ಪೋಲಿಂಡಿ ಮಿಕಲಾಯ್ ರೇ ಹದಿನಾರನೆಯ ಶತಮಾನದಲ್ಲಿಯೇ ಸಾಹಿತ್ಯದ ಭಾಷೆಯ ಅಧ್ಯಯನವನ್ನು ಪ್ರಾರಂಭಿಸಿದರೂ ಸಾಹಿತ್ಯ ವಿಮರ್ಶೆ ಗಮನಾರ್ಹವಾಗಿ ಕಾಣುವುದು ಹದಿನೆಂಟನೆಯ ಶತಮಾನದಲ್ಲಿ. ಪ್ರಾರಂಭದ ಸಾಹಿತ್ಯ ವಿಮರ್ಶಕರು ಎಲ್.ಒಪಾಲಿನ್‍ಸ್ಕಿ(1612-62) ಮತ್ತು ಸ್ಟಾನಿಸ್ಲಾವ್ ಲುಬೊಮಿಸ್ಕೀ(1636-1702). ಪ್ರಸಿದ್ಧ ಫ್ರೆಂಚ್ ವಿಮರ್ಶಕ ಬಯ್ಲೊನ ಕಾವ್ಯ ಕಲೆ (1694) ಪ್ರಕಟವಾಗುವ ಮುನ್ನವೇ ವಿವೇಚನೆಯ ಪ್ರಾಮುಖ್ಯವನ್ನು ಒತ್ತಿ ಹೇಳಿದವನು ಒಪಾಲಿನ್‍ಸ್ಕಿ. ಕವನ ಜೀವಂತ ಪದಗಳಿಂದ ಚಿತ್ರಿತವಾಗಬೇಕೆಂದು ವಾದಿಸಿ, ಕವನದ ರಚನೆಯಲ್ಲಿ ಕವಿ ಪದಪದಕ್ಕೂ ಗಮನಕೊಡಬೇಕು ಎಂದು ಘೋಷಿಸಿದ. ಲುಬೊಮಿಸ್ಕೀ ಪ್ರಾಚೀನ ಸಾಹಿತ್ಯವನ್ನು ಸಮಕಾಲೀನರಿಗೆ ಮಾದರಿಯಾಗಿ ಎತ್ತಿ ಹಿಡಿದ. ಪ್ರಾಚೀನ ಸಾಹಿತ್ಯದ ಪ್ರಭಾವವನ್ನು ಬೆಳೆಸಿದವರು ಇವರು. ಸಾಹಿತ್ಯ ವಿಮರ್ಶಕ ಎಂದು ಕರೆಸಿಕೊಳ್ಳಬಲ್ಲ ಮೊದಲನೆಯ ಬರೆಹಗಾರ ಸ್ಟಾನಿಸ್ಲಾವ್ ಕೊನಾರ್‍ಸ್ಕಿ(1700-73). ವಿಮರ್ಶೆಯ ನೆರವಿಲ್ಲದೆ ಹೋದರೆ ಕಲೆ ಬೆಳೆಯಲಾರದೆಂದು ಘೋಷಿಸಿ ಸಾಹಿತ್ಯವಿಮರ್ಶೆಯ ಮಹತ್ತ್ವವನ್ನು ಈತ ಸಾರಿದ. ಶೈಲಿ ಸ್ಪಷ್ಟವಾಗಿರಬೇಕು, ನಿಷ್ಕøಷ್ಟವಾಗಿರಬೇಕು, ಭಾಷೆಯನ್ನು ಎಚ್ಚರಿಕೆಯಿಂದ, ಅಪಭ್ರಂಶಗಳಿಗೆ ಎಡೆಯಿಲ್ಲದೆ ಹೊಣೆಗಾರಿಕೆಯಿಂದ ಬಳಸಬೇಕು ಎಂದು ಒತ್ತಿ ಹೇಳಿದ. ಕಾವ್ಯವಿಮರ್ಶೆಯಲ್ಲಿ ಮೊದಲನೆಯ ಹೆಸರು ವಾಕ್ಲಾರ್ಜೆóವುಸ್ಕಿಯದು (1706-79). ಕಾವ್ಯಶೈಲಿಯಲ್ಲಿ ಚಿತ್ರಮಯತೆಯ ಪ್ರಾಮುಖ್ಯವನ್ನು ವಿವರಿಸಿದ. ಕಾವ್ಯ ನಿಸರ್ಗವನ್ನು ಅನುಸರಿಸಬೇಕು ಎಂಬ ಸೂತ್ರವನ್ನು ಕೊಟ್ಟ. ಆಸಕ್ತಿಯನ್ನುಂಟುಮಾಡುವ ಅಂಶವೆಂದರೆ ಕವನ ಹೃದಯದಿಂದಲೂ ಮೆದುಳಿನಿಂದಲೂ ಬರಬೇಕು, ಹೃದಯ ಮೆದುಳುಗಳನ್ನು ಮೆಚ್ಚಿಸಬೇಕು ಎಂಬ ದೃಷ್ಟಿ ಇವನದು. ಕಾವ್ಯದಲ್ಲಿ ವೈಚಾರಿಕತೆಯ ಪ್ರಸ್ತಾಪವನ್ನು ಹದಿನೆಂಟನೆಯ ಶತಮಾನದಲ್ಲಿ ಪೋಲೆಂಡಿನಲ್ಲಿ ಇವನು ಮಾಡಿದುದು ಸೋಜಿಗದ ಸಂಗತಿ. 1795ರಲ್ಲಿ ಪೋಲೆಂಡಿನ ದಾಸ್ಯ ಪ್ರಾರಂಭವಾಗಿ 125 ವರ್ಷಗಳ ಕಾಲ ಉಳಿಯಿತು. ಈ ಅವಧಿಯಲ್ಲಿ ವಿಮರ್ಶೆ ಸಾಹಿತ್ಯದ ಅಥವಾ ಸೌಂದರ್ಯ ಮೀಮಾಂಸೆಯ ತತ್ತ್ವಗಳ ಆಧಾರದ ಮೇಲೆಯೆ ಬೆಳೆದುಬರಲಿಲ್ಲ. ರಾಷ್ಟ್ರದ ರಾಜಕೀಯ ಜೀವನ ಸಾಹಿತ್ಯ ವಿಮರ್ಶೆಯ ಮೇಲೆ ಅಪಾರ ಪ್ರಭಾವವನ್ನು ಬೀರಿತು. ಈ ಅವಧಿಯ ವಿಮರ್ಶೆಯಲ್ಲಿ ಮೂರು ಘಟ್ಟಗಳನ್ನು ಕಾಣಬಹುದು. ಮೊದಲನೆಯದು ಪ್ರಾಚೀನ ಸಾಹಿತ್ಯ ಮನೋಧರ್ಮದ ಮತ್ತು ಅನಂತರದ ವಾರ್ಸಾದ ಸಂಪ್ರದಾಯವಾದಿಗಳ ಮತ್ತು ವಿಲ್ನ್‍ನ ಪ್ರಗತಿಶೀಲರ ಘರ್ಷಣೆಯ ಯುಗ(1815-25). ಈ ಘರ್ಷಣೆಯಲ್ಲಿ ಪ್ರಾಚೀನ ಸಾಹಿತ್ಯ ಮತ್ತು ರೊಮ್ಯಾಂಟಿಸಿಸಂಗಳ ವಿಶ್ಲೇಷಣೆ, ಎರಡೂ ಪಂಥಗಳ ಸಮರ್ಥನೆ ಮತ್ತು ವಿರೋಧ ಕಂಡರೂ ನಿಜವಾಗಿ ವಾದವಿವಾದವೆಲ್ಲ ರಾಷ್ಟ್ರೀಯ ಕಾವ್ಯದ ಮೂಲವೇನು, ರಾಷ್ಟ್ರೀಯ ಕವಿಯಾರು ಎಂಬ ಎರಡು ಪ್ರಶ್ನೆಗಳ ಸುತ್ತ ಕೇಂದ್ರೀಕೃತವಾಯಿತು. ಸಂಪ್ರದಾಯವಾದಿಗಳದು ಸಂಯಮ, ನಯಗಳ ಆದರ್ಶ. ಪ್ರಗತಿಶೀಲರಿಗೆ ಹೃದಯದ ಭಾವನೆಗಳು, ಆತ್ಮವಿಶ್ವಾಸ ಇವುಗಳ ನಿರೂಪಣೆಯಲ್ಲಿ ಶ್ರದ್ಧೆ, ಗ್ರೀಕ್ ದೇವತೆ ಪ್ರಮಿಥ್ಯೂಸನಂತೆ ನೋವನ್ನುಂಡು ಮಾನವಕೋಟಿಯ ಸೇವೆ ಮಾಡುವ ಆಕಾಂಕ್ಷೆ. 1830ರಲ್ಲಿ ಪೋಲೆಂಡಿನ ದಂಗೆ ವಿಫಲವಾದ ಅನಂತರ ಸಾಹಿತ್ಯದಲ್ಲಿ ಮತ್ತು ವಿಮರ್ಶೆಯಲ್ಲಿ ಪಾಸಿಟಿವಿಸ್ಟ್ ಯುಗ ಪ್ರಾರಂಭವಾಯಿತು; ಸ್ವಾತಂತ್ರ್ಯ ಗಳಿಸಲು 1863ರಲ್ಲಿ ದೇಶ ಮಾಡಿದ ಪ್ರಯತ್ನ ವಿಫಲವಾದ ಅನಂತರ ಈ ಪಾಸಿಟಿವಿಸ್ಟ್ ಪಂಥಕ್ಕೆ ಶಕ್ತಿ ಹೆಚ್ಚಿತು. ಈ ಯುಗದಲ್ಲಿ ಫ್ರೆಂಚ್ ದಾರ್ಶನಿಕ ಆಗಸ್ಟ್ ಕಾಮ್ಟ್‍ನ ಪ್ರಭಾವವನ್ನು ಕಾಣಬಹುದು. ಪಾಸಿಟಿವಿಸ್ಟ್‍ಪಂಥ ರೊಮ್ಯಾಂಟಿಸಿಸಂನ ಕನಸು ಕಾಣುವ ಪ್ರವೃತ್ತಿಯನ್ನು ವಿರೋಧಿಸಿ, ಸಾಹಿತ್ಯ ವಾಸ್ತವಿಕವಾಗಿರಬೇಕೆಂದು ಘೋಷಿಸಿತು. ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಂಡು ಮಾನವಕುಲದ ಸುಖಕ್ಕಾಗಿ ಎಲ್ಲ ಶಾಸ್ತ್ರ-ವಿಜ್ಞಾನವನ್ನೂ ಬಳಸಿಕೊಳ್ಳಬೇಕೆಂಬ ವಾದ ವಾಸ್ತವಿಕತೆಗೆ ಪ್ರಾಧಾನ್ಯ ನೀಡಿತು. ರಾಷ್ಟ್ರದ ಸಾಂಸ್ಕøತಿಕ ಭಾಗ್ಯವನ್ನು ಉಳಿಸಿಕೊಂಡು, ಸಂಪತ್ತನ್ನು ಹೆಚ್ಚಿಸುವ ಮನೋಧರ್ಮವನ್ನು ಬೆಳೆಸುವ ಸಾಹಿತ್ಯ ಬೇಕೆಂದು ಈ ಪಂಥ ವಾದಿಸಿತು. ಇದಕ್ಕೆ ಪ್ರತಿಯಾಗಿ ಸಂಕೇತವರ್ಗವೂ ಈ ಅವಧಿಯಲ್ಲಿ ಬೆಳೆಯಿತು. ಮುಂದಿನ ಅವಧಿಯಲ್ಲಿ ತರುಣ ಪೋಲೆಂಡ್ ಪಂಥದ ಪ್ರಭಾವ ಬೆಳೆಯಿತು. ಇದು ಆದರ್ಶತ್ವ ಕ್ಕೊಲಿದ ಪಂಥ. ಇದರ ಬೆಳೆವಣಿಗೆಗೆ ಸ್ಟಾನ್ಸಿಲಾವ್ ಷ್ಲಿಬಿಷೆವ್‍ಸ್ಕಿ(1868-1927) ಸಂಪಾದಕನಾಗಿದ್ದ ಜೀವನ ಪತ್ರಿಕೆ ನೆರವಾಯಿತು. ಇಗ್ನಸಿಮ್ಯಾಟಸ್‍ಜೆವ್‍ಸ್ಕಿ(1858-1919) ಮತ್ತು ಸ್ಟ್ಯಾನ್ಸಿಲಾವ್ ಬ್ರೊಜೊವ್‍ಸ್ಕಿ(1876-1911) ಹೊಸ ಪಂಥದ ನಾಯಕರಾದರು. ಇವರದು ತೀವ್ರ ದೇಶಾಭಿಮಾನ, ಪೋಲೆಂಡಿನ ಸಮಾಜವನ್ನು ಪುನರ್ನಿರ್ಮಿಸುವ ತವಕ. ಮ್ಯಾಟಸಜೆವ್‍ಸ್ಕಿಯು ವಿಮರ್ಶೆ ನೀತಿಬೋಧೆಯೂ ಆಗಬಾರದು, ತೀರ್ಪೂ ಆಗಬಾರದು, ಕೃತಿಯ ವೈಶಿಷ್ಟ್ಯವನ್ನು ಗುರುತಿಸಿ ವಿವರಿಸಬೇಕು ಎಂಬ ಅಭಿಪ್ರಾಯವನ್ನು ಪ್ರತಿಪಾದಿಸಿದ. ಬ್ರೊಜೊವ್‍ಸ್ಕಿಯು ಸಾಹಿತ್ಯದಲ್ಲಿ ಸೌಂದರ್ಯನಿರೂಪಣೆ ಮತ್ತು ರಸಾನುಭವ ಮುಖ್ಯ ಎಂಬ ದೃಷ್ಟಿಯನ್ನು ವಿರೋಧಿಸಿ ಸಾಹಿತ್ಯದ ವಸ್ತು ಮನುಷ್ಯನ ಮನಸ್ಸಿನ ಜಟಿಲ ಚಟುವಟಿಕೆಗಳು, ಗುರಿ ಸಮಾಜದ ಸುಧಾರಣೆ ಎಂದು ವಾದಿಸಿದ. ಇವನ ತರುಣ ಪೋಲೆಂಡ್‍ನ ವಿಮರ್ಶನಾತ್ಮಕ ಅಭ್ಯಾಸ (1909) ಗಮನಾರ್ಹ ಕೃತಿ.

ಪೋಲೆಂಡಿಗೆ ಸ್ವಾತಂತ್ರ್ಯ ಬಂದುದು ಅದರ ಸೃಜನ ಸಾಹಿತ್ಯ ಮತ್ತು ವಿಮರ್ಶಕ ಸಾಹಿತ್ಯಗಳ ಮೇಲೆ ಪ್ರಭಾವಬೀರಿತು. ಸ್ಕಮಾಂಡರ್ ಪತ್ರಿಕೆಯ ಗುಂಪು ಪ್ರಭಾವಶಾಲಿಯಾಯಿತು. ಸಾಹಿತ್ಯ ದೇಶಾಭಿಮಾನದ ಅಭಿವ್ಯಕ್ತಿ ನಿರೂಪಣೆಗೆ ಮುಡಿಪಾಗಬೇಕಾಗಿಲ್ಲ, ಮಾನವಕೋಟಿಯ ಸುಖದುಃಖ ಆಸೆ ಭರವಸೆಗಳು ಸಾಹಿತ್ಯದ ವಸ್ತುವಾಗಬೇಕು ಎಂದು ಇವರು ವಾದಿಸಿದರು. ರಾಷ್ಟ್ರೀಯ ಮತ್ತು ಸಾಮಾಜಿಕ ಹೊಣೆಯನ್ನು ಸಾಹಿತ್ಯಕ್ಕೆ ಹೋಲಿಸುವವರು ಹಳೆಯ ಪಂಕ್ತಿಯವರು, ಸಾಹಿತ್ಯ ಈ ಹೊಣೆಯನ್ನು ಬಿಟ್ಟು ಮನುಕುಲದ ಕಣ್ಣಾಗಿ, ಕೊರಳಾಗಿ ಇಂದಿನ ಪಂಕ್ತಿಯನ್ನು ಸೇರಬೇಕೆಂದು ಇವರು ಘೋಷಿಸಿದರು. ಮುಂದಿನ ಪಂಕ್ತಿ (ವ್ಯಾನ್‍ಗಾಡ್ಸ್) ಗುಂಪಿನವರು ಸಂಪ್ರದಾಯವಾದಿಗಳನ್ನೂ ವಿರೋಧಿಸಿದರು. 1939ರಲ್ಲಿ ಹಿಟ್ಲರನ ಮುತ್ತಿಗೆಯ ಅನಂತರ ಹಲವರು ಹಿರಿಯ ವಿಮರ್ಶಕರು ದೇಶದಾಚೆ ಉಳಿದರು. ಎರಡನೆಯ ಮಹಾಯುದ್ಧ ಮುಗಿದ ಅನಂತರ 1949ರಿಂದ ಸಾಮಾಜಿಕ ವಾಸ್ತವಿಕತೆಯ ಪಂಥ ಬೆಳೆಯಿತು. ನಾಡಿನಲ್ಲಿ ನಡೆಯುತ್ತಿದ್ದ ಮತ್ತು ನಡೆಯಬೇಕಾದ ಕ್ರಾಂತಿಕಾರಕ ಸಾಮಾಜಿಕ ಮಾರ್ಪಾಡುಗಳಿಗೆ ನೆರವಾಗುವ ಸಾಹಿತ್ಯದ ಸೃಷ್ಟಿ ಇದರ ಗುರಿಯಾಗಿತ್ತು. ಸಾಹಿತಿ ಸಮಾಜದ ಭಾಗವಾಗಿ, ಅದರ ಬೇಡಿಕೆಗಳ ದನಿಯಾಗಬೇಕು, ಕಾರ್ಮಿಕವರ್ಗದ ಪ್ರತಿನಿಧಿಯಾಗಬೇಕು, ಇದರ ವಿರೋಧಿಗಳಾದ ಸ್ವಾರ್ಥಹಿತಾಸಕ್ತಿಗಳ ಹೋರಾಟದ ವಾಸ್ತವಿಕತೆಯನ್ನು ಪ್ರತಿಬಿಂಬಿಸಬೇಕು ಎಂಬುದು ಇದರ ದೃಷ್ಟಿ.

ಬಲ್ಗೇರಿಯದ ಸಾಹಿತ್ಯ ವಿಮರ್ಶೆಯಲ್ಲಿ ಮೊದಲನೆಯ ಗಣನೀಯ ವಿಮರ್ಶಕ ನೇಷೊ ಬೊನ್‍ಚಿವ್(1839-75). ಇವನು ರಷ್ಯದ ಸಾಹಿತ್ಯ ಚರಿತ್ರೆಯನ್ನು ಬರೆದ. ರಾಷ್ಟ್ರೀಯ ಪಂಥದ ಸ್ಥಾಪಕ ಇವಾನ್ ವಾಜನ್ (1850-1921) ಕಲೆಗಾಗಿ ಕಲೆ ವಾದವನ್ನು ತಿರಸ್ಕರಿಸಿ, ಸಾಹಿತ್ಯ ನಿತ್ಯಜೀವನದ ಭಾಷೆಯಲ್ಲಿ ಜನತೆಯ ಭಾಷೆಯಲ್ಲಿ ಜನತೆಯ ಆಸೆ ಆಕಾಂಕ್ಷೆಗಳನ್ನು ನಿರೂಪಿಸಬೇಕೆಂದು ವಾದಿಸಿದ. ಇವಾನ್ ವಾಜನ್‍ನ ಪಂಥವನ್ನು ಕಟುವಾಗಿ ಟೀಕಿಸಿದವನು ಕ್ರಸಟ್ಟು ಕ್ರಸ್ಟಾವ್(1866-1919). ಇವನದು ವ್ಯಕ್ತಿ ಪ್ರಧಾನ ಪಂಥ. ಸಾಹಿತ್ಯದಲ್ಲಿ ವ್ಯಕ್ತಿಗೆ ಹೆಚ್ಚು ಮಹತ್ತ್ವವಿರಬೇಕು, ಭಾಷೆ ಗಂಭೀರವಾಗಿಯೂ ಉದಾತ್ತ ವಾಗಿಯೂ ಇರಬೇಕು ಎಂಬುದು ಈ ಪಂಥದ ನಿಲವು. ಇವರು ಸಾಹಿತ್ಯದಲ್ಲಿ ಸೌಂದರ್ಯದ ಅಂಶದ ಪ್ರಾಧಾನ್ಯವನ್ನು ಒತ್ತಿಹೇಳಿದರು. ಕ್ರಸ್ಟಾವ್ ವಿಚಾರ ಎಂಬ ಪತ್ರಿಕೆಯ ಸಂಪಾದಕ. ವಿಶೇಷ ಸಂಗತಿ ಎಂದರೆ ಈ ಕಾಲದಲ್ಲಿ ಬಲ್ಗೇರಿಯದಲ್ಲಿ ಸಾಹಿತ್ಯ ವಿಮರ್ಶೆಯ ಬೆಳೆವಣಿಗೆಗೆ ವಿಚಾರ ಹೈಪೀರಿಯಸ್ ಎಂಬಂತಹ ಪತ್ರಿಕೆಗಳು ಬಹುಮಟ್ಟಿಗೆ ಕಾರಣವಾದುವು. ಎರಡನೆಯ ಮಹಾಯುದ್ಧದ ಅನಂತರ ಬರೆಹಗಾರರೆಲ್ಲ ಸರ್ಕಾರದಿಂದ ವೇತನ ಪಡೆಯುವ ಅಧಿಕಾರಿಗಳಾಗಿ, ಸಾಹಿತ್ಯ ವಿಮರ್ಶೆ ಕಮ್ಯೂನಿಸ್ಟ್ ಪಕ್ಷದ ನಿರ್ದೇಶನವನ್ನು ಅನುಸರಿಸಿತು.

ರೊಮೇನಿಯದಲ್ಲಿ ಗಮನಾರ್ಹ ಸೃಜನ ಸಾಹಿತ್ಯ ಕಾಣಿಸಿಕೊಂಡುದೇ ಹದಿನೈದನೆಯ ಶತಮಾನದಲ್ಲಿ. ಈ ಸಾಹಿತ್ಯದ ಜನಕ ಎನಿಸಿಕೊಂಡ ಎಲಿಅಡೆ ರಾಡುಲೆಸ್ಕು(1802-73) ಬರೆದದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಈ ಕಾರಣಗಳಿಂದ ಸಾಹಿತ್ಯ ವಿಮರ್ಶೆ ಹೆಚ್ಚು ಬೆಳೆಯಲಿಲ್ಲ. ರೊಮೇನಿಯ ಭಾಷೆಯ ಮೂಲ ಲ್ಯಾಟಿನ್ ಭಾಷೆ ಎಂಬ ಅಭಿಪ್ರಾಯ ಹದಿನೆಂಟನೆಯ ಶತಮಾನದಲ್ಲಿ ವ್ಯಕ್ತವಾದದ್ದು, ಫ್ರಾನ್ಸಿನ ಮಹಾಕ್ರಾಂತಿ ಮೊದಲಾದ ವಿಚಾರಗಳು ರೊಮ್ಯಾಂಟಿಕ್ ಪಂಥದ ಉದಯಕ್ಕೆ ಸಹಾಯಮಾಡಿದುವು. ಸಾಹಿತ್ಯ ವಿಮರ್ಶೆ ಪ್ರಾರಂಭವಾದುದು ಪಿತು ಮೆಯೊರೆಸ್ಕು(1840-1917) ಎಂಬಾತನಿಂದ ಎನ್ನಬೇಕು. ಯೌವನ ಪಂಥ ಇವನ ಪ್ರಭಾವದಿಂದ ಬೆಳೆಯಿತು. ಕಲೆಗಾಗಿ ಕಲೆ ಎನ್ನುವುದು ಇವನ ವಾದ. ಪ್ರತಿಮಾವಾದವನ್ನು ರೊಮೇನಿಯದಲ್ಲಿ ಪ್ರತಿಪಾದಿಸಿದವನು ಅಲೆಕ್ಸಾಂಡ್ರು ಮೆಸಿದೇನಿಸ್ಕಿ (1854-1920), ಐಯಾನ್ ಫೆರಿಲಿ ದೊಬ್ರೊಜೀನು (1855-1920) ಪ್ರಕೃತಿ ವಿಜ್ಞಾನದ ಸಿದ್ಧಾಂತಗಳನ್ನು ಸಾಹಿತ್ಯ ವಿಮರ್ಶೆಯಲ್ಲಿ ಬಳಸಿದ. ಎರಡನೆಯ ಮಹಾಯುದ್ಧದ ಅನಂತರ ಸಾಹಿತ್ಯ, ಸಾಹಿತ್ಯ ವಿಮರ್ಶೆ ಎರಡೂ ಕಮ್ಯೂನಿಸ್ಟ್ ಪ್ರಭಾವಕ್ಕೆ ಒಳಗಾದವು. ಕಾಲಿನೆಸ್ಕು ಸಾಹಿತ್ಯವನ್ನು ಸಮಾಜದ ಸೃಷ್ಟಿಯಾಗಿ ಕಾಣಬೇಕೆಂಬ ವಾದವನ್ನು ತೀವ್ರವಾಗಿ ಪ್ರತಿಪಾದಿಸಿದ.

ಯೂಗೋಸ್ಲಾವಿಯದಲ್ಲಿ ಸಾಹಿತ್ಯ ವಿಮರ್ಶೆ ಗಮನಾರ್ಹವಾಗಿ ಬೆಳೆಯಿತು. 18ನೆಯ ಶತಮಾನದಲ್ಲಿ ವಿದ್ಯಾರ್ಥಿಗಳು ರೊಮೇನಿಯದಲ್ಲಿ ಅಧ್ಯಯನ ಮಾಡಿದುದರ ಪರಿಣಾಮವಾಗಿ ರಾಷ್ಟ್ರದ ಐಕ್ಯತೆಯ ಆದರ್ಶ ಮೂಡಿತು. ಇದು ಹೊಸ ಸಾಹಿತ್ಯದ ಸೃಷ್ಟಿಗೆ ಪ್ರೇರಕವಾಯಿತು. ಈ ಕಾಲದ ವಿಮರ್ಶೆ ನಾಡಿನ ಜನರಲ್ಲಿ ಸಹೋದರಭಾವ ಮತ್ತು ಐಕ್ಯತೆಗಳನ್ನು ಸಾಹಿತ್ಯ ಬೆಳೆಸಬೇಕು, ಅವನ ಮತವೇನೆ ಇರಲಿ, ಸೋದರ ಸೋದರನೆ ಎಂಬ ಭಾವನೆಯನ್ನು ಬೆಳೆಸಬೇಕು ಎಂದು ಸಾರಿತು. 19ನೆಯ ಶತಮಾನದ ಮಧ್ಯಭಾಗದಲ್ಲಿ ಪತ್ರಿಕೆಗಳ ಪ್ರಭಾವ ಹೆಚ್ಚಿತು. ಯೂತ್(ಯೌವನ), ಬೆಲ್(ಗಂಟೆ) ಇಂತಹ ಪತ್ರಿಕೆಗಳು ಸಾಹಿತ್ಯದ ಲಕ್ಷಣ, ಗುರಿ-ಇವುಗಳ ವಿವೇಚನೆ, ವಿಚಾರ ವಿನಿಮಯಗಳಿಗೆ ಅವಕಾಶ ಮಾಡಿಕೊಟ್ಟವು. ಈ ಕಾಲದಲ್ಲಿ ರಷ್ಯನ್ ವಿಮರ್ಶಕರು ಜೆರ್‍ನಿಷೆವ್‍ಸ್ಕಿ, ಡೊಬ್ರೊಲಿಯುಬೊವ್ ಮತ್ತು ಸಿಸವ್ ಇವರ ಪ್ರಭಾವ ಯೂಗೋಸ್ಲಾವಿಯದ ಸಾಹಿತ್ಯವಿಮರ್ಶೆಯ ಮೇಲೆ ಪರಿಣಾಮಕಾರಿ ಯಾಯಿತು. ಸಾಹಿತ್ಯ ಕೃತಿಗೆ ಅದರ ಸಾಮಾಜಿಕ ಉಪಯುಕ್ತತೆಯಿಂದಲೇ ಬೆಲೆಕಟ್ಟಬೇಕು, ವ್ಯಕ್ತಿಯ ಭಾವ, ಅನುಭವಗಳ ಅಭಿವ್ಯಕ್ತಿಗೆ ಪ್ರಾಧಾನ್ಯ ಸಲ್ಲದು ಎಂಬ ದೃಷ್ಟಿ ಬೆಳೆಯಿತು. ಇದನ್ನು ಬಹು ಶ್ರದ್ಧೆಯಿಂದ ಪ್ರತಿಪಾದಿಸಿದವನು ಸೈಟಜಾóರ್ ಮಾರ್ಕೊವಿಜ್. ಇವನು ಶುದ್ಧ ಕಲೆಯನ್ನು ಖಂಡಿಸಿ, ರೊಮ್ಯಾಂಟಿಸಿಸಮ್‍ನ ನಾಶಕ್ಕೆ ತಡೆ ಇತ್ತ. ವಾಸ್ತವಿಕತೆ, ರೈತರಂಥ ಜನಸಾಮಾನ್ಯರ ಜೀವನ ವಾಸ್ತವಿಕ ನಿರೂಪಣೆ ಇವನ್ನು ಪ್ರತಿಪಾದಿಸಿದ.

ಹತ್ತೊಂಬತ್ತನೆಯ ಶತಮಾನದ ಅಂತ್ಯದ ಹೊತ್ತಿಗೆ ದಕ್ಷಿಣ ಸ್ಲಾವ್ ಸಾಹಿತ್ಯ ತಕ್ಕಷ್ಟು ಸೃಜನ ಸಾಹಿತ್ಯ ಕೃತಿಗಳನ್ನು ಕಂಡಿತು. ಸಾಹಿತ್ಯ ವಿಮರ್ಶೆ ಬೆಳೆಯಲು ಅಗತ್ಯವಾದ ಸಿದ್ಧತೆಯಾಗಿತ್ತು. ಸಿನೊಲಿ, ಸ್ತಿತಾರ್ ಮತ್ತು ಮರ್ಕೊವಿಜ್ ಸಾಹಿತ್ಯ ಸೃಷ್ಟಿ, ಸಾಹಿತ್ಯದ ಗುರಿ ಇವನ್ನು ಕುರಿತು ವಿಚಾರವನ್ನು ಪ್ರಾರಂಭಿಸಿದವರು. ಸೈಟಜಾóರ್ ಮಾರ್ಕೊವಿಜ್ (1846-75) ರಷ್ಯದ ವಿಮರ್ಶಕರ ಪ್ರಭಾವಕ್ಕೆ ಒಳಗಾದವನು. ಇವನನ್ನು ಸಾಹಿತ್ಯ ವಿಮರ್ಶಕ ಎನ್ನುವುದಕ್ಕಿಂತ ಸಮಾಜ ಸುಧಾರಕ ಎನ್ನಬಹುದು. ಇವನು ಸಾಹಿತ್ಯ ವಾಸ್ತವಿಕವಾಗಿರಬೇಕು, ಸಮಾಜದ ಸುಧಾರಣೆಯ ಶಕ್ತಿಯಾಗಬೇಕು ಎಂಬ ದೃಷ್ಟಿಯನ್ನು ಪ್ರತಿಪಾದಿಸಿದ. ಸಾಹಿತ್ಯದ ಬಗೆಗೆ ಶ್ರದ್ಧೆಯ ವಿವೇಚನೆಯನ್ನು ಮಾಡಿದವನು ಎಂದು ಇವನಿಗೆ ಮನ್ನಣೆ ಸಂದಿದೆ. ಸೈಟಿಸ್ಲಾವ್ ವುಲೊವಿಚ್(1847-98) ಜೊವನ್ ಸ್ಕೆರ್‍ಲಿಕ್(1877-1914) ಮತ್ತು ಬೊಗ್ದಾನ್ ಪೊಪೊವಿಚ್ (1863-1939) ಪ್ರಮುಖ ವಿಮರ್ಶಕರು. ಸ್ಕೆರ್‍ಲಿಕ್‍ನ ಕನಸು ದಕ್ಷಿಣ ಸ್ಲಾವ್ ರಾಷ್ಟ್ರಗಳನ್ನೆಲ್ಲ ಒಟ್ಟುಗೂಡಿಸಿ ಸ್ವಾತಂತ್ರ್ಯವನ್ನು ಗಳಿಸುವುದು. ಇದರಿಂದ ಈತನ ಸಾಹಿತ್ಯ ಸಾಮಾಜಿಕ ಹೊಣೆಯನ್ನು ಒಪ್ಪಿಕೊಳ್ಳಬೇಕು, ಕಲೆಗಾಗಿ ಕಲೆ ಎಂಬುದು ಹೊಣೆಗೇಡಿತನ ಎಂದು ವಾದಿಸಿದ. ಇವನ ಪ್ರಭಾವ ಪರಿಣಾಮಕಾರಿಯಾಗಿತ್ತು ಪೊಪೊವಿಚ್ ಸರ್ಬಿಯದ ಸಾಹಿತ್ಯ ದೂತ ಎಂಬ ಪತ್ರಿಕೆಯ ಮೂಲಕ ಸಾಹಿತ್ಯ ವಿವೇಚನೆಯಲ್ಲಿ ಆಸಕ್ತಿಯನ್ನು ಬೆಳೆಸಿದ. ಯೂಗೋಸ್ಲಾವಿಯದ ಸಾಹಿತ್ಯ ವಿಮರ್ಶೆಯ ಗಮನದ ದಿಕ್ಕನ್ನು ನಿರ್ಧರಿಸಿದವನು ಇವನು ಎನ್ನಬಹುದು. ಯುರೋಪಿನ ಹಲವು ಭಾಷೆಗಳನ್ನು ಕಲಿತಿದ್ದ ಇವನು ಹಲವು ಭಾಷೆಗಳಲ್ಲಿಯ ಸಾಹಿತ್ಯವಿಮರ್ಶೆಯನ್ನು ಅಭ್ಯಾಸಮಾಡಿದ್ದ. ಹೊರಗಿನ ಸಾಹಿತ್ಯಗಳ ಪ್ರಭಾವವನ್ನು ಯೂಗೋಸ್ಲಾವಿಯಕ್ಕೆ ತಂದಿತ್ತು ತನ್ನ ದೇಶದ ಸಾಹಿತ್ಯದಲ್ಲಿ ದೃಷ್ಟಿವೈಶಾಲ್ಯವನ್ನೂ ಹೊಸ ಸಾಹಿತ್ಯ ಮೌಲ್ಯಗಳನ್ನೂ ಬೆಳೆಸಿದ. ಸಾಹಿತ್ಯ ಕೃತಿಯನ್ನು ಓದುವಾಗ ಪದ ಪದವನ್ನೂ ಪಂಕ್ತಿ ಪಂಕ್ತಿಯನ್ನೂ ಎಚ್ಚರಿಕೆಯಿಂದ ವಿವೇಚಿಸಬೇಕು, ಅದರ ಸೊಗಸನ್ನು ಸಾಕ್ಷಾತ್ಕರಿಸಿಕೊಂಡು ಅದರ ಪ್ರಭಾವದಿಂದ ತನ್ಮಯತೆಯನ್ನು ಸಾಧಿಸುವಂತಾಗಬೇಕು, ಇದು ಸಾಹಿತ್ಯವಿಮರ್ಶೆಯ ರೀತಿ-ಗುರಿ ಎಂದು ವಿವರಣೆ ನೀಡಿದ. ಸಾಹಿತ್ಯ ವಿಮರ್ಶೆಯನ್ನು ಹೊಣೆಗಾರಿಕೆಯ ಪ್ರಕ್ರಿಯೆಯನ್ನಾಗಿ ಮಾಡಿದವನು ಈತ.

ಸ್ಲಾವ್ ದೇಶಗಳು ಸಾಮಾನ್ಯವಾಗಿ ವಿಸ್ತೀರ್ಣದಲ್ಲಿ ಚಿಕ್ಕವು. ಇವಕ್ಕೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದೇ ಒಂದು ಪ್ರಬಲ ಸಮಸ್ಯೆ, ಸ್ವಾತಂತ್ರ್ಯಕ್ಕಾಗಿ ಮತ್ತೆ ಮತ್ತೆ ಹೋರಾಟ ನಡೆಸಬೇಕಾಗಿ ಬಂತು. ಇದರಿಂದ ಸಾಹಿತ್ಯದ ಸೃಷ್ಟಿ, ಅದನ್ನು ಕಾಣುವ ದೃಷ್ಟಿ ಎರಡರ ಮೇಲೆಯೂ ಪ್ರಭಾವವಾಗಿದೆ. ಸೌಂದರ್ಯಮೀಮಾಂಸೆ ಹೆಚ್ಚಾಗಿ ಬೆಳೆಯಲು ಈ ದೇಶಗಳಲ್ಲಿ ಅವಕಾಶವಾಗಲಿಲ್ಲ. ರಾಷ್ಟ್ರಪ್ರೇಮ ತೀವ್ರವಾಗಿ ಜಾಗೃತಗೊಳ್ಳಬೇಕಾದ ಕಾಲದಲ್ಲೆಲ್ಲ ಈ ಅಗತ್ಯ ಸಾಹಿತ್ಯವಿಮರ್ಶೆಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವವನ್ನು ಬೀರಿತು. ಈ ದೇಶಗಳಲ್ಲಿ ನಿಯತಕಾಲಿಕಗಳು ಬೀರಿದ ಪ್ರಭಾವವೂ ಗಮನಾರ್ಹ. ಸೌಂದರ್ಯಮೀಮಾಂಸೆ, ರಸಾನುಭವದ ವಿಶ್ಲೇಷಣೆ ಇವಕ್ಕಿಂತ ಹೆಚ್ಚಾಗಿ ಸಾಹಿತ್ಯ-ಸಮಾಜಗಳ ಸಂಬಂಧದ ಪ್ರಶ್ನೆಯ ಸುತ್ತ ಸಾಹಿತ್ಯ ವಿಮರ್ಶೆ ಬೆಳೆಯಿತು.

ಎರಡನೆಯ ಮಹಾಯುದ್ಧದ ಅನಂತರ ಕಮ್ಯೂನಿಸ್ಟ್ ಪಕ್ಷ ಸಾಹಿತ್ಯವಿಮರ್ಶೆಯ ಮೇಲೆಲ್ಲ ತನ್ನ ಮುದ್ರೆಯನ್ನು ಒತ್ತಿತು. ಯುದ್ಧಾನಂತರ ಈ ಎಲ್ಲ ದೇಶಗಳಲ್ಲಿಯೂ ಕಮ್ಯೂನಿಸಮ್ ಬೇರೂರಿ ಸಾಮಾಜಿಕ ವಾಸ್ತವಿಕತೆಯ ಪಂಥವೇ ಪ್ರಬಲವಾಯಿತು. ಸಾಹಿತ್ಯ ವಿಮರ್ಶೆ ಕಮ್ಯೂನಿಸಮ್‍ನಿಂದ ಪ್ರಭಾವಿತವಾಯಿತು. ಈ ಪಂಥ ಕೃತಿಯ ವಸ್ತುವಿಗೇ ಹೆಚ್ಚು ಪ್ರಾಧಾನ್ಯ ನೀಡುತ್ತದೆ (ಸಮಾಜದ ಆರ್ಥಿಕ ಜೀವನ), ವಸ್ತುವಿನ ಆಯ್ಕೆಯನ್ನು ಕೆಲವೇ ಕ್ಷೇತ್ರಗಳಿಗೆ ಸೀಮಿತಗೊಳಿಸು ತ್ತದೆ(ವರ್ಗ ಕಲಹ, ಸಮಾಜಕ್ಕಾಗಿ ಕಾಯಕ), ವಸ್ತುವನ್ನು ಬೆಳೆಸುವ ರೀತಿಯಲ್ಲಿ ಒಂದೇ ದೃಷ್ಟಿಯನ್ನು ಒಪ್ಪುತ್ತದೆ(ಕಮ್ಯೂನಿಸ್ಟ್ ದೃಷ್ಟಿ). (ಎಲ್.ಎಸ್.ಎಸ್.)