ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವತಂತ್ರ ಸಿದ್ಧಲಿಂಗೇಶ್ವರ

ಸ್ವತಂತ್ರ ಸಿದ್ಧಲಿಂಗೇಶ್ವರ : - ಸು. 1480. ಬಸವೇಶ್ವರರ ತರುವಾಯದ ವಚನಕಾರರಲ್ಲಿ ಪ್ರಸಿದ್ಧರಾದವರು. ತೋಂಟದ ಸಿದ್ಧಲಿಂಗೇಶ್ವರರ ಪರಮಶಿಷ್ಯರು. ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ (ವಾಣಿಜ್ಯಪುರ) ಇವರ ಜನ್ಮಸ್ಥಳ. ಇವರು ವಿಶೇಷ ಮಹಿಮಾನ್ವಿತರೂ ಪವಾಡಪುರುಷರೂ ಆಗಿದ್ದರೆಂದು ಐತಿಹ್ಯ. ವೀರಶೈವಧರ್ಮ ಪ್ರಸಾರಕ್ಕಾಗಿ ಇವರು ತಮ್ಮ ಗುರುಗಳಾದ ತೋಂಟದ ಸಿದ್ಧಲಿಂಗೇಶ್ವರರೊಡನೆ ದೇಶಪರ್ಯಟನವನ್ನೂ ಕೈಗೊಂಡಿದ್ದಂತೆ ತಿಳಿದುಬರುತ್ತದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಕಾಪನಹಳ್ಳಿಯ ಸಮೀಪದಲ್ಲಿರುವ ಗಜರಾಜಗಿರಿ ಇವರ ಶಿವಯೋಗ ಧಾಮವಾಗಿತ್ತು. ಇದೇ ಇವರ ನಿರ್ವಾಣಸ್ಥಾನವೂ ಆಯಿತೆಂದು ತಿಳಿದುಬರುತ್ತದೆ. ಗಜರಾಜಗಿರಿಯಲ್ಲಿ ಇವರ ಗದ್ದುಗೆ ಇದೆ. ಪ್ರತಿವರ್ಷ ಮಾಘಮಾಸದಲ್ಲಿ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.

ಇವರು ವಚನಗಳನ್ನೂ ಮುಕ್ತ್ಯಂಗನಾಕಂಠಮಾಲೆ, ಜಂಗಮರಗಳೆ ಎಂಬ ಕೃತಿಗಳನ್ನೂ ಬರೆದಿದ್ದಾರೆ. ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ಎಂಬುದು ಇವರ ವಚನಗಳ ಅಂಕಿತ. ಇದುವರೆಗೆ 430 ವಚನಗಳು ದೊರಕಿವೆ. ಈ ವಚನಗಳಲ್ಲಿ ವೀರಶೈವ ಸಿದ್ಧಾಂತ, ಯೋಗ, ಷಟ್ಸ್ಥಲಶಾಸ್ತ್ರ, ಅನುಭಾವ-ಇವೇ ಮೊದಲಾದ ವಿಷಯಗಳು ಪ್ರತಿಪಾದಿತವಾಗಿವೆ. ಕೆಲವು ಬೆಡಗಿನ ವಚನಗಳನ್ನೂ ಇವರು ಬರೆದಿದ್ದಾರೆ. ಮುಕ್ತ್ಯಾಂಗನಾ ಕಂಠಮಾಲೆ 21 ವಚನಗಳಿಂದ ಕೂಡಿದ ಒಂದು ಅನುಭಾವ ಗ್ರಂಥ. ಜಂಗಮ ರಗಳೆಯಲ್ಲಿ 108 ನುಡಿಗಳಿವೆ. (ಎನ್.ಬಿ.; ಜೆ.ಎಸ್.ಪಿ.ಎಂ.)