ಸ್ವಯಂವರ ಪ್ರಾಚೀನ ಭಾರತದ ವಿವಾಹ ಪದ್ಧತಿಗಳಲ್ಲಿ ಒಂದು. ಪ್ರಾಚೀನ ಕಾಲದಲ್ಲಿ ಪ್ರಚಲಿತವಾಗಿದ್ದ, ಸ್ಮøತಿಗಳಲ್ಲಿ ಉಕ್ತವಾಗಿದ್ದ ಅಷ್ಟವಿಧ ವಿವಾಹಗಳಲ್ಲಿ ಇದು ಸೇರಿಲ್ಲ. ವಧು ತಾನೇ ವರನನ್ನು ವರಿಸುವ ಸಮಾರಂಭವಿದು. ಸಾಮಾನ್ಯವಾಗಿ ರಾಜಕುಮಾರಿ ಅಥವಾ ಕ್ಷತ್ರಿಯ ಕನ್ಯೆಯಾದ ವಧು ವಿವಾಹಾಕಾಂಕ್ಷಿಗಳಾದ ಅಭ್ಯರ್ಥಿಗಳು ನೆರೆದ ಸಭೆಯಲ್ಲಿ ಒಂದು ವ್ಯವಸ್ಥಿತ ಸಂದರ್ಭದಲ್ಲಿ ತನ್ನ ಪತಿಯನ್ನು ಆರಿಸಿಕೊಳ್ಳುವಿಕೆ ಮತ್ತು ಹಾಗೆ ಆರಿಸಿಕೊಂಡು ಏರ್ಪಾಡಾಗುವ ವಿವಾಹ ರೀತಿಯಿದು.

ಮಗಳು ಪ್ರಾಪ್ತ ವಯಸ್ಕಳಾಗುತ್ತಿದ್ದಂತೆ ತಂದೆಯಾದವನು ತನ್ನ ಸ್ಥಾನಮಾನಗಳಿಗೆ ತಕ್ಕಂಥ ರಾಜಕುಮಾರರನ್ನು ಸ್ವಯಂವರಕ್ಕಾಗಿ ಆಹ್ವಾನಿಸುತ್ತಿದ್ದ. ಬಂದ ಆಹ್ವಾನಿತರನ್ನು ಸತ್ಕರಿಸಿ ಸ್ವಯಂವರ ಮಂಟಪದಲ್ಲಿ ಕೂರಿಸುತ್ತಿದ್ದ. ಕೈಯಲ್ಲಿ ವರಮಾಲಿಕೆ ಹಿಡಿದ ವಧು ಸ್ವಯಂವರ ಮಂಟಪವನ್ನು ಪ್ರವೇಶಿಸುತ್ತಿದ್ದಂತೆ ವಂದಿಮಾಗಧರು ವಿವಾಹಾಕಾಂಕ್ಷಿಗಳಾಗಿ ಬಂದಿರುವ ಪ್ರತಿಯೊಬ್ಬರ ಮುಂದೆ ನಿಂತು ಅವರ ವಂಶ, ವಿವರಗಳನ್ನು ಹೇಳಿ, ಪರಾಕ್ರಮಗಳನ್ನು ಹೊಗಳಿ ಅವಳಿಗೆ ಪರಿಚಯಿಸುತ್ತಿದ್ದರು. ತನಗೆ ಮೆಚ್ಚಿಕೆಯಾದವನ ಕೊರಳಿಗೆ ಅವಳು ಮಾಲೆ ಹಾಕುತ್ತಿದ್ದಳು. ಅನಂತರ ವಿವಾಹ ನಡೆಯುತ್ತಿತ್ತು. ಇದು ಸಾಮಾನ್ಯವಾಗಿ ನಡೆಯುತ್ತಿದ್ದ ಸ್ವಯಂವರ ವಿಧಾನ.

ರಾಮಾಯಣ, ಮಹಾಭಾರತ, ರಘುವಂಶ ಮುಂತಾದ ಪ್ರಾಚೀನ ಮಹಾಕಾವ್ಯಗಳಲ್ಲಿ ಸ್ವಯಂವರ ವರ್ಣನೆಗಳಿವೆ. ಕ್ಷತ್ರಿಯರಲ್ಲಿ ಹಿಂದಿನಿಂದಲೂ ಇದು ಆಚರಣೆಯಲ್ಲಿತ್ತು. ಹನ್ನೆರಡನೆಯ ಶತಮಾನದ ಅನಂತರದಲ್ಲಿ ಈ ಬಗೆಯ ವಿವಾಹದ ಬಗ್ಗೆ ಹೆಚ್ಚಿನ ಮಾಹಿತಿ ಕಂಡುಬರುವುದಿಲ್ಲ. ಸ್ವಯಂವರದಲ್ಲಿ ಮೂರು ವಿಧ. ಇಚ್ಛಾ ಸ್ವಯಂವರ, ಪಣವನ್ನು ಗೆದ್ದು ವರಿಸುವುದು, ಶೌರ್ಯಶುಲ್ಕ. ಕಾವ್ಯಗಳಲ್ಲಿ ವರ್ಣಿತವಾಗಿರುವ ಸ್ವಯಂವರಗಳಲ್ಲಿ ಇಚ್ಛಾಸ್ವಯಂವರವೇ ಪ್ರಮುಖ ವಾದುದು. ಈ ಸ್ವಯಂವರ ಪದ್ಧತಿ ಯಾವಾಗ ಆರಂಭವಾಯಿತು ಎನ್ನುವುದರ ಬಗೆಗೆ ಖಚಿತವಾದ ಮಾಹಿತಿ ಸಿಗುವುದಿಲ್ಲ. ಪ್ರಾಚೀನ ಸ್ಮøತಿಗಳಲ್ಲಿ ಇದರ ಪ್ರಸ್ತಾಪವಿಲ್ಲ. ಈಗ ಉಪಲಬ್ಧವಿರುವಂತೆ ಮಹಾಭಾರತದಲ್ಲಿ ಬರುವ ಮಾಧವಿಯ ಸ್ವಯಂವರವೇ ಮೊದಲನೆ ಯದು. ಇವಳ ಸ್ವಯಂವರದ ಸಂದರ್ಭ ವಿಶಿಷ್ಟವಾದುದು. ಯಯಾತಿಯಿಂದ ಗಾಲವನಿಗೆ ದಾನವಾಗಿ ಹೋದ ಈಕೆ ಮೂವರು ರಾಜರಿಗೆ ಮತ್ತು ವಿಶ್ವಾಮಿತ್ರನಿಗೆ ಸಂತಾನ ಕೊಟ್ಟು ತಿರುಗಿ ತಂದೆಯ ಮನೆಗೆ ಬಂದಾಗ, ಯಯಾತಿ ಇವಳ ಸ್ವಯಂವರವನ್ನು ಏರ್ಪಡಿಸುತ್ತಾನೆ. ಇವಳು ಯಾರನ್ನೂ ವರಿಸದೆ ತಪಸ್ಸನ್ನು ಆಚರಿಸುವುದಾಗಿ ತಿಳಿಸಿ ಕಾಡಿಗೆ ಹೋಗುತ್ತಾಳೆ. ಹೆಣ್ಣನ್ನು ದಾನಮಾಡುವ, ಮಾರಾಟಮಾಡುವ ಸಾಮಾಜಿಕ ಪರಿಸರದಲ್ಲಿಯೂ ಹೆಣ್ಣಿಗೆ ತನ್ನ ಗಂಡನನ್ನು ಆರಿಸಿಕೊಳ್ಳುವ ಸ್ವಾಂತಂತ್ರ್ಯವಿದ್ದದು ಗಮನಾರ್ಹಸಂಗತಿಯಾಗಿದೆ.

ಕುಂತಿ ಮತ್ತು ದಮಯಂತಿಯರ ವಿವಾಹವು ಸ್ವಯಂವರ ಪದ್ಧತಿಯಂತೆಯೇ ನಡೆಯಿತು. ಕುಂತಿಭೋಜ ಪ್ರಾಪ್ತ ವಯಸ್ಸಿಗೆ ಬಂದ ಮಗಳ ಸ್ವಯಂವರವನ್ನು ಏರ್ಪಡಿಸುತ್ತಾನೆ. ಸ್ವಯಂವರಕ್ಕೆ ಬಂದಿರುವವರಲ್ಲಿ ಪಾಂಡುವಿನ ರೂಪಕ್ಕೆ ಮನಸೋತ ಕುಂತಿ ಅವನ ಕೊರಳಿಗೆ ಮಾಲೆ ಹಾಕುತ್ತಾಳೆ. ದಮಯಂತಿ ಹಾಗೂ ನಳ ವಿವಾಹಪೂರ್ವದಲ್ಲಿ ಪರಸ್ಪರ ಅನುರಕ್ತರಾಗಿರುತ್ತಾರೆ. ತಂದೆ ಏರ್ಪಡಿಸಿದ ಸ್ವಯಂವರದಲ್ಲಿ ದಮಯಂತಿ ನಳನನ್ನೇ ವರಿಸುತ್ತಾಳೆ. ಇವರಿಗೆಲ್ಲ ತಾವು ಮೆಚ್ಚಿದವನನ್ನು ವರಿಸುವ ಅವಕಾಶ ದೊರಕುತ್ತದೆ. ಆದರೆ ಕಾಶೀರಾಜನ ಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರಿಗಾಗಿ ಸ್ವಯಂವರವನ್ನು ಏರ್ಪಡಿಸಿದ್ದರೂ ಅವರಿಗೆ ವರನನ್ನು ಆರಿಸಿಕೊಳ್ಳಲು ಅವಕಾಶವಾಗದಂತೆ ಭೀಷ್ಮ ತನ್ನ ತಮ್ಮನಿಗಾಗಿ ಅವರನ್ನು ಅಪಹರಿಸುತ್ತಾನೆ. ಹೋಗುವಾಗ ಪ್ರಬಲರಾದವರು ಅವರನ್ನು ಬಿಡಿಸಿಕೊಂಡು ಹೋಗುವಂತೆ ಸವಾಲು ಒಡ್ಡುತ್ತಾನೆ. ಹೀಗೆ ಸ್ವಯಂವರ ಮಂಟಪ ವಧುವಿನ ಆಯ್ಕೆಗೆ ಒಂದು ವೇದಿಕೆಯಾಗದೆ ಹಲವು ಸಂದರ್ಭಗಳಲ್ಲಿ ಯುದ್ಧಭೂಮಿಯಾಗುತ್ತಿದ್ದುದೂ ಉಂಟು. ಕೆಲವೊಮ್ಮೆ ವಧು ಯಾರ ಕೊರಳಿಗೆ ಮಾಲೆ ಹಾಕುತ್ತಿದ್ದಳೋ ಅವನ ವಿರುದ್ಧ ಉಳಿದ ರಾಜರು ಶಸ್ತ್ರಹಿಡಿಯುವುದೂ ಇತ್ತು.

	ರುಕ್ಮಿಣೀ ಸ್ವಯಂವರ ತೀರ ಭಿನ್ನವಾದುದು. ಕೃಷ್ಣನನ್ನು ಮೆಚ್ಚಿದ ಈಕೆ ಸ್ವಯಂವರದ ಪೂರ್ವದಲ್ಲಿ ತಂದೆ ಅಣ್ಣಂದಿರ ವಿರೋಧವನ್ನು ಕಡೆಗಣಿಸಿ, ದೇವರ ದರ್ಶನ ನೆಪದಿಂದ ಅರಮನೆಯಿಂದ ಹೊರಡುತ್ತಾಳೆ. ಮನದನ್ನನನ್ನು ಸೇರಲು ಇವಳು ಈ ಸಂದರ್ಭವನ್ನು ಬಳಸಿಕೊಳ್ಳುತ್ತಾಳೆ. ಸೀತೆ ಮತ್ತು ದ್ರೌಪದಿಯರ ಸ್ವಯಂವರಗಳು ಪಣವನ್ನು ಗೆದ್ದು ವರಿಸುವ ಸ್ವಯಂವರದ ಗುಂಪಿಗೆ ಸೇರುತ್ತವೆ. ಸೀತೆಯ ಸ್ವಯಂವರದಲ್ಲಿ ಇವಳನ್ನು ವಿವಾಹವಾಗಲು ಶಿವಧನುಸ್ಸನ್ನು ಎತ್ತಿ ಎದೆಯೇರಿಸುವುದು ಪಣವಾಗಿದ್ದರೆ, ದ್ರೌಪದಿಯ ಸ್ವಯಂವರದಲ್ಲಿ ಎಣ್ಣೆಕೊಪ್ಪರಿಗೆಯಲ್ಲಿ  ಪ್ರತಿಬಿಂಬಿತವಾದ ಮತ್ಸ್ಯಯಂತ್ರವನ್ನು ಭೇದಿಸುವುದು ಪಣವಾಗಿತ್ತು. ಈ ರೀತಿಯ ಸ್ವಯಂವರದಲ್ಲಿ ಆದ್ಯತೆ ಸಿಗುತ್ತಿದ್ದುದು ಪುರುಷನ ಸಾಹಸಕ್ಕೇ ವಿನಾ ವಧುವು ವರನನ್ನು ಆರಿಸಿಕೊಳ್ಳುವ ಅವಕಾಶಕ್ಕಲ್ಲ. 

ಹನ್ನೆರಡನೆಯ ಶತಮಾನದಲ್ಲಿ ನಡೆದ ಸಂಯುಕ್ತೆಯ ಸ್ವಯಂವರ ವೊಂದೇ ಇತಿಹಾಸದಲ್ಲಿ ಸಿಗುವ ದಾಖಲೆ. ಇವಳಲ್ಲಿ ಅನುರಕ್ತನಾಗಿದ್ದ ಪೃಥ್ವೀರಾಜಚೌಹಾಣ ಇವಳನ್ನು ಸ್ವಯಂವರ ಮಂಟಪದಿಂದ ಅಪಹರಿಸಿಕೊಂಡು ಹೋಗುತ್ತಾನೆ. ಸ್ವಯಂವರ ಮಂಟಪ ಇವಳ ತಂದೆ ಜಯಚಂದ್ರ ಮತ್ತು ಪೃಥ್ವೀರಾಜಚೌಹಾಣರ ವೈರತ್ವದ ವೇದಿಕೆಯಾಗುತ್ತದೆ.

ಪರಸ್ಪರ ಅನುರಕ್ತರಾಗಿ ಶಾಸ್ತ್ರಬಂಧನವಿಲ್ಲದೆ ಗಂಡು-ಹೆಣ್ಣು ಸೇರುವ ಗಾಂಧರ್ವ ವಿವಾಹವೂ ಸ್ವಯಂವರದ ಒಂದು ವಿಧ ಎಂದೇ ಪರಿಗಣಿತವಾಗಿದೆ. ಕ್ಷತ್ರಿಯರಿಗೆ ಇದು ಹೆಚ್ಚು ಪ್ರಿಯವಾದುದಾಗಿತ್ತು. ದುಷ್ಯಂತ-ಶಕುಂತಲೆಯರು ಗಾಂಧರ್ವ ರೀತಿಯಲ್ಲಿ ವಿವಾಹವಾಗಿದ್ದರು. (ಸಿ.ಎಸ್.)