ಸ್ವಾತಿ - ಉತ್ತರ ಖಗೋಳಾರ್ಧದಲ್ಲಿರುವ ಸಹದೇವ (ಬೊಓಟೀಸ್) ನಕ್ಷತ್ರಪುಂಜದ ಪ್ರಮುಖ ನಕ್ಷತ್ರ (ಆಲ್ಫಾ ಬೊಓಟೀಸ್, ಆಕ್ಟ್ರ್ಯುರಸ್). ನಾಲ್ಕನೆಯ ಅತ್ಯುಜ್ಜ್ವಲ ಗೋಚರ ನಕ್ಷತ್ರ. ಏ2 III ರೋಹಿತ ವರ್ಗದ ಕೆಂಪು ದೈತ್ಯ.

ಚಿತ್ರ-1

ಭೂಮಿಯಿಂದ 37 ಜ್ಯೋತಿರ್ವರ್ಷ ದೂರದಲ್ಲಿದೆ. ಇದರ ವ್ಯಾಸ ಸೂರ್ಯನ ವ್ಯಾಸಕ್ಕಿಂತ 27ರಷ್ಟು, ರಾಶಿ 4ರಷ್ಟು ಅಧಿಕ. ನಿರಪೇಕ್ಷ ಕಾಂತಿಮಾನ -0.3. ಗ್ರೀಷ್ಮ ಅಥವಾ ಹೇಮಂತ ತ್ರಿಭುಜ ರಚಿಸುವ ನಕ್ಷತ್ರಗಳ ಪೈಕಿ ಒಂದು (ಇತರ ಎರಡು ತಾರೆಗಳು: ಧ್ರುವ ಮತ್ತು ಅಭಿಜಿತ್). ಎಲ್ಲ ರಾಷ್ಟ್ರಗಳ ಜ್ಯೋತಿಷಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಸ್ವಾತಿ ನಕ್ಷತ್ರದ ಬೆಳಕನ್ನು ಉಪಯೋಗಿಸಿ 1933ರ ಶಿಕಾಗೊ ಜಾಗತಿಕ ಮೇಳ ಉದ್ಘಾಟಿಸಿದ್ದರಿಂದ ಜನತೆ ಇದೊಂದು ಖ್ಯಾತ ನಕ್ಷತ್ರ ಎಂದು ಪರಿಭಾವಿಸುವಂತಾಯಿತು. *