ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಮಿ, ಎಸ್ ಎನ್ 2

ಸಹಜಕೃಷಿ ನಿಸರ್ಗದಲ್ಲಿ ಸಹಜವಾಗಿ ಸಂಭವಿಸುವ ಜೀವಿಗಳ (ಸಸ್ಯಗಳ) ಹುಟ್ಟು, ಬೆಳೆವಣಿಗೆ, ಸಂತಾನೋತ್ಪತ್ತಿ ಹಾಗೂ ಸಾವಿನ ಚಕ್ರವನ್ನು ಗಮನಿಸಿ ಮತ್ತು ನಿಸರ್ಗದ ಮೂಲಭೂತ ನಿಯಮಗಳನ್ನು ಅನುಸರಿಸಿ ನಡೆಸುವ ಬೇಸಾಯ (ನ್ಯಾಚುರಲ್ ಫಾರ್ಮಿಂಗ್). ಆಧುನಿಕ ರಾಸಾಯನಿಕ ಕೃಷಿ ವಿಧಾನಗಳಿಂದ ಸೋತು ಬೇಸತ್ತಿರುವ ಜನ ಮರಳಿ ನಿಸರ್ಗದೆಡೆಗೆ ಹೋಗಲು ಹವಣಿಸುತ್ತಿದ್ದಾರೆ. ಬದಲಿಯನ್ನು ನಿರೀಕ್ಷಿಸುತ್ತಿದ್ದಾರೆ. ಇಂಥ ಬದಲಿ ಕೃಷಿಗೆ ಹತ್ತಾರು ಹೆಸರುಗಳು: ಪರ್ಯಾಯಕೃಷಿ, ಪಾರಂಪರಿಕಕೃಷಿ, ಪ್ರಾಕೃತಿಕಕೃಷಿ, ನಿಸರ್ಗಕೃಷಿ, ಆದರ್ಶಕೃಷಿ, ಆರ್ಷೇಯಕೃಷಿ, ಆತ್ಮೀಯಕೃಷಿ, ಶಾಶ್ವತಕೃಷಿ, ಸನಾತನಕೃಷಿ, ಸುಸ್ಥಿರಕೃಷಿ, ಜೀವಧಾರಕಕೃಷಿ, ಸ್ವಾವಲಂಬೀಕೃಷಿ, ಸಾವಯವಕೃಷಿ, ಸಹಜಕೃಷಿ ಇತ್ಯಾದಿ.

ಹೆಸರು ಯಾವುದೇ ಇರಲಿ ಉದ್ದೇಶ ಒಂದೇ: ಪ್ರಕೃತಿಯ ಭೂಮ ಭೀಮ ವ್ಯಕ್ತಿತ್ವಕ್ಕೆ ವ್ಯಕ್ತಿ ಶರಣಾಗುವುದು. ಗಬ್ಬೆದ್ದು ನಾರುತ್ತಿರುವ ವೈವಿಧ್ಯಮಯ ಪರಿಸರಮಾಲಿನ್ಯದ ಆಧಿಕ್ಯದಲ್ಲಿ ಅನಿವಾರ್ಯವೆನಿಸಿರುವ ಬದಲಾವಣೆಯ ಪ್ರಾರಂಭವನ್ನು ಸಾವಯವ ಕೃಷಿ(ನೋಡಿ) ಎಂದೂ ಅಂತ್ಯವನ್ನು ಸಹಜಕೃಷಿ ಎಂದೂ ವಿಶ್ಲೇಷಿಸಬಹುದು.

ನಿಸರ್ಗದ ನಡೆನುಡಿಗಳನ್ನು ಅರ್ಥವಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಅದನ್ನು ಪೂರ್ತಿ ಅರಿತವನು ತಾನೇ ನಿಸರ್ಗವಾಗುತ್ತಾನೆ! ಇದರ ಅರ್ಥ ಪ್ರತಿಯೊಬ್ಬನೂ ಸ್ವಂತ ಮಿತಿಯಲ್ಲಿ ಮಾತ್ರ ನಿಸರ್ಗವನ್ನು ತಿಳಿಯಲು ಶಕ್ತ. ಈ ತಿಳಿವಳಿಕೆ ಕೃಷಿಯಿಂದ ಕೃಷಿಗೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಗುತ್ತದೆ. ತಿಳಿವಳಿಕೆಯ ಹೆಚ್ಚುಗಾರಿಕೆಗೆ ಅನುಗುಣವಾಗಿ ಅವರ ಕೃಷಿ ವಿಧಾನಗಳು ಸಾವಯವದಿಂದ ಸಹಜದತ್ತ ಸಾಗುತ್ತವೆ. ಆಳವಾಗಿ ಆಲೋಚಿಸಿದಾಗ ಸಹಜದಲ್ಲಿ ಕೃಷಿಯೂ ಇಲ್ಲ, ವಿಧಾನಗಳೂ ಇಲ್ಲ. ನಿಸರ್ಗದಲ್ಲಿ ಎಲ್ಲವೂ ತಾವಾಗಿಯೇ ಸಂಭವಿಸುತ್ತವೆ. ಇಂಥ ನಿಸರ್ಗದಿಂದ ಮಾನವ ತನಗೆ ಬೇಕಾಗುವ ಮೂಲಭೂತ ಅಗತ್ಯಗಳನ್ನು ಪಡೆಯುವುದು ಸಹಜ.

ಹೀಗಿದ್ದರೂ ಸಾಮಾನ್ಯವಾಗಿ ಜನ ಸಮುದಾಯ ಅರ್ಥವಿಸಿರುವಂತೆ ಸಹಜಕೃಷಿಯಲ್ಲಿ ಮುಖ್ಯವಾಗಿ ಉಳುಮೆ ಇಲ್ಲ. ತಿಪ್ಪೆಗೊಬ್ಬರದ ಬಳಕೆ ಕೂಡ ಇಲ್ಲ. ಆದರೆ ನಾಟಿಬೀಜಗಳ ಬಿತ್ತನೆ ಇದೆ. ಇದು ಕೊಳೆತ ಕಸದ ಹಾಸಿನ ಮೇಲೆ ನಡೆಯುತ್ತದೆ. ಕನಿಷ್ಠ ಪ್ರಮಾಣದಲ್ಲಿ ಕೃತಕ ನೀರಾವರಿಯನ್ನು ಕೂಡ ಸಹಜ ಕೃಷಿಕರು ಒಪ್ಪಿಕೊಂಡಿದ್ದಾರೆ. ತಾತ್ತ್ವಿಕವಾಗಿ ನೋಡುವುದಾದರೆ ಸಾವಯವ ಇತ್ಯಾದಿ ಎಲ್ಲ ಕೃಷಿಗಳೂ ಒಂದನೆಯ, ಎರಡನೆಯ ತರಗತಿಯ ವಿದ್ಯಾರ್ಥಿಗಳು ಮಾಡುವ ನಿಸರ್ಗದ ನಕಲು ಚಿತ್ರ. ಸಹಜ ಎನ್ನುವುದು ಕಲಾ ತಪಸ್ವಿ ಕುಂಚಿಸುವ ಅಸಲು ಚಿತ್ರ. ಜಪಾನೀ ಸಹಜಕೃಷಿ ನೇತಾರ ಮಸನೊಬು ಫುಕುವೋಕ (1913) ಉದ್ಗರಿಸಿರುವಂತೆ “ಕೃಷಿಯ ಪರಮಲಕ್ಷ್ಯ ಬೆಳೆ ಬೇಸಾಯವಲ್ಲ, ಬದಲು ಮಾನವ ಸಂಸ್ಕಾರ ಮತ್ತು ಪರಿಪೂರ್ಣತೆಗಳ ಸಾಧನೆ.” (ಎ.ಪಿ.ಸಿ.)