ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಮಿ, ಕೆ ಎಸ್ ಎಲ್ (ರವೀ)

ಸ್ವಾಮಿ, ಕೆ ಎಸ್ ಎಲ್ (ರವೀ) (1939- ). ಕೆ.ಎಸ್.ಎಲ್ ಸ್ವಾಮಿ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ) ಕನ್ನಡ ಚಲನಚಿತ್ರ ನಿರ್ಮಾಪಕ ನಿರ್ದೇಶಕ. ಹುಟ್ಟಿದ್ದು 1939ರಲ್ಲಿ ಮೈಸೂರಿನಲ್ಲಿ, ಸಂಪ್ರದಾಯಸ್ಥ ಪುರೋಹಿತರ ಮನೆಯಲ್ಲಿ. ಮೈಸೂರಿನಲ್ಲಿಯೇ ವಿದ್ಯಾರ್ಜನೆ. ವಿಜ್ಞಾನ ಪದವೀಧರರಾಗುವ ಮೊದಲೇ ಚಿತ್ರರಂಗದತ್ತ ಒಲವು-ಆಕರ್ಷಣೆ. ``ರತ್ನಮಂಜರಿ ಚಿತ್ರದಲ್ಲಿ ಸಣ್ಣ ಪಾತ್ರವೊಂದರ ನಿರ್ವಹಣೆ. ಆ ಮೂಲಕ ಚಿತ್ರರಂಗ ಪ್ರವೇಶ. ನಟನಾಗುವ ಹಂಬಲ ಹೊತ್ತು ಮದರಾಸಿಗೆ ಪ್ರಯಾಣ. ಅಲ್ಲಿ ಜಿ.ವಿ.ಅಯ್ಯರ್ ಅವರ ``ತಾಯಿಕರುಳು ಚಿತ್ರದಲ್ಲಿ ಸಹಾಯಕ ನಿರ್ದೇಶನದ ಹೊಣೆ. ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ ಕೆ.ಎಸ್.ಎಲ್.ಸ್ವಾಮಿ ನಂತರದಲ್ಲಿ ಕಣಗಾಲ್ ಪ್ರಭಾಕರಶಾಸ್ತ್ರಿಯವರ ಜೊತೆ ಕೆಲಸ ಮಾಡಿದರು. ಕನ್ನಡ ಹಾಗೂ ಸಂಸ್ಕøತಗಳಲ್ಲಿ ಪರಿಣತರಾಗಿದ್ದ ಕೆ.ಎಸ್.ಎಲ್.ಸ್ವಾಮಿ ಸಾಹಿತ್ಯರಚನೆಯ ಬಗ್ಗೆಯೂ ಪರಿಣತಿ ಪಡೆದರು. 1966ರಲ್ಲಿ ತೆರೆಕಂಡ ``ತೂಗುದೀಪ ಇವರ ನಿರ್ದೇಶನದ ಮೊದಲ ಚಿತ್ರ. ನಟ ಉದಯಕುಮಾರ್ ಅವರು ಇವರಿಗಿಟ್ಟ ಹೆಸರು ರವೀ. ತೂಗುದೀಪದಲ್ಲಿ ಇವರು ಅಭಿನಯಿಸಿದ್ದಲ್ಲದೆ ಶ್ರೀನಿವಾಸ್ ಎಂಬ ನಟನನ್ನೂ ಪರಿಚಯಿಸಿದರು. ಅವರು ತೂಗುದೀಪ ಶ್ರೀನಿವಾಸ್ ಎಂದೇ ಖಳನಟನಾಗಿ ಖ್ಯಾತರಾದರು. ನಲವತ್ತೊಂಭತ್ತು ಚಿತ್ರಗಳನ್ನು ನಿರ್ದೇಶಿಸಿರುವ ರವೀ ಅವರು ಸ್ವತಃ ಒಂಭತ್ತು ಚಿತ್ರಗಳನ್ನು ತಾವೇ ನಿರ್ಮಿಸಿದ್ದಾರೆ. ಇವರ ತಾರಾ ಪತ್ನಿ ಬಿ.ವಿ.ರಾಧಾ ಅವರು ನಾಲ್ಕು ಚಿತ್ರಗಳ ನಿರ್ಮಾಪಕರು.

ರವೀ ಅವರ ನಿರ್ದೇಶನದ ``ಮಲಯಮಾರುತ ಸಂಗೀತ ಪ್ರಧಾನ ಸಿನಿಮಾ ಸ್ಕೋಪ್ ಚಿತ್ರ. ಸಂಗೀತ ಸಂಯೋಜಕ ವಿಜಯಭಾಸ್ಕರ್ ಅವರಿಗೆ ಈ ಚಿತ್ರದಿಂದಾಗಿ ರಾಷ್ಟ್ರೀಯ ಮಟ್ಟದ ``ಸುರ್‍ಸಿಂಗಾರ್ ಪ್ರಶಸ್ತಿ ಲಭ್ಯವಾಯಿತು. ನಿರ್ದೇಶಕ ಪುಟ್ಟಣ್ಣಕಣಗಾಲ್. ಅವರು ರವಿ ಅವರಿಗಾಗಿ ``ಶುಭಮಂಗಳ ಚಿತ್ರವನ್ನು ನಿರ್ದೇಶಿಸಿದರು. ಪುಟ್ಟಣ್ಣನವರ ನಿಧನದ ನಂತರ ಅಪೂರ್ವವಾಗಿದ್ದ ``ಮಸಣದ ಹೂವು ಚಿತ್ರವನ್ನು ರವೀ ಅವರು ನಿರ್ದೇಶಿಸಿ, ಚಿತ್ರವನ್ನು ಬಿಡುಗಡೆಗೆ ಅಣಿ ಮಾಡಿಕೊಟ್ಟರು. ರವೀಯವರು ನಿರ್ದೇಶಿಸಿದ ಮಕ್ಕಳ ಚಿತ್ರ "ಜಂಬೂಸವಾರಿ ಕೇಂದ್ರಸರ್ಕಾರದಿಂದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಹರಕೆಯ ಕುರಿ ಅತ್ಯುತ್ತಮ ಕಥಾ ಚಿತ್ರವೆಂದು 1992ರಲ್ಲಿ ರಾಷ್ಟ್ರಪತಿಯವರಿಂದ ರಜತಕಮಲ ಪ್ರಶಸ್ತಿ ಪಡೆಯಿತು. ಅಲ್ಲದೆ ಫ್ರಾಂಕ್‍ಫರ್ಟ್, ಇರಾನ್ ಇಟಲಿ, ಚಿಕಾಗೋ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಜನಪ್ರಿಯವಾಯಿತು. ರವಿಯವರ ಚಿತ್ರಗಳ ವಸ್ತು ವೈವಿಧ್ಯಮಯ. ಅರಿಶಿನ ಕುಂಕುಮ ತ್ಯಾಗಮಯಿ ಮಹಿಳೆಯ ಕತೆ, `ಭಾಗ್ಯಜ್ಯೊತಿಗೆ ವರ್ಗಸಂಘರ್ಷದ ಹಿನ್ನೆಲೆ. `ಮಿಥಿಲೆಯ ಸೀತೆಯರು ವಂಶ ಪ್ರತಿಷ್ಠೆ ಹಾಗೂ ಮುಗ್ಧ ಹೆಣ್ಣು ಮಕ್ಕಳನ್ನು ಬಲಿತೆಗೆದುಕೊಳ್ಳುವ ದಾರುಣ ಕಥಾನಕ. `ಮಲಯ ಮಾರುತ ಸಂಗೀತಗಾರನ ಬದುಕಿನ ನಿರೂಪಣೆ, `ಹರಕೆಯ ಕುರಿಗೆ ರಾಜಕೀಯ ಹಿನ್ನಲೆ, `ರಾಮಲಕ್ಷ್ಮಣರ ವಸ್ತು ವನ್ಯಸಿರಿ ರಕ್ಷಣೆ. ಜಿ.ವಿ.ಅಯ್ಯರ್ ಅವರ ಮಧ್ವಾಚಾರ್ಯ, ರಾಮಾನುಜಾಚಾರ್ಯ, ವಿವೇಕಾನಂದ, ಭಗವದ್ಗೀತೆ ಚಿತ್ರಗಳಿಗಾಗಿ ದುಡಿದರು. ಹಲವು ಚಿತ್ರಗೀತೆಗಳನ್ನು ಹಾಡಿ ಸೈ ಎನ್ನಿಸಿಕೊಂಡರಲ್ಲದೆ ಚಿತ್ರಗೀತೆಗಳನ್ನೂ ರಚಿಸಿದ್ದಾರೆ. ಶುಭಮಂಗಳದ ಸೂರ್ಯಂಗೂ ಚಂದ್ರಂಗೂ ಬಂದಾದೆ ಮುನಿಸು, ಸಂಘರ್ಷ ಚಿತ್ರದ ಯೌವನದ ಹೊಳೆಯಲ್ಲಿ...... ಗೀತೆಗಳೂ ಇಂದಿಗೂ ಜನಪ್ರಿಯ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಲವಾರು ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇತ್ಯಾದಿ ಚಿತ್ರರಂಗಕ್ಕೆ ಸಂಬಂಧಿಸಿದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ದುಡಿದಿದ್ದಾರೆ. ಇತ್ತೀಚೆಗೆ ಕಿರುತೆರೆಯ ಕ್ಷೇತ್ರದಲ್ಲಿ ಪದಾರ್ಪಣೆಮಾಡಿ, ``ಸೃಷ್ಟಿ ಧಾರಾವಾಹಿಯನ್ನು ನಿರ್ದೇಶಿಸಿದ ರವೀಯವರು ಹಲವು ಚಿತ್ರಗಳಲ್ಲಿ ನಟಿಸಿದ್ದಲ್ಲದೆ, ``ಮೂಡಲ ಮನೆ ಕಿರುತೆರೆ ಧಾರಾವಾಹಿಯಲ್ಲಿ ದೇಸಾಯಿಯವರ ಪಾತ್ರದಲ್ಲಿ ನಟಿಸಿ ಮನೆ ಮಾತಾಗಿದ್ದಾರೆ.

ಪರರ ಸುಖ ದುಃಖಗಳಿಗೆ ಮಿಡಿಯುವ ರವೀ ಮೃದು ಹೃದಯಿ. ನಿರ್ದೇಶನಕ್ಕೂ ಸಿದ್ಧ, ನಟನೆಗೂ ಸೈ ಅಷ್ಟೇ ಅಲ್ಲ ಪೌರೋಹಿತ್ಯಕ್ಕೂ ಸಿದ್ಧ. ಕನ್ನಡ ಚಿತ್ರರಂಗದಲ್ಲಿ ಕೆ.ಎಸ್.ಎಲ್.ಸ್ವಾಮಿ (ರವೀ) ಅವರು ಸಲ್ಲಿಸಿರುವ ಸಮಗ್ರ ಸೇವೆಯನ್ನು ಗುರುತಿಸಿದ ಕರ್ನಾಟಕ ರಾಜ್ಯಸರ್ಕಾರ ಇವರಿಗೆ 1994-95ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನಿತ್ತು ಪುರಸ್ಕರಿಸಿದೆ. ಆತ್ಮೀಯ ಗೆಳೆಯನ ಹೆಸರಿನಲ್ಲಿನ ಪ್ರಶಸ್ತಿಯನ್ನು ಅವರ ಈ ಆತ್ಮೀಯ ಗೆಳೆಯನೊಬ್ಬ ಪಡೆದುದು ಗಮನಾರ್ಹ. (ಶ್ರೀಕೃಪಾ.; ಎಂ.ಬಿ.ಎಸ್)