ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಮಿ, ಬಿ ಜಿ ಎಲ್

ಬಿ.ಜಿ.ಎಲ್.ಸ್ವಾಮಿ: - 1918-80. ವಿಜ್ಞಾನ ವಿಷಯಗಳನ್ನು ಸಾಹಿತ್ಯದಷ್ಟೇ ಸುಲಲಿತವಾಗಿ ಮನರಂಜಕವಾಗಿ ಹೇಳಬಹುದು ಎಂದು ತೋರಿಸಿಕೊಟ್ಟ ವಿಜ್ಞಾನಿಸಾಹಿತಿ. ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ ಎಂಬುದು ಇವರ ಪೂರ್ಣ ಹೆಸರು. 1918ರಲ್ಲಿ ಜನಿಸಿದರು. ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಒಬ್ಬರಾದ ಡಿ.ವಿ. ಗುಂಡಪ್ಪನವರು ಇವರ ತಂದೆ; ತಾಯಿ ಭಾಗೀರಥಮ್ಮ. ಸ್ವಾಮಿಯವರ ಮನೆಮಾತು ತಮಿಳು. ಜೊತೆಗೆ ಇವರ ಹಿರಿಯರು ಮುಳಬಾಗಲು ಮುಂತಾದ ಕಡೆಗಳಲ್ಲಿ ಇದ್ದುದರಿಂದ ಇವರಿಗೆ ತೆಲುಗು ಭಾಷೆಯ ಪರಿಚಯವೂ ಇತ್ತು.

1930ರಲ್ಲಿ ಸಸ್ಯವಿಜ್ಞಾನದಲ್ಲಿ ಬಿ.ಎಸ್‍ಸಿ. (ಆನರ್ಸ್) ಮುಗಿಸಿದ ಇವರು 1945ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಡಿ.ಎಸ್‍ಸಿ. ಪದವಿ ಪಡೆದರು. ಡಿ.ಎಸ್‍ಸಿ. ಬರುವುದಕ್ಕೆ ಸ್ವಲ್ಪ ಮುಂಚೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿದರು. ಭಾರತಕ್ಕೆ ಹಿಂದಿರುಗಿದಮೇಲೆ 1953ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯವಿಜ್ಞಾನದ ಮುಖ್ಯ ಪ್ರಾಧ್ಯಾಪಕರಾಗಿ ನೇಮಕವಾದರು. ಕೆಲವು ವರ್ಷ ಅಲ್ಲೇ ಪ್ರಿನ್ಸಿಪಾಲರೂ ಆಗಿದ್ದರು. 1978ರಲ್ಲಿ ನಿವೃತ್ತರಾದರು.

ಇವರು ಸಸ್ಯವಿಜ್ಞಾನದಲ್ಲಿ ಪ್ರಥಮ ದರ್ಜೆಯ ಸಂಶೋಧಕರು. ವಿದ್ಯಾರ್ಥಿದೆಸೆಯಿಂದಲೇ ಸಂಶೋಧನೆಯ ಜೊತೆಗೆ ಬರೆಯುವ ಹವ್ಯಾಸವನ್ನೂ ಬೆಳೆಸಿಕೊಂಡು ಬಂದರು. ಇವರ ಬರೆಹಗಳನ್ನು ಸಸ್ಯವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನ ಲೇಖನಗಳು, ವಿಜ್ಞಾನ ಕೃತಿಗಳು, ವಿಜ್ಞಾನೇತರ ಕೃತಿಗಳು, ಚರಿತ್ರೆಗೆ ಸಂಬಂಧಿಸಿದ ಸಂಶೋಧನ ಕೃತಿಗಳು ಎಂದು ನಾಲ್ಕು ವಿಭಾಗಗಳಲ್ಲಿ ವರ್ಗೀಕರಿಸಬಹುದು. ಇವರಿಗೆ ಶಾಸ್ತ್ರ ವಿಷಯಗಳಲ್ಲಿ ಬರೆಯುವ ಹುಮ್ಮಸ್ಸು ಮತ್ತು ಉತ್ತೇಜನ ದೊರೆಯಿತು. ಎ.ಆರ್. ಕೃಷ್ಣಶಾಸ್ತ್ರಿಗಳಿಂದ 1939-1940ರಲ್ಲಿ ಪ್ರಬುದ್ಧ ಕರ್ಣಾಟಕದಲ್ಲಿ ಆರ್ಜಿತ ಗುಣಗಳೂ ಅನುವಂಶೀಯತೆಯೂ ಮತ್ತು ಲಿಂಗ ಜಾತಿಯ ಪರಸ್ಪರ ಪರಿಣಾಮ ಎಂಬ ಇವರ ಲೇಖನಗಳು ಪ್ರಕಟವಾಗಿದ್ದವು. 1941ರಲ್ಲಿ ಕನ್ನಡ ನುಡಿಯಲ್ಲಿ ವಿಜ್ಞಾನ ವಿಹಾರವೆಂಬ ಶೀರ್ಷಿಕೆಯಲ್ಲಿ ಪ್ರಣಯಪ್ರಸಂಗ, ಪ್ಲಾಟಿಪಸ್, ಜೇಡನ ಚರಕ ಮತ್ತು ಹಸಿವಿನ ಬಳ್ಳಿ ಎಂಬ ಲಘುಪ್ರಬಂಧಗಳು ಪ್ರಕಟವಾದವು. 1946ರ ಸುಮಾರಿನಲ್ಲಿ ಇವರ ಎರಡು ಕೃತಿಗಳು ಪ್ರಕಟವಾದುವು-ಮೊದಲನೆಯದು ವಧೂವರರಿಗೆ ಎಂಬ ಹೆಸರಿನ ಆರೋಗ್ಯ ವಿಜ್ಞಾನದ ಪುಸ್ತಕ; ಎರಡನೆಯದು ಬಯಾಗ್ರಫಿ ಆಫ್ ದಿ ಅನ್‍ಬಾರ್ನ್ ಎಂಬುದರ ಅನುವಾದ.

ದೌರ್ಗಂಧಿಕಾಪಹರಣ ಎಂಬುದು ಇವರ ಮೊದಲ ಶಾಸ್ತ್ರಗ್ರಂಥ. ಶಾಸನಗಳಲ್ಲಿ ಗಿಡಮರಗಳು ಎಂಬ ಕೃತಿ 1975ರಲ್ಲಿ ಪ್ರಕಟವಾಯಿತು. ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ (1978), ಹಸುರು ಹೊನ್ನು (1976)-ಇವು ಜನಪ್ರಿಯ ವಿಜ್ಞಾನ ಪುಸ್ತಕಗಳು. ನಾವು ದಿನವೂ ಬಳಸುವ ನಮ್ಮದೇ ಎಂದು ಭಾವಿಸುವ ವಿದೇಶಿ ಕಾಯಿಪಲ್ಲೆಗಳ ಬಗ್ಗೆ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ ಸ್ವಾರಸ್ಯಕರವಾಗಿ ತಿಳಿಸುತ್ತದೆ.

ಕೊರವಂಜಿ ಮಾಸಪತ್ರಿಕೆಯಲ್ಲಿ 1947ರಲ್ಲಿ ಇವರು ಬರೆದ ಮೀನಾಕ್ಷಿಯ ಸೌಗಂಧ ಎಂಬ ಹಾಸ್ಯರಸಪೂರ್ಣವಾದ ರೂಪಕ ಪ್ರಕಟವಾಯಿತು. ಅಮೆರಿಕದಿಂದ ಹಿಂದಿರುಗಿದಮೇಲೆ ಅಮೇರಿಕದಲ್ಲಿ ನಾನು ಎಂಬ ಲೇಖನಮಾಲೆಯನ್ನು ಬರೆದರು. 1962ರಲ್ಲಿ ಇದು ಪುಸ್ತಕರೂಪದಲ್ಲಿ ಪ್ರಕಟವಾಯಿತು. ಮದರಾಸಿಗೆ ಹೋದಮೇಲೆ ತಮಿಳನ್ನು ಕಲಿತು ದಿವಂಗತ ಸುಬ್ರಹ್ಮಣ್ಯ ಭಾರತಿ ಅವರ ನವತಂತ್ರದ ಕತೆಗಳು ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು (1959). ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಹಾಗೂ ಐವರು ಪ್ರಸಿದ್ಧ ಕನ್ನಡ ಸಾಹಿತಿಗಳನ್ನು ಕುರಿತು ಲಲಿತ ಶೈಲಿಯಲ್ಲಿ ಇವರು ಬರೆದ ಪಂಚಕಲಶಗೋಪುರ 1964ರಲ್ಲಿ ಪ್ರಕಟವಾಯಿತು.

ಇವರ ಕಾಲೇಜುರಂಗ ಎಂಬ ಪ್ರಸಿದ್ಧಪುಸ್ತಕ, ಚಲನಚಿತ್ರವಾಗಿದೆ. ಇದಲ್ಲದೆ ಕಾಲೇಜು ತರಂಗ ಎಂಬ ಕೃತಿಯನ್ನೂ ಬರೆದಿದ್ದಾರೆ. ಕಾಲೇಜುರಂಗಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕ್ರಿಶ್ಚಿಯನ್ ಲಿಟೆರರಿ ಸೊಸೈಟಿಗಳಿಂದ ಬಹುಮಾನ ಬಂದಿದೆ. ಕಡಲಾಚೆಯಿಂದ ಬಂದ ಸಸ್ಯಗಳು, ತಮಿಳು ತಲೆಗಳ ನಡುವೆ, ಪ್ರಾಧ್ಯಾಪಕನ ಪೀಠದಲ್ಲಿ, ಸಾಕ್ಷಾತ್ಕಾರದ ದಾರಿಯಲ್ಲಿ, ಸಸ್ಯಜೀವಿ ಪ್ರಾಣಿಜೀವಿ ಇವು ಇವರ ಇತರ ಕೃತಿಗಳು. ದಿ ಡೇಟ್ ಆಫ್ ತೇವರಾಮ್, ಎನ್ ಅನಾಲಿಸಿಸ್ ಅಂಡ್ ರೀ ಆಪ್ರೈಸಲ್ (1975) ಮುಂತಾದ 15 ಶುದ್ಧ ಚಾರಿತ್ರಿಕ ಲೇಖನಗಳನ್ನು ಇವರು ಬರೆದಿದ್ದಾರೆ. ಇವರ ಕೆಲವು ಲೇಖನಗಳು ತೆಲುಗಿಗೂ ಅನುವಾದವಾಗಿವೆ.

ಕನ್ನಡವಲ್ಲದೆ ಇವರು ತಮಿಳು ಮತ್ತು ಇಂಗ್ಲಿಷ್‍ನಲ್ಲೂ ಪುಸ್ತಕಗಳನ್ನು ರಚಿಸಿದ್ದಾರೆ. ತಮಿಳಿನಲ್ಲಿ ಬೋಧೆಯಿನ್ ಪಾದೆಯಿಲ್ ಎಂಬ ಕೃತಿ ಪ್ರಕಟವಾಗಿದೆ (1978). ಫ್ರಂ ಫ್ಲವರ್ ಟು ಫ್ರೂಟ್ ಎಂಬುದು ಇವರ ಇಂಗ್ಲಿಷ್ ಪುಸ್ತಕ.

1940-78ರ ವರೆಗೆ ಪ್ರಕಟವಾಗಿರುವ ಇವರ ಸಂಶೋಧನ ಲೇಖನಗಳು ಸು. 300. ಇವುಗಳಲ್ಲಿ ಅನೇಕವು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಫಲಶ್ರುತಿ, ಸಸ್ಯಪುರಾಣ (1996) ಕೃತಿಗಳಲ್ಲಿ ಇವರ ಬಿಡಿ ಬರೆಹಗಳು ಸಂಗ್ರಹಗೊಂಡಿವೆ. ಸಸ್ಯವಿಜ್ಞಾನಕ್ಕೆ ಇವರ ಕೊಡುಗೆಯನ್ನು ಮೆಚ್ಚಿ ಬೀರ್ಬಲ್ ಸಾಹ್ನಿ ಚಿನ್ನದ ಪದಕವನ್ನು ಕೊಡಲಾಯಿತು. ಇವರು 1973-74ರಲ್ಲಿ ರಾಷ್ಟ್ರೀಯ ಪ್ರಾಧ್ಯಾಪಕರಾಗಿ ದ್ದರು. ಕೆಲಕಾಲ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. 1975ರಲ್ಲಿ ರಷ್ಯದ ಲೆನಿನ್‍ಗ್ರಾಡ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸಸ್ಯವಿಜ್ಞಾನ ಸಮ್ಮೇಳನದ ಉಪಾಧ್ಯಕ್ಷರಾಗಿ ದ್ದರು. ಇವರ ಹಸುರು ಹೊನ್ನು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ (1978).

ಚಿತ್ರಕಲೆ, ಸಂಗೀತ ಇವರಿಗೆ ಆಸಕ್ತಿ ಇದ್ದ ಇತರ ಹವ್ಯಾಸಗಳಾಗಿ ದ್ದವು. ಇವರು 1980 ನವೆಂಬರ್ 3ರಂದು ಬೆಂಗಳೂರಿನಲ್ಲಿ ನಿಧನರಾದರು. (ಕೆ.ಆರ್.ಎಮ್.)