ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ 1863-1902. ಭಾರತೀಯ ಸಂಸ್ಕøತಿಯ ಪುನರುತ್ಥಾನದ ಹರಿಕಾರ, ವಾಗ್ಮಿ, ಶ್ರೇಷ್ಠ ಸನ್ಯಾಸಿ. ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥದತ್ತ. ಇವರು ಕೊಲ್ಕೊತದಲ್ಲಿ 1863 ಜನವರಿ 12ರಂದು ಜನಿಸಿದರು. ಇವರ ತಂದೆ ವಿಶ್ವನಾಥದತ್ತ, ಹೈಕೋರ್ಟಿನ ಅಟಾರ್ನಿಯಾಗಿದ್ದರು. ಪಾರ್ಸಿ, ಇಂಗ್ಲಿಷ್ ಸಾಹಿತ್ಯಗಳಲ್ಲಿಯೂ ಸಂಗೀತದಲ್ಲಿಯೂ ಅಭಿರುಚಿಯುಳ್ಳವರಾಗಿದ್ದರು. ತಾಯಿ ಭುವನೇಶ್ವರೀದೇವಿ, ದೈವಭಕ್ತೆ, ವೀರನಾರಿ ನರೇಂದ್ರರಿಗೆ 21 ವರ್ಷ ವಯಸ್ಸಾಗಿದ್ದಾಗ ತಂದೆ ನಿಧನರಾದರು. ಸಂಸಾರವು ಸಾಲಗಳಿಗೆ ಗುರಿಯಾಗಿ ಬಹಳ ಕ್ಲೇಶ ಅನುಭವಿಸುವಂತಾಯಿತು.

ಬಾಲ್ಯದಲ್ಲಿ ಬಹಳ ತುಂಟತನ, ಆಟಪಾಠಗಳಲ್ಲಿ, ಗರಡಿ ಸಾಧನೆಗಳಲ್ಲಿ ಇವರು ನಿಸ್ಸೀಮರು. ಸೊಗಸಾದ ಗಾಯಕರು. ನಿರ್ಭಯ ಪ್ರವೃತ್ತಿ, ಎಲ್ಲವನ್ನೂ ಪ್ರಶ್ನಿಸುವ ಮನೋಧರ್ಮ, ಬಹಿರಂಗದಲ್ಲಿ ಒರಟಾಗಿ ಕಂಡರೂ ಅಂತರಂಗ ಅತಿ ಕೋಮಲ, ಬಡವರಿಗೆ ಕೈಗೆ ಸಿಕ್ಕಿದ್ದನ್ನು ದಾನ ಮಾಡಿಬಿಡುವ ಉದಾರಿ. ಕಾಲೇಜಿನ ದಿನಗಳಲ್ಲಿ ಹಿಂದೂ ಧರ್ಮದ ಸುಧಾರಣೆಗೆ ಸ್ಥಾಪಿತವಾಗಿದ್ದ ಬ್ರಹ್ಮ ಸಮಾಜ ಸೇರಿ ಗಾನಗೋಷ್ಠಿಯ ಮುಂದಾಳುವಾಗಿದ್ದರು. ತರಗತಿಯಲ್ಲಿ ವಡ್ರ್ಸ್‍ವರ್ಥ್ ಕವಿಯ ಅನುಭವ ಗೀತೆಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸಬೇಕಾದರೆ ದಕ್ಷಿಣೇಶ್ವರದ ರಾಮಕೃಷ್ಣರನ್ನು ನೋಡಿ ಬರಬೇಕೆಂದು ಇವರ ಗುರು ಹೇಸ್ಟಿಯವರು ಸೂಚನೆ ಕೊಟ್ಟ ದಿನದಿಂದ ರಾಮಕೃಷ್ಣರ ಭೇಟಿಗೆ ಕಾತುರರಾಗಿದ್ದರು.

ಒಮ್ಮೆ ಕೋಲ್ಕೊತದ ಸುರೇಂದ್ರನಾಥರ ಮನೆಯಲ್ಲಿ ಭಜನೆಯಲ್ಲಿ ಭಾಗವಹಿಸಲು ಇವರು ಹೋಗಿದ್ದಾಗ ಅಲ್ಲಿಗೆ ಅತಿಥಿಯಾಗಿ ಬಂದಿದ್ದ ರಾಮಕೃಷ್ಣ ಪರಮಹಂಸರ ಭೇಟಿ ಇವರಿಗಾಯಿತು. ಇವರ ಹಾಡನ್ನು ಕೇಳಿ ಆನಂದಿಸಿದ ರಾಮಕೃಷ್ಣರು ಇವರ ಪೂರ್ವಾಪರಗಳನ್ನು ವಿವರವಾಗಿ ತಿಳಿದುಕೊಂಡು ದಕ್ಷಿಣೇಶ್ವರಕ್ಕೆ ಇವರಿಗೆ ಆಹ್ವಾನವಿತ್ತರು. ರಾಮಕೃಷ್ಣರ ಭಕ್ತರೂ, ಬಂಧುವೂ ಆದ ರಾಮಚಂದ್ರದತ್ತರೊಂದಿಗೆ ರಾಮಕೃಷ್ಣರಿರುವಲ್ಲಿಗೆ ನಡೆದೇಬಿಟ್ಟರು. ಎಲ್ಲವನ್ನೂ ಪ್ರಶ್ನಿಸುವ ಮನೋಧರ್ಮದ ಇವರು ದೇವರ ಅಸ್ತಿತ್ವವೇ ಮೊದಲಾದ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ರಾಮಕೃಷ್ಣರ ಸರಳತೆ, ತನ್ಮಯತೆ ಇವರನ್ನು ಮುಗ್ಧರನ್ನಾಗಿಸಿತು. ಮತ್ತೊಂದು ಬಾರಿ ಕಾಲುನಡಿಗೆಯಿಂದ ರಾಮಕೃಷ್ಣರ ಸಂದರ್ಶನಕ್ಕೆ ಹೋದಾಗ ಅವರ ಸ್ಪರ್ಶ ಮಾತ್ರದಿಂದ ಆದ ಅಲೌಕಿಕ ಅನುಭವ ಇವರನ್ನು ರಾಮಕೃಷ್ಣರ ಆಪ್ತವರ್ಗಕ್ಕೆ ಸೇರಿಸಿತು. ಇವರೇ ಹೇಳಿಕೊಂಡಿರುವಂತೆ ಆರು ವರ್ಷಗಳ ಕಾಲ ರಾಮಕೃಷ್ಣರೊಂದಿಗೆ ವಿಚಾರಮಥನಗಳನ್ನು ಮಾಡಿದ ಮೇಲೆ ಆಧ್ಯಾತ್ಮಿಕ ಮಾರ್ಗದ ಪ್ರತಿಯೊಂದು ಹೆಜ್ಜೆಯೂ ಇವರಿಗೆ ಸ್ಪಷ್ಟವಾಯಿತು.

ವಿದ್ಯಾಭ್ಯಾಸ ಮುಗಿದ ಅನಂತರ ಆಧ್ಯಾತ್ಮ ಸಾಧನೆಯಲ್ಲಿ ಬಲವಾದ ಅಭೀಪ್ಸೆಯಿದ್ದರೂ ತಂದೆಯ ಮರಣ ಕುಟುಂಬಕ್ಕೆ ತಂದ ಸಂಕಷ್ಟಗಳಿಂದ ನೌಕರಿ ಸೇರಬೇಕಾದ ಪರಿಸ್ಥಿತಿಯೊದಗಿತು. ತನಗೊದಗಿದ ಸತ್ವ ಪರೀಕ್ಷೆಯ ಕಠಿಣ ಪರಿಸ್ಥಿತಿಯಲ್ಲಿ, ವಿಗ್ರಹಾರಾಧನೆಯಲ್ಲಿ ನಂಬಿಕೆ ಇಲ್ಲದಿದ್ದರೂ ಗುರುಗಳ ಸಲಹೆಯಂತೆ ಗುರುಗಳ ಆರಾಧ್ಯದೈವವಾದ ಭವತಾರಿಣಿಯ ಪ್ರಾರ್ಥನೆ ಮಾಡಬೇಕಾಯಿತು. ಆಗಲೂ ಸಂಸಾರದ ಕಷ್ಟ ನೀಗಬೇಕೆಂದು ಬೇಡದೆ ಜ್ಞಾನ-ಭಕ್ತಿ-ವೈರಾಗ್ಯಗಳನ್ನು ಬೇಡಿಕೊಳ್ಳುತ್ತಾರೆ. ಇಂತಹ ಪ್ರಸಂಗಗಳು ವಿವೇಕಾನಂದರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತವೆ.

1886ರಲ್ಲಿ ಶ್ರೀ ರಾಮಕೃಷ್ಣರು ನಿಧನರಾದ ಅನಂತರ ಇವರು ಹಾಗೂ ಇವರ ಸಹಪಾಠಿಗಳು ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ ಗುರುಗಳ ಉಪದೇಶದಂತೆ ಆತ್ಮೋದ್ಧಾರವನ್ನೂ ಲೋಕಕಲ್ಯಾಣವನ್ನೂ ಸಾಧಿಸುವ ಸಂಕಲ್ಪ ಮಾಡಿದರು. ರಾಮಕೃಷ್ಣರ ಚಿತಾಭಸ್ಮ ಪಾತ್ರೆ ಹಾಗೂ ಗುರುಗಳ ಚಿತ್ರಪಟ ಇಷ್ಟೇ ಆಸ್ತಿಯನ್ನು ಹಿಡಿದು, ಧ್ಯಾನ, ಅಧ್ಯಯನ, ಭಜನೆ, ಭಿಕ್ಷೆ, ಕಠಿಣ ವ್ರತಗಳಲ್ಲಿ ನಿರತರಾಗಿ ತೀರ್ಥಯಾತ್ರೆ, ತಪಸ್ಸುಗಳಲ್ಲಿ ನಿರತರಾದರು. 1890ರಿಂದ ಸುಮಾರು ಎರಡು ವರ್ಷಗಳವರೆಗೆ ಇಡೀ ಭಾರತ ದೇಶದ ಸಂಚಾರ ಕೈಗೊಂಡು ಅಸಾಧಾರಣ ಪ್ರತಿಭೆ ಮತ್ತು ವ್ಯಕ್ತಿತ್ವಗಳಿಂದ ಪಂಡಿತ ವರ್ಗದವರೊಂದಿಗೆ, ಸಾಮಾನ್ಯರೊಂದಿಗೆ, ಪ್ರತಿಭಾವಂತರೊಂದಿಗೆ ವಿಚಾರ ವಿನಿಮಯ ಮಾಡುತ್ತ ತಮ್ಮ ಪ್ರಭಾವವನ್ನು ಅವರ ಮೇಲೆ ಬೀರುತ್ತಾ ಬದುಕಿದರು. ಇವರಿಗೆ ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಪ್ರಕಾಂಡ ಪಾಂಡಿತ್ಯವಿತ್ತು. ಹೀಗೆ ಲೋಕ ಸಂಚಾರ ಕೈಗೊಂಡಾಗ ಏರ್ಪಟ್ಟ ಲೋಕಮಾನ್ಯ ತಿಲಕರ ಭೇಟಿ ಹಾಗೂ ಖೇತ್ರಿಮಹಾರಾಜರು ಇವರ ಶಿಷ್ಯರಾದದ್ದು ಇವರ ಜೀವನಕ್ಕೇ ಒಂದು ಹೊಸ ತಿರುವು ನೀಡಿತು. ಬೇರೆ ಬೇರೆ ಹೆಸರುಗಳನ್ನು ಹೇಳಿಕೊಂಡು ಓಡಾಡುತ್ತಿದ್ದ ಇವರಿಗೆ ವಿವೇಕಾನಂದ ಎಂಬ ಹೆಸರನ್ನಿಟ್ಟವರು ಹಾಗೂ ಇವರು ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುವಂತೆ ಪ್ರಚೋದಿಸಿದವರು ಈ ರಾಜರೆ. ಇವರ ಪ್ರತಿಭೆ ಮೈಸೂರು ಮಹಾರಾಜರಾಗಿದ್ದ ಚಾಮರಾಜ ಒಡೆಯರನ್ನು ಮಂತ್ರಮುಗ್ಧರನ್ನಾಗಿಸಿ ಇವರ ವಿದೇಶ ಪ್ರವಾಸಕ್ಕೆ ಅವರು ನೆರವು ನೀಡುವಂತಾಯಿತು.

1898 ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಜಪಾನ್ ಮಾರ್ಗವಾಗಿ ಪ್ರಯಾಣ ಕೈಗೊಂಡರು(1893). ಇವರು ದೇಶೋದ್ಧಾರ, ವೇದಾಂತ ಪ್ರಚಾರ ಇವುಗಳಿಗೆ ಜೀವನವನ್ನು ಮುಡುಪಾಗಿಡಬೇಕೆಂಬ ಸಂಕಲ್ಪ ಮಾಡಿದರು. ಸಮ್ಮೇಳನದಲ್ಲಿ ಸಭೆಯನ್ನುದ್ದೇಶಿಸಿ ಆಡಿದ ಇವರ ಮಾತುಗಳು, ಇವರ ವಿಶಿಷ್ಟವಾದ ಪ್ರತಿಭೆ, ಮೇಧಾಶಕ್ತಿ, ಪ್ರತಿಪಾದನಾ ಕೌಶಲ್ಯಗಳನ್ನು ಜಗತ್ತಿಗೇ ಪರಿಚಯಿಸಿದವು. ಅಲ್ಲಿ ಇವರಿಗೆ ದೊರೆತ ಯಶಸ್ಸು ಭಾರತೀಯರ ಹೆಮ್ಮೆಯ ವಿಷಯವಾಯಿತು. ಭಾರತದ ನವ ನಿರ್ಮಾಣದಲ್ಲಿ ಅಂದಿನಿಂದ ಇವರೊಬ್ಬ ಯುಗಪುರುಷರಾಗಿ ಪರಿಗಣಿತರಾದರು. ಇಲ್ಲಿಂದ ಮುಂದೆ ವಿಶ್ವದಾದ್ಯಂತ ಇವರ ಪ್ರವಚನಗಳು ಏರ್ಪಟ್ಟವು. ವಿಚಾರಗೋಷ್ಠಿಗಳೂ, ಅಧ್ಯಯನ ಕೇಂದ್ರಗಳೂ ರೂಪ ತಾಳಿದವು. ನ್ಯೂಯಾರ್ಕಿನ ವೇದಾಂತ ಸೊಸೈಟಿ ರೂಪ ತಳೆದದ್ದು ಇವರ ಪ್ರಭಾವದಿಂದಲೇ. ಕರ್ಮಯೋಗ, ಭಕ್ತಿಯೋಗ, ರಾಜಯೋಗ, ಸ್ಫೂರ್ತಿದಾಯಕ ಮಾತುಗಳು—ಇವು ಈ ಬಗೆಯ ಪ್ರವಚನ, ಉಪನ್ಯಾಸಗಳನ್ನೊಳಗೊಂಡ ಇವರ ಕೆಲವು ಮುಖ್ಯ ಕೃತಿಗಳಾಗಿವೆ. ವೇದಾಂತದ ತತ್ತ್ವಗಳನ್ನು ಆಧುನಿಕ ವಿಚಾರ ಧೋರಣೆಗೆ ಒಗ್ಗುವಂತೆ ಯುಕ್ತವಾಗಿ ಪ್ರತಿಪಾದಿಸಿದ್ದು ಇವರು ಸನಾತನ ಧರ್ಮಕ್ಕೆ ಮಾಡಿದ ಮಹತ್ತ್ವದ ಸೇವೆಯಾಗಿದೆ.

ನಿಜವಾದ ಜ್ಞಾನ, ಭಕ್ತಿ, ವೈರಾಗ್ಯಗಳಿಂದ ಕೂಡಿದ ಸಾತ್ವಿಕ ಜೀವನ ನಡೆಸುವುದು, ಆಧ್ಯಾತ್ಮಿಕ ವಿಷಯದಲ್ಲಿ ಜನರಿಗೆ ಒಲವು ಮೂಡಿಸುವುದು, ಸಾಧನೆ ಕೈಗೊಳ್ಳುವವರಿಗೆ ಆಸನ, ಪ್ರಾಣಾಯಾಮ, ಧ್ಯಾನ ಮೊದಲಾದವನ್ನು ಬೋಧಿಸುವುದು ಇವರ ಮುಖ್ಯ ಕಾರ್ಯವಾಗಿತ್ತು. ಅಮೆರಿಕದ ಶಿಕ್ಷಿತ ವರ್ಗದಲ್ಲಿ ವಿಚಾರಕ್ರಾಂತಿಯುಂಟು ಮಾಡಿದ್ದು ಇವರ ಹೆಗ್ಗಳಿಕೆ. ಆದ್ದರಿಂದಲೇ ಭಾರತವನ್ನು ಬಿಟ್ಟರೆ ರಾಮಕೃಷ್ಣ ಮಠಗಳು, ಧ್ಯಾನಕೇಂದ್ರಗಳು ಹೆಚ್ಚು ಸಂಖ್ಯೆಯಲ್ಲಿರುವುದು ಅಮೆರಿಕದಲ್ಲಿಯೆ. ಇವರು ತಮ್ಮ ಆಪ್ತರಿಗೆ ಧಾರ್ಮಿಕ ವಿಷಯವಾಗಿ ಬರೆದಿರುವ ಅಸಂಖ್ಯಾತ ಪತ್ರಗಳೂ ಕೂಡ ಅಪೂರ್ವ ಸಾಹಿತ್ಯವಾಗಿದೆ. ಇವರಿಗೆ ಭಾರತ ಮತ್ತು ಭಾರತೀಯ ಧರ್ಮಗಳ ವಿಷಯದಲ್ಲಿದ್ದ ಅಸಾಧಾರಣ ಪ್ರೇಮ, ಅಭಿಮಾನಗಳು ಈ ಪತ್ರಗಳಿಂದ ತಿಳಿಯುತ್ತವೆ.

1895ರಲ್ಲಿ ವಿದೇಶದಲ್ಲಿ ವೇದಾಂತ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾರ್ಗರೆಟ್ ನೊಬೆಲ್ ಎಂಬ ಆಂಗ್ಲ ಮಹಿಳೆ ಇವರನ್ನು ಸಂದರ್ಶಿಸಿ, ಶಿಷ್ಯೆಯಾಗಿ ಭಾರತಕ್ಕೆ ಬಂದು ಉತ್ತಮ ಸೇವೆ ಸಲ್ಲಿಸಿ ನಿವೇದಿತಾ ಎಂಬ ಹೆಸರಿನಿಂದ ಪ್ರಸಿದ್ಧಳಾದದ್ದು ಒಂದು ಇತಿಹಾಸ ದಾಖಲೆಯಾಗಿದೆ. ಕೊಲಂಬೋವಿನಿಂದ ಆಲ್ಮೋರವರೆಗೆ ಎಂಬ ಗ್ರಂಥ ಉತ್ತರ ಭಾರತದ ಅನೇಕ ನಗರಗಳಿಗೆ ಇವರು ಭೇಟಿ ನೀಡಿ ವೇದಾಂತಕ್ಕಿಂತ ಹೆಚ್ಚಾಗಿ ದೇಶಾಭ್ಯುದಯಕ್ಕಾಗಿ ನೀಡಿದ ಸ್ಫೂರ್ತಿಯುತ ಭಾಷಣಗಳನ್ನು ಒಳಗೊಂಡಿದೆ.

1897 ರಿಂದ ಹಲವು ವರ್ಷಗಳು ಅವಿಶ್ರಾಂತವಾಗಿ ದುಡಿದು ದೇಶದ ಹಲವಾರು ಕಡೆಗಳಲ್ಲಿ ಮೋಕ್ಷಕ್ಕೂ ಪ್ರಪಂಚದ ಹಿತಕ್ಕೂ ಶ್ರಮಿಸುವ ಪ್ರಮುಖ ಧ್ಯೇಯವುಳ್ಳ ರಾಮಕೃಷ್ಣ ಮಠ ಮತ್ತು ಮಿಷನ್‍ಗಳನ್ನು ವಿಧಿವತ್ತಾಗಿ ಸ್ಥಾಪಿಸಿದರು. ಅವಿಶ್ರಾಂತ ದುಡಿಮೆಯಿಂದ ಜರ್ಝರಿತರಾಗಿದ್ದ ಇವರು 1902 ಜುಲೈ 4ರಂದು ನಿಧನರಾದರು.

(ಕೆ.ಎಸ್.)