ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಾಯತ್ತತೆ

ಸ್ವಾಯತ್ತತೆ ತನ್ನ ಇಚ್ಛೆಯಂತೆ ವ್ಯಕ್ತಿ ನಡೆಯಲು ಸ್ವತಂತ್ರ ಎಂಬಂತೆಯೇ ಒಂದು ದೇಶ ತನ್ನ ಪ್ರಜಾಧಿಕಾರಕ್ಕೆ ಮನ್ನಣೆನೀಡಿ ತಮ್ಮ ಆಡಳಿತವನ್ನು ತಮ್ಮವರ ಇಚ್ಛೆಯಂತೆ ನಡೆಸಲು ಇರುವ ಸ್ವಯಮಧಿಕಾರ (ಅಟಾನಮಿ). ಸ್ವಾಯತ್ತತೆಯಲ್ಲಿ ಸ್ವಪರಿಪೂರ್ಣತೆ ಇರಬೇಕು. ಇದರ ಅರ್ಥ ಸಂದರ್ಭಾನುಸಾರ ಹಾಗೂ ವಿವಿಧ ವಿಷಯಗಳಲ್ಲಿ ಬೇರೆ ಬೇರೆಯಾಗಿರುವುದುಂಟು. ರಾಜಕೀಯವಾಗಿ ಇದನ್ನು ಪರಿಗಣಿಸಿದಾಗ ಒಂದು ದೇಶಕ್ಕೆ ಮತ್ತು ವ್ಯಕ್ತಿಗಳಿಗೆ ಅನ್ವಯಿಸಿ ಹೇಳುವಾಗ ಅದು ಆ ರಾಷ್ಟ್ರದ ಸ್ವಾತಂತ್ರ್ಯ ಕುರಿತಂತೆ ಅದರ ಆಳ್ವಿಕೆಯ ಪರಿ ಕುರಿತಂತೆ ಅನ್ವಯಿಸಿ ಹೇಳುತ್ತೇವೆ. ವ್ಯಕ್ತಿಯ ಸಂಪೂರ್ಣ ನಡವಳಿಕೆಯ ಮೇಲಿನ ಸ್ವಾತಂತ್ರ್ಯ ಕುರಿತಂತೆ ಹೇಳುತ್ತೇವೆ. ಇಲ್ಲಿ ಪರಾಧೀನತೆ ಎಂಬುದರ ವಿರುದ್ಧ, ಗುಲಾಮಗಿರಿ ವಿರುದ್ಧದ ನಿಷ್ಠತೆ ಹಾಗೂ ಕಾರ್ಯಗಳನ್ನು ಕಾಣುತ್ತೇವೆ. ಸ್ವಾಯತ್ತತೆಯನ್ನು ಸಂಪೂರ್ಣ ಸ್ವಾತಂತ್ರ್ಯ ಅಥವಾ ಸಾರ್ವಭೌಮಾಧಿಕಾರಕ್ಕೆ ತತ್ಸಮವಾಗಿ ಪರಿಗಣಿಸುವಂತಿಲ್ಲ. ಸಾರ್ವಭೌಮಾಧಿಕಾರಕ್ಕೆ ಸ್ವಾಯತ್ತತೆ ಅಧೀನವಾಗಿರುತ್ತದೆ. ಸ್ವಾಯತ್ತತೆಯ ಬೆಳೆವಣಿಗೆ ಸು. ಕ್ರಿ.ಶ. 6-7ನೆಯ ಶತಮಾನದರೊಳಗೆ ಮಾದ್ಯ ಪದ್ಧತಿಯಲ್ಲಿ ಬೆಳಕು ಕಂಡು ಬೆಳೆಯಲು ಪ್ರಾರಂಭಿಸಿತೆಂಬ ವಾದವಿದೆ. ಶ್ರೀಮಂತರು, ಪಾಳೇಗಾರರು ಪ್ರಭಾವಿ ಸಂಘ ಸಂಸ್ಥೆಗಳು, ಒಪ್ಪಂದ ಅಥವಾ ಸ್ಥಾನಮಾನದ ಪ್ರಭಾವದ ಆಧಾರದ ಮೇಲೆ ಸಾರ್ವಭೌಮದ ಅಧಿಕಾರ ವ್ಯಾಪ್ತಿಯಿಂದ ಹೊರಗುಳಿಯುವ ಅಥವಾ ವಿನಾಯತಿ ಪಡೆಯುವ ವ್ಯವಸ್ಥೆಯಿಂದ ಸ್ವಾಯತ್ತತೆಯ ಪರಿಕಲ್ಪನೆ ಬೆಳೆಯಿತು. ಹಾಗೆ ಚರ್ಚ್‍ಗಳ ಪ್ರಾಬಲ್ಯ ಬೆಳೆದಾಗ, ಚರ್ಚ್ ಹಾಗೂ ಧಾರ್ಮಿಕ ಸಂಸ್ಥೆಗಳು ಮತ್ತು ಪೋಪ್ ಗುರುಗಳಿಗೆ ನೀಡಲಾದ ವಿಶೇಷ ವಿನಾಯತಿ ಸ್ವಾಯತ್ತತೆಯ ಇನ್ನೊಂದು ಮುಖವಾಗಿ ಬೆಳೆಯಿತು. ಒಂದು ದೃಷ್ಟಿಯಲ್ಲಿ, ಕೇಂದ್ರಿಕೃತ ಅಧಿಕಾರದಿಂದ ವಿಕೇಂದ್ರಿಕರಣದತ್ತ ಬೆಳವಣಿಗೆಯಾಗುವಾಗ ಸ್ವಾಯತ್ತತೆ ಪ್ರಮುಖ ಘಟ್ಟವಾಗಿರುತ್ತದೆ. ಆದರೆ ಯಾವುದೇ ಸಂದರ್ಭದಲ್ಲಿ ಕೇಂದ್ರಸರಕಾರದ ಅಧಿಕಾರವೇ ಅಂತಿಮವಾಗಿರುತ್ತದೆ. ಪ್ರಸ್ತುತ ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಅದರೊಳಗಿನ ರಾಜ್ಯಗಳು ಬಹುತೇಕ ತಮ್ಮದೇ ಆದ ಬಗೆಯಲ್ಲಿ ಸ್ವಾಯತ್ತತೆಯನ್ನು ಪಡೆದಿವೆ. ಉದಾಹರಣೆಗೆ ಅಮೆರಿಕ ಸಂಯುಕ್ತ ರಾಜ್ಯಗಳನ್ನು ಗಮನಿಸಬಹುದು. ಸ್ವತಂತ್ರಭಾರತದ ಉಗಮದ ಪ್ರಕ್ರಿಯೆಯ ನಡುವೆ ಬಂದ ಭಾರತೀಯ ಸರ್ಕಾರ ಕಾಯಿದೆ 1919ರಲ್ಲಿ ಪ್ರತಿಪಾದಿಸಿದ ಸ್ವರಾಜ್ಯ ವ್ಯವಸ್ಥೆ ಮತ್ತು 1935ರ ಕಾಯಿದೆಯಲ್ಲಿ ಬಂದ ಪ್ರಾದೇಶಿಕ ಸ್ವಾಯತ್ತೆ ವ್ಯವಸ್ಥೆಯು ಗಮನಾರ್ಹವಾದವು. ಸಂಪೂರ್ಣ ಸ್ವಾತಂತ್ರ್ಯಕ್ಕೆ ಪೂರ್ವವರ್ತಿಯಾದ ಈ ಘಟನಾವಳಿಗಳು ಸ್ವಾತಂತ್ರ್ಯಾ ನಂತರದ ಸಂಯುಕ್ತ ರಾಜ್ಯ ವ್ಯವಸ್ಥೆಯ ಬೆಳೆವಣಿಗೆಗೆ ಪೂರಕವಾದವು.

ಸದ್ಯಕ್ಕೆ ಭಾರತದ ಸಂವಿಧಾನದಡಿಯಲ್ಲಿ, ರಾಜ್ಯಗಳಿಗೆ ಒಂದು ರೀತಿಯ ಸ್ವಾತಂತ್ರ್ಯ ಅಥವಾ ಸ್ವಾಯತ್ತತೆಯನ್ನು ಸ್ಥಳೀಯ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ನೀಡಲಾಗಿದ್ದರೂ, ಕೇಂದ್ರಾಧಿಕಾರದ ಹಿಡಿತದ ತತ್ತ್ವವನ್ನೂ ಅಳವಡಿಸಿಕೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳ ಸರಕಾರಗಳ ಬಲವರ್ಧನೆಯು ಸ್ವಾಯತ್ತತೆಯ ತತ್ತ್ವವನ್ನು ಬೆಂಬಲಿಸಿ ಅನುಷ್ಠಾನಗೊಳಿಸುತ್ತದೆ. ಒಂದು ದೇಶದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯಗಳು, ಪ್ರದೇಶಗಳೂ ಗುಂಪುಗಳೂ ಮತ್ತು ಸ್ಥಳೀಯ ಸಂಸ್ಥೆಗಳಿಂದ ಸ್ವಾಯತ್ತತೆಗಾಗಿ ಬೇಡಿಕೆಗಳು ಸದಾಕಾಲ ಇರುವಂತಹುದೇ ಆಗಿದೆ. (ಸಿ.ಎ.ಜಿ.)