ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಿಫ್ಟ್‌, ಜೊನಥ್ನ್‌

ಸ್ವಿಫ್ಟ್, ಜೊನಥ್ನ್ 1667-1745. ಇಂಗ್ಲಿಷ್ ಸಾಹಿತ್ಯದ ಪ್ರಸಿದ್ಧ ವಿಡಂಬನಕಾರ. ಗಲಿವರ್ಸ್ ಟ್ರಾವೆಲ್ಸ್ ಎಂಬ ಕೃತಿಯನ್ನು ರಚಿಸಿ ಪ್ರಪಂಚಖ್ಯಾತನಾದವ. 1667 ನವೆಂಬರ್ 30ರಂದು ಡಬ್ಲಿನ್‍ನಲ್ಲಿ ಜನಿಸಿದ. ಇವನ ತಂದೆತಾಯಿಗಳು ಯುರೋಪಿಯನ್ ಮೂಲದವರು. ಡಬ್ಲಿನ್‍ನ ಟ್ರಿನಿಟಿ ಕಾಲೇಜಿನಲ್ಲಿ ಪದವಿ ಗಳಿಸಿ 1689ರಲ್ಲಿ ಇಂಗ್ಲೆಂಡಿಗೆ ಹೋದ. ಅಲ್ಲಿ ವಿಲಿಯಮ್ ಟೆಂಪಲ್ ಎಂಬ ರಾಜನೀತಿಜ್ಞನ ಕಾರ್ಯದರ್ಶಿಯಾಗಿ ಸುಮಾರು ಒಂದು ದಶಕಕಾಲ ಕೆಲಸ ಮಾಡಿದ. ಈ ಸಂದರ್ಭದಲ್ಲಿ ಎಸ್ತರ್ ಜಾನ್‍ಸನ್ ಎಂಬಾಕೆಯನ್ನು ಭೇಟಿಯಾದ. ಆಕೆಯನ್ನು ಈತ ಸ್ಟೆಲ್ಲ ಎಂದು ಪ್ರೀತಿಯಿಂದ ಕರೆಯುತ್ತಿದ್ದ. ಇವರಿಬ್ಬರೂ ಮುದುವೆ ಯಾಗದಿದ್ದರೂ ಜೀವನ ಪರ್ಯಂತ ಸಂಗಾತಿಗಳಾಗಿದ್ದರು. ಸ್ವಿಫ್ಟ್ 1694ರಲ್ಲಿ ಚರ್ಚಿನ ಪಾದ್ರಿಯಾದ. 1699ರಲ್ಲಿ ಟೆಂಪಲ್ ನಿಧನಹೊಂದಿದ ಮೇಲೆ ಈತ ಐರ್ಲೆಂಡಿನ ಲಾರಕಾರ್ ಎಂಬ ಸ್ಥಳದ ಪ್ರಾಟಸ್ಟೆಂಟ್ ಪ್ಯಾರಿಷ್‍ಗೆ ಧರ್ಮಾಧಿಕಾರಿಯಾದ. ಚರ್ಚಿನ ಕಾರ್ಯಗಳಿಗಾಗಿ 1703-10 ಅವಧಿಯಲ್ಲಿ ಇಂಗ್ಲೆಂಡಿಗೆ ಅನೇಕ ಬಾರಿ ಭೇಟಿಕೊಟ್ಟ. ಈ ಸಂದರ್ಭದಲ್ಲಿ ಈತನಿಗೆ ಉನ್ನತವಲಯದ ಅನೇಕ ಸ್ನೇಹಿತರ ಪರಿಚಯವಾಯಿತು. 1710ರಲ್ಲಿ ಇಂಗ್ಲೆಂಡಿನಲ್ಲಿ ಹೊಸ ಟೋರಿ ಸರ್ಕಾರ ಆಡಳಿತಕ್ಕೆ ಬಂದಾಗ ಅನೇಕ ಲೇಖನಗಳನ್ನು ಕರಪತ್ರಗಳನ್ನು ರಚಿಸಿ, ಪ್ರಕಟಿಸಿ ಟೋರಿ ಪಕ್ಷದ ತತ್ತ್ವಗಳನ್ನು ಉಗ್ರವಾಗಿ ಬೆಂಬಲಿಸಿದ. ಇದರಿಂದಾಗಿ ಸ್ವಿಫ್ಟ್ ಸಾಮಾಜಿಕ ಧುರೀಣನೆಂಬ ಖ್ಯಾತಿಗಳಿಸಿದ. ಇವನ ತೀವ್ರತರ ರಾಜಕೀಯ ಚಟುವಟಿಕೆಗಳಿಂದ ತೃಪ್ತಳಾದ ರಾಣಿ ಅನ್ನೆ 1713ರಲ್ಲಿ ಇವನನ್ನು ಡಬ್ಲಿನ್‍ನ ಸೇಂಟ್ ಪ್ಯಾಟ್ರಿಕ್ಸ್ ಕತೀಡ್ರಲ್‍ನ ಡೀನ್ ಆಗಿ ನೇಮಿಸಿದಳು. 1714ರಲ್ಲಿ ರಾಣಿ ಅನ್ನೆ ನಿಧನಹೊಂದಿ ಒಂದನೆಯ ಜಾರ್ಜ್ ಅಧಿಕಾರಿಕ್ಕೆ ಬಂದ. ಅದೇ ವರ್ಷ ಟೋರಿಪಕ್ಷ ಅಧಿಕಾರ ಕಳೆದುಕೊಂಡು ವಿಗ್‍ಪಕ್ಷ ಅಧಿಕಾರ ಗಳಿಸಿತು. ಅಲ್ಲಿಗೆ ಸ್ವಿಫ್ಟ್‍ನ ರಾಜಕೀಯ ಚಟುವಟಿಕೆಗಳೂ ಕೊನೆಗೊಂಡವು. ಅನಂತರ ಈತ ಸು. 30ವರ್ಷಗಳ ಕಾಲ ಡೀನ್ ಆಗಿಯೇ ಕಾರ್ಯ ನಿರ್ವಹಿಸಿದ. ತನ್ನ ಜೀವಿತದ ಕಡೆಗಾಲವನ್ನು ನಿರಾಶೆಯಲ್ಲಿ ಕಳೆದ. ಆದರೆ ಐರಿಷ್ ಸಾಹಿತ್ಯದ ಮಹೋನ್ನತ ಕೃತಿಯೆಂದು ಪರಿಗಣಿತ ವಾಗಿರುವ ಗಲಿವರ್ಸ್ ಟ್ರಾವಲ್ಸ್ ಅನ್ನು ಈತ ರಚಿಸಿದ್ದು ಈ ಅವಧಿಯಲ್ಲೇ. ಮಿದುಳಿನ ರೋಗಕ್ಕೆ ಬಲಿಯಾದ ಸ್ವಿಫ್ಟ್ 1745 ಅಕ್ಟೋಬರ್ 19ರಂದು ನಿಧನಹೊಂದಿದ.

ಗಲಿವರ್ಸ್ ಟ್ರಾವಲ್ಸ್ ಚಿತ್ತಾಕರ್ಷಕವಾದ ಒಂದು ಅದ್ಭುತ ಕಥೆ. ಗಲಿವರ್ ಎಂಬ ಹಡಗು ವೈದ್ಯನೊಬ್ಬ ನಾಲ್ಕು ಅಪರಿಚಿತ ಸ್ಥಳಗಳಿಗೆ ಕೈಗೊಂಡ ಸಮುದ್ರಯಾನದ ಕಥೆಯನ್ನು ಬಲು ಸ್ವಾರಸ್ಯವಾಗಿ ವರ್ಣಿಸುತ್ತದೆ. ಮೊದಲ ಪ್ರಯಾಣದಲ್ಲಿ ಆತ ಲಿಲಿಪುಟಿಯನ್ಸ್ ದ್ವೀಪಕ್ಕೆ, ಎರಡನೆಯ ಪ್ರಯಾಣದಲ್ಲಿ ಬ್ರಾಬ್‍ಡಿಂಗ್‍ನಾಗ್ ಎಂಬ ದೈತ್ಯರ ನಾಡಿಗೆ, ಮೂರನೆಯ ಪ್ರಯಾಣದಲ್ಲಿ ಮೂರ್ಖರ ದಡ್ಡರ ಕೆಲವು ರಾಜ್ಯಗಳಿಗೆ, ನಾಲ್ಕನೆಯ ಪ್ರಯಾಣದಲ್ಲಿ ಪ್ರಾಣಿಗಳ ನಾಡಿಗೆ ಭೇಟಿಕೊಡುತ್ತಾನೆ. ಮೂರನೆಯ ಹಾಗೂ ನಾಲ್ಕನೆಯ ಪ್ರಯಾಣದ ಕಥೆಯಲ್ಲಿ ಸ್ವಿಫ್ಟ್ ತನ್ನ ಸಮಕಾಲೀನ ಸಮಾಜವನ್ನು ವಿಡಂಬಿಸಿದ್ದಾನೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಗಲಿವರ್ಸ್ ಟ್ರಾವಲ್ಸ್ ಮಕ್ಕಳಿಗಂತೂ ಅತ್ಯದ್ಭುತ ಗ್ರಂಥ. ಈ ಕೃತಿ ಮಕ್ಕಳ ಪುಸ್ತಕವಾಗಿಯೇ ಪ್ರಖ್ಯಾತಿ ಪಡೆದಿದೆ. ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯ ಪ್ರಥಮ ಪ್ರಯಾಣದ ಕಥೆಯನ್ನು ಎಸ್.ಜಿ.ನರಸಿಂಹಾಚಾರ್ಯರು ಗಲಿವರನ ದೇಶಸಂಚಾರ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ (1900). * ಎ ಟೇಲ್ ಆಫ್ ಎ ಟಬ್(1704), ದಿ ಬ್ಯಾಟ್ಲ್ ಆಫ್ ದಿ ಬುಕ್ಸ್(1704), ಎ ಮಾಡೆಸ್ಟ್ ಪ್ರೊಪೋಸಲ್(1729) - ಇವು ಇವನ ಇತರ ಕೃತಿಗಳು. ಎ ಟೇಲ್ ಆಫ್ ಎ ಟಬ್‍ನ ಕಥೆ ಮೇಲುನೋಟಕ್ಕೆ ಮೂವರು ಮಕ್ಕಳು ತಮ್ಮ ತಂದೆಯ ಕಡೆಗಾಲದ ಬಯಕೆಯನ್ನು ಕುರಿತು ವಾದಿಸುವಂತೆ ಕಂಡರೂ ಮೂಲದಲ್ಲಿ ಕೆಲವು ಧಾರ್ಮಿಕ ನಂಬಿಕೆಗಳನ್ನು ಟೀಕಿಸುವುದೇ ಉದ್ದೇಶವಾಗಿದೆ. ಇಲ್ಲಿ ಪೀಟರ್ ರೋಮನ್ ಚರ್ಚಿನ ಪ್ರತಿನಿಧಿಯಾಗಿ, ಮಾರ್ಟಿನ್ ಆಂಗ್ಲಿಕನ್ ಚರ್ಚಿನ ಪ್ರತಿನಿಧಿಯಾಗಿ, ಜಾಕ್ ಧರ್ಮ ವಿರೋಧಿಗಳ ಪ್ರತಿನಿಧಿಯಾಗಿ ಕಂಡುಬರುತ್ತಾರೆ. ದಿ ಟ್ರಾವಲ್ ಆಫ್ ದಿ ಬುಕ್ಸ್ ಎಂಬ ಕೃತಿಯಲ್ಲಿ ಪ್ರಾಚೀನ ಮತ್ತು ಆಧುನಿಕ ಬರೆಹಗಾರರ ಗುಣಾವಗುಣಗಳ ಪ್ರಶ್ನೆಯನ್ನು ಸ್ವಿಫ್ಟ್ ವಿಡಂಬನಾತ್ಮಕವಾಗಿ ಪ್ರತಿಪಾದಿಸಿದ್ದಾನೆ. ಇಲ್ಲಿ ಹೋಮರ್ ಅರಿಸ್ಟಾಟಲ್, ಪ್ಲೇಟೋ, ಪಿಂಡಾರ್ ಮೊದಲಾದ ಪ್ರಾಚೀನ ಸಾಹಿತಿಗಳಿಗೂ ಮಿಲ್ಟನ್, ಡ್ರೈಡನ್, ಹಾಬ್ಸ್ ಮೊದಲಾದ ಆಧುನಿಕರಿಗೂ ನಡೆಯುವ ಹೋರಾಟದ ವ್ಯಂಗ್ಯಚಿತ್ರ ಬರುತ್ತದೆ. ಇಲ್ಲಿಯ ವಿಡಂಬನೆಯಲ್ಲಿ ಸಮತೂಕ, ಸಮಚಿತ್ತತೆಯಿದೆ. ಈತ ಸ್ಟೆಲ್ಲಳಿಗೆ ಬರೆದ ಪತ್ರಗಳು ಇವನ ನಿಧನಾನಂತರ ಜರ್ನಲ್ ಟು ಸ್ಟೆಲ್ಲ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ದಿ ಡ್ರಾಪೀರ್ಸ್ ಲೆಟರ್ಸ್(1724) ಎಂಬುದು ಈತ ತನ್ನ ರಾಜಕೀಯ ನಿಲವನ್ನು ಸ್ಥಾಪಿಸಿ ಬರೆದ ಕರಪತ್ರಗಳ ಸಂಗ್ರ್ರಹಗ್ರಂಥ. (ಎಲ್.ಎಸ್.ಎಸ್.)