ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವೇಚ್ಛಾಚಾರ

ಸ್ವೇಚ್ಛಾಚಾರ - ಚಿತ್ರಕಲೆ, ಶಿಲ್ಪ, ಕಾವ್ಯ ಸಂಗೀತ ಮೊದಲಾದ ಕಲಾಕ್ಷೇತ್ರಗಳಲ್ಲಿ ಅನುರಕ್ತರಾದ ಕೆಲವರು ತಮಗೂ ಜನಸಾಮಾನ್ಯರಿಗೂ ಮೂಲವ್ಯತ್ಯಾಸ ಇದೆಯೆಂಬ ಭ್ರಾಂತಿಯಿಂದ ತಮ್ಮ ಉಡುಗೆ ತೊಡುಗೆ ನಡೆನುಡಿಗಳಲ್ಲಿ ಇತರರಿಂದ ಭಿನ್ನವಾಗಿ ಕಾಣಿಸಿಕೊಳ್ಳುವುದು ಬೊಹೀಮಿಯನಿಸಮ್. ಪ್ಯಾರಿಸ್ ಪಟ್ಟಣದ ಲ್ಯಾಟಿನ್ ಕ್ವಾರ್ಟರ್ ಹರವಿನಲ್ಲಿ ಇಂಥವರು ಹೆಚ್ಚು ಹೆಚ್ಚಾಗಿ ಬಂದು ಸೇರಿಕೊಂಡರು. ಅವರ ಯಥಾರ್ಥ ಜೀವನದ ಸತ್ಯಾಂಶಗಳಿಂದ ನಿಬಿಡವಾದ ಒಂದು ಕಥೆಯನ್ನು ಹೆನ್ರಿ ಮುರ್ಗರ್ (1847-49) ಪ್ರಕಟಿಸಿದ. ಅದರ ಹೆಸರು ಸೇನ್ಸ್ ದ ಲ ವೈ ದು ಬೋಹೇಮ್. ಅದು ಸ್ವೇಚ್ಛಾಚಾರಿ ಕಲೆಗಾರನಿಗೆ ಒಂದು ಆಕರ್ಷಕ ವರ್ಚಸ್ಸನ್ನು ತಂದುಕೊಟ್ಟಿತು. ಬೇರೆ ಬೇರೆ ದೇಶಗಳ ಕಲೆಗಾರರು ಲ್ಯಾಟಿನ್ ಕ್ವಾರ್ಟರ್‍ಗೆ ಯಾತ್ರೆ ಕೈಗೊಂಡು, ತೃಪ್ತಿಹೊಂದಿ, ತಾವೂ ಆ ಮಾದರಿಯಲ್ಲಿ ಬಾಳುವುದಕ್ಕೆ ಹಾತೊರೆದರು. ಅಂಥವರಲ್ಲಿ ಇಂಗ್ಲೆಂಡಿನ ವಿಸ್ಲರ್, ಡು ಮೋರಿಯರ್ ಮುಂತಾದವರು ಸೇರಿದ್ದಾರೆ. ಅವರಿಗಿಂತಲೂ ಅಧಿಕ ಪ್ರಭಾವಶಾಲಿಯಾದ ಜಾರ್ಜ್ ಮೂರ್ ನಂಬಲಸಾಧ್ಯವಾದ ಸ್ವೇಚ್ಛಾಚಾರವನ್ನು (ಫ್ಯಾಬ್ಯುಲಸ್ ಬೋಹೀಮಿಯ ನಿಸಮ್) ಲಂಡನ್ನಿನಲ್ಲಿ ಸ್ವಲ್ಪಕಾಲ ಅನುಸರಿಸಿ ಖ್ಯಾತನಾದ. ಊಟ ಉಪಚಾರಗಳಲ್ಲಿ ಅತ್ಯಂತ ನಸನಸೆ ಮತ್ತು ಹಠಮಾರಿತನ, ಬಟ್ಟೆಬರೆಯಲ್ಲಿ ಬಹಳ ಷೋಕಿ ಮತ್ತು ವಿಪರೀತ ವಕ್ರತೆ - ಇವು ಸ್ವೇಚ್ಛಾಚಾರಿಗಳ ಹೊರಗಣ ಬದುಕು; ಅವರ ಒಳಗಣ ಬದುಕಿಗೆ ಕುಡಿತ, ವ್ಯಭಿಚಾರ, ಸಾಲಸೋಲ, ಜಗಳ, ಜೈಲುಗಳೇ ಅಂಗಗಳು.

ಜರ್ಮನಿಯ ಶ್ರೇಷ್ಠ ಕಾದಂಬರಿಕಾರ ತಾಮಸ್‍ಮನ್ ಕಲೆಗೂ ಸ್ವೇಚ್ಛಾಚಾರಕ್ಕೂ ಗಾಢವೂ ಅನಿವಾರ್ಯವೂ ಆದ ಸಂಬಂಧವಿದೆಯೇ ಎಂಬ ವಿಚಾರವನ್ನು ಕೂಲಂಕಷವಾಗಿ ಚರ್ಚಿಸಿದ್ದಾನೆ. ಈ ಸಿದ್ಧಾಂತವನ್ನು ತನ್ನ ಅಭಿಮತವಾಗಿ ಹೊರಗೆಡವಿದ್ದಾನೆ. ಉತ್ತಮ ಮನೆತನವೊಂದು ಕೀಳುಸ್ಥಿತಿಗೆ ಇಳಿದಾಗ ಅದರಲ್ಲಿ ಒಬ್ಬಿಬ್ಬರು ಕಲೆಗಾರರಾಗುತ್ತಾರೆ; ಅವರ ನಾಡಿಗಳಿಗೆ ಸ್ವಾಭಾವಿಕವಾದ ದೌರ್ಬಲ್ಯ; ಆದ್ದರಿಂದ ವಿಕಟವೂ ಲೋಕಕ್ಕೆ ಹೊರಚ್ಚಾದುದೂ ಆದ ವ್ಯವಹರಣೆ ಸಿಗದಿದ್ದರೆ ಅವರು ಬಾಳುವಂತಿಲ್ಲ. ಈ ಶತಮಾನದ ಎರಡು ಮಹಾಯುದ್ಧಗಳೂ ಇಂಥ ಸ್ವೇಚ್ಛಾಚಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದವು. (ಎಸ್.ವಿ.ಆರ್.)