ಹಂಗರಿ ಪೂರ್ವಮಧ್ಯ ಯುರೋಪಿನ ನೈಋತ್ಯದಲ್ಲಿರುವ ಒಂದು ಗಣರಾಜ್ಯ. ಈಶಾನ್ಯದಲ್ಲಿ ಉಕ್ರೇನ್, ಪೂರ್ವದಲ್ಲಿ ರೊಮೇನಿಯ, ದಕ್ಷಿಣದಲ್ಲಿ ಸರ್ಬಿಯ, ಕ್ರೋಷಿಯ ಮತ್ತು ಸ್ಲೋವೇನಿಯ ಹಾಗೂ ಪಶ್ಚಿಮದಲ್ಲಿ ಆಸ್ಟ್ರಿಯ ಮತ್ತು ಉತ್ತರದಲ್ಲಿ ಚೆಕೊಸ್ಲೊವಾಕಿಯ ದೇಶಗಳು ಇದನ್ನು ಸುತ್ತುವರಿದಿವೆ. ವಿಸ್ತೀರ್ಣ 93,032 ಚ.ಕಿಮೀ. ರಾಜಧಾನಿ ಬುಡಾಪೆಸ್ಟ್. ಇತರ ನಗರಗಳು ಮಿಸ್ಕೋಲ್ಕ್ ಮತ್ತು ಡೆಟ್ರೆಸೆನ್. ಭಾಷೆ ಹಂಗರಿಯನ್(ಮ್ಯಾಗ್ಯರ್). ಸಾಕ್ಷರತೆ ಸೇ.99. ಜನರು ಹೆಚ್ಚಾಗಿ ಕ್ರೈಸ್ತಧರ್ಮೀಯರು. ನಾಣ್ಯ ಪೋರಿಂಟ್. ಹಂಗರಿಯ ಪೂರ್ವಾರ್ಧ ಫಲವತ್ತಾದ ಮೈದಾನ. ಪಶ್ಚಿಮ ಮತ್ತು ಉತ್ತರ ಭಾಗಗಳು ಪರ್ವತಮಯ.

ಹಂಗರಿ ಉತ್ತರ ದಕ್ಷಿಣವಾಗಿ 311 ಕಿಮೀ, ಪೂರ್ವಪಶ್ಚಿಮವಾಗಿ 502 ಕಿಮೀ ಇದೆ. ಜನಸಂಖ್ಯೆ 99,40,000. ಸಾಂದ್ರತೆ 1 ಚ.ಕಿಮೀ ಗೆ 107. ರಾಜಧಾನಿ ಬುಡಾಪೆಸ್ಟ್‍ನ ಜನಸಂಖ್ಯೆ 19,95,696.

ಹಂಗರಿಯ 2/3 ಭಾಗ ತಗ್ಗು ಭೂಪ್ರದೇಶ. ಪೂರ್ವ ಹಂಗರಿ ಮೈದಾನ ಪ್ರದೇಶವಾಗಿದ್ದು ಉತ್ತರದಲ್ಲಿ ಕೆಲವು ಪರ್ವತಗಳಿವೆ. ಇವುಗಳಲ್ಲಿ 1,015 ಮೀ ಎತ್ತರದ ಶಿಖರವುಳ್ಳ ಕೀಕಿಸ್ ಹಂಗರಿಯ ಮುಖ್ಯ ಪರ್ವತವಾಗಿದೆ. ಹಂಗರಿಯನ್ನು ದೊಡ್ಡ ಮೈದಾನ ಪ್ರದೇಶ, ಟ್ರಾನ್ಸಡ್ಯಾನ್ಯೂಬಿಯ ಪ್ರದೇಶ, ಚಿಕ್ಕ ಮೈದಾನ ಪ್ರದೇಶ ಮತ್ತು ಉತ್ತರ ಮಲೆನಾಡ ಪ್ರದೇಶ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.

ಹಂಗರಿಯ ಮುಖ್ಯನದಿ ಟಿಸೊó. ಈಶಾನ್ಯದಿಂದ ದಕ್ಷಿಣಾಭಿಮುಖವಾಗಿ 579 ಕಿಮೀ ಹರಿಯುತ್ತದೆ. ಮತ್ತೊಂದು ಮುಖ್ಯನದಿ ಡ್ಯಾನ್ಯೂಬ್ (ನೋಡಿ- ಡ್ಯಾನ್ಯೂಬ್) ಹಂಗರಿಯ ಉತ್ತರದ ಗಡಿಯಾಗಿ ಸ್ವಲ್ಪ ದೂರ ಹರಿದು ಮಧ್ಯೆ ಹಂಗರಿಯಲ್ಲಿ ದಕ್ಷಿಣಕ್ಕೆ ಹರಿಯುತ್ತದೆ. ಇವಲ್ಲದೆ ಕೆಲವು ಸಣ್ಣಪುಟ್ಟ ಉಪನದಿಗಳು ಇವೆ. ಹಂಗರಿಯಲ್ಲಿರುವ ಸರೋವರಗಳಲ್ಲಿ ಪಶ್ಚಿಮದಲ್ಲಿರುವ ಬಲಾಟನ್ ಸರೋವರ ಮುಖ್ಯವಾದದ್ದು. ಸು. 596 ಚ.ಕಿಮೀ ವಿಸ್ತೀರ್ಣವುಳ್ಳ ಈ ಸರೋವರ ಪ್ರಸಿದ್ಧ ಮನರಂಜನ ಸ್ಥಳವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಂಗರಿಯ ಹವಾಮಾನ ಸಾಮಾನ್ಯವಾಗಿ ಹೆಚ್ಚು ಚಳಿಯಿಂದಲೂ ಬೇಸಗೆಯಲ್ಲಿ ಹೆಚ್ಚು ಬಿಸಿಲಿನಿಂದಲೂ ಕೂಡಿರುತ್ತದೆ. ಜನವರಿಯಲ್ಲಿ ಸಾಮಾನ್ಯವಾಗಿ -20 ಸೆ. ಇದ್ದರೆ ಜುಲೈನಲ್ಲಿ 210 ಸೆ. ಇರುತ್ತದೆ. ಮೇ, ಜೂನ್ ಮತ್ತು ಜುಲೈ ಮಳೆಗಾಲವಾಗಿದ್ದು ವಾರ್ಷಿಕ ಸು. 60 ಸೆಂಮೀ ಮಳೆಯಾಗುತ್ತದೆ.

ಹಂಗರಿಯ ಕೃಷಿಯಾದಾಯ ಸೇ.60 ಭಾಗ ಅದರ ಧಾನ್ಯದುತ್ಪತ್ತಿಯಿಂದ ಬಂದರೆ, ಸೇ.40 ಪಶುಸಂಗೋಪನೆಯಿಂದ ಬರುತ್ತದೆ. ವಿವಿಧ ಧಾನ್ಯಗಳು, ಆಲೂಗೆಡ್ಡೆ, ಬೀಟ್‍ರೂಟ್, ಗೋದಿ ಮತ್ತು ವೈನ್ ತಯಾರಿಕೆಯ ದ್ರಾಕ್ಷಿ ಹೆಚ್ಚು ಬೆಳೆಯುತ್ತಾರೆ.

ಹಂಗರಿಯಲ್ಲಿ ಸಮೂಹ ಸಂಪರ್ಕವಾಗಿ ಸು. 40 ದಿನಪತ್ರಿಕೆಗಳಿವೆ. ಇವುಗಳಲ್ಲಿ ಮುಖ್ಯವಾದದ್ದು “ನೆಪ್ಸಜûಬಾದ್ ಸಗ್” (ಜನತಾಸ್ವಾತಂತ್ರ್ಯ)ಎಂಬುದು. ಹಂಗರಿಯಲ್ಲಿ ಇನ್ನಿತರ ಎಲ್ಲ ಆಧುನಿಕ ಸಂಪರ್ಕ ಸೌಕರ್ಯಗಳಿವೆ. ಇಲ್ಲಿ 7,800 ಕಿಮೀ ರೈಲು ಮಾರ್ಗ, 1,30,000 ಕಿಮೀ ರಸ್ತೆ ಮಾರ್ಗ ಇವೆ. ಇಲ್ಲಿ ಸು. 1600 ಕಿಮೀ ಜಲಮಾರ್ಗ ಸೌಲಭ್ಯವಿದೆ. ಬುಡಾಪೆಸ್ಟ್ ಮತ್ತು ಬಲಾಟನ್ ಸರೋವರದ ಹತ್ತಿರವಿರುವ ಸಿಯೊಫೋಕ್‍ಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.

ಆರ್ಥಿಕತೆ : ಹಂಗರಿ ಹಿಂದೆ ಕೃಷಿ ಪ್ರಧಾನ ದೇಶವಾಗಿತ್ತು. ಎರಡನೆಯ ಮಹಾಯುದ್ಧದಿಂದ ಈಚೆಗೆ ಇಲ್ಲಿಯ ಆರ್ಥಿಕತೆಯ ಉತ್ಪನ್ನದ ಸೇ. 33 ಭಾಗ ಕೈಗಾರಿಕೆಯಿಂದ ಬರುತ್ತದೆ. ಎಂಜಿನಿಯರಿಂಗ್ ಸರಕು, ಯಂತ್ರ ಸಲಕರಣೆ, ಮೋಟರು ವಾಹನ, ವಿದ್ಯುತ್ ಮತ್ತು ವಿದ್ಯುನ್ಮಾನ ಸರಕು ಇದರ ರಫ್ತುಗಳು. ಕಬ್ಬಿಣ ಅದುರು, ಕಲ್ಲಿದ್ದಲು, ಕಚ್ಚಾತೈಲ ಮತ್ತು ಅನುಭೋಗ ವಸ್ತುಗಳನ್ನು ಇದು ಆಮದು ಮಾಡಿಕೊಳ್ಳುತ್ತದೆ. ಸೇ.97 ಕ್ಕಿಂತ ಹೆಚ್ಚಿನ ಕೃಷಿ ಜಮೀನು ಸಾಮೂಹಿಕ ಸಾಗುವಳಿಗೆ ಒಳಪಟ್ಟಿದೆ. ಸು. 18,000 ಹೆಕ್ಟೇರ್ ಜಮೀನಿನಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ವಿವಿಧ ಧಾನ್ಯಗಳು, ಸೂರ್ಯಕಾಂತಿ, ಆಲೂಗೆಡ್ಡೆ ಮತ್ತು ಬೀಟ್‍ರೂಟ್ ಇತ್ಯಾದಿ ಇತರ ಬೆಳೆಗಳು. ಬುಡಾಪೆಸ್ಟ್ ಹಂಗರಿ ಕೈಗಾರಿಕಾ ಕೇಂದ್ರ ನಗರವಾಗಿದ್ದು ಇಲ್ಲಿನ ಕಾರ್ಖಾನೆಗಳಲ್ಲಿ ಬಸ್ಸು, ರೈಲು, ಯಂತ್ರೋಪಕರಣಗಳು, ಆಹಾರ ವಸ್ತುಗಳ ಸಂಸ್ಕರಣೆ, ಕಬ್ಬಿಣ ಮತ್ತು ಉಕ್ಕಿನ ಉಪಕರಣಗಳು, ವೈದ್ಯಕೀಯ ಮತ್ತು ವೈಜ್ಞಾನಿಕ ಉಪಕರಣಗಳು, ಔಷಧಗಳು, ಜವಳಿ ಉದ್ಯಮ ಇದೆ.

ಇತಿಹಾಸ: ಸು.800ರಲ್ಲಿ ಮಗ್ಯಾರರೆಂಬುವರು ಹಂಗರಿಯನ್ನು ಆಕ್ರಮಿಸಿಕೊಂಡು ಆಳತೊಡಗಿದರು. ಹಂಗರಿಯ ಮೊದಲ ದೊರೆಯಾದ ಮೊದಲನೆಯ ಸ್ಟೀಫನ್ 1000 ದಲ್ಲಿ ಆಳತೊಡಗಿ ಇಡೀ ದೇಶವನ್ನು ರೋಮನ್ ಕೆಥೊಲಿಕ್ ಧರ್ಮದ ಹಿಡಿತಕ್ಕೆ ತಂದ. 1241ರಲ್ಲಿ ಮಂಗೋಲರು ಹಂಗರಿಯನ್ನು ಆಕ್ರಮಿಸಿಕೊಂಡರು. 1458-90 ಮತಿಯಾಸ್ ಹುನ್‍ಯದಿ ಆಳಿದ. ಮುಂದೆ 1526ರಲ್ಲಿ ಮೊಹಕ್ಸ ಎಂಬಲ್ಲಿ ನಡೆದ ಯುದ್ಧದಲ್ಲಿ ಆಟೋಮನ್‍ರು ಜಯಶೀಲರಾಗಿ ಹಂಗರಿ ಆಳತೊಡಗಿದರು. 1600 - 1700ರವರೆಗೆ ಆಸ್ಟ್ರಿಯನ್ನರು ಆಳಿದರು. 1867ರಲ್ಲಿ ಆಸ್ಟ್ರಿಯ ಮತ್ತು ಹಂಗರಿಯ ಸಹ ಆಳಿಕೆ ಪ್ರಾರಂಭವಾಯಿತು. ಹಂಗರಿ, ಆಸ್ಟ್ರಿಯ ಒಂದನೆಯ ಮಹಾಯುದ್ಧದಲ್ಲಿ (1914-18) ಸೋತವು. 1918ರಲ್ಲಿ ಹಂಗರಿ ಒಂದು ಗಣರಾಜ್ಯವಾಯಿತು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನಿಯೊಂದಿಗೆ ಹಂಗರಿ ಸೇರಿತು. ಹಿಟ್ಲರ್ ಹಂಗರಿಯ ಸ್ನೇಹವನ್ನು ಕಡೆಗಣಿಸಿ 1944ರಲ್ಲಿ ಆಕ್ರಮಣ ಮಾಡಿ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು, ಸು. 5ಲಕ್ಷಕ್ಕೂ ಹೆಚ್ಚು ಯಹೂದಿಯರನ್ನು ಹಿಡಿದು, ಅವರನ್ನು ಜರ್ಮನಿಯ ಸೆರೆಮನೆಗಳಿಗೆ ಸಾಗಿಸಿ ಮುಂದೆ ಅವರನ್ನು ವಿಷಾನಿಲ ಕೊಠಡಿಗೆ ಕೂಡಿ ಸಾಹಿಸಿದ. 1944ರ ಕೊನೆಯಲ್ಲಿ ರಷ್ಯ ಹಂಗರಿಯನ್ನು ಗೆದ್ದುಕೊಂಡಿತು. ಹಂಗರಿ ಮತ್ತು ಮಿತ್ರರಾಷ್ಟ್ರಗಳ ಮಧ್ಯೆ 1947ರಲ್ಲಿ ಶಾಂತಿ ಒಪ್ಪಂದವಾಯಿತು. ಹಂಗರಿಯಲ್ಲಿ ಕಮ್ಯುನಿಸ್ಟರ ಪ್ರಾಬಲ್ಯ ಹೆಚ್ಚಾಯಿತು. 1949ರಲ್ಲಿ ಕಮ್ಯುನಿಸ್ಟರು ಹಂಗರಿಗೆ ರಾಜ್ಯಾಂಗ ರೂಪಿಸಿದರು. ಎರಡನೆಯ ಮಹಾಯುದ್ಧದ ಅನಂತರ ಸೋವಿಯತ್ ಒಕ್ಕೂಟದ ವಲಯದಲ್ಲೇ ಮುಂದುವರಿದ ಹಂಗರಿ 1990ರಲ್ಲಿ ಮಾರುಕಟ್ಟೆ ಅರ್ಥವ್ಯವಸ್ಥೆಯನ್ನು ಜಾರಿಗೆ ತಂದಿತು. ಹಂಗರಿಯನ್ನಾಕ್ರಮಿಸಿಕೊಂಡಿದ್ದ ಸೋವಿಯತ್ ಸೇನೆ 1915 ಜೂನ್ ವೇಳೆಗೆ ಸಂಪೂರ್ಣವಾಗಿ ತನ್ನ ಆಕ್ರಮಣವನ್ನು ತೆರವು ಮಾಡಿತು. ಜುಲೈ 1997ರಲ್ಲಿ ಪಶ್ಚಿಮ ಯುರೋಪಿನ ಉತ್ತರ ಅಟ್ಲಾಂಟಿಕ್ ಕೌಲು ಸಂಘಟನೆ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್-ನೇಟೊ) ಹಂಗರಿಗೆ ಪೂರ್ಣ ಸದಸ್ಯತ್ವ ಪಡೆಯಲು ಆಹ್ವಾನಿಸಿತು. 1999 ಮಾರ್ಚ್‍ನಲ್ಲಿ ಅದು ನೇಟೊವನ್ನು ಸೇರಿತು.

(ವೈ.ಪಿ.ಸಿ.)