ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಂದಿಗನೂರು ಸಿದ್ಧರಾಮಪ್ಪ

ಹಂದಿಗನೂರು ಸಿದ್ಧರಾಮಪ್ಪ ಸು.1902-47. ಪ್ರಸಿದ್ಧ ರಂಗಭೂಮಿ ನಟರು. ಬಿಜಾಪುರ ಜಿಲ್ಲೆಯ ಹಂದಿಗನೂರಿನಲ್ಲಿ ಸು. 1902ರಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ನಾಟಕ, ಬಯಲಾಟಗಳ ಬಗ್ಗೆ ವ್ಯಾಮೋಹ ಬೆಳೆಸಿಕೊಂಡ ಇವರು ಸು. 15 ವರ್ಷದ ಹುಡುಗನಾಗಿದ್ದಾಗ ರಂಗಭೂಮಿ ಪ್ರವೇಶಿಸಿದರು. ಹುಟಗಿ ಕಂಪನಿ, ಮೈದರ್ಗಿ ಕಂಪನಿ, ಗುಳೇದಗುಡ್ಡ ಗಂಗೂಬಾಯಿ ಕಂಪನಿಗಳಲ್ಲಿ ನಟಿಸಿ ಉತ್ತಮ ನಟರೆಂಬ ಅಭಿದಾನಕ್ಕೆ ಪಾತ್ರರಾದರು. ಅನಂತರ ಇವರೇ ವಿಶ್ವಕಲಾರಂಜನ ನಾಟ್ಯಸಂಸ್ಥೆಯನ್ನು 1937ರಲ್ಲಿ ಸ್ಥಾಪಿಸಿದರು. ಉಷಾಸ್ವಯಂವರ, ಅಕ್ಷಯಾಂಬರ, ಲಂಕಾದಹನ, ರಾಜಾ ಹರಿಶ್ಚಂದ್ರ, ದ್ರೌಪದಿಸ್ವಯಂವರ, ಕಿತ್ತೂರು ರುದ್ರಮ್ಮ, ಉತ್ತರಭೂಪ-ಇವು ಇವರು ಪ್ರಯೋಗಿಸುತ್ತಿದ್ದ ಮುಖ್ಯ ನಾಟಕಗಳು. ಇವರ ಅಭಿನಯ ರಂಗಭೂಮಿಯ ಶ್ರೋತೃಗಳನ್ನು ಸೆರೆಹಿಡಿದುಬಿಡುತ್ತಿತ್ತು. ರಾಜಾ ಹರಿಶ್ಚಂದ್ರ, ಚಂದ್ರಹಾಸ ನಾಟಕಗಳು ಇವರಿಗೆ ಅಪಾರ ಕೀರ್ತಿ ತಂದುಕೊಟ್ಟವು. ಚಂದ್ರಹಾಸ ನಾಟಕದಲ್ಲಿ ದುಷ್ಟಬುದ್ಧಿಯಾಗಿ, ರಾಜಾ ಹರಿಶ್ಚಂದ್ರದಲ್ಲಿ ಹರಿಶ್ಚಂದ್ರನಾಗಿ ಇವರ ಅಭಿನಯ ಸ್ಮರಣೀಯವಾದುದು. ರಂಗಭೂಮಿಯಲ್ಲಿ ಚಂದ್ರಹಾಸ ನಾಟಕದ ಜಯಭೇರಿಯನ್ನು ಕಂಡು ಅದೇ ನಾಟಕವನ್ನು ಚಲನಚಿತ್ರವಾಗಿ ತೆರೆಯ ಮೇಲೆ ತರಲು ಮುಂಬಯಿ ಪಂಪಾ ಪಿಕ್ಚರ್ಸ್ ಸಂಸ್ಥೆ ಮುಂದೆ ಬಂತು. ಈ ಚಿತ್ರದಲ್ಲಿ ಇವರು ದುಷ್ಟಬುದ್ಧಿಯ ಪಾತ್ರವನ್ನು ವಹಿಸಿದರು. ಆದರೆ ತಮ್ಮ ಅಭಿನಯವನ್ನು ಬೆಳ್ಳಿಯ ತೆರೆಯ ಮೇಲೆ ನೋಡುವ ಭಾಗ್ಯ ಇವರದಾಗಿರಲಿಲ್ಲ. ಬೆಳಗಾಂವಿಯಲ್ಲಿ ಚಂದ್ರಹಾಸ ಪ್ರದರ್ಶನಕ್ಕೆಂದು ಹೊರಡುವ ಮುನ್ನಾದಿನವೇ 1947 ನವೆಂಬರ್ 8ರಂದು ಹಠಾತ್ ನಿಧನ ಹೊಂದಿದರು. (ಎನ್.ಕೆ.ಕೆ.)